Sunday, June 16, 2024

ಸತ್ಯ | ನ್ಯಾಯ |ಧರ್ಮ

ಗಂಗೆ ಮತ್ತು ಮೋಹನನ ಪಿಚ್ಚರ್‌ ಪಯಣ

ರಿಜಿಸ್ಟರ್‌ ಆಫೀಸಿನಲ್ಲಿ ಗಂಗೆ ಮತ್ತು ಮೋಹನನ ಮದುವೆ ನಡೆಯುತ್ತದೆ. ಗಂಗೆಗೆ ಅದು ಇಷ್ಟವಿಲ್ಲದ ಮದುವೆ. ಮದುವೆಯ ಮರುದಿನ ಮೋಹನ ಸಿನೇಮಾಗೆ ಹೋಗುವ ಆಸೆ ವ್ಯಕ್ತಪಡಿಸುತ್ತಾನೆ. ಗಂಗೆ ಜತೆಗೆ ಹೋಗಲು ನಿರಾಕರಿಸಿದರೂ ಯಶೋದೆಯ ಬುದ್ಧಿವಾದದಿಂದಾಗಿ ಕೊನೆಗೂ ಹೋಗಲು ಒಪ್ಪುತ್ತಾಳೆ. ಗಂಗೆಯ ಪಿಚ್ಚರ್‌ ಪಯಣ ಹೇಗಿತ್ತು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮುವತ್ತೇಳನೆಯ ಕಂತು.

“ಮೊದ್ಲುನೆದಪ ಗಂಡುನ್ ಜೊತೆ ಈಚಿಕ್ಹೋಯ್ತಿದ್ಯಾ ವಸಿ ಗಂಭಿರ್ವಾಗಿರು. ಯಾಡತೀಡುನಂಗಾಡ್ಬ್ಯಾಡ. ಅವರು ಓದಿರೋರು, ಸೂಕ್ಷ್ಮೆ ಜನ. ಏನಾರ ಮಾತಾಡ್ಸಿದ್ರೆ  ಮಕ್ಕೊಡ್ದಂಗೆ ಮಾತಾಡ್ಬ್ಯಾಡ ಒಂದೀಸ್ ನಾಜೋಕಾಗಿ ಮಾತಾಡು…..” ಒಳ ಕೋಣೆಯಲ್ಲಿ ಅವ್ವ ಗಂಗೆಯ ತಲೆ ಬಾಚುತ್ತಾ ವಟಗುಟ್ಟುತ್ತಲೆ ಇದ್ದಳು. ತನ್ನ ಎರಡು ಕೈ ಗಳಿಂದ ಕಿವಿ ಮುಚ್ಚಿ, ಮುಖ ಊದಿಸಿಕೊಂಡು ಕುಳಿತಿದ್ದ ಗಂಗೆಯ ಪಿತ್ತ ಒಮ್ಮೆಲೆ ನೆತ್ತಿಗೇರಿ “ಬಾಯ್ಮುಚ್ಕೊಂಡಿದ್ದೀನಿ ಅಂತ ಅದೆಷ್ಟು ಮಾತಾಡ್ತಿದ್ದಿಯವ್ವ. ನಾನಿರದೇ ಹಂಗೆ ಬೇಕಾದ್ರೆ ಆ ವಯ್ಯ ನನ್ ಕುಟ್ ಬರ್ಲಿ ಬ್ಯಾಡ್ದಿದ್ರೆ ಬುಡ್ಲಿ” ಎಂದು ಹೊರ ಜಗುಲಿಗೆ ಕೇಳುವಂತೆ ಅರಚಿದಳು. ಹತ್ತಿರ ಓಡಿ ಬಂದು ಭದ್ರವಾಗಿ ಅವಳ ಬಾಯಿ ಮುಚ್ಚಿ ಹಿಡಿದ ಅತ್ತಿಗೆ ಯಶೋಧೆ ” “ಅಯ್ಯೋ…ಅವರ್ಗೆ ಕೇಳುಸ್ತದೆ ಮೆತ್ತುಗ್ ಮಾತಾಡು ಗಂಗೂ” ಎಂದು ಹೇಳಿ “ಮೊದ್ಲು ನೀವು ಈಚಿಕೋಗಿ ನಾನ್ ಅವ್ಳ್ ಕುಟ್ ಮಾತಾಡ್ತಿನಿ.” ಎಂದು ಅವ್ವನನ್ನು ಹೊರಗೆ ಕಳಿಸಿ ಗಂಗೆಯನ್ನು ಸಮಾಧಾನಿಸಿದಳು.

ಯಶೋಧೆ, ಗಂಗೆಗೆ ಒಲಿದು ಬಂದಿರುವ ಅದೃಷ್ಟವನ್ನು ಮತ್ತೊಮ್ಮೆ ನೆನಪು ಮಾಡಿ ಕೊಟ್ಟು, ರಾತ್ರಿಯೇ ಕಟ್ಟಿ ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಲ್ಲಿಗೆ ಹೂ ತೆಗೆದು ಅವಳ ತಲೆಗೆ ಮುಡಿಸಿ “ವಸಿ ನಗಾಡು ಗಂಗೂ ಎಂದು ಮುಖ ಸವರಿದಳು. ಇತ್ತ ಹೊರಬಾಗಿಲಿನಲ್ಲಿ ನಿಂತು ಗಂಗೆಗಾಗಿ ಕಾಯುತ್ತಿದ್ದ ಮೋಹನ “ನಿಮ್ ತಂಗಿನ ಸ್ವಲ್ಪ ಬೇಗ ಬರೋಕೇಳಿ ಬಾವ, ನಾವು ಸೋಪನ್ ಪೇಟೆ ತಲುಪೊ ಹೊತ್ತಿಗೆನೆ ಪಿಚ್ಚರ್ ಮುಗಿದು ಹೋಗ್ ಬಿಟ್ಟಿರ್ತದೆ ಅಷ್ಟೇ” ಎಂದು ಚಂದ್ರಹಾಸನ ಕಿವಿಯಲ್ಲಿ ಮೆಲ್ಲನೆ ಉಸುರಿದ. “ಲೇ ಯಶೋದಿ…” ಎಂದು ಚಂದ್ರಹಾಸ ಒಂದು ಕೂಗು ಹಾಕಿದ್ದಷ್ಟೆ ಗಂಗೆಯೊಂದಿಗೆ ಹಾಜರಾದ ಯಶೋಧೆ “ಅಯ್ಯೋ..ಯಾಕಂಗ್ ಅರ್ಚ್ತಿರಿ ಬಂದ್ಲು ಇರಿ” ಎಂದು ಹೇಳಿ “ಸಿನ್ಮ ನೋಡ್ಕಂಬಂದು ಕತೆ ಹೇಳು ಗಂಗೂ” ಎಂದು ತುಂಟ ನಗು ಬೀರಿ ಕಳುಹಿಸಿದಳು.

ಗಂಗೆಯ ಸಾಮೀಪ್ಯಕ್ಕಾಗಿ ಹಾತೊರೆಯುತ್ತಿದ್ದ ಮೋಹನ, ಅವಳ ಪಕ್ಕವೇ ಕುಳಿತು ನವಿರಾಗಿ ಮಾತನಾಡುತ್ತಾ ಸೋಪಾನಪೇಟೆಯ ದಾರಿ ಸಾಗಿಸಬೇಕು ಅನ್ನುವ ಕನಸು ಕಾಣುತ್ತಾ   ಹೊಸನಾರಿ ಪುರದ ಬಸ್ ಸ್ಟ್ಯಾಂಡಿನತ್ತ ಬಂದ. ಅಲ್ಲಿ ಜನರ ದೊಡ್ಡ ದಂಡೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದನ್ನು ಕಂಡ  ಗಂಗೆ ” ಇವತ್ತು ನಮ್ಮೂರಿನ್ ಸಂತೆ ಬಸ್ಸೆಲ್ಲಾ ರಶ್ ಆಗಿರ್ತದೆ”  ಎಂದು  ಮೋಹನನಿಗೆ ಹೇಳಿಯೂ ಹೇಳದಂತೆ ಗೊಣಗಿಕೊಂಡಳು. ಗಂಗೆ ಹಾಗೆ ಹೇಳಿ ಮುಗಿಸುವುದರ ಒಳಗೆ ಪೋಂ.. ಪೋಂ.. ಎಂದು ಭಾರಿ ಗಾತ್ರದ ಸದ್ದು ಮಾಡುತ್ತಾ ಜನರಿಂದ ಕಿಕ್ಕಿರಿದ ಭಗಂಡೇಶ್ವರ ಬಸ್ ಬಂದು ಇವರೆದುರು ನಿಂತಿತು. 

 ಬಸ್ಸು ನಿಂತಿದ್ದೆ  ತಡ  ಕಿಟಕಿಯ ಬಳಿ ಓಡಿದ  ಮೋಹನ ಆಗಷ್ಟೇ ಇಳಿಯಲು ಸೀಟಿನಿಂದ ಎದ್ದ ವ್ಯಕ್ತಿಗೆ  ತನ್ನ ಕಿಸೆಯಲ್ಲಿದ್ದ ಕರವಸ್ತ್ರ ಕೊಟ್ಟು “ಎರಡು ಸೀಟ್ ಸರ್ ಸ್ವಲ್ಪ ಅಗಲಕ್ಕಾಸಿ”  ಎಂದು ಹೇಳಿ ಸೀಟನ್ನು ಕಾಯ್ದಿರಿಸಿ ಮತ್ತೆ  ಗಂಗೆಯತ್ತ ಓಡಿ ಬಂದು “ಒಂದು ಬಿಳಿ ಕರ್ಚಿಫ್ ಹಾಕಿದಿನಿ ಗಂಗೂ ಅವರೆ ಬೇಗ ಹೋಗಿ ಸೀಟ್ ಹಿಡ್ಕೊಬಿಡಿ. ಇಲ್ಲ ಅಂದ್ರೆ  ಆ ಕರ್ಚಿಫ್ನೆ  ತೆಗೆದು ಎಸೆದು ಕೂತ್ಕೊಬಿಡ್ತಾರೆ ನಮ್ ಜನ” ಎಂದ. ಅಷ್ಟಂದಿದ್ದೆ ತಡ ಇನ್ನು ಗಂಗೆಯನ್ನು ಕೇಳಬೇಕೆ, ತನ್ನ ಸೀರೆಯನ್ನು ಮೇಲೆತ್ತಿ ಸಿಕ್ಕಿಸಿ ಕೊಂಡವಳೆ ಕಿಕ್ಕಿರಿದು ತುಂಬಿದ್ದ ಜನ ಜಂಗುಳಿಯನ್ನು ಸೀಳಿಕೊಂಡು,  ಬಿರುಗಾಳಿಯಂತೆ ಒಳಗೆ ನುಗ್ಗಿ  ಬಂದು ಯುದ್ಧಗೆದ್ದವಳಂತೆ ಕಾಯ್ದಿರಿಸಿದ್ದ ಸೀಟಿನಲ್ಲಿ ವಿರಾಜಮಾನಳಾದಳು. 

ಜನರೆಲ್ಲ ಹತ್ತಿದ ಮೇಲೆ ಸಾವಕಾಶವಾಗಿ ಬಸ್ಸೇರಿ  ಒಳ ಬಂದ ಮೋಹನ ಗಂಗೆಯ ಪಕ್ಕ ಹೆಂಗಸೊಂದು ಕುಳಿತಿರುವುದನ್ನು  ಕಂಡು ಅವಕ್ಕಾದ.  “ಗಂಗೂ ಅವರೇ ನಂಗೆ ಸೀಟ್ ಹಿಡಿಲಿಲ್ವಾ ನೀವು” ಎಂದು ಬೇಸರದಿಂದ ಕೇಳಿದ “ಹೂಂ…ನಾನೇ ಇವಮ್ಮುನ್ನ ಕೂರುಸ್ಕೊಂಡಿದ್ದು” ಎಂದು ಚಟೀರನೆ ಕೆನ್ನೆಗೆ ಹೊಡೆದಂತೆ  ಹೇಳಿದ ಗಂಗೆ, ಕಿಟಕಿಯಾಚೆ ಕಣ್ಣು ಹಾಕಿ ಕುಳಿತವಳು  ಜಪ್ಪಯ್ಯ ಎಂದರು ಸೋಪಾನಪೇಟೆ ಬರುವವರೆಗೂ ಮೋಹನನ್ನು ತಿರುಗಿಯೂ ನೋಡಲಿಲ್ಲ.

ಮೋಹನ ಗಂಗೆಯ ಪಕ್ಕ ಕುಳಿತಿದ್ದ ಆ ದಡೂತಿ ಹೆಂಗಸಿನ ಕಿವಿಯ ಹತ್ತಿರ ಬಗ್ಗಿ ಮೆಲುದನಿಯಲ್ಲಿ “ನೀವು ಎಲ್ಲಿ ಇಳಿತಿರ” ಎಂದು ಕೇಳಿದ. ಕೆಂಗಣ್ಣು ಬಿಟ್ಟು ದುರು ದುರನೆ ಅವನ ಮುಖ ನೋಡಿದ ಹೆಂಗಸು “ನಾನು ಎಲ್ಲಾದ್ರು ಇಳಿತಿನಿ ಅದುನ್ ಕಟ್ಕೊಂಡು ನಿನಗೇನ್ ಆಗ್ಬೇಕೋ ಸುಬೇದಾರ…” ಎಂದು ದನಿ ಎತ್ತರಿಸಿ ಗಡುಸಾಗಿ ಕೇಳಿದಳು. ಆ ಹೆಂಗಸಿನ ದನಿ ಕೇಳಿ ತಡಬಡಾಯಿಸಿದ ಮೋಹನ, ಸಂಕೋಚದಿಂದ ತಲೆ ತಗ್ಗಿಸಿದ. ಇನ್ನು ಅಲ್ಲಿ ನಿಲ್ಲಲಾಗದು ಅನ್ನಿಸಿ ಜನರ ನಡುವೆ  ಮೆಲ್ಲನೆ ನುಸುಳಿಕೊಂಡು ಹಿಂದಿನ ಸೀಟಿನ ಬಳಿ ಬಂದು ನಿಂತ. ಹಣೆ, ಕುತ್ತಿಗೆಯಲ್ಲಿ ಕಿತ್ತುಕೊಂಡು ಹರಿಯುತ್ತಿದ್ದ ಬೆವರನ್ನು ತನ್ನ ಕಿಸೆಯಲ್ಲಿದ್ದ ಕರ್ಚೀಫ್ ನಿಂದ ವರೆಸಿಕೊಳ್ಳುತ್ತಾ “ಥೂ…ಇದ್ಯಾವ್ ದರಿದ್ರ ಹುಡ್ಗಿನ ಹಿಡ್ದಾಕಿದ್ನಪ್ಪ ನಾನು, ಒಂದು ರಸಿಕತೆ ಅನ್ನೋದೆ ಇಲ್ವಲ್ಲ” ಎಂದು ಮನಸ್ಸಿನಲ್ಲೇ ಬೈದು ಕೊಂಡ. 

ಬಸ್ಸು ಸೋಪಾನ ಪೇಟೆ  ತಲುಪುವುದರೊಳಗೆ ತುಸು ಹಗುರವಾಗಿದ್ದ ಮೋಹನ, ಬಸ್ ಇಳಿಯುತ್ತಿದ್ದಂತೆ  “ಗಂಗೆಯವರೆ ಬಹಳ ಗ್ರೇಟ್ ಕಂಡ್ರಿ ನೀವು ಅಷ್ಟು ಜನನ್ನ ಹಿಂದೆ ಹಾಕಿ ಹೇಗೆ ಹೋಗಿ ಸೀಟ್ ಹಿಡಿದು ಬಿಟ್ರಿ ನೋಡಿ. ನನಗಂತೂ ಖಂಡಿತಾ ಆಗ್ತಿರ್ಲಿಲ್ಲ” ಎಂದು ಹೇಳಿ ಅವಳನ್ನು ಮಾತನಾಡಿಸಲೆತ್ನಿಸಿದ. ಮೋಹನನ ಹೊಗಳಿಕೆಯ ಮಾತು ಕೇಳಿ ಗರಿಕೆದರಿದ ಗಂಗೆ,  “ಹೂಂ ಮತ್ತೆ….ನನ್ನೇನು ಸಾಮಾನ್ಯದವ್ಳು ಅನ್ಕಬೇಡಿ. ನಮ್ ಜಮೀನುನ್ನ ಒಳಗಾಕ್ಕೊಂಡು ಕೂತಿದ್ದ  ಆ ಕೆಳ್ಳೇ ಬೀದಿ ಚಿನ್ಸಾಮಣ್ಣನ ಮನೆಯವರು, ಒಂದ್ಸತಿ ದಂಡು ದಾಳಿ ಕಟ್ಕೊಂಡು ಬಂದು ನಮ್ಮ ಅಣ್ಣ ತಮ್ಮದಿರುನ್ನೆಲ್ಲಾ ಹೊಡೆಯಕ್ ಶುರು‌ ಮಾಡಿದ್ರು. ನಾನು ತಲ್ಬಾಗ್ಲಲ್ಲಿ ನಿಂತ್ಕೊಂಡು ನೋಡೋ ಅಷ್ಟು ನೋಡ್ದೆ,  ನನಗೂ ರೋಸೊಯ್ತು. ಸೀದಾ ಅಡಿಗೆ ಕ್ವೋಣೆಗೋಗಿ ಕಾರದ್ ಪುಡಿ ಡಬ್ಬ ತಂದು ಅವರ ಕಡೆಯೋರ ಕಣ್ಣಿಗೆಲ್ಲಾ ಎರ್ಚುದೆ ನೋಡಿ, ನಾಯಿ ಕುಯಿ್ ಗುಟ್ಟೊಂಗೆ ಕುಯಿ್ ಗುಟ್ಟುತಾ ಕಣ್ಣುಜ್ಕೊಂಡು ಅಜಾರುದಲೆಲ್ಲಾ ಬಿದ್ದು ಒದ್ದಾಡಕ್ ಶುರು ಮಾಡ್ದೊ. 

ಅಷ್ಟುಕ್ಕೆ ಬುಡೋ ಮಗ್ಳಾ ನಾನು. ವಳಿಕೋಗಿ  ಅಡ್ಗೆ ಮನೆಲಿದ್ದ ಕಾವ್ಗೋಲು, ಚಪಾತಿ ಅರೆಯೋ ಲಟ್ಟಣಿಗೆ, ಹಿಟ್ಟಿನ್ ದೊಣ್ಣೆ, ಒಲೆ ಉರ್ಬೋ ಕೊಳ್ಪೆ ಎಲ್ಲಾನೂ ತಂದುಹಾಕಿ “ಬಡ್ದಾಕಿ ಆ ಬಡ್ಡಿ ಮಕ್ಳುನ” ಅಂದೆ ನೋಡು, ಬುಟ್ರುಬುಟ್ರು ನಮ್ಮಣ್ಣದಿರು ಯಾಕೇಳ್ತೀರ…. ಎಂದು ಹೇಳುತ್ತಿದ್ದಂತೆ ಅವಳ ಮಾತನ್ನು ಅರ್ಧಕ್ಕೆ ಕತ್ತರಿಸಿದ ಮೋಹನ ” ನೀವು ಸುಮ್ನೆ ನೋಡ್ತಾನಿಂತಿದ್ರ ಗಂಗೂ” ಎಂದು ಕುತೂಹಲ ವ್ಯಕ್ತಪಡಿಸಿದ.  “ಏನಂದ್ರಿ…. ನಾನ್ ನಿಂತ್ಕೊಂಡ್ ನೋಡೋ ಮಗ್ಳು ಅಂದ್ಕೊಂಡ್ರಾ…ಬುಡ್ತು ಅನ್ನಿ” ನಾನು  ಮೂಲೆಲಿಟ್ಟಿದ್ದ ಕೊಡ್ಲಿ ಕಾವ್ಗೋಲ್ ಕಿತ್ಕೊಂಡು ಬುಟ್ಟೆ ಅನ್ಬ್ಯಾಡಿ. ಒಂದೇ ಏಟ್ಗೆ ಬರ್ರಾ ಬಿದ್ದು ಓಡ್ದೊ ಬಡ್ಡೆತ್ತವು” ಎಂದು  ನಟನೆ ಸಮೇತ ಭಯಂಕರವಾಗಿ ವಿವರಿಸಿದಳು.

ಮೈ ನವಿರೇಳಿಸಿ ಕೊಂಡು ಅವಳನ್ನೇ ನೋಡುತ್ತಿದ್ದ ಮೋಹನ “ಓಹೋ..ಇದು ನಾನು ಅಂದ್ಕೊಂಡ ಹಾಗೆ ಸಾಮಾನ್ಯದ ಹೆಣ್ಣಲ್ಲ” ಎಂದು ಕೊಂಡವನು  “ವಾವ್ ಹಾಗಿದ್ರೆ  ನಾನು ಲಕ್ಕಿ ಕಣ್ರೀ  ಎಂತ ಸ್ಟ್ರಾಂಗಾದ ಹೆಂಡ್ತಿ ಸಿಕ್ಕಿದಿರಿ ನೋಡಿ. ನನಗೆ ನಿಮ್ಮಂತ ಹೆಣ್ಣ್ ಮಕ್ಕಳು ಬಹಳ ಇಷ್ಟ ಆಗ್ತಾರೆ”  ನಾನು ಕೂಡ ನಿಮ್ತರನೇ ಅನ್ನಿ. ನಮ್ಮೂರಿನ ಜನ ಇವತ್ತಿಗೂ ನಮ್ಮ ಮನೆ ತಂಟೆಗೆ ಬರೋಕೆ ಭಯ ಪಡ್ತಾರೆ ಹಾಗಿಟ್ಕೊಂಡಿದ್ದೀನಿ ಅವರನ್ನೆಲ್ಲಾ” ಎಂದು ಹುಬ್ಬೇರಿಸಿದ. ಅವನ ಮಾತು ಕೇಳಿ ಪುಳಕ ಗೊಂಡ ಗಂಗೆ ” ವಾ…ಈಡು ಜೋಡು ಸರಿಯಾಯ್ತು ಬುಡಿ ಹಂಗಿದ್ರೆ” ಎಂದು ಕಣ್ಣರಳಿಸಿದಳು.” ನಾವು ಹೀಗೆ ನಿಧಾನವಾಗಿ ಮಾತಾಡ್ತಾ ಹೋದ್ರೆ ಪಿಕ್ಚರ್ ಶುರುವಾಗಿಬಿಡುತ್ತೆ ಬೇಗ ಹೋಗೋಣ ಬನ್ನಿ “ಎಂದು ಹೇಳಿ ಬಿರುಸಾಗಿ ಹೆಜ್ಜೆಹಾಕುತ್ತಾ ಬಸ್ಸ್ಟಾಂಡಿನಿಂದ ಸಾಕಷ್ಟು ದೂರವೇ ಇದ್ದ ಚಿತ್ರ ಮಂದಿರ ತಲುಪಿದರು. 

ಮೋಹನನಿಂದ ಅಂತರ ಕಾಯ್ದುಕೊಂಡೇ ಸಿನಿಮಾ ನೋಡಲು ಕುಳಿತ ಗಂಗೆ, ತೆರೆಯ ಮೇಲೆ ನಟಿಸುತ್ತಿದ್ದ ಎಲ್ಲಾ ಪಾತ್ರಗಳೊಂದಿಗೆ ತಾನು  ಕೂಡ ನಟನೆಗಿಳಿದಳು. ಅಳುವ ಪಾತ್ರಗಳೊಂದಿಗೆ ಅಳುತ್ತಾ, ನಗುವ ಪಾತ್ರಗಳೊಂದಿಗೆ ನಗುತ್ತಾ, ಗುದ್ದಾಡುವ ಸನ್ನಿವೇಶಗಳಲ್ಲಿ ತಾನು ಜೋರಾಗಿ ಕೈ ಕಾಲು ಆಡಿಸುತ್ತಾ  “ಹೊಡ್ತ ಅಂದ್ರೆ ಇದು ಹಾಕು ಹಾಕು ಇನ್ನೊಂದು ಹಂಗೆ ಹಂಗೇ ಆಗ್ಬೇಕು ಅವನ್ಗೆ” ಎಂದು ಕೇಕೆ ಹಾಕುತ್ತ ಸಿನಿಮಾ ನೋಡಿದಳು. ಅಕ್ಕಪಕ್ಕ ಕುಳಿತವರು ಕೂಡ ಗಂಗೆಯನ್ನು ವಿಚಿತ್ರವಾಗಿ ನೋಡುತ್ತಿದ್ದುದರಿಂದ  ಮುಜುಗರ ಗೊಂಡ ಮೋಹನ, ಗಂಗೆಯತ್ತ ಬಗ್ಗಿ “ಗಂಗೂ ಪಕ್ಕದಲ್ಲಿ ಕೂತೋರೆಲ್ಲಾ ನಿಮ್ಮನ್ನೆ ನೋಡ್ತಿದ್ದಾರೆ ಕಣ್ರಿ” ಎಂದು ಜನರ ಮುಂದೆ ಏನಂದು ಬಿಟ್ಟಾಳೂ ಎನ್ನುವ ಆತಂಕದಿಂದಲೇ ಮೆಲುವಾಗಿ ಹೇಳಿದ. ಮೋಹನನ ಮಾತು ಕೇಳಿ ಸುತ್ತಲೂ ಕಣ್ಣಾಡಿಸಿದ ಗಂಗೆ ನಾಚಿಕೆಯಿಂದ ತಲೆ ತಗ್ಗಿಸಿ ” ನಂಗೆ ಮೊದ್ಲುನಿಂದನೂ ಪಿಚ್ಚರ್ನ ಹಿಂಗ್ ನೋಡೇ ರೂಢಿ” ಎಂದು ಹೇಳಿ, ತನ್ನ ಕೈಲಾದಷ್ಟು ಕೈ, ಕಾಲು, ಬಾಯಿ ಗಳನ್ನು  ಭದ್ರವಾಗಿ ಹಿಡಿದು ಕೊಂಡು ಸಿನಿಮಾ ನೋಡಿದಳು. ವಿಧಿ ಇಲ್ಲದೆ ಅವಳಿಂದ ತಾನು ಅಂತರ ಕಾಯ್ದುಕೊಂಡೇ ಸಿನಿಮಾ ನೋಡಿದ ಮೋಹನ, ಅಪ್ಪಿ ತಪ್ಪಿಯೂ ಅವಳನ್ನು ಮುಟ್ಟುವ ತಟ್ಟುವ ಸಾಹಸಕ್ಕೆ ಕೈ ಹಾಕದೆ ತನ್ನ ರಸಿಕತೆಯನ್ನೆಲ್ಲಾ ಒಳಗೇ ಅದುಮಿಕೊಂಡು ಬೆಪ್ಪನಂತೆ ಕುಳಿತು ಗಂಗೆಯೊಂದಿಗೆ ಸಿನಿಮಾ ನೋಡಿ ಹೊರಬಂದ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನು ಓದಿದ್ದೀರಾ? ಗಂಗೂ ಮದುವೆ ಆಗೋಯ್ತು… |https://peepalmedia.com/gangu-got-married/

Related Articles

ಇತ್ತೀಚಿನ ಸುದ್ದಿಗಳು