Friday, June 14, 2024

ಸತ್ಯ | ನ್ಯಾಯ |ಧರ್ಮ

ದೈಹಿಕ ಶುಚಿತ್ವ | ಬೆವರಿನ ವಾಸನೆ ಬಗ್ಗೆ ಅಸಡ್ಡೆ ಬೇಡ

ತನ್ನ ಮೈಯ ದುರ್ಗಂಧ ಇತರರಿಗೆ ಸಹಿಸಲು ಅಸಾಧ್ಯ ಎಂಬುದನ್ನು ಮೊದಲು ನಾವು ತಿಳಿದು ಕೊಂಡಿರಬೇಕು. ಹೀಗೆ ತಿಳಿದುಕೊಂಡಾಗ ಜನರ ಮಧ್ಯೆ ಹೋಗುವ ಸಂದರ್ಭದಲ್ಲಿ ಮುಜುಗರ ಅನುಭವಿಸುವುದನ್ನು ತಪ್ಪಿಸಬಹುದು- ಶೋಭಲತಾ, ಆರೋಗ್ಯ ಕಾರ್ಯಕರ್ತೆ, ಕಾಸರಗೋಡು

(ಮೊದಲಾಗಿ ಒಂದು ವಿನಂತಿ. ಸ್ವಲ್ಪ ಸಮಯದ ಹಿಂದೆ ಉಚಿತ ಪ್ರಯಾಣ ಮಾಡಿದ ಮಹಿಳೆಯ ಮೈ ಬೆವರಿನ ವಾಸನೆಯ ಕುರಿತು ಲೇಖಕಿಯೊಬ್ಬರು ಬರೆದ ಲೇಖನವನ್ನು ನನ್ನ ಈ ಲೇಖನದೊಂದಿಗೆ ಸಮೀಕರಿಸಬೇಡಿ. ಈ ಲೇಖನದಲ್ಲಿರುವುದು ಶುಚಿತ್ವದ ಕಾಳಜಿಯೇ ಹೊರತು ಅಸಹನೆ ಅಲ್ಲ). 

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೆಎಸ್ ಆರ್ ಟಿಸಿ ಬಸ್ಸನ್ನು ಏರಿದೆ. ಸೀಟು ಖಾಲಿ ಇದ್ದ ಕಾರಣ ಚಾಲಕನ  ಹಿಂದಿನ ಕಿಟಿಕಿಯ ಪಕ್ಕದ ಸೀಟನ್ನು ಆರಿಸಿದೆ. ಸ್ವಲ್ಪದರಲ್ಲೇ ಇನ್ನೊಂದು ಕಾರ್ಯಕ್ರಮಕ್ಕೆ ಹೊರಟ ಪರಿಚಯದ  ದಿಶಾ ಬಸ್ಸನ್ನೇರಿದರು. ಅವರು ನಾನು ಕುಳಿತ ಸೀಟಲ್ಲೇ ಆಸೀನರಾದರು. ಬಸ್ಸು ಚಲಿಸಿತು. ನಾವು ಭಾಗವಹಿಸಲಿರುವ ಕಾರ್ಯಕ್ರಮಗಳ ಬಗ್ಗೆ ಪರಸ್ಪರ ಮಾತಾಡುತ್ತಿದ್ದೆವು. ನಮ್ಮ ಮಧ್ಯದಲ್ಲಿ ಒಬ್ಬಳು ಕುಳಿತುಕೊಳ್ಳುವಷ್ಟು ಸ್ಥಳ ಇತ್ತು.

ಸುಮಾರು 8 ಕಿ.ಮೀ. ಸಾಗುವಷ್ಟರಲ್ಲಿ ಓರ್ವ ಯುವತಿ ಬಸ್ಸನ್ನೇರಿದಳು. ಆಕೆಯ ವಯಸ್ಸು ಸುಮಾರು 20 ರ ಅಂದಾಜು. ನಮ್ಮ ಮಧ್ಯೆ ಇರುವ ಸೀಟಲ್ಲಿ ಆಸೀನಳಾದಳು. ಗಪ್ಪೆಂದು ಏನೋ ವಾಸನೆ ಮೂಗಿಗೆ ಬಡಿಯಿತು. ಅದು ಎಷ್ಟಿತ್ತು ಎಂದರೆ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಾ ರೋಗಿಗಳ ಎಲ್ಲಾ ತರದ ವಿಸರ್ಜನೆಗಳನ್ನು  ನೋಡಿ ಮುಟ್ಟಿದ ನನಗೇ ಹೊಟ್ಟೆ ತೊಳಸಿ ವಾಂತಿ ಆಗುವ ಹಾಗಾಯಿತು. ಆಕೆಯ ಮೈಯಿಂದ ಬರುತ್ತಿದ್ದ ಒಂದು ರೀತಿಯ ದುರ್ನಾತದಿಂದ ಮುಕ್ತಿಗಾಗಿ ನಾನು ಮುಖವನ್ನು ಕಿಟಿಕಿಯಿಂದ ಹೊರ ಹಾಕಬೇಕಾಯಿತು. ಸೀಟಿನ ಇನ್ನೊಂದು ಬದಿಯಲ್ಲಿ ಕುಳಿತ ದಿಶಾ ತನ್ನ ಬ್ಯಾಗ್ ನಿಂದ ಸುವಾಸನೆಯುಳ್ಳ ದ್ರವ್ಯ ತೆಗೆದು ಆ ಯುವತಿಯ ಕೈಗೆ ಸಿಂಪಡಿಸಿದರು. ನಾನು ಮೂಗು ಮುಚ್ಚಿ ಆಕೆಯನ್ನು ಗಮನಿಸಿದೆ.

ನವ್ಯ ರೀತಿಯಲ್ಲಿ ಬಾಚಿ ಕಟ್ಟಿದ ತಲೆಗೂದಲು, ಮಾಸಿದ ಚೂಡಿದಾರ್, ಕೈಯಲ್ಲೊಂದು ಪುಟ್ಟ ಬ್ಯಾಗ್, ಮುಖಕ್ಕೆ ಲೇಪಿಸಿದ ಪೌಡರ್, ತುಟಿಗೆ ಹಚ್ಚಿದ ಲಿಪ್ ಸ್ಟಿಕ್‌, ಬೆವರಿ ಅಲ್ಲಲ್ಲಿ ಒದ್ದೆಯಾದ ಬಟ್ಟೆ ವಾರಗಳಷ್ಟು ದಿನ ಧರಿಸಿ ತೊಳೆಯದ ರೀತಿ ಗಬ್ಬು ನಾತ ಬೀರುತ್ತಿತ್ತು. ಇನ್ನೂ ನನ್ನ ಸಂಚಾರ 12- 14ಕಿ.ಮೀ. ಗಳಷ್ಟು ದೂರ ಇತ್ತು. ಅಷ್ಟು ದೂರ ಹೇಗೆ ಸಹಿಸಲಿ ಎಂದು ಮನದಲ್ಲೇ ಅಂದುಕೊಂಡು ಚಡಪಡಿಸಿದೆ.  ನನ್ನ ದೆಸೆ ಚೆನ್ನಾಗಿತ್ತೋ ಏನೋ… 4-5 ಕಿ. ಮೀ. ದೂರ ಸಂಚರಿಸಿದ ಆ ಯುವತಿ ಬಸ್ಸಿನಿಂದ ಇಳಿದು ಹೋದಳು. ದೀರ್ಘ ಶ್ವಾಸ ತೆಗೆದುಕೊಂಡೆ. ದಿಶಾ ರವರ ಬ್ಯಾಗ್ ನಿಂದ ಸುಗಂಧ ದ್ರವ್ಯ ಪಡೆದು ಸವರಿಕೊಂಡೆ. ದಿಶಾ ಕೂಡಾ ಇಳಿಯುವ ಜಾಗ ಬಂದು ಬಸ್ಸಿನಿಂದಿಳಿದು ಹೋದರು. ನಾನು ಯೋಚಿಸ ತೊಡಗಿದೆ.

 ಆ ಯುವತಿ ಧರಿಸಿದ ಬಟ್ಟೆಗೆ ಎಷ್ಟು ದಿನಗಳಾಗಿರಬಹುದು? ಆಕೆಗೆ ಅದರ ದುರ್ನಾತ ತಿಳಿಯುತ್ತಿಲ್ಲವೆ? ಮುಖಾಲಂಕಾರ ಮಾಡುವ ಆಕೆಗೆ ಉಡುಪಿನ ಬಗ್ಗೆ ನಿರ್ಲಕ್ಷ್ಯ  ಯಾಕೆ? ಅದರಿಂದ ಇತರರಿಗೆ ಕಿರಿಕಿರಿ ಆಗುವುದೆಂದು ತಿಳಿಯಬೇಡವೆ? ಶುಚಿತ್ವದ ಬಗ್ಗೆ ಮನೆಯವರಾದರೂ ಹೇಳಬೇಡವೆ? ಆಕೆಗೆ ಮನೆ, ಮನೆಯವರು ಅಂತ ಇರಬಹುದೇ? ದಿಕ್ಕಿಲ್ಲದ ವೇಶ್ಯಾ ವೃತ್ತಿಯವಳಿರಬಹುದೇ?… ನನ್ನ ಯೋಚನೆ ಹೀಗೆ ಮುಂದುವರಿಯುತ್ತಿದ್ದಂತೆ ಆಕೆಯ ಮೇಲೆ ವೃಥಾ ಅಸಹನೆ ಪಟ್ಟುಕೊಂಡೆ ಎಂದು ಒಂದು ಕ್ಷಣ ಅನ್ನಿಸಿತು. ಹೌದು..  ಅಜ್ಞಾನದ ಮೂಲಕ ಆ ಅರಿವು ಆಕೆಗೆ ಇಲ್ಲದಾಗಿರಬಹುದು. ಅಥವಾ ಅಸಹಾಯಕತೆ, ಅನಿವಾರ್ಯತೆ ಆಕೆಯನ್ನು ಈ ಸ್ಥಿತಿಗೆ ತಳ್ಳಿರಬಹುದು!

ಬುದ್ಧಿ ಬಲಿತ ಮನುಷ್ಯರು ತನ್ನ ದೇಹವನ್ನು ಶುಚಿಯಾಗಿರಿಸಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಕೆಲವರು ಆ ಬಗ್ಗೆ ನಿರ್ಲಕ್ಷ್ಯ ವಹಿಸುವುದೂ ಇದೆ. ಬೆಲೆಬಾಳುವ ಉಡುಪುಗಳನ್ನು ತೊಡುವ ಕೆಲವರೂ ತಮ್ಮ ದೇಹದ ಶುಚಿತ್ವಕ್ಕೆ ಗಮನ ಕೊಡದಿರುವುದು ಹೊಸತಲ್ಲ. ( ಇದಕ್ಕೆ ಗಂಡು ಹೆಣ್ಣು ಬೇಧವಿಲ್ಲ). ಕೆಲವೊಮ್ಮೆ ಪರಿಸ್ಥಿತಿ ಕೂಡಾ ಕಾರಣವಾಗಿರಬಹುದು. ಸೆಕೆಗಾಲದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಕಛೇರಿ  ಹೊಲ ಗದ್ದೆಗಳು ಇನ್ನಿತರ ಸ್ಥಳಗಳಲ್ಲಿ ದುಡಿಯುವವರು ತುಂಬಾ ಬೆವರಿರುತ್ತಾರೆ. ಬೆವರಿನ ವಾಸನೆ ಇತರರಿಗೆ ಸಹಿಸಲು ಕಷ್ಟವಾಗಬಹುದು. ( ಇದನ್ನು ತಿಳಿದೋ ಏನೋ ಕೂಲಿಯವರು ಕೆಲಸ ಮುಗಿಸಿ ಕೈ ಕಾಲು ಮುಖ ತೊಳೆದು ಬಟ್ಟೆ ಬದಲಾಯಿಸಿ ನೀಟಾಗಿ ಹೊರಡುವುದನ್ನು ನೀವು ಗಮನಿಸಿರ ಬಹುದು.) ಇಂತಹ ಸಂದರ್ಭದಲ್ಲಿ ಬ್ಯಾಗ್ ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಂದು ಸಣ್ಣ ಬಾಟಲಿ ಸುಗಂಧ ದ್ರವ್ಯ ಇಟ್ಟುಕೊಳ್ಳುವುದು ಒಳಿತು. ಬೆವರಿದ ದೇಹದೊಂದಿಗೆ ಜನರ ಮಧ್ಯೆ ಹೋಗಬೇಕಾದ ಸಂದರ್ಭದಲ್ಲಿ, ಜನ ನಿಬಿಡ ಬಸ್ಸಿನಲ್ಲಿ ಪ್ರಯಾಣಿಸಬೇಕಾದ ಸಂದರ್ಭದಲ್ಲಿ  ಸುಗಂಧ ದ್ರವ್ಯ ಸಹಾಯಕ ವಾಗಬಹುದು. ಹಾಗೆಂದು ಇಂತಹ ಸಾಮರ್ಥ್ಯ, ತಿಳಿವಳಿಕೆ  ಇಲ್ಲದವರ ಮೇಲೆ ಅಸಹನೆ ವ್ಯಕ್ತಪಡಿಸುವುದು ಸರಿಯಲ್ಲ.

ಕೆಲವರು ವಿಪರೀತ ಬೆವರುತ್ತಾರೆ ಮತ್ತು ಬೆವರು ವಿಪರೀತ ವಾಸನೆಯಿಂದ ಕೂಡಿರುತ್ತದೆ. ಅಂತವರು ಧರಿಸಿದ ವಸ್ತ್ರಗಳನ್ನು ಒಗೆದು ಒಣಗಿಸುವ ವೇಳೆ ಸುವಾಸನೆ ಬೀರುವಂತಹ ದ್ರವ್ಯಗಳಲ್ಲಿ ಅದ್ದಿ ಬಟ್ಟೆಗಳನ್ನು ಒಣಗಿಸುವುದರಿಂದಲೂ ಬೆವರಿನ ವಾಸನೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿ ಕೊಳ್ಳಬಹುದು.. ತನ್ನ ಮೈಯ ದುರ್ಗಂಧ ಇತರರಿಗೆ ಸಹಿಸಲು ಅಸಾಧ್ಯ ಎಂಬುದನ್ನು ಮೊದಲು ನಾವು ತಿಳಿದು ಕೊಂಡಿರಬೇಕು. ಹೀಗೆ ತಿಳಿದುಕೊಂಡಾಗ ಜನರ ಮಧ್ಯೆ ಹೋಗುವ ಸಂದರ್ಭದಲ್ಲಿ ಮುಜುಗರ ಅನುಭವಿಸುವುದನ್ನು ತಪ್ಪಿಸಬಹುದು.

ಮಕ್ಕಳನ್ನು ಶಾಲೆಗೆ ಕಳುಹಿಸುವಾಗಲೂ ಎಚ್ಚರದಿಂದಿರಬೇಕು. ಪೇಟೆ – ಮುಂದುವರಿದ ಪ್ರದೇಶಗಳ ಬಹುತೇಕ ಮಕ್ಕಳು ಶುಚಿಯಾಗಿದ್ದರೆ ಕೆಲ ಬಡ ಮಕ್ಕಳು ಶುಚಿತ್ವವನ್ನು ಪಾಲಿಸಲು ಕಷ್ಟಪಡ ಬೇಕಾಗಬಹುದು. ಸುಗಂಧ ದ್ರವ್ಯ ದಂತಹ ವಸ್ತುಗಳನ್ನು ಕೊಳ್ಳುವ ಶಕ್ತಿ ಅವರಿಗೆ ಇರಲಾರದು ಮತ್ತು ಶಾಲೆಗಳಿಗೆ ಸುಗಂಧ ದ್ರವ್ಯಗಳನ್ನು ಪೂಸಿ ಹೋಗುವುದು ಶಾಲೆಗಳ ನಿಯಾಮಾವಳಿಗಳಿಗೆ ವಿರುದ್ಧವೂ ಇರಬಹುದು. ನೀಟಾದ ಬಟ್ಟೆ ಬರೆಗಳೂ ಅವರಲ್ಲಿ ಇರಲಾರವು . ಹೆತ್ತವರಿಗೂ ಆ ಬಗ್ಗೆ ಜ್ಞಾನ ಇರಲಾರದು. ಇದರಿಂದಾಗಿ ಕೆಲವು ಶಾಲೆಗಳಲ್ಲಿ ಶ್ರೀಮಂತ – ಬಡವರ ಮಕ್ಕಳು ಎಂಬ ತಾರತಮ್ಯ ಹೊಗೆಯಾಡುವ ಸಾಧ್ಯತೆ ಇರುತ್ತದೆ. ಆದರೆ, ಉಳ್ಳವರು ಅಂತಹ ಬಡ ಮಕ್ಕಳೂ ನೀಟಾಗಿ ಇರುವಂತೆ ಅವರಿಗೆ ಸಹಾಯ ಮಾಡುವುದರಿಂದ ಬಡ ಮಕ್ಕಳೂ ಶುಚಿತ್ವ ಕಾಪಾಡಿಕೊಳ್ಳಬಹುದು.. ಕೊಳಚೆ ಏರಿಯಾಗಳಿಂದ ಬರುವಂತಹ ಮಕ್ಕಳ ಹೆತ್ತವರಿಗೆ ತಿಳಿಹೇಳುವ ಮೂಲಕ, ಅವರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡುವುದರ ಮೂಲಕ ಅವರ ದೇಹ- ಉಡುಪುಗಳು ಸ್ವಚ್ಛವಾಗಿರುವಂತೆ ಮಾಡಲು ಸಾಧ್ಯ. ನಮ್ಮ ದೇಹ ಉಡುಪು ಶುದ್ಧವಾಗಿದ್ದರೆ, ಆಗಾಗ ಬರುವಂತಹ ಕೆಲವು ಸಣ್ಣ ಪುಟ್ಟ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.

ಇನ್ನು ಕೆಲವರು ಮೈ- ಉಡುಪುಗಳ ದುರ್ನಾತ ತಡೆಯಲು ಅಸಹ್ಯ ಸುವಾಸನೆ ಇರುವ ದ್ರವ್ಯಗಳನ್ನು ಅತಿಯಾಗಿ ಬಳಸುವುದೂ ಇದೆ. ಕೆಲವೊಮ್ಮೆ ಅಂತಹ ದ್ರವ್ಯಗಳ ಸುವಾಸನೆ ಇತರರಿಗೆ ಸಹಿಸಲು ಸಾಧ್ಯವಾಗದೆ ತಲೆನೋವು, ವಾಕರಿಕೆ ಬರಿಸಲೂ ಬಹುದು. ಒಟ್ಟಿನಲ್ಲಿ ಹೇಳುವುದು ಏನೆಂದರೆ, ನಮ್ಮ ಮೈ ಶುಚಿತ್ವವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಮಾಜದಲ್ಲಿ ವ್ಯವಹರಿಸುವಾಗ ನಮ್ಮಿಂದ ಇತರರಿಗೆ ತೊಂದರೆಯಾಗದಂತೆ ಸಾಧ್ಯವಾದಷ್ಟೂ ಎಚ್ಚರ ವಹಿಸುವುದು  ಮುಖ್ಯ.

ಶೋಭಲತಾ ಸಿ, ಆರೋಗ್ಯ ಕಾರ್ಯಕರ್ತೆ, ಕಾಸರಗೋಡು

ಇದನ್ನೂ ಓದಿ-<strong>ಸಕ್ಕರೆ ಮಾರುಕಟ್ಟೆಯ ಭಯಾನಕ ಮುಖ</strong>

Related Articles

ಇತ್ತೀಚಿನ ಸುದ್ದಿಗಳು