ಹಾಸನ: ಜಿಲ್ಲೆಗೆ ಆಗಮಿಸುವ ಜಿಲ್ಲಾಧಿಕಾರಿ ಸೇರಿದಂತೆ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವಿರುದ್ಧ ವೈಯಕ್ತಿಕ ಆರೋಪ, ನಿಂದನೆ ಹಾಗೂ ತೇಜೋವಧೆ ಮಾಡುವಂತಹ ಬೆಳವಣಿಗೆಗಳು ನಡೆಯಬಾರದು ಎಂದು ದಲಿತ ಸಂಘಟನೆಗಳ ಮುಖಂಡರಾದ ಮರಿ ಜೋಸೆಫ್ ಅವರು ಒತ್ತಾಯಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಜಿಲ್ಲಾಧಿಕಾರಿ ಅಥವಾ ಯಾವುದೇ ಅಧಿಕಾರಿಗಳ ಕಾರ್ಯವೈಖರಿ ಕುರಿತು ಆಕ್ಷೇಪಗಳಿದ್ದರೆ ದಾಖಲೆ ಹಾಗೂ ಸಾಕ್ಷ್ಯಗಳೊಂದಿಗೆ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ವೈಯಕ್ತಿಕವಾಗಿ ಅವಮಾನಿಸುವ ರೀತಿಯಲ್ಲಿ ಮಾತನಾಡುವುದು ಅಥವಾ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದರು. ಜಿಲ್ಲೆಗೆ ಈ ಹಿಂದೆ ಹಲವು ಜಿಲ್ಲಾಧಿಕಾರಿಗಳು ಬಂದು ಕರ್ತವ್ಯ ನಿರ್ವಹಿಸಿದ್ದಾರೆ. ಪ್ರತಿಯೊಬ್ಬ ಅಧಿಕಾರಿಗೂ ತಮ್ಮ ಹುದ್ದೆಯ ಜವಾಬ್ದಾರಿ ಹಾಗೂ ಆಡಳಿತ ನಡೆಸುವ ಅನುಭವವಿರುತ್ತದೆ. ಹೀಗಾಗಿ ಅಧಿಕಾರಿಗಳು ದಲಿತ ಸಮುದಾಯಕ್ಕೆ ಸೇರಿದವರು ಅಥವಾ ಕೆಳಮಟ್ಟದಿಂದ ಬಂದವರು ಎಂಬ ಕಾರಣಕ್ಕೆ ಅವರನ್ನು ವಿಭಿನ್ನವಾಗಿ ನೋಡುವ ಮನಸ್ಥಿತಿ ಬೆಳೆಯಬಾರದು. ಜಾತಿ ಆಧಾರದ ಮೇಲೆ ಅಧಿಕಾರಿಗಳನ್ನು ಅವಮಾನಿಸುವ ಪ್ರವೃತ್ತಿ ದೂರವಾಗಬೇಕು ಎಂದು ಹೇಳಿದರು.
ಪ್ರಸ್ತುತ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳಿಗೆ ಸ್ಪಂದನೆ ದೊರೆತಿದೆ ಎಂದು ಮುಖಂಡರು ತಿಳಿಸಿದರು. ಕೃಷ್ಣರಾಜ ಒಡೆಯರ್–ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕಕ್ಕೆ ಭೂಮಿ ಒದಗಿಸುವ ಪ್ರಕ್ರಿಯೆ, ಬೌದ್ಧ ಧರ್ಮೀಯರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಲೇಔಟ್ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಲ್ಲಿ ಆಡಳಿತ ಸ್ಪಂದಿಸಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ದಲಿತ ಸಮುದಾಯದ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಲು ನಡೆಯುವ ಸಭೆಗಳು ಹಾಗೂ ಸಮಿತಿಗಳ ಮೂಲಕವೂ ಹಲವು ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಇಂತಹ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವಿರೋಧಿಸುವ ಬದಲು, ಉತ್ತಮ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಅಧಿಕಾರಿಗಳ ಮೇಲೆ ಅನಗತ್ಯ ಒತ್ತಡ ಹೇರಿದರೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
