Sunday, June 16, 2024

ಸತ್ಯ | ನ್ಯಾಯ |ಧರ್ಮ

ಮುಲ್ಲಾಗಳಿಗೆ ಹಣ ಕೊಡ್ತಿರ, ರೈತರಿಗೆ ಯಾಕೆ ಕೊಡಲ್ಲ: ಸಿದ್ದರಾಮಯ್ಯಗೆ ಆರ್‌. ಅಶೋಕ್‌ ಪ್ರಶ್ನೆ

ಬೆಂಗಳೂರು: ರಾಜ್ಯ ಸರ್ಕಾರದ ಬಳಿ ಮುಲ್ಲಾಗಳಿಗೆ ಕೊಡಲು ದುಡ್ಡಿದೆ. ಆದರೆ, ರೈತರಿಗೆ ಕೊಡಲು ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಪಕ್ಷದ ವತಿಯಿಂದ ನಡೆದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ಸಂಕಷ್ಟದಲ್ಲಿದ್ದರೆ ಮಜಾ ಮಾಡಲು ಕಾಂಗ್ರೆಸ್‌ನವರು ದೆಹಲಿಗೆ ಹೋಗಿದ್ದಾರೆ. ಅವರ ದೆಹಲಿ ಪ್ರವಾಸದಿಂದ ವಿಧಾನಸೌಧ ಖಾಲಿಯಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆಯಲ್ಲಿ ಶೇ 30ರಷ್ಟು ಕಡಿತ ಮಾಡಲಾಗಿದೆ. ಹೀಗಾಗಿ ನಮಗೆ ನೀರಿನ ಕೊರತೆಯಾಗಿದೆ’ ಎಂದರು.


ಈ ಸರ್ಕಾರದಲ್ಲಿ ಮುಲ್ಲಾಗಳಿಗೆ ₹10 ಸಾವಿರ ಕೋಟಿ ಕೊಡಲು ಹಣ ಇದೆ. ಆದರೆ, ರೈತರಿಗೆ ಕೊಡಲು ಹಣ ಇಲ್ಲ. ಭಾಗ್ಯಗಳ ಸರ್ಕಾರದಿಂದ ರೈತರಿಗೆ ಆತ್ಮಹತ್ಯೆ ಭಾಗ್ಯ ಸಿಕ್ಕಿದೆ. ಕಿಸಾನ್ ಸಮ್ಮಾನ್ಗೆ ರಾಜ್ಯದಿಂದ ಹಣ ಸೇರಿಸಿ ಕೊಡಲಾಗುತ್ತಿತ್ತು. ಅದನ್ನೂ ಕಿತ್ತುಕೊಂಡಿದ್ದಾರೆ. ರೈತ ವಿದ್ಯಾನಿಧಿಯನ್ನೂ ಹಾಳು ಮಾಡಿದರು’ ಎಂದು ದೂರಿದರು.


‘ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದು, ಆಗೊಂದು ಈಗೊಂದು ಗ್ಯಾರಂಟಿ ಜಾರಿಗೆ ತಂದಿದ್ದಾರೆ. ಆ ಮೂಲಕ, ರಾಜ್ಯದ ಜನರಿಗೆ ನಾಮ ಹಾಕುತ್ತಿದ್ದಾರೆ. 80 ಜನರಿಗೆ ಸಂಪುಟ ದರ್ಜೆ ನೀಡಿ ನಿಯಮ ಉಲ್ಲಂಘಿಸಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರವಾಗಿದೆ. ವಿಧಾನಸೌಧ. ವಿಕಾಸಸೌಧ ಜನರೇಟರ್ನಿಂದ ನಡೆಯುತ್ತಿರಬೇಕು ಅನ್ನಿಸುತ್ತಿದೆ. ಕೈಗಾರಿಕೆಗಳಿಗೂ ವಿದ್ಯುತ್ ಇಲ್ಲ. ಚಾತಕ ಪಕ್ಷಿಯಂತೆ ಅನುದಾನಕ್ಕಾಗಿ ಶಾಸಕರು ಕಾದು ಕುಳಿತಿದ್ದಾರೆ. ಸಿದ್ದರಾಮಯ್ಯ ನಾಳೆ ಬಾ ಎನ್ನುವ ಫಲಕ ಹಾಕಿಕೊಂಡು ಕುಳಿತಿದ್ದಾರೆ’ ಎಂದು ಕಿಡಿಕಾರಿದರು.


ಬಸವರಾಜ ಬೊಮ್ಮಾಯಿ ಮಾತನಾಡಿ, ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ತತ್ವ ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಸ್ವಾರ್ಥ ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ಕಾವೇರಿ, ಮಹದಾಯಿ ವಿಚಾರದಲ್ಲಿ ಎಡವಟ್ಟು ಮಾಡಲಾಗಿದೆ. ಯಾವ ನೈತಿಕತೆ, ಯಾವ ಮುಖ ಇಟ್ಟುಕೊಂಡು ದೆಹಲಿಯಲ್ಲಿ ಧರಣಿ ಮಾಡುತ್ತಿದ್ದೀರಿ’ ಎಂದು ಆರೋಪಿಸಿದರು.
‘ಮನಮೋಹನ್ ಸಿಂಗ್ ಸರ್ಕಾರ ಮತ್ತು ಮೋದಿ ಸರ್ಕಾರದ ಅವಧಿಯ ಅನುದಾನ ಬಿಡುಗಡೆ ವಿಚಾರವನ್ನು ದೈರ್ಯವಿದ್ದರೆ ಬಹಿರಂಗಪಡಿಸಿ. ಆಗ ಎಲ್ಲವೂ ಗೊತ್ತಾಗಲಿದೆ. 2014-2024ರವರೆಗೆ ₹ 2 ಲಕ್ಷ ಕೋಟಿ ಹೆಚ್ಚು ಅನುದಾನ ಮೋದಿ ಸರ್ಕಾರದಲ್ಲಿ ಬಂದಿದೆ. ಶೇ 30 ಇದ್ದ ತೆರಿಗೆ ವಾಪಸಾತಿಯನ್ನು ಮೋದಿ ಸರ್ಕಾರ ಶೇ 40ಕ್ಕೆ ಹೆಚ್ಚಿಸಿದ್ದಾರೆ. ಅನುದಾನ ಕೇಂದ್ರ ನಿರ್ಧಾರ ಮಾಡುವುದಿಲ್ಲ. ಅದನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. ಅನುದಾನ ಕಡಿತಕ್ಕೆ ಸಿದ್ದರಾಮಯ್ಯ ಕಾರಣವೇ ಹೊರತು ಮೋದಿ ಸರ್ಕಾರ ಅಲ್ಲ’ ಎಂದು ದೂರಿದರು.


ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಕಾರರರು ಘೋಷಣೆ ಕೂಗಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು