ಲೋಕಸಭೆ ಚುನಾವಣೆ ಸಂಬಂಧ ಚುನಾವಣಾ ಪ್ರಚಾರದಲ್ಲಿದ್ದ ಬಿಜೆಪಿ ಪಕ್ಷದ ಹಾಲಿ ಸಂಸದರಿಗೆ ಕಾರ್ಯಕರ್ತರಿಂದಲೇ ಧಿಕ್ಕಾರ ಕೇಳಿಬಂದಿದೆ. ಬಿಜೆಪಿ ಪ್ರಚಾರ ಸಭೆಯಲ್ಲಿ ಸಂಸದ ಪಿಸಿ ಮೋಹನ್ ವಿರುದ್ಧ ಸ್ವತಃ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ದು, ಈ ಹಿನ್ನೆಲೆ ಮುಖಭಂಗಕ್ಕೊಳಗಾದ ಸಂಸದ ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆದ ಘಟನೆ ನಡೆದಿದೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಪಿಸಿ ಮೋಹನ್ ಅವರಿಗೆ ಅವರದೇ ಕ್ಷೇತ್ರದಲ್ಲಿ ತೀವ್ರ ಮುಖಭಂಗವಾಗಿದೆ. ಶಾಂತಿನಗರದಲ್ಲಿ ನಡೆಯುತ್ತಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಸ್ಥಳೀಯ ನಾಯಕರು, ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಪಿಸಿ ಮೋಹನ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ತಾವು 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಏನೂ ಸಹಾಯ, ಕೆಲಸ ನಮಗಾಗಿ ಮಾಡಿಲ್ಲಾ. ಜನರ ಮುಂದೆ ನಮಗೆ ಮತ ಕೇಳಲು ಹೋಗಲು ಆಗುತ್ತಿಲ್ಲಾ. ನೀವು ಮತ್ತೆ ಟಿಕೆಟ್ ತಂದಿದ್ದೇಕೆ? ನೀವೂ ಸದಾನಂದಗೌಡರ ರೀತಿ ನಿವೃತ್ತಿ ಪಡೆಯಬೇಕಿತ್ತು ಎಂದು ಶಾಂತಿನಗರ ಮಾಜಿ ಕಾರ್ಪೊರೇಟರ್ ಶಿವಕುಮಾರ ಹಾಗೂ ಬಿಜೆಪಿ ಕಾರ್ಯಕರ್ತರು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಆಕ್ರೋಶ ತಾಳಲಾರದೆ ಪಿಸಿ ಮೋಹನ್ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.