Home ಬೆಂಗಳೂರು ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣಪತ್ರ – ಸಿ.ಎಂ , ಡಿಸಿಎಂ ಚಾಲನೆ

ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣಪತ್ರ – ಸಿ.ಎಂ , ಡಿಸಿಎಂ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರ (Permanent Resident Certificate – PRC) ವಿತರಣೆ ಸೇವೆಗೆ ಚಾಲನೆ ನೀಡಿದ್ದು, ಸಾರ್ವಜನಿಕರಿಗೆ ಮನೆಮನೆಗೆ ಪ್ರಮಾಣಪತ್ರ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಿದೆ. ವಿಧಾನಸೌಧದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, ಶಾಶ್ವತ ನಿವಾಸ ಪ್ರಮಾಣಪತ್ರವನ್ನು 11 ಮಾನದಂಡಗಳ ಆಧಾರದ ಮೇಲೆ ನೀಡಲಾಗುವುದು ಎಂದು ತಿಳಿಸಿದರು. ಕರ್ನಾಟಕದಲ್ಲಿ ಜನಿಸಿರುವವರು, ಕನಿಷ್ಠ 10 ವರ್ಷಗಳಿಂದ ರಾಜ್ಯದಲ್ಲಿ ವಾಸಿಸಿರುವವರು, ರಾಜ್ಯದಲ್ಲಿ 10 ವರ್ಷಗಳ ಕಾಲ ವ್ಯಾಸಂಗ ಮಾಡಿದವರು, ಕರ್ನಾಟಕದ ನಿವಾಸಿಯನ್ನು ವಿವಾಹವಾದವರು, ರಾಜ್ಯದಲ್ಲಿ ಮನೆ ಅಥವಾ ಸ್ಥಿರಾಸ್ತಿ ಹೊಂದಿರುವವರು, ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಸೇರಿದಂತೆ ವಿವಿಧ ಅರ್ಹತಾ ಮಾನದಂಡಗಳನ್ನು ಪರಿಗಣಿಸಿ ಪಿಆರ್‌ಸಿ ನೀಡಲಾಗುವುದು ಎಂದರು.

ಪ್ರಮಾಣಪತ್ರಗಳನ್ನು ಮನೆಮನೆಗೆ ತಲುಪಿಸುವುದರ ಜೊತೆಗೆ ವೆಬ್‌ಸೈಟ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ. ವಾಟ್ಸ್ಆಪ್, ಹೋಬಳಿ ಮಟ್ಟದ ಸಹಾಯ ಕೇಂದ್ರಗಳು, ನಾಡಕಚೇರಿ, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಪ್ರಮಾಣಪತ್ರ ಪಡೆಯಲು ಅವಕಾಶ ನೀಡಲಾಗಿದೆ.

ಪ್ರಮಾಣಪತ್ರ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾದರೆ ತಹಶೀಲ್ದಾರ್, ಉಪತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅಗತ್ಯವಿದ್ದರೆ ಜಿಲ್ಲಾಧಿಕಾರಿಗಳಿಂದ ಮರುಪರಿಶೀಲನೆ ನಡೆಸುವ ವ್ಯವಸ್ಥೆಯನ್ನೂ ಸರ್ಕಾರ ರೂಪಿಸಿದೆ.

ಇದೇ ವೇಳೆ, ರಾಜ್ಯದಾದ್ಯಂತ ಸುಮಾರು 4.85 ಕೋಟಿ ಜಾತಿ ಪ್ರಮಾಣಪತ್ರಗಳನ್ನು ಉಚಿತವಾಗಿ ಮನೆಮನೆಗೆ ವಿತರಿಸುವ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಅಟಲ್ ಜನಸ್ನೇಹಿ ಕೇಂದ್ರಗಳ ಮೂಲಕ ಪ್ರಮಾಣಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಮನೆಮನೆಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಿದ್ದಾರೆ.

ಈ ಯೋಜನೆಯಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಅವಶ್ಯಕತೆ ಕಡಿಮೆಯಾಗಲಿದ್ದು, ವಿವಿಧ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.

You cannot copy content of this page

Exit mobile version