Monday, June 17, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತರಿಗೆ ಹಣ ಹಂಚಿಕೆ: ಲೋಕಾಯುಕ್ತ ತನಿಖೆಗೆ ಹಿರಿಯ ಪತ್ರಕರ್ತರ ಆಗ್ರಹ

ಬೆಂಗಳೂರು: ಕೆಲವು ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ತಲಾ 2.5 ಲಕ್ಷ ರುಪಾಯಿ ಹಣ ನೀಡಿರುವ ಪ್ರಕರಣ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹಿರಿಯ ಪತ್ರಕರ್ತರು ಆಗ್ರಹಿಸಿದ್ದಾರೆ.

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಈ ಕುರಿತು ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದು, ಲೋಕಾಯುಕ್ತರು, ಮತ್ತು ಚುನಾವಣಾ ಆಯುಕ್ತರು ಕೂಡಲೇ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಇಂದು ಬೆಳಗ್ಗಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ, ಸಚಿವರ ಕಚೇರಿಗಳಿಂದ ರಾಜ್ಯದ ಹಲವು ಪತ್ರಕರ್ತರಿಗೆ ದೀಪಾವಳಿ ಇನಾಮಿನ ಜೊತೆಯಲ್ಲಿ ನಗದು ಹಣವನ್ನು ನೀಡಲಾಗಿದೆ ಎಂಬ ವದಂತಿಗಳು ಹಬ್ಬಿವೆ. ಇದು ಹೌದೆಂದಾಗಿದ್ದಲ್ಲಿ, ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಇದನ್ನು ಪರಿಗಣಿಸುವುದು ಕರ್ನಾಟಕದ ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಗತ್ಯ. ತಾವು ತಕ್ಷಣ ಈಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಭ್ರಷ್ಟಾಚಾರ ನಡೆದಿರುವುದು ಹೌದೆಂದಾದರೆ, ಆ ಬಗ್ಗೆ ತಕ್ಷಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕದ ಜನತೆಯ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಬರೆದಿದ್ದಾರೆ..

‘ಸಿಎಂ ಕೊಟ್ಟಿರುವ ಹಣದ ಮೂಲದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಗಿಫ್ಟ್ ರೂಪದಲ್ಲಿ ಹಣ ನೀಡಿರುವ ಮುಖ್ಯಮಂತ್ರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿರುವ ಹಿರಿಯ ಪತ್ರಕರ್ತ ಹಿರೇಮಗಳೂರು ಪುಟ್ಟಸ್ವಾಮಿ, ‘ಇದೊಂದು ತಲೆ ತಗ್ಗಿಸುವ ನೀಚ ಕೆಲಸ. ಹಣವನ್ನು ಹಿಂದಿರುಗಿಸಿ ವೃತ್ತಿ ಧರ್ಮ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರಿಂದ ನಡೆಯಲಿ’ ಎಂದು ಆಗ್ರಹಿಸಿದ್ದಾರೆ.

ಮತ್ತೋರ್ವ ಹಿರಿಯ ಪತ್ರಕರ್ತ ವೈ.ಜಿ.ಅಶೋಕ್‌ ಕುಮಾರ್‌ ಘಟನೆಯ ಕುರಿತು ಕಿಡಿಕಾರಿದ್ದು, ‘ಯಾರು ಯಾರಿಗೆ ಹಣ ಹೋಗಿದೆ ಅನ್ನುವ ಸಂಪೂರ್ಣ ಮಾಹಿತಿ ಇದೆ. ಮರ್ಯಾದೆ ಉಳಿಯಬೇಕು ಅಂದರೆ ಹಣ ವಾಪಾಸಾತಿ ಮಾಡಿ. ಇಲ್ಲದೇ ಹೋದರೆ ಹೆಸರುಗಳನ್ನು ಬಹಿರಂಗ ಪಡಿಸಬೇಕಾಗುತ್ತದೆ. ಇದರಲ್ಲಿ ಪತ್ರಿಕಾ‌ ಸಂಸ್ಥೆಗಳು ಸೇರಿವೆ ಎಂದು ಎಚ್ಚರಿಸಿದ್ದಾರೆ’.

ಇದನ್ನೂ ನೋಡಿ : ➤➤ಪತ್ರಕರ್ತರಿಗೆ ಲಕ್ಷಗಟ್ಟಲೆ ದುಡ್ಡು: ಸಿಎಂ ಕಚೇರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆ

➤➤ದೀಪಾವಳಿ ಸಿಹಿ ತಿಂಡಿ ಇದ್ದ ಗಿಫ್ಟ್ ಪ್ಯಾಕ್ ನಲ್ಲಿ 2.5 ಲಕ್ಷ ರುಪಾಯಿ ನೋಡಿ ಬೆರಗಾದ ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು