Home ದೇಶ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ: ಪ್ರಬೀರ್ ಪುರಕಾಯಸ್ಥ

ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ: ಪ್ರಬೀರ್ ಪುರಕಾಯಸ್ಥ

0

ಕೋಳಿಕ್ಕೋಡ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ನ್ಯೂಸ್‌ಕ್ಲಿಕ್‌ನ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಹೇಳಿದ್ದಾರೆ. ಕೇರಳ ಎನ್‌ಜಿಒ ಯೂನಿಯನ್ ನ 61ನೇ ರಾಜ್ಯ ಸಮ್ಮೇಳನದ ಪ್ರತಿನಿಧಿ ಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹರಣ, ದನಿ ದಮನ ಮಾಡುವುದನ್ನು ಸಹಿಸಲು ಭಾರತದ ಜನತೆ ಸಿದ್ಧರಿಲ್ಲ ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ ಎಂದರು. ಇದು ಕಾಂಗ್ರೆಸ್ ಅಥವಾ ಇನ್ಯಾವುದೇ ಪಕ್ಷದ ಯಶಸ್ಸಲ್ಲ, ದೇಶದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಜನರ ಹಿತಾಸಕ್ತಿ ಕಡೆಗಣಿಸಲಾಗಿದೆ ಹೀಗಾಗಿಯೇ ಬಿಜೆಪಿ ಹಲವೆಡೆ ವಿಫಲವಾಗಿದೆ ಎಂದರು. ಅಯೋಧ್ಯೆಯಲ್ಲಿಯೂ ಧರ್ಮ ವಿಭಜನೆಯ ರಾಜಕಾರಣ ವಿಫಲವಾಗಿದೆ ಎಂದರು.

ಭಾರತ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರವು ಕೋಮುದ್ವೇಷ ಮತ್ತು ವಿಭಜಕ ರಾಜಕಾರಣವನ್ನು ತಂದಿದೆ ಎಂದರು. ಅಪೌಷ್ಟಿಕತೆ, ಬಡತನ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಿದ್ದು, ದೇಶವು ಬ್ರಿಟೀಷ್ ರಾಜ್ ಮಾದರಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮೋದಿ ನೇತೃತ್ವದಲ್ಲಿ ಅದಾನಿ, ಅಂಬಾನಿಗಳು ಕೋಟ್ಯಾಧಿಪತಿಗಳಾಗಿದ್ದಾರೆ ಎಂದರು. ಕೇಂದ್ರವು ನಿಜವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ, ಯೋಜನಾ ಆಯೋಗವನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.

ಜನರಿಗೆ ಮಾಹಿತಿ ತಲುಪದೆ ಕಪ್ಪು ಕಾನೂನುಗಳನ್ನು ಪರಿಚಯಿಸಲಾಯಿತು. ಮಾತನಾಡುವವರನ್ನು ದೇಶದ್ರೋಹಿಗಳೆಂದು ಕರೆದು ಜೈಲಿಗೆ ಹಾಕಲಾಯಿತು. ಇದಕ್ಕಾಗಿ ಎಲ್ಲ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ದುಯ್ಯಬಟ್ಟ ಹೇಳಿದರು. ದೊಡ್ಡ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಲು ಎಲೆಕ್ಟೋರಲ್ ಬಾಂಡ್‌ಗಳನ್ನು ಪರಿಚಯಿಸಲಾಯಿತು.

ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಮಾಧ್ಯಮವು ಅತ್ಯಂತ ಮಹತ್ವದ್ದಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಡಿಜಿಟಲ್ ಮಾಧ್ಯಮದಲ್ಲಿ ಭಾಗವಹಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಡಿಜಿಟಲ್ ಮಾಧ್ಯಮ ಮತ್ತು ರೈತರ ಆಂದೋಲನವು ಸರ್ಕಾರದ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸವಾಲಾಗಿದೆ ಎಂದು ಅವರು ನೆನಪಿಸಿದರು. ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಸಾರ್ವಜನಿಕ ಭಿನ್ನಾಭಿಪ್ರಾಯವನ್ನು ತಪ್ಪಾಗಿ ಬಿಂಬಿಸಿ ಪ್ರತಿಭಟನೆಗಳನ್ನು ಸಂಚಾರ ಅಸ್ತವ್ಯಸ್ತ ಎಂದು ಬಿಂಬಿಸಿವೆ ಎಂದು ಅವರು ಹೇಳಿದರು. ಕೇಂದ್ರ ಮತ್ತು ಬಿಜೆಪಿಯ ಅಜೆಂಡಾವನ್ನು ವಿರೋಧಿಸಲು ಸಾಮಾಜಿಕ ಮಾಧ್ಯಮ ಪ್ರಚಾರದಲ್ಲಿ ಜನರು ಭಾಗವಹಿಸಬೇಕು ಎಂದು ಪ್ರಬೀರ್ ಪುರಕಾಯಸ್ಥ ಪುನರುಚ್ಚರಿಸಿದರು.

You cannot copy content of this page

Exit mobile version