Sunday, June 16, 2024

ಸತ್ಯ | ನ್ಯಾಯ |ಧರ್ಮ

ಫಲಜ್ಯೋತಿಷ ಒಂದು ವಿಜ್ಞಾನವೇ?

ಭವಿಷ್ಯವನ್ನು ತಿಳಿದುಕೊಳ್ಳುವುದು ಸಾಧ್ಯ ಎಂದು ಯಾರಾದರೂ ಹೇಳುತ್ತಿದ್ದಾರೆಂದರೆ ಅವರು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ ಮತ್ತು ಭವಿಷ್ಯದ ಬಗೆಗಿನ ಮುಗ್ಧ ಜನರ ಕುತೂಹಲ ಮತ್ತು ಭಯವನ್ನು ತಮ್ಮ ದಂಧೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದೇ ಅರ್ಥ ಎಂದು ಹೇಳುತ್ತಾರೆ  ಚಿಂತಕ ಶ್ರೀನಿವಾಸ ಕಾರ್ಕಳ.

ಅದು ಎಪ್ಪತ್ತರ ದಶಕ. ನನ್ನಪ್ಪನ ಬಳಿಯಲ್ಲಿ ಒಂದು ಹಳೆಯ ಫೇವರ್ ಲ್ಯೂಬಾ ವಾಚು ಇತ್ತು. ಅದು ಎಷ್ಟು ಹಳೆಯದು ಮತ್ತು ಯಾವ ಸ್ಥಿತಿಯಲ್ಲಿತ್ತು ಎಂದರೆ, ಅದು ತಾನಾಗಿ ನಡೆಯುತ್ತಿದ್ದುದು ಬಹಳ ಕಡಿಮೆ. ಅದರ ಮುಳ್ಳುಗಳನ್ನು ಒಮ್ಮೊಮ್ಮೆ ನಾವೇ ಕೈಯಲ್ಲಿ ತಿರುಗಿಸಿ ಅಂದಾಜಿಗೆ ಸಮಯ ಹೊಂದಿಸುತ್ತಿದ್ದೆವು. ಅದು ನಿಜ ಸಮಯಕ್ಕಿಂತ ಒಮ್ಮೊಮ್ಮೆ ಅರ್ಧ ಮುಕ್ಕಾಲು ಗಂಟೆ ಹಿಂದೆ ಮುಂದೆ ಇರುತ್ತಿದ್ದುದೂ ಇತ್ತು.

ಇಂತಹ ಗುಜರಿ ವಾಚು ತಿಳಿಸುತ್ತಿದ್ದ ‘ನಿಖರ ಸಮಯ’ ಬಳಸಿಕೊಂಡು ನನ್ನ ತಮ್ಮಂದಿರು ತಂಗಿಯಂದಿರು ಎಲ್ಲರ ಹುಟ್ಟಿದ ಸಮಯವನ್ನು ಬರೆದಿಡಲಾಗಿತ್ತು. ಈ ‘ನಿಖರ ಸಮಯ’ದ ಮೇಲೆ ಅವರ ಜನ್ಮ ಕುಂಡಲಿ, ಜಾತಕ, ಈ ಜಾತಕ ಆಧರಿಸಿ ಅವರ ಭವಿಷ್ಯವನ್ನೂ ಬರೆದಿಡಲಾಗಿತ್ತು. ಜನನ ಸಮಯದಲ್ಲಿ ಕೆಲವು ನಿಮಿಷಗಳ ವ್ಯತ್ಯಾಸವಾದರೂ ರಾಶಿ, ನಕ್ಷತ್ರ ಬದಲಾಗುತ್ತದೆ ಎನ್ನುವಾಗ, ನನ್ನ ತಮ್ಮ ತಂಗಿಯರ, ಮೂಲದಲ್ಲಿಯೇ ತಪ್ಪಿದ ಜನನ ಸಮಯ ಆಧರಿಸಿ ಬರೆಯಲಾದ ಜನ್ಮ ಕುಂಡಲಿಯೇ ಅವರದಲ್ಲದಾಗಿರುವಾಗ, ಅದನ್ನು ಆಧರಿಸಿ ನಿಗದಿಪಡಿಸಿದ ಭವಿಷ್ಯ ಅವರದಾಗಿರಬಹುದೇ? ಇಂತಹ ಅರ್ಥಹೀನ, ಅವೈಜ್ಞಾನಿಕ ಜಾತಕವನ್ನು ಮುಂದೆ ಬದುಕಿನ ಮಹತ್ತರ ಘಟ್ಟವಾದ ಮದುವೆ ಸಂಬಂಧ ನಿರ್ಧರಿಸುವಾಗಲೂ ಬಳಸಲಾಗುತ್ತದೆ, ಜಾತಕ ಸರಿ ಇಲ್ಲವೆಂದು ಅತ್ಯುತ್ತಮ ಸಂಬಂಧಗಳನ್ನೂ ನಿರಾಕರಿಸಲಾಗುತ್ತದೆ ಎಂದರೆ ಜ್ಯೋತಿಷ, ಜಾತಕದ ಹೆಸರಿನಲ್ಲಿ ಎಂತೆಂತಹ ಮೂರ್ಖತನಗಳನ್ನು ಮಾಡಲಾಗುತ್ತಿದೆ, ಮಂಗಳನಲ್ಲಿಗೆ ಮನುಷ್ಯನನ್ನು ಕಳುಹಿಸಲು ಸಿದ್ಧತೆ ನಡೆದಿರುವ ಆಧುನಿಕ ವಿಜ್ಞಾನ ಕಾಲದಲ್ಲಿಯೂ ನಾವು ಯಾವ ಭಯಾನಕ ಮೌಢ್ಯದ ಹಾದಿಯಲ್ಲಿದ್ದೇವೆ ಊಹಿಸಿ.

