ಕರ್ನಾಟಕ ಸೇರಿ ಇನ್ನು ಹಲವು ರಾಜ್ಯಗಳಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಬಿಸಿ ರಂಗೇರುತ್ತಿರುವ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಚುನಾವಣಾ ಭರವಸೆಗಳ ಪ್ರಣಾಳಿಕೆಯಲ್ಲಿ ಬದಲಾವಣೆ ತರಲು ಚುನಾವಣಾ ಆಯೋಗ ನಿರ್ಧರಿಸಿದೆ.
ಹೌದು, ಕೇಂದ್ರ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಈ ಸಂಬಂಧ ಚುನಾವಣಾ ಆಯೋಗ, ಅಕ್ಟೋಬರ್ 19ಕ್ಕೆ ರಾಜಕೀಯ ಪಕ್ಷಗಳಿಂದ ಪ್ರತಿಕ್ರಿಯೆ ಸಲ್ಲಿಸಲು ಗಡುವು ಎಂದು ನಿಗದಿಪಡಿಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಉಚಿತ ಕೊಡುಗೆಗಳನ್ನು ಘೋಷಿಸುವಲ್ಲಿ ರಾಜಕೀಯ ಪಕ್ಷಗಳ ಹೊಣೆಗಾರಿಕೆಯ ಕುರಿತು ನಡೆಯುತ್ತಿರುವ ಚರ್ಚೆ ನಡುವೆ ಚುನಾವಣೆ ಆಯೋಗ, ಈ ಭರವಸೆಗಳು ಈಡೇರಿಸಬಹುದೊ ಅಥವಾ ಇಲ್ಲವೊ ಎಂಬುದನ್ನು ಅರಿತು ಅದರ ಆಧಾರದಲ್ಲಿ ತಾವು ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ಪ್ರಮಾಣಿತ ನಮೂನೆಯು ಮತದಾರರಿಗೆ ನೆರವಾಗಲಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜಕೀಯ ಪಕ್ಷಗಳು ಅಕ್ಟೋಬರ್ 19ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದರೆ, ತಿದ್ದುಪಡಿ ಮಾಡುವುದಕ್ಕೆ ಆ ಪಕ್ಷಗಳ ವಿರೋಧವಿಲ್ಲ ಎಂದೇ ಭಾವಿಸಲಾಗುತ್ತದೆ ಎಂದೂ ಆಯೋಗ ಹೇಳಿದೆ.
ರಾಜಕೀಯ ಪಕ್ಷಗಳ ಆದಾಯ ಕ್ರೋಡೀಕರಣದ ಮಾರ್ಗಗಳು, ಯೋಜಿತ ವೆಚ್ಚ, ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಮಿತಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ಸಮಗ್ರ ಮಾಹಿತಿಯನ್ನು ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆಯೋಗವು ತಿದ್ದುಪಡಿಯನ್ನು ಕೈಗೊಂಡರೆ, ರಾಜಕೀಯ ಪಕ್ಷಗಳು ಚುನಾವಣೆ ವೇಳೆ ತಾವು ನೀಡುವ ಭರವಸೆಗಳನ್ನು ಈಡೇರಿಸಲು ಬೇಕಿರುವ ಹಣಕಾಸಿನ ಕಾರ್ಯಸಾಧ್ಯತೆ ಕುರಿತ ಅಧಿಕೃತ ಮಾಹಿತಿಯನ್ನು ಮತದಾರರಿಗೆ ಒದಗಿಸಬೇಕಾಗುತ್ತದೆ.
ಚುನಾವಣೆ ವೇಳೆ ಪಕ್ಷಗಳು ನೀಡುವ ಕೆಲ ಭರವಸೆ ಹಾಗೂ ಕೊಡುಗೆಗಳ ಅನಪೇಕ್ಷಿತ ಪರಿಣಾಮದ ವಿಚಾರದಲ್ಲಿ ಆಯೋಗವು ಮೂಕ ಪ್ರೇಕ್ಷಕನಂತೆ ವರ್ತಿಸಿದರೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.