ಚುನಾವಣೆ ಸಂದರ್ಭದಲ್ಲಿ ಕ್ರಮಬದ್ಧ ಮಾಹಿತಿ ಕೊಡದ, ಆಮಿಷವೊಡ್ಡಿದ ಆರೋಪ ಮಾಡಿ ಹಾಸನ ಮತ್ತು ದಾವಣಗೆರೆ ಸಂಸದರುಗಳ ಸದಸ್ಯತ್ವ ರದ್ದು ಮಾಡುವಂತೆ ಎರಡು ಪ್ರತ್ಯೇಕ ದೂರು ಅರ್ಜಿಗಳು ಇಂದು ಹೈಕೋರ್ಟಿಗೆ ಸಲ್ಲಿಕೆಯಾಗಿವೆ.
ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಶ್ರೇಯಸ್ ಎಂ.ಪಟೇಲ್ ಮತ್ತು ದಾವಣಗೆರೆ ಕ್ಷೇತ್ರದಿಂದ ಚುನಾಯಿತರಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ದೂರುದಾರರು ತಿಳಿಸಿದ್ದಾರೆ.
ಶ್ರೇಯಸ್ ಪಟೇಲ್ ಆಯ್ಕೆ ಪ್ರಶ್ನಿಸಿ ಚರಣ್.ಡಿ ಎಂಬುವವರು ತಕರಾರು ಅರ್ಜಿ ಸಲ್ಲಿಸಿದ್ದು, ಶ್ರೇಯಸ್ ಪಟೇಲ್ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ. ಅವರು ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿಲ್ಲ. ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ, ಎಂದು ತಕರಾರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ನಿಗದಿಗಿಂತ ಹೆಚ್ಚಿನ ಹಣ ವ್ಯಯಿಸಿದ್ದು, ಸರಿಯಾದ ಲೆಕ್ಕವನ್ನು ಆಯೋಗಕ್ಕೆ ಸಲ್ಲಿಕೆ ಮಾಡಿಲ್ಲ. ಹಾಗಾಗಿ ಅವರ ಆಯ್ಕೆಯನ್ನೇ ರದ್ದುಗೊಳಿಸಬೇಕು ಎಂದು ಅರ್ಜಿದಾರ ಚರಣ್.ಡಿ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಚರಣ್.ಡಿ ಅವರು ವಕೀಲ ದೇವರಾಜೇಗೌಡ ಪುತ್ರನಾಗಿದ್ದಾರೆ.
ಇನ್ನು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ತಕರಾರು ಅರ್ಜಿ ಹಾಕಿದ್ದು, ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಬಡ ಮಹಿಳೆಯರಿಗೆ 1 ಲಕ್ಷ ರು. ಕೊಡುವುದಾಗಿ ಭರವಸೆ ನೀಡಿದ್ದರು. ಪ್ರತಿ ತಿಂಗಳು 8,500 ಹಣ ನೀಡುವುದಾಗಿ ತಿಳಿಸಿದ್ದರು. ಇದು ಪ್ರಜಾಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ದೂರಿದ್ದಾರೆ.
ಜೊತೆಗೆ ಪ್ರಭಾ ಮಲ್ಲಿಕಾರ್ಜುನ್ ಅವರು ಮತದಾರರಿಗೆ ಲಂಚದ ಆಮಿಷ ಒಡ್ಡಿ ಮತ್ತು ಚುನಾವಣಾ ಅಕ್ರಮ ನಡೆಸಿ ಅವರು ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಗಾಯತ್ರಿ ಸಿದ್ದೇಶ್ವರ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.