ಖಗೋಳ ವಿಜ್ಞಾನ ಮತ್ತು ಫಲಜ್ಯೋತಿಷ

ಜ್ಯೋತಿಷದ ವಿಷಯ ಬಂದಾಗಲೆಲ್ಲ ನಮ್ಮಲ್ಲಿ ಖಗೋಳ ವಿಜ್ಞಾನವನ್ನು ಫಲಜ್ಯೋತಿಷದೊಂದಿಗೆ ಸಮನ್ವಯಗೊಳಿಸಿಕೊಂಡು ಗೊಂದಲಗೊಳಿಸುವುದಿದೆ. ಮನುಷ್ಯ ಈ ಭೂಮಿಯಲ್ಲಿ ಕಾಣಿಸಿಕೊಂಡ ಲಾಗಾಯ್ತಿನಿಂದಲೂ ಆತನಿಗೆ ತನ್ನ ಸುತ್ತಲ ಜಗತ್ತಿನ ಬಗ್ಗೆ, ಅಲ್ಲಿನ ಅಸಂಖ್ಯ ವಿದ್ಯಮಾನಗಳ ಬಗ್ಗೆ ಭಯವಿತ್ತು, ಕುತೂಹಲವಿತ್ತು, ಅವನ್ನು ಅರಿಯುವ ಬಯಕೆಯಿತ್ತು.  ಬಹು ಮುಖ್ಯವಾಗಿ ಆಕಾಶ, ಅಲ್ಲಿನ ಆಕಾಶ ಕಾಯಗಳು, ರಾತ್ರಿ, ಹಗಲು, ಹುಣ್ಣಿಮೆ, ಅಮವಾಸ್ಯೆ, ಬೇಸಗೆ, ಮಳೆಗಾಲ, ಚಳಿಗಾಲ, ಹೀಗೆ ಆಗುತ್ತಿದ್ದ ಬದಲಾವಣೆಗಳ ಬಗ್ಗೆ ಆತನಿಗೆ ಬೆರಗು, ಕುತೂಹಲವಿತ್ತು. ಆದರೆ ಆ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ತನ್ನ ಅಜ್ಞಾನ, ಅರೆಜ್ಞಾನದ ಮಿತಿಯೊಳಗಡೆಯೇ ಆತ ಊಹೆಗಳ ಮೂಲಕ ಅನೇಕ ತೀರ್ಮಾನಗಳಿಗೆ ಬಂದ. ಭೂಮಿ ಚಪ್ಪಟೆಯಾಗಿದೆ ಅಂದುಕೊಂಡ, ಸೂರ್ಯನು ಭೂಮಿಯ ಸುತ್ತ ತಿರುಗುತ್ತಾನೆ ಅಂದುಕೊಂಡ, ಗ್ರಹಣ ಅಂದರೆ ಚಂದ್ರ, ಸೂರ್ಯರನ್ನು ರಾಹು ಕೇತು ನುಂಗುವುದು ಅಂದುಕೊಂಡ. ಈ ಅನೇಕ ಸಂಗತಿಗಳು ಈಗ ತಪ್ಪು ಎಂದು ಅನಿಸಿದರೂ ಅರಿವಿನ ವಿಕಾಸದ ಹಾದಿಯಲ್ಲಿ ಅವು ಆ ಕಾಲಕ್ಕೆ ಸತ್ಯ ಎಂದು ಅನಿಸಿದ ಸಂಗತಿಗಳೇ ಅಗಿದ್ದವು. ಹೀಗೆ ಖಗೋಳ ವಿಜ್ಞಾನ ಬೆಳೆದು ಬಂದ ಬಗೆಗೆ ಯಾರಿಗೂ ಅಕ್ಷೇಪವಿಲ್ಲ.

ಆದರೆ ಆಕ್ಷೇಪವಿರುವುದು ಈ ಆಕಾಶಕಾಯಗಳನ್ನು, ಅವುಗಳ ಚಲನೆಯನ್ನು ಮನುಷ್ಯನ ಬದುಕಿಗೆ, ಭವಿಷ್ಯಕ್ಕೆ ತಳುಕು ಹಾಕಿದಾಗ. ಕಾಲಗಣನೆಗೆ ಹೆಸರಿಸಿದ ವಾರಗಳಿಗೆ ಗುಣಗಳನ್ನು ಆರೋಪಿಸಿಕೊಂಡು ಮಂಗಳವಾರ ಹಣಕಾಸಿನ ವ್ಯವಹಾರ ಕೂಡದು, ಗುರುವಾರ ತುಂಬಾ ಒಳ್ಳೆಯ ದಿನ, ಇಂತಿಂತಹ ಹೊತ್ತಿನಲ್ಲಿ ಶುಭ ಕಾರ್ಯ ನಡೆಸಕೂಡದು ಎಂಬ ಈ ಫಲಜ್ಯೋತಿಷ ಎಂಬ ದಂಧೆ ಮಾಡಿದ, ಮಾಡುತ್ತಿರುವ ಅನಾಹುತ ಒಂದೆರಡಲ್ಲ.

ಇಷ್ಟಕ್ಕೂ ಫಲಜ್ಯೋತಿಷಗಳ ನಿರ್ಧಾರಕ್ಕೆ ಆಧಾರವಾಗಿಟ್ಟುಕೊಂಡಿರುವ ಅನೇಕ ಸಂಗತಿಗಳು ಸುಳ್ಳು ಎಂದು ಈಗಾಗಲೇ ಸಾಬೀತಾಗಿವೆ. ಫಲಜ್ಯೋತಿಷಕ್ಕೆ ಆಧಾರವಾದ ಜನನ ಕುಂಡಲಿಗಳಲ್ಲಿ ಸೂರ್ಯ, ಚಂದ್ರ, ರಾಹು, ಕೇತುಗಳನ್ನು ಗ್ರಹ ಎಂದು ಗುರುತಿಸಲಾಗುತ್ತದೆ. ಆದರೆ ಸೂರ್ಯ ಒಂದು ನಕ್ಷತ್ರ ಮತ್ತು ಚಂದ್ರ ಒಂದು ಉಪಗ್ರಹ, ಇನ್ನು ರಾಹು ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲ. ಆದರೆ ಇವರೆಲ್ಲರಿಗೂ ಈಗಲೂ ಜನ್ಮಕುಂಡಲಿಯ ʼಗೃಹʼ ಗಳಲ್ಲಿ ಗ್ರಹಗಳಾಗಿ ಜಾಗ ಇದೆ!

ಫಲಜ್ಯೋತಿಷ ನಮ್ಮ ದೇಶದ್ದೇ?

ಇನ್ನು ಈ ಫಲಜ್ಯೋತಿಷಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ವಾರ, ಹೋರಾ, ಇವು ನಮ್ಮವೇ? ನಮ್ಮ ವೇದಗಳಲ್ಲಿ ಈ ಯಾವುದರ ಉಲ್ಲೇಖವೂ ಇಲ್ಲ. ಹುಣ್ಣಿಮೆ, ಅಮವಾಸ್ಯೆ ಇವೆಲ್ಲ ನೈಸರ್ಗಿಕ. ಆದರೆ ವಾರ ಕೃತಕ; ಕಾಲಗಣನೆಗೆ ಮಾಡಿಕೊಂಡ ಒಂದು ವ್ಯವಸ್ಥೆ. ವೇದ ಬಿಡಿ, ವೇದಾಂಗ, ರಾಮಾಯಣ ಮಹಾಭಾರತದಲ್ಲೂ ವಾರಗಳ ಉಲ್ಲೇಖವಿಲ್ಲ. ವಾರಗಳ ಉಲ್ಲೇಖ ಕಾಣಿಸಿಕೊಳ್ಳುವುದೇ ಕ್ರಿಪೂ 5 ನೇ ಶತಮಾನದಲ್ಲಿ, ಅಂದರೆ ವರಾಹಮಿಹಿರ, ಆರ್ಯಭಟರ ಕಾಲದಲ್ಲಿ. ಹೋರಾ ಎಂಬುದು ಮೂಲತಃ ಸಂಸ್ಕೃತ ಪದವಲ್ಲ. ಅದು ಹೋರಾನ್ ಎಂಬ ಗ್ರೀಕ್ ಪದದಿಂದ ಬಂದುದು. ಕ್ರಿ.ಶ. 5 ನೇ ಶತಮಾನದ ವರಾಹಮಿಹಿರಾಚಾರ್ಯನ ಬೃಹಜ್ಜಾತಕ ಕೃತಿಯ ಮೊದಲು ಇಲ್ಲಿ ಫಲಜ್ಯೋತಿಷದ ಕಲ್ಪನೆಯೇ ಇರಲಿಲ್ಲ. ಇನ್ನೂ ಕುತೂಹಲಕರ ಸಂಗತಿಯೆಂದರೆ ಫಲಜ್ಯೋತಿಷ ಎಂಬುದೇ ನಮ್ಮದಲ್ಲ. ಅದು ನಮ್ಮಲ್ಲಿಗೆ ಬಂದುದು ಗ್ರೀಕರಿಂದ.

