Home ದೇಶ ಯುಪಿಯ ಪಿಲಿಭೀತ್‌ನಲ್ಲಿ ಮತದಾರರ ಪಟ್ಟಿಯಲ್ಲಿ 16,000ಕ್ಕೂ ಹೆಚ್ಚು ಮತದಾರರ ಹೆಸರುಗಳಲ್ಲಿ ಗೊಂದಲ: ಕಾಂಗ್ರೆಸ್‌ ದೂರಿನ ನಂತರ...

ಯುಪಿಯ ಪಿಲಿಭೀತ್‌ನಲ್ಲಿ ಮತದಾರರ ಪಟ್ಟಿಯಲ್ಲಿ 16,000ಕ್ಕೂ ಹೆಚ್ಚು ಮತದಾರರ ಹೆಸರುಗಳಲ್ಲಿ ಗೊಂದಲ: ಕಾಂಗ್ರೆಸ್‌ ದೂರಿನ ನಂತರ ಎಚ್ಚೆತ್ತ ಚುನಾವಣಾ ಆಯೋಗ

0

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ಹಾಗೂ ಲೋಪದೋಷಗಳು ನಡೆದಿವೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ಗಂಭೀರ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಪಿಲಿಭೀತ್ ಸದರ್ ವಿಧಾನಸಭಾ ಕ್ಷೇತ್ರದ ಒಂದರಲ್ಲೇ ಬರೋಬ್ಬರಿ 16,000ಕ್ಕೂ ಅಧಿಕ ಮತದಾರರ ನಮೂದುಗಳಲ್ಲಿ ಗೊಂದಲ ಹಾಗೂ ವಂಚನೆ ಎಸಗಲಾಗಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.

ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಪ್ರಮುಖರಾದ ರಾಜೇಂದ್ರ ಪಾಲ್ ಗೌತಮ್, ಸುಪ್ರಿಯಾ ಶ್ರಿನೇತ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಆರಾಧನಾ ಮಿಶ್ರಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಅಂಕಿಅಂಶಗಳನ್ನು ಬಹಿರಂಗಪಡಿಸಿದರು. ಏಪ್ರಿಲ್ ತಿಂಗಳಲ್ಲಿ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ, ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಇಪಿಐಸಿ ನಂಬರ್ ಹಾಗೂ ಕ್ರಮ ಸಂಖ್ಯೆ ಒಂದೇ ಆಗಿದ್ದರೂ ಸಹ ಸುಮಾರು 13,150 ಮತದಾರರ ಹೆಸರುಗಳನ್ನು ಬದಲಾಯಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪಟ್ಟಿಯಲ್ಲಿ ವಾಸ್ತವವಾಗಿ ಅದೇ ಕ್ಷೇತ್ರದಲ್ಲಿ ವಾಸಿಸುತ್ತಿರುವ 804 ಜನರನ್ನು ನಾಪತ್ತೆ ಎಂದು ತೋರಿಸಿ ಅವರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗಿದೆ. ಇದರೊಂದಿಗೆ, ಆ ಪ್ರದೇಶದಲ್ಲಿ ವಾಸಿಸದ ಸುಮಾರು 2,600 ಹೊರಗಿನವರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಗೆ ಸೇರಿಸಲಾಗಿದೆ ಎಂದು ಪಕ್ಷವು ಬೂತ್‌ವಾರು ವಿವರಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದೆ.

ಕಿರಿದಾದ ಅಂತರದಲ್ಲಿ ಫಲಿತಾಂಶ ಬದಲಾಗುವ ಇಂತಹ ಕ್ಷೇತ್ರಗಳಲ್ಲಿ ಈ ರೀತಿಯ ಹೆಸರುಗಳ ಕಡಿತ ಹಾಗೂ ಬದಲಾವಣೆ ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ನಾಯಕರು ದೂರಿದ್ದಾರೆ.

ಕಾಂಗ್ರೆಸ್ ಪಕ್ಷದ ದೂರು ಮತ್ತು ಗಂಭೀರ ಆರೋಪಗಳನ್ನು ಪರಿಗಣಿಸಿರುವ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿಣವಾ ಅವರು ತಕ್ಷಣವೇ ತನಿಖೆಗೆ ಆದೇಶಿಸಿದ್ದಾರೆ. ಆನ್‌ಲೈನ್‌ನಲ್ಲಿ ಇಪಿಐಸಿ ನಂಬರ್ ಪರಿಶೀಲಿಸುವಾಗ ಬೇರೆಯವರ ಮಾಹಿತಿ ಪ್ರದರ್ಶಿತವಾಗುತ್ತಿರುವ ದೋಷಕ್ಕೆ ಕಾರಣರಾದ ಪಿಲಿಭೀತ್ ಸದರ್‌ನ ನಿರ್ವಾಹಕರು ಹಾಗೂ ಸಂಬಂಧಪಟ್ಟ ಆಪರೇಟರ್‌ಗಳನ್ನು ತಕ್ಷಣವೇ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.

ಅಲ್ಲದೆ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಲೋಕ ಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಕೇವಲ ಪಿಲಿಭೀತ್ ಮಾತ್ರವಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲೂ ಇಂತಹ ಲೋಪಗಳಿವೆಯೇ ಎಂಬುದನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಿಇಒ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

You cannot copy content of this page

Exit mobile version