Thursday, September 11, 2025

ಸತ್ಯ | ನ್ಯಾಯ |ಧರ್ಮ

ಸಿ.ಟಿ. ರವಿ ಸಂಸ್ಕೃತಿ ಜನರಿಗೆ ಗೊತ್ತಿದೆ: ಡಿಕೆ ಶಿವಕುಮಾರ್

ಬೆಂಗಳೂರು: ಮಂಡೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ ದ್ವೇಷದ ಭಾಷಣದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸಿ.ಟಿ. ರವಿ ಅವರ ಸಂಸ್ಕೃತಿ ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ” ಎಂದು ಅವರು ಹೇಳಿದರು.

ಮಂಡೂರಿನಲ್ಲಿ ಗಲಭೆಯನ್ನು ಖಂಡಿಸಿ ಮಾತನಾಡಿದ್ದ ಸಿ.ಟಿ. ರವಿ, ಮುಸ್ಲಿಮರ “ಶಿರಚ್ಛೇದ” ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಪ್ರಚೋದನಕಾರಿ ಹೇಳಿಕೆಗಳ ನಂತರ ಅವರ ವಿರುದ್ಧ ಮಂಡೂರಿನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, “ಈ ವಿಚಾರ ನನಗೆ ತಿಳಿದಿಲ್ಲ, ತಿಳಿದುಕೊಳ್ಳುತ್ತೇನೆ. ಆದರೆ ಅವರ ಸಂಸ್ಕೃತಿ ಜನರಿಗೆ ಗೊತ್ತಿದೆ” ಎಂದು ಕಿಡಿಕಾರಿದರು.

ಬ್ಯಾಲೆಟ್ ಪೇಪರ್ ಬಳಕೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಲು ಕಾನೂನು ತಂದಿತ್ತು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮತಪತ್ರ ಬಳಸಲು ಅವಕಾಶವಿದೆ. “ಬಿಜೆಪಿ ರೂಪಿಸಿದ್ದ ಜಿಬಿಎ ಕಾಯ್ದೆಯನ್ನೇ ನಾವು ಮುಂದುವರಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದರು. ಈ ಬಗ್ಗೆ ಕಾನೂನು ಸಚಿವರು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ‘ಸೇಂಟ್ ಮೇರಿಸ್’ ಹೆಸರಿಡಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಾತನಾಡಿದ ಡಿಕೆಶಿ, “ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರವಾಗಿ ನಾವು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ಆರ್. ಅಶೋಕ್ ವಿರುದ್ಧ ಗರಂ

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ವಿರುದ್ಧವೂ ಡಿ.ಕೆ. ಶಿವಕುಮಾರ್ ಹರಿಹಾಯ್ದರು. “ಅಶೋಕ್ ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲವೂ ಶೀಘ್ರದಲ್ಲೇ ಹೊರಬೀಳಲಿದೆ” ಎಂದು ಎಚ್ಚರಿಸಿದರು.

ಮದ್ದೂರಿನ ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ನಾನು ಊರಿನಲ್ಲಿ ಇರದ ಕಾರಣ ನನಗೆ ಪೂರ್ಣ ಮಾಹಿತಿ ಇಲ್ಲ. ನಾನು ಪತ್ರಿಕೆಗಳಲ್ಲಿ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಹೆಚ್ಚು ತಿಳಿಯದೆ ನಾನು ಮಾತನಾಡಲು ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page