ಇನ್ನು ಆಧುನಿಕ ವಿಜ್ಞಾನದ ಕಣ್ಣಿನಿಂದ ನೋಡಿದರೆ ಈ ಗ್ರಹ, ಉಪಗ್ರಹಗಳಿಗೆ ಸ್ವಂತ ಬೆಳಕಿನ ಮೂಲವೇ ಇಲ್ಲ. ಅವುಗಳು ಪ್ರತಿಫಲಿಸುವುದು ಸೂರ್ಯನ ಬೆಳಕನ್ನು. ಅದರಾಚೆ ಅಲ್ಲಿಂದ ಯಾವ ಕಿರಣಗಳೂ ನಮ್ಮಲ್ಲಿಗೆ ಬರುವುದಿಲ್ಲ. ನಮ್ಮಲ್ಲಿಂದ ಲಕ್ಷಗಟ್ಟಲೆ ಕಿಲೋಮೀಟರ್ ದೂರದ ಈ ಗ್ರಹಗಳು, ನಕ್ಷತ್ರಗಳು, ಉಪಗ್ರಹಗಳು ನಮ್ಮ ಮೇಲೆ ಪ್ರಭಾವ ಬೀರುವುದು ಸಾಧ್ಯವೇ? ಅದರಲ್ಲೂ ಅವು ನಮ್ಮ ಶಿಕ್ಷಣ, ಉದ್ಯೋಗ, ನಮ್ಮ ಸಂಸಾರ ಇತ್ಯಾದಿ ಭವಿಷ್ಯವನ್ನು ನಿರ್ಧರಿಸುವುದು ಅಸಾಧ್ಯ ಮಾತ್ರವಲ್ಲ ಒಂದು ಹಾಸ್ಯಾಸ್ಪದ ವಿಚಾರವೇ ಸರಿ.

ಇಂತಹ ತಳಹದಿಯೇ ಶಿಥಿಲವಾಗಿರುವ ಸಂಗತಿಯೊಂದನ್ನು ವಿಜ್ಞಾನ ಎಂದು ಕರೆದುಕೊಂಡು ಅದನ್ನು ಜೀವನೋಪಾಯ ಮಾಡಿಕೊಂಡ ಅನೇಕ ಮಂದಿ ನಮ್ಮಲ್ಲಿದ್ದಾರೆ. ಆಳುವವರೇ ಈ ಮೌಢ್ಯಗಳಿಗೆ ಆಶ‍್ರಯ ಒದಗಿಸುತ್ತಾ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಅದನ್ನು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುತ್ತಿದೆ ಮತ್ತು ಅದನ್ನು ಇನ್ನಷ್ಟು ವ್ಯಾಪಕಗೊಳಿಸಲು ತೀವ್ರ ಯತ್ನ ನಡೆದಿದೆ.

ನಿಜವಾಗಿಯೂ ಮುಂದೆ ಏನಾಗಲಿದೆ ಎಂದು ನಮಗೆ ಗೊತ್ತಿದೆಯೇ? ಇಲ್ಲ. ಗೊತ್ತು ಮಾಡುವುದು ಸಾಧ್ಯವಿದೆಯೇ? ಇಲ್ಲ. ಆದರೆ ನಾಳೆ ಏನಾಗಲಿದೆ ಎಂಬುದು ನಮಗೆ ಗೊತ್ತಿಲ್ಲವಾದರೂ ನಾಳೆಯ ಬಗ್ಗೆ ತಿಳಿದುಕೊಳ್ಳುವ ಒಂದು ಕುತೂಹಲವಿದ್ದೇ ಇದೆ ಮತ್ತು ಅದನ್ನು ತಿಳಿಯುವ ಬಯಕೆಯೂ ಇದ್ದೇ ಇದೆಯಲ್ಲವೇ? ಮನುಷ್ಯನ ಈ ದೌರ್ಬಲ್ಯ, ಮುಗ್ಧ ಸ್ವಭಾವವೇ ಕಪಟ ಜ್ಯೋತಿಷಿಗಳ ಬಂಡವಾಳ.

ತಮ್ಮ ಭವಿಷ್ಯವೇ ಗೊತ್ತಿಲ್ಲದ ಜ್ಯೋತಿಷಿಗಳು!

ಮುಂದೆ ಏನಾಗಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲದಿದ್ದರೂ, ಮುಂದೆ ಏನಾಗಲಿದೆ ಎಂಬುದನ್ನು ಕರಾರುವಾಕ್ಕಾಗಿ ಹೇಳಬಲ್ಲೆವು ಎಂದು ಎದೆ ತಟ್ಟಿಕೊಂಡು ಘೋಷಿಸುವ ಜ್ಯೋತಿಷಿಗಳಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ವಿಧಾನಸೌಧ ಮಾತ್ರವಲ್ಲ, ಮೂರು ಕಡೆಗಳಲ್ಲೂ ಜಲಮೂಲೆ ಹೊಂದಿರುವ ಭಾರತದ ವಾಸ್ತುವೇ ಸರಿ ಇಲ್ಲ ಎಂದು ಯಾವ ಸಂಶಯಕ್ಕೂ ಎಡೆ ಇಲ್ಲದಂತೆ ಸಾರಿಹೇಳುವ ಮತ್ತು ಜಗತ್ತಿಗೇ ವಾಸ್ತು ಸಲಹೆ ನೀಡುವ ವಾಸ್ತು ಪಂಡಿತರೂ ನಮ್ಮಲ್ಲಿದ್ದಾರೆ. ಇಷ್ಟಿದ್ದೂ ನಮ್ಮಲ್ಲಿ ಸಂಭವಿಸುವ ಸುನಾಮಿ, ಭೂಕಂಪ, ಜಲಪ್ರಳಯ ಇತ್ಯಾದಿಗಳ ಬಗ್ಗೆ ಈ ಮಹಾನ್ ಜ್ಯೋತಿಷಿಗಳು ಏಕೆ ಮೊದಲೇ ಹೇಳಿ ಅಪಾರ ಪ್ರಮಾಣದ ಸಾವು ನೋವು, ಆಸ್ತಿಪಾಸ್ತಿ ಹಾನಿಯನ್ನು ತಡೆಗಟ್ಟುವ ಪರಮ ಪವಿತ್ರ ಕೆಲಸವನ್ನು ಮಾಡುವುದಿಲ್ಲ?

ಯಾಕೆ ಅವರು ಈ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಚರ್ಚಿಸುವ ಮುನ್ನ ತಮ್ಮ ನಾಳೆಗಳ ತಿಳಿಯಲು ಜ್ಯೋತಿಷಿಗಳ ಮತ್ತು ತಮ್ಮ ಭವಿಷ್ಯವನ್ನು ಸರಿಪಡಿಸಿಕೊಳ್ಳಲು ವಾಸ್ತು ತಜ್ಞರ ಮೊರೆಹೋಗುವವರೆಲ್ಲರೂ ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳಿವೆ – ಮೊದಲನೆಯದಾಗಿ ಈಗಾಗಲೇ ಹೇಳಿದ ಹಾಗೆ, ನಾಳೆ ಏನಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ (ಇತರರ ಭವಿಷ್ಯ ಹೇಳುವ ಜ್ಯೋತಿಷಿಗಳಿಗೆ ತಮ್ಮ ಭವಿಷ್ಯವೇ ತಿಳಿದಿರುವುದಿಲ್ಲ. ತಮ್ಮ ಮೇಲೆ ಆದಾಯ ಇಲಾಖೆಯ ದಾಳಿ ನಡೆದು ಒಂದು ಕೋಟಿ ರುಪಾಯಿ ನಗದು ಮತ್ತು 15 ಕೆಜಿ ಬಂಗಾರ ಪತ್ತೆಯಾಗುವ ವಿಚಾರ ಸ್ವತಃ ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಜ್ಯೋತಿಷಿಗೆ ಗೊತ್ತಿರಲಿಲ್ಲ! ತಮ್ಮ ಜತೆಗಿದ್ದವರಿಂದಲೇ ತಮ್ಮ ಬರ್ಬರ ಕೊಲೆಯಾದೀತು ಎಂಬುದು ಇನ್ನೊಬ್ಬ ವಾಸ್ತು ಪರಿಣತ ಜ್ಯೋತಿಷಿಗೆ ಗೊತ್ತಿರಲಿಲ್ಲ!) ಮತ್ತು ಅದನ್ನು ತಿಳಿದುಕೊಳ್ಳುವ ಸಾಧನ ಇಂದಿಗೂ ನಮ್ಮಲಿಲ್ಲ. ಭವಿಷ್ಯವನ್ನು ತಿಳಿದುಕೊಳ್ಳುವುದು ಸಾಧ್ಯ ಎಂದು ಯಾರಾದರೂ ಹೇಳುತ್ತಿದ್ದಾರೆಂದರೆ ಅವರು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ ಮತ್ತು ಭವಿಷ್ಯದ ಬಗೆಗಿನ ಮುಗ್ಧ ಜನರ ಕುತೂಹಲ ಮತ್ತು ಭಯವನ್ನು ತಮ್ಮ ದಂಧೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದೇ ಅರ್ಥ.

ಎರಡನೆಯದಾಗಿ, ಕೆಲವರು ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಹೇಳುವುದು ಮಾತ್ರವಲ್ಲ, ಭವಿಷ್ಯದಲ್ಲಿ ಬರಲಿರುವ ಕಂಟಕಗಳನ್ನು ಪರಿಹರಿಸಲು ಸಾಧ್ಯ ಮತ್ತು ಆ (ದುಬಾರಿ) ಪರಿಹಾರ ಕಾರ್ಯವನ್ನು ತಾವೇ ಮಾಡುವುದಾಗಿಯೂ ಹೇಳುತ್ತಾರೆ. ಇಲ್ಲಿ ಉದ್ಭವಿಸುವ ಮಹತ್ತ್ವದ ಪ್ರಶ್ನೆ- ಭವಿಷ್ಯವನ್ನು ಬದಲಿಸಲು ಸಾಧ್ಯವಾಗುವುದಾದರೆ ಅದು ಭವಿಷ್ಯ ಎನಿಸಿಕೊಳ್ಳುವುದಾದರೂ ಹೇಗೆ?

ಮೂರನೆಯದಾಗಿ, ಮುಂದೆ ಏನು ಆಗಲಿದೆಯೋ, ಯಾವುದನ್ನು ಬದಲಿಸುವುದು ಸಾಧ್ಯವೇ ಇಲ್ಲವೋ ಅದನ್ನು ಭವಿಷ್ಯ ಎನ್ನುತ್ತಾರೆ. ಮುಂದೆ ಏನು ಆಗಿಯೇ ತೀರುತ್ತದೋ ಅದನ್ನು ಈಗ ತಿಳಿದುಕೊಂಡು ಆಗ ಬೇಕಾದುದಾದರೂ ಏನು? ಮತ್ತು ಅದನ್ನು ತಿಳಿದುಕೊಂಡು ವರ್ತಮಾನದಲ್ಲಿ ನೆಮ್ಮದಿ ಕೆಡಿಸಿಕೊಂಡು ವಿರಾಗಿಯಂತೆ ಏಕೆ ಬದುಕಬೇಕು? ನಾಳೆ ನಮ್ಮ ಬದುಕಿನಲ್ಲಿ ಏನು ನಡೆಯಲಿದೆ ಎಂದು ತಿಳಿದರೆ ಇಂದಿನ ನಮ್ಮ ಬದುಕಿನಲ್ಲಿ ಏನು ಸ್ವಾರಸ್ಯ ತಾನೇ ಉಳಿದೀತು?

ಮೌಢ್ಯದ ಪ್ರಸರಣಕ್ಕೆ ವಿಜ್ಞಾನದ ಬಳಕೆ!

ವಿಪರ್ಯಾಸವೆಂದರೆ ಇದುವೇ ಅಲ್ಲವೇ? ಯಾವ ಮೌಢ್ಯಗಳನ್ನು ಪ್ರಶ್ನಿಸುತ್ತಾ ವಿಜ್ಞಾನ ಬೆಳೆಯಿತೋ, ಆ ವಿಜ್ಞಾನದ ಫಲವಾದ ತಂತ್ರಜ್ಞಾನ ಬೆಳೆಯಿತೋ ಅದರ ಒಂದು ಅನನ್ಯ ಕೊಡುಗೆಯಾದ ಟೆಲಿವಿಷನ್‌ನಲ್ಲಿ ಕುಳಿತು ತಂತ್ರಜ್ಞಾನದ ಇನ್ನೊಂದು ಮಹಾನ್ ಆವಿಷ್ಕಾರವಾದ ಲ್ಯಾಪ್‌ಟಾಪ್ ಅನ್ನು ಮುಂದಿಟ್ಟುಕೊಂಡ ಈ ಡೋಂಗಿ ಜ್ಯೋತಿಷಿಗಳು ಮೌಢ್ಯವನ್ನು ಜನಮಾನಸದ ಮೂಲೆ ಮೂಲೆಗೆ ತಲಪಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಬಫೂನುಗಳಂತೆ ವೇಷ ಧರಿಸಿಕೊಂಡು ಅವರು ನಡೆಸಿಕೊಡುವ ಜ್ಯೋತಿಷ ಕಾರ್ಯಕ್ರಮಗಳು ನಿಜಕ್ಕೂ ಅದ್ಭುತ ಮತ್ತು ಕ್ರೂರ ಕಾಮಿಡಿ ಕಾರ್ಯಕ್ರಮಗಳಂತಿರುತ್ತವೆ.

ಇಂಥದ್ದೇ ಒಂದು ಟಿವಿ ಕಾರ್ಯಕ್ರಮದಲ್ಲಿ ಚಿದಾನಂದ ಬಾಬು ಎಂಬ ‘ವೈಜ್ಞಾನಿಕ ಜ್ಯೋತಿಷಿ’ ಹೆಣ್ಣು ಯಾವ ರಾಶಿಯಲ್ಲಿ ಋತುಮತಿಯಾದರೆ ಕುಟುಂಬದ ಯಾರ್ಯಾರಿಗೆ ತೊಂದರೆ ಇದೆ, ಯಾವ ಯಾವ ರಾಶಿಯವರು ಯಾವಾಗ  ಯಾವ ಜಾಗದಲ್ಲಿ ಅತ್ಯಾಚಾರಕ್ಕೆ ಒಳಗಾಗಲಿದ್ದಾರೆ ಎಂಬ ‘ಕರಾರುವಾಕ್ಕು’ ಭವಿಷ್ಯ ಹೇಳಿ ಎಲ್ಲರಿಂದ ಉಗಿಸಿಕೊಂಡು, ಕೇಸು ಜಡಿಸಿಕೊಂಡು ಕೆಲ ಕಾಲ ಟಿವಿಯಿಂದ ನಾಪತ್ತೆಯಾಗಿದ್ದರು.

ಅದು ಜಪಾನಿನಲ್ಲಿ ಸುನಾಮಿ ಬಂದು ಭಾರೀ ಸಾವು ನೋವು ಉಂಟಾದ ಕಾಲ. ಕನ್ನಡ ಟಿವಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಕೆಲ ಮಂದಿ ಜ್ಯೋತಿಷಿಗಳು ಮತ್ತು ವಿಜ್ಞಾನಿಗಳು ಕುಳಿತಿದ್ದರು. ಮುಂದೆ ಸಂಭವಿಸಲಿರುವ ಘಟನೆಗಳ ಬಗ್ಗೆ ನಾವು ಕರಾರುವಾಕ್ಕಾಗಿ ಹೇಳಬಲ್ಲೆವು ಎಂದು ಜ್ಯೋತಿಷಿಗಳು ಹೇಳಿದಾಗ ಅಲ್ಲಿದ್ದ ಕೆಲ ವಿಜ್ಞಾನಿಗಳು ಕೇಳಿದ್ದು ಒಂದೇ ಒಂದು ಸರಳ ಪ್ರಶ್ನೆ – ‘ಮುಂದೆ ಏನಾಗಲಿದೆ’ ಎನ್ನುವುದು ನಿಮಗೆ ಅಷ್ಟೊಂದು ಖಚಿತವಾಗಿ ಗೊತ್ತಿದ್ದರೆ ಅದನ್ನು ಮೊದಲೇ ತಿಳಿಸಿ ನೈಸರ್ಗಿಕ ವಿಕೋಪಗಳಲ್ಲಿ ಸಂಭವಿಸುವ ಸಾವುನೋವುಗಳನು ತಡೆಯುವ ಮಾನವೀಯ ಕೆಲಸವನ್ನು ನೀವೇಕೆ ಮಾಡುವುದಿಲ್ಲ?’ ಅದಕ್ಕೆ ಸೋಮಯಾಜಿ ಎಂಬ ಜ್ಯೋತಿಷಿ ಕೊಟ್ಟ ಉತ್ತರ- ‘ಕೇಳದೆ ಹೇಳಬಾರದು ಎಂದು ಶಾಸ್ತ್ರದಲ್ಲಿದೆ’!

ನಿಸರ್ಗದ ವಿದ್ಯಮಾನಗಳ ಮೇಲೆ ನಮಗೆ ನಿಯಂತ್ರಣವಿದೆಯೇ?

ನಮ್ಮ ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಇತ್ಯಾದಿ ಬಿರುದಾಂಕಿತ ಬೆಂಗಳೂರಿನ ಚಂದ್ರಶೇಖರನ ಕಥೆ ಇನ್ನೂ ಕುತೂಹಲಕರವಾಗಿದೆ. ಈತ ಒಮನ್ ದೇಶದ 74 ರ ಹರೆಯದ ಸುಲ್ತಾನನ ಆರೋಗ್ಯದಲ್ಲಿ ಚೇತರಿಕೆ ಉಂಟು ಮಾಡಲು 22 ಮಂದಿ ಪುರೋಹಿತರನ್ನು ಕರೆದುಕೊಂಡು ಹೋಗಿ 5 ದಿನಗಳ ಕಾಲ ಧನ್ವಂತರಿ ಯಾಗ, ಪೂರ್ಣ ನವಗ್ರಹ ಶಾಂತಿಹೋಮ, ಮಹಾ ಮೃತ್ಯುಂಜಯ ಯಜ್ಞ, ಮಹಾ ವಿಷ್ಣು ಯಾಗ ನಡೆಸಿದ್ದರು. ಇದರಿಂದ ಸುಲ್ತಾನರ ಆರೋಗ್ಯ ಸುಧಾರಿಸಿತೇ ಎಂಬ ಪ್ರಶ್ನೆಗೆ ಉತ್ತರ ಅಗತ್ಯವಿಲ್ಲ. ಈ ಜ್ಯೋತಿಷಿಗೆ ನೇಪಾಳ ಎಂದರೆ ಅತಿ ಪ್ರೀತಿಯ ಜಾಗವಾಗಿದ್ದು ಅವರು ನೇಪಾಳ ಸರಕಾರದ ಆಧ್ಯಾತ್ಮಿಕ ಸಲಹೆಗಾರರೂ ಆಗಿದ್ದರು. ಇಂತಹ ಮಹಾನ್ ಜ್ಯೋತಿಷಿಗೂ ಅಲ್ಲಿನ ಭಯಂಕರ ಭೂಕಂಪ, ಅದರಿಂದ ಅಪಾರ ಜೀವಹಾನಿ, ಆಸ್ತಿಪಾಸ್ತಿ ನಷ್ಟ ತಡೆಯಲು ಸಾಧ್ಯವಾಗಲಿಲ್ಲ. ನೇಪಾಳದ ಪಶುಪತಿನಾಥ ದೇವಾಲಯದ ಶುಚಿತ್ವ ಕೊರತೆ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ದೇವಾಲಯ ಕಳಾಹೀನವಾಗಿದ್ದು ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದರೂ ಸರಿಪಡಿಸದ್ದರಿಂದ ಈ ಘಟನೆ ನಡೆದಿದೆ ಎಂಬುದು ಅವರ ಅಂಬೋಣ! ಯಾಗ ಯಜ್ಞಗಳ ಮೂಲಕ ಪ್ರಕೃತಿಯನ್ನು ಶಾಂತ ಪಡಿಸಲು ಸಾಧ್ಯವಿದ್ದು ಈ ಬಗ್ಗೆ ನೇಪಾಳದ ಪ್ರಧಾನ ಮಂತ್ರಿಯೊಂದಿಗೆ ಚರ್ಚಿಸುವುದಾಗಿ ಹೇಳಿ ನೇಪಾಳಕ್ಕೆ ಹಾರಿದ್ದರು.

ಮತ್ತೆ ಈ ಹಿಂದಿನ ಪ್ರಶ್ನೆಗೆ ಬಂದರೆ, ಈ ವಿಶ್ವವಿಖ್ಯಾತ ಜ್ಯೋತಿಷಿಗಳೆಲ್ಲ ಇಂತಹ ದುರಂತಗಳ ಬಗ್ಗೆ ಏಕೆ ಮೊದಲೇ ಹೇಳುವುದಿಲ್ಲ ಎಂದರೆ – ಅದು ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸಬಹುದಾದುದರ ಬಗ್ಗೆ ಅವರಿಗೆ ಮಾತ್ರವಲ್ಲ, ಯಾರಿಗೂ ಏನೇನೂ ಗೊತ್ತಿಲ್ಲ ಎನ್ನುವುದು ಅವರ ಬಳಿ ಭವಿಷ್ಯ ಕೇಳಲು ಹೋಗುವವರಿಗೆ ಗೊತ್ತಿಲ್ಲದಿರುವುದು ಇದಕ್ಕಿಂತಲೂ ದೊಡ್ಡ ದುರಂತ. ನಾವು ತೋಳಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರಯೋಜನವಿಲ್ಲ, ಎಚ್ಚರಿಸಬೇಕಾಗಿರುವುದು ಕುರಿಗಳನ್ನು. ನಾವು ಅವರ ಅಂಗಡಿಗೆ ಹೋಗದಿದ್ದರೆ ಅವರಾಗಿಯೇ ಅಂಗಡಿ ಬಾಗಿಲು ಹಾಕುತ್ತಾರೆ ಅಲ್ಲವೇ?

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು

ಫಲಜ್ಯೋತಿಷದಂತಹ ಮೌಢ್ಯಗಳಿಂದ ಶೋಷಣೆಗೀಡಾಗದಿರಲು ನಾವು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದೊಂದೇ ದಾರಿ. ನಮ್ಮ ಭವಿಷ್ಯವನ್ನು ಸೃಷ್ಟಿಸಿ ಕೊಳ್ಳುವವರು ನಾವೇ ಆಗಿದ್ದೇವೆ. ಇಂದಿನ ನಮ್ಮ ನಡೆವಳಿಕೆಗಳು, ನಮ್ಮ ಕೆಲಸಗಳು ನಮ್ಮ ನಾಳೆಗಳನ್ನು ಸೃಷ್ಟಿಸುತ್ತವೆ. ಹೊರತು ಅದನ್ನು ಆಕಾಶದಲ್ಲಿರುವ ಯಾವುದೋ ಗ್ರಹ ನಕ್ಷತ್ರಗಳು ನಿರ್ಧರಿಸುವುದಿಲ್ಲ. ಈ ವೈಜ್ಞಾನಿಕ ಪ್ರಜ್ಞೆ, ವಿವೇಕ ಸದಾ ನಮ್ಮಲ್ಲಿ ಜಾಗೃತವಾಗಿದ್ದರೆ ನಮ್ಮನ್ನು ಯಾವ ಕಪಟ ಜ್ಯೋತಿಷಿಗಳೂ ಮೋಸಗೊಳಿಸಲಾರರು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ
ಚಿಂತಕ, ಲೇಖಕ

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಹುತಾತ್ಮ ಭಗತ್ ಸಿಂಗ್ ಬರೆದ ಲೇಖನ
‘ಕ್ರಾಂತಿ ಚಿರಾಯುವಾಗಲಿ ‘ಘೋಷಣೆಯ ಕುರಿತು

ಪೀಪಲ್ ಮೀಡಿಯಾ ವಿಶೇಷ
https://peepalmedia.com/long-live-the-revolutionbhagath-singh/

Related Articles

ಇತ್ತೀಚಿನ ಸುದ್ದಿಗಳು