ಹಿಮಂತ ಶರ್ಮಾ ಪತ್ನಿ ವಿರುದ್ಧದ ಹೇಳಿಕೆ ಪ್ರಕರಣ: ಪವನ್ ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್ ನಿಬಂಧನೆಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ತನಿಖೆಗೆ ಸಹಕರಿಸಬೇಕು, ಅಧಿಕಾರಿಗಳು ಸಮನ್ಸ್ ನೀಡಿದಾಗ ಹಾಜರಾಗಬೇಕು ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವುದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದನ್ನು ಮಾಡಬಾರದು ಎಂದು ನ್ಯಾಯಾಲಯವು ಖೇರಾ ಅವರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗದಂತೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ.

ಪವನ್ ಖೇರಾ ಅವರನ್ನು “ಪರಾರಿಯಾಗುವ ಸಾಧ್ಯತೆ ಇರುವ ವ್ಯಕ್ತಿ” (flight risk) ಎಂದು ಬಣ್ಣಿಸಿದ್ದ ಗೌಹಾತಿ ಹೈಕೋರ್ಟ್, ಅವರ ವಿರುದ್ಧದ ವಂಚನೆ ಮತ್ತು ದಾಖಲೆಗಳ ನಕಲು ಸೇರಿದಂತೆ ಗಂಭೀರ ಆರೋಪಗಳನ್ನು ಗಮನಿಸಿ ಈ ಹಿಂದೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ವಿಚಾರಣೆಯ ಸಮಯದಲ್ಲಿ ಖೇರಾ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಮಾನಹಾನಿಗೆ ಸಂಬಂಧಿಸಿದ ವಿಷಯದಲ್ಲಿ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ವಾದಿಸಿದರು ಮತ್ತು ಬಂಧನದ ಅಗತ್ಯವನ್ನು ಪ್ರಶ್ನಿಸಿದರು. ಅಲ್ಲದೆ, ಈ ಪ್ರಕರಣದಲ್ಲಿ ಬಳಸಲಾದ ಭಾಷೆಯನ್ನು ಟೀಕಿಸಿದ ಅವರು ಇದೊಂದು ಅಭೂತಪೂರ್ವ ಪ್ರಕರಣ ಎಂದು ಕರೆದರು.

ಮತ್ತೊಂದೆಡೆ, ಖೇರಾ ಅವರು ಮಾಡಿರುವ ಆರೋಪಗಳು ಮತ್ತು ದಾಖಲೆಗಳ ಮೂಲವನ್ನು ಪತ್ತೆಹಚ್ಚಲು ಕಸ್ಟಡಿ ವಿಚಾರಣೆ ಅಗತ್ಯ ಎಂದು ಸಾಲಿಸಿಟರ್ ಜನರಲ್ ವಾದಿಸಿದರು. ಈ ಪ್ರಕರಣದಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಖೇರಾ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಏಪ್ರಿಲ್ 4 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪವನ್ ಖೇರಾ ಅವರು ಅಸ್ಸಾಂ ಮುಖ್ಯಮಂತ್ರಿಯವರ ಪತ್ನಿಯ ಪಾಸ್‌ಪೋರ್ಟ್ ಮತ್ತು ವಿದೇಶಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲವು ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವು ಆರಂಭವಾಗಿತ್ತು.

ಶರ್ಮಾ ಕುಟುಂಬವು ಈ ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ. ಈ ದಾಖಲೆಗಳನ್ನು ನಕಲಿ ಮಾಡಲಾಗಿದ್ದು, ವಿದೇಶಿ ಸಂಪರ್ಕ ಹೊಂದಿರುವ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಹರಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಗುವಾಹಟಿ ಪೊಲೀಸರಿಗೆ ಅಧಿಕೃತ ದೂರನ್ನು ನೀಡಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು