Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದೂ ದಂಪತಿಗಳ ಸಲಿಂಗ ಮದುವೆಗೆ ಮಾನ್ಯತೆ ನೀಡಲು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

ಹೊಸದಿಲ್ಲಿ: ಅಮೆರಿಕದಲ್ಲಿ ಮದುವೆಯಾಗಿ ಅಲ್ಲಿನ ಕಾನೂನಿನ ಪ್ರಕಾರ ಮದುವೆಯನ್ನು ನೋಂದಾಯಿಸಿರುವ ಸಲಿಂಗ ದಂಪತಿಗಳು ತಮ್ಮ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಅರ್ಜಿದಾರರು LGBTQIA + ಸಮುದಾಯಕ್ಕೆ ಸೇರಿದ ವ್ಯಕ್ತಿಗಳಾಗಿದ್ದು, ತಮ್ಮ ವಿವಾಹದ ಹಕ್ಕನ್ನು ಮಾನ್ಯ ಮಾಡಬೇಕು ಎಂದು ವಿನಂತಿಸಿದ್ದಾರೆ.

ಸಲಿಂಗ ಮದುವೆಯ ಮಾನ್ಯತೆ ನಿರಾಕರಿಸುವುದು ಭಾರತದ ಸಂವಿಧಾನದ 14 (ಸಮಾನತೆ), 19 (ಸ್ವಾತಂತ್ರ್ಯ) ಮತ್ತು 21 (ಜೀವನ ಮತ್ತು ಸ್ವಾತಂತ್ರ್ಯ) ಅಡಿಯಲ್ಲಿ ಖಾತರಿಪಡಿಸಿದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅರ್ಜಿದಾರರಲ್ಲಿ ಒಬ್ಬರು ಭಾರತೀಯರಾಗಿದ್ದು, ಅವರು 2010 ರಲ್ಲಿ ಅಮೇರಿಕನ್ ಪ್ರಜೆಯನ್ನು ವಿವಾಹವಾಗಿ ಅಮೇರಿಕಾದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ.

ಆದಾಗ್ಯೂ, ದಂಪತಿಗಳು ತಮ್ಮ ವಿವಾಹವನ್ನು ಹಿಂದೂ ವಿವಾಹ ಕಾಯ್ದೆಯಡಿ ನೋಂದಾಯಿಸಲು ಪ್ರಯತ್ನಿಸಿದಾಗ, ಅದನ್ನು ರಿಜಿಸ್ಟ್ರಾರ್ ನಿರಾಕರಿಸಿದರು.

ತರುವಾಯ, ದಂಪತಿಗಳು ತಮ್ಮ ವಿವಾಹವನ್ನು ವಿದೇಶಿ ವಿವಾಹ ಕಾಯ್ದೆಯಡಿ ನೋಂದಾಯಿಸಲು ವಾಷಿಂಗ್ಟನ್ DC ಯಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ತಿಂಗಳುಗಟ್ಟಲೆ ಕಾಯ್ದ ನಂತರ, ಮನವಿಯನ್ನು ತಿರಸ್ಕರಿಸಲಾಯಿತು ಮತ್ತು ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಹಿಂದೂ ವಿವಾಹ ಕಾಯಿದೆ, 1955 ಮತ್ತು ವಿದೇಶಿ ವಿವಾಹ ಕಾಯಿದೆ, 1969 ಅನ್ನು LGBTQIA + ಸಮುದಾಯದ ಸದಸ್ಯರ ನಡುವಿನ ವಿವಾಹಗಳಿಗೆ ಅನ್ವಯಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದಾರೆ.

“ಭಾರತೀಯ ದೂತಾವಾಸವು ಭಿನ್ನಲಿಂಗೀಯ ದಂಪತಿಗಳ ವಿವಾಹವನ್ನು ನೋಂದಾಯಿಸುತ್ತದೆ, ಆದರೆ ಅರ್ಜಿದಾರರಿಗೆ ಅದೇ ರೀತಿ ಮಾಡಲಿಲ್ಲ. ಹಾಗೆ ಮಾಡದೇ ಇರುವುದು ಸಂವಿಧಾನದ 14, 15, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆʼʼ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ನವತೇಜ್ ಶಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಸುಪ್ರಾ) ಪ್ರಕರಣದಲ್ಲಿ ನ್ಯಾಯಾಲಯವನ್ನು ಉಲ್ಲೇಖಿಸಿ, LGBTQIA + ಸಮುದಾಯದ ಹಕ್ಕುಗಳನ್ನು ಪ್ರತಿಪಾದಿಸಲಾಗಿದೆ.

“ಸಲಿಂಗ ವಿವಾಹವು ಸಾಂಪ್ರದಾಯಿಕ ಕುಟುಂಬಗಳಿಗೆ ಹಾನಿ ಉಂಟು ಮಾಡುವುದಿಲ್ಲ. ಸಲಿಂಗ ವಿವಾಹವನ್ನು ಅನುಮತಿಸುವುದು ವಿರುದ್ಧ ಲಿಂಗದ ವಿವಾಹದಲ್ಲಿ ಸಂತಾನೋತ್ಪತ್ತಿ ಅಥವಾ ಮಕ್ಕಳ ಪಾಲನೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ, ಆದರೆ ಇದಕ್ಕೆ ಕಾನೂನಿನ ಮಾನ್ಯತೆ ನಿರಾಕರಿಸಿದರೆ ಸಲಿಂಗ ದಂಪತಿಗಳು ಮತ್ತು ಅವರ ಮಕ್ಕಳಿಗೆ ಹಾನಿ ಮಾಡುತ್ತದೆ. ಭದ್ರತೆ, ಮತ್ತು ಮಕ್ಕಳ ಪಾಲನೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಅರ್ಜಿದಾರರಿಗೆ ಮದುವೆಯಾಗುವ ಹಕ್ಕನ್ನು ನಿರಾಕರಿಸುವುದು ಕಾಯಿದೆಯ ಸೆಕ್ಷನ್ 5 ರ ಉಲ್ಲಂಘನೆಯಾಗಿದೆ. ಹಿಂದೂ ನಂಬಿಕೆಯ ಅನುಯಾಯಿಗಳಾಗಿರುವ ಅರ್ಜಿದಾರರಿಗೆ ಮದುವೆಯಾಗುವ ಹಕ್ಕನ್ನು ನಿರಾಕರಿಸಲಾಗುತ್ತಿದೆ, ಇದು HMA ಯ ಶಾಸನಬದ್ಧ ಆದೇಶವನ್ನು ಉಲ್ಲಂಘಿಸುತ್ತದೆ, ಕಾಯಿದೆಯ 5 ನೇ ವಿಧಿಯು ಯಾವುದೇ ಇಬ್ಬರು ಹಿಂದೂಗಳ ನಡುವೆ ವಿವಾಹವನ್ನು ನಡೆಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ಹಿಂದೂ ವಿವಾಹ ಕಾಯಿದೆ, 1956 ರಲ್ಲಿ ಎಲ್ಲಿಯೂ ಮದುವೆಯೆಂಬುದು ಇಬ್ಬರು ಭಿನ್ನಲಿಂಗೀಯ ವ್ಯಕ್ತಿಗಳ ನಡುವೆ ನಡೆಯುತ್ತದೆ ಎಂದು ಹೇಳಲಾಗಿಲ್ಲ. ಸೆಕ್ಷನ್ 5 ರಲ್ಲಿ “ಯಾವುದೇ ಇಬ್ಬರು ಹಿಂದೂಗಳು” ಎಂದು ಬಳಸಲಾಗಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು