Tuesday, June 18, 2024

ಸತ್ಯ | ನ್ಯಾಯ |ಧರ್ಮ

ಸಹಾಯಕ್ಕಾಗಿ ಅಂಗಲಾಚುತ್ತಾ 2 ಗಂಟೆಗಳ ಕಾಲ, 8 ಕಿಲೋಮೀಟರ್‌ ಅಲೆದ ಅತ್ಯಾಚಾರ ಸಂತ್ರಸ್ತ ಬಾಲಕಿ

ನಮ್ಮ ಸುತ್ತಲೂ ಮನುಷ್ಯರಿದ್ದಾರೆ, ಆದರೆ ಅವರಲ್ಲಿ ಮಾನವೀಯತೆ ಉಳಿದಿಲ್ಲ ಎಂಬುದನ್ನು ತೋರಿಸಲು ಅಲ್ಲೊಂದು ಇಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಇಂತಹ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಬಳಿ ನಡೆದಿದೆ.

ಹಳ್ಳಿಯೊಂದರಲ್ಲಿ ಅತ್ಯಾಚಾರ ಸಂತ್ರಸ್ತೆ ಗಾಯಗೊಂಡು ರಕ್ತಸ್ರಾವದಿಂದ ರಸ್ತೆಗೆ ಬಂದರು. ಸರಿಯಾದ ಬಟ್ಟೆಯಿಲ್ಲದೆ, ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಅಲೆದಾಡುತ್ತಾ ಕಂಡವರ ಬಳಿಯೆಲ್ಲ ಸಹಾಯ ಕೇಳಿದಳು. ತನ್ನನ್ನು ನೋಡಲು ನೆರೆದಿದ್ದ ಜನಸಂದಣಿಯ ಕಣ್ಣುಗಳಿಂದ ತನ್ನನ್ನು ರಕ್ಷಿಸುವ ಕನಿಷ್ಠ ಬಟ್ಟೆಯೂ ಇಲ್ಲದ ಆಕೆ ಹರಿದ ಬಟ್ಟೆಯಲ್ಲಿಯೇ ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದಳು.

ಘಟನೆಯ ವಿವರ…

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಾಕಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಗಳು ಅತ್ಯಾಚಾರವೆಸಗಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಬಾಲಕಿ ಸಹಾಯಕ್ಕಾಗಿ ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಓಡಿದ್ದಾಳೆ. ಎಂಟು ಕಿಲೋಮೀಟರ್ ದೂರ 2 ಗಂಟೆಗಳ ಕಾಲ ನಡೆದ ಅವಳು ಸಹಾಯಕ್ಕಾಗಿ ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬ ಪುರುಷನನ್ನೂ ಬೇಡಿಕೊಂಡಳು. ಎಲ್ಲರೂ ಶೋ ನೋಡುವವರಂತೆ ಕಂಡರೂ ಅವಳಿಗೆ ಮೈ ಮುಚ್ಚಲು ಟವೆಲ್ ಕೂಡ ನೀಡಿಲ್ಲ.

ಅಷ್ಟೇ ಅಲ್ಲ ಕೆಲವರು ಆಕೆಯ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಂತ್ರಸ್ತ ಬಾಲಕಿ ಅಂತಿಮವಾಗಿ ಉಜ್ಜಯಿನಿಯ ಬಾದ್ ನಗರ ಪ್ರದೇಶದ ಆಶ್ರಮವನ್ನು ತಲುಪಿದಳು, ಅಲ್ಲಿ ಆಶ್ರಮದ ನಿರ್ವಾಹಕರು ಅವಳಿಗೆ ಬಟ್ಟೆಗಳನ್ನು ನೀಡುವ ಮೂಲಕ ಸಹಾಯ ಮಾಡಿದರು.
ನಂತರ ಆಶ್ರಮದಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಅಲ್ಲಿಗೆ ಬಂದು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅತ್ಯಾಚಾರವೆಸಗಿರುವುದನ್ನು ಖಚಿತಪಡಿಸಿದರು. ಆಕೆಗೆ ಆಗಲೇ ತೀವ್ರ ರಕ್ತಸ್ರಾವವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ. ಸದ್ಯ ಬಾಲಕಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಮತ್ತೊಂದೆಡೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ತಾಯಿಯ ಮೇಲೂ ಹಲ್ಲೆ ನಡೆದಿದ್ದು, ಅವರು ಉತ್ತರ ಪ್ರದೇಶ ರಾಜ್