Home ಬೆಂಗಳೂರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತವಾಗಿ ಏರಿಕೆ – ಡಿಕೆಶಿ ಆಕ್ರೋಶ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತವಾಗಿ ಏರಿಕೆ – ಡಿಕೆಶಿ ಆಕ್ರೋಶ

ಬೆಂಗಳೂರು : ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು (Fuel Price Hike) ಖಂಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಕೇಂದ್ರ ಸರ್ಕಾರದ (Central Govt) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂಧನ ದರ ಗಗನಕ್ಕೇರುತ್ತಿರುವುದು ಪ್ರಧಾನಿ ನರೇಂದ್ರ ಮೋದಿ (Pm Modi) ಅವರು ಜನಸಾಮಾನ್ಯರಿಗೆ ನೀಡಿದ ‘ವಿಶೇಷ ಕೊಡುಗೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕೇಂದ್ರದ ಆಡಳಿತ ವೈಖರಿಯೇ ಈ ಬೆಲೆ ಏರಿಕೆಗೆ ನೇರ ಕಾರಣ ಎಂದು ಆಪಾದಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೆ, ಕೇಂದ್ರ ಸರ್ಕಾರ ಮಾತ್ರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ತೆರಿಗೆ ವಸೂಲಿ ಮಾಡುವುದರಲ್ಲೇ ಮಗ್ನವಾಗಿದೆ ಎಂದು ಅವರು ಕಿಡಿಕಾರಿದರು.

ವಿದೇಶಾಂಗ ನೀತಿ ಮತ್ತು ಆರ್ಥಿಕ ವೈಫಲ್ಯ

ಭಾರತದ ವಿದೇಶಾಂಗ ನೀತಿಯ ಬಗ್ಗೆಯೂ ಪ್ರಸ್ತಾಪಿಸಿದ ಡಿ.ಕೆ.ಎಸ್, ಪ್ರಸ್ತುತ ನೆರೆರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಅಷ್ಟೊಂದು ಆಶಾದಾಯಕವಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಇಂತಹ ಕ್ಲಿಷ್ಟಕರ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜನರು ಇಂಧನವನ್ನು ಮಿತವಾಗಿ ಬಳಸಿ ಎಂದು ಹೇಳುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದರು.

ದುರಂತದ ಹಾದಿಯಲ್ಲಿ ದೇಶ

ದೇಶವು ಪ್ರಸ್ತುತ ಆರ್ಥಿಕ ದುರಂತದ ಹಾದಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇನ್ನಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣವೇ ಮಧ್ಯಪ್ರವೇಶಿಸಬೇಕು. ತೈಲ ಬೆಲೆಗಳನ್ನು ಇಳಿಸುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನೆಮ್ಮದಿ ನೀಡಬೇಕು ಎಂದು ಅವರು ಆಗ್ರಹಿಸಿದರು.

You cannot copy content of this page

Exit mobile version