ಫೋಟೋ ನಿರ್ದೇಶಕ ಉತ್ಸವ ಗೋನಾವರ ಪರಿಚಯವಾದ ಶುರುವಿನಲ್ಲಿ ಒಮ್ಮೆ ಮಾತನಾಡುವಾಗ “ನೀವೆಲ್ಲ ನಾವು ಯಾರು ಅನ್ನೋದನ್ನು ಸರಿಯಾಗಿ ತಿಳ್ಕೊಳೋ ಪ್ರಯತ್ನ ಮಾಡಿಲ್ಲ ಮಗ, ಉತ್ತರ ಕರ್ನಾಟಕಕ್ಕು, ನಮ್ಮ ಕಲ್ಯಾಣ ಕರ್ನಾಟಕಕ್ಕು ತುಂಬಾ ವ್ಯತ್ಯಾಸ ಇದೆ. ಎರಡರ ರಾಜಕೀಯ ಆರ್ಥಿಕ ಮತ್ತು ಜೀವನ ವ್ಯವಸ್ಥೆಯಲ್ಲಿ ತುಂಬಾ ವ್ಯತ್ಯಾಸ ಇದೆ. ನಾವು ನಮ್ಮ ರಾಜ್ಯದಲ್ಲೇ ಎಲ್ಲರಿಗಿಂತ ಹಿಂದುಳಿದಿರುವ ಭಾಗದವರು” ಎಂದು ಹೇಳುವ ಮೂಲಕ ನನ್ನ ಅಜ್ಞಾನಕ್ಕೆ ಅರಿವಿನ ಪೆಟ್ಟು ನೀಡಿದ್ದ.
ನನಗೆ ವೈಯಕ್ತಿಕವಾಗಿ ಕನ್ನಡನಾಡಿನ ಮೂಲೆಮೂಲೆಯಿಂದ ಕಥೆಗಳು ಸಿನಿಮಾರೂಪ ಪಡೆದು ಬರಬೇಕೆಂಬ ಆಸೆ ದೊಡ್ಡಮಟ್ಟದಲ್ಲಿದೆ. ಅದಕ್ಕೆ ಪೂರಕ ಎಂಬಂತೆ ಒಬ್ಬೊಬ್ಬರೇ ನಿರ್ದೇಶಕರು ತಮ್ಮ ತಮ್ಮ ಭಾಗದ ಕಥೆಗಳನ್ನ ಹೇಳಲು ಹೇಗೋ ಒದ್ದಾಡುತ್ತಾರೆ, ಬಂದು ಸಿನಿಮಾರೂಪ ಕೊಡುತ್ತಿದ್ದಾರೆ. ಆ ಪಟ್ಟಿಯಲ್ಲಿ ಈಗ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನಾವರ ಗ್ರಾಮದ ‘ಉತ್ಸವ’ ಹೊಸ ಸೇರ್ಪಡೆ.
ಬರೀ ಕಥೆಯೊಂದೆ ನಿರ್ದೇಶಕ ಪಟ್ಟವನ್ನ ಪಡೆದುಕೊಳ್ಳಲು ಸಹಕರಿಸುವುದಿಲ್ಲ ಎಂಬ ಅರಿವು ಈತನಿಗೆ ಇರುವುದರಿಂದಲೇ ತನ್ನ ಕ್ರಾಫ್ಟನ್ನೂ ಚೊಕ್ಕವಾಗಿ ರೂಪಿಸಿಕೊಂಡು ಫೋಟೋ ಚಿತ್ರವನ್ನು ನಿರ್ದೇಶಸಿದ್ದಾನೆ. ಈ ಚಿತ್ರವನ್ನು ನೋಡಿದ ಪ್ರತಿಯೊಬ್ಬರ ಎದೆಗೂ ಇದು ಗಟ್ಟಿಯಾಗಿ ಇಳಿದು ನಮ್ಮದೇ ಹಿಪಾಕ್ರಸಿಗೆ ಪೆಟ್ಟನ್ನು ನೀಡುವ ಸಿನಿಮಾ ಫೋಟೋ. ಒಂದಿಷ್ಟು ಪ್ರೈವಿಲೈಜುಗಳೊಂದಿಗೆ ಬದುಕು ರೂಪಿಸಿಕೊಂಡು ಮೊಂಡುತನದಲ್ಲಿ ಎಲ್ಲವೂ ಸರಿಯಿದೆ ಎಂದು ಸಮಾಜದೆಡೆಗೆ ತೋರುವ ತಾತ್ಸರ ಮನಸ್ಸುಗಳು ಈ ಸಿನಿಮಾವನ್ನು ಖಂಡಿತವಾಗಿಯೂ ನೋಡಿ ನಿಮ್ಮನ್ನು ನೀವು ವಿಮರ್ಶೆಸಿಕೊಳ್ಳಬೇಕಾದ ಅವಶ್ಯಕತೆ ಈಗಿನ ಪರಿಸ್ಥಿತಿಗಂತೂ ಕಡ್ಡಾಯವಾಗಿ ಬೇಕಾಗಿದೆ.
ನಮ್ಮಲ್ಲಿ ರಾಜಕೀಯ ವ್ಯವಸ್ಥೆಯೆಡೆಗೆ ಒಂದು ವಿರೋಧವನ್ನು ತೋರಿಸುತ್ತದೆ ಸಮಾಜದ ಸಮಸ್ಯೆಯನ್ನು ಹೇಳುವ ಕಥೆಗಳು ಕಡಿಮೆ. ಬಂದಿದ್ದರೂ ಅವುಗಳು ರೋಮ್ಯಾಂಟಿಸೈಸ್ ಆಗಿ ಕಟ್ಟಲ್ಪಟ್ಟಿದ್ದರಿಂದ ಮನಸ್ಸಿಗೆ ತಟ್ಟಿರುವ ಉಧಾಹರಣೆಗಳು ಕಡಿಮೆಯೇ. ಆ ಬಗೆಯಲ್ಲಿ ಈ ಚಿತ್ರ ತನ್ನ ನೈಜತೆಯೊಂದಿಗೆ ಒಂದು ಸಮಸ್ಯೆಯನ್ನ ತುಂಬಾ ಅಚ್ಚುಕಟ್ಟಾಗಿ ಹೇಳಿರುವ ಸಿನಿಮಾ ಆಗಿದೆ.
ಮನುಷ್ಯರಾಗಳು ಅವಕಾಶ ನೀಡುವ ಎಲ್ಲಾ ಸಿನಿಮಾಗಳು ಹೆಚ್ಚು ಜನರನ್ನು ತಲುಪಬೇಕೆಂಬುದು ನನ್ನ ಆಶಯ. ಈ ಸಿನಿಮಾ ನಮ್ಮೊಳಗೆ ಕಡುನೋವನ್ನು ತುಂಬುವುದರ ಜೊತೆಗೆ ಮನುಷ್ಯರಾಗಳು ಆಲೋಚಿಸುವಂತೆ ಮಾಡುತ್ತದೆ. ಈ ಚಿತ್ರದಲ್ಲಿ ಸಂಧ್ಯಾ ಅರಕೆರೆ ಅಕ್ಕ , ವೀರೇಶ್ ಗೋನಾವರ, ಮಹದೇವ್ ಹಡಪದ ಸರ್, ಜಹಾಂಗೀರ್ ಸರ್ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಇಡೀ ಕಥೆಯನ್ನು ನಮಗೆ ಆಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನೇಶ್ ದಿವಾಕರನ್ ಈ ಚಿತ್ರದ ಮತ್ತೊಂದು ಶಕ್ತಿ. ಆಟ ಕಟ್ಟಿರುವ ವಿಶುಯಲ್ಸ್ ಎದೆ ನಡುಗಿಸುತ್ತವೆ. ನಾನು ಇದುವರೆಗೂ ನೋಡಿರುವ ಬೆಸ್ಟ್ ಡ್ರೋನ್ ಶಾಟ್ಸ್ ಈ ಚಿತ್ರದಲ್ಲಿವೆ. ಅವು ಕಥೆಗೆ ಎಷ್ಟು ಪೂರಕವಾಗಿವೆ ಎಂಬುದನ್ನು ನೀವು ನೋಡಿಯೇ ಅನುಭವಿಸಬೇಕು.
ಇಂದಿನಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಿಗುತ್ತಿದೆ. ಎಲ್ಲರೂ ಈ ಕಲ್ಯಾಣ ಕರ್ನಾಟಕದ ಸಿನಿಮಾವನ್ನು ಗೆಲ್ಲಿಸಿ ಕನ್ನಡನಾಡಿನ ಎಲ್ಲಾ ಮೂಲೆಗಳಿಂದ ಬರುವ ನಿರ್ದೇಶಕರಿಗೆ ಇನ್ನೊಂದಿಷ್ಟು ಕಥೆಗಳನ್ನು ಹೇಳಲು ಶಕ್ತಿ ತುಂಬಬೇಕೆಂದು ನಾನು ಕೋರಿಕೊಳ್ಳುತ್ತೇನೆ.
ಎ ಎಸ್ ಜಿ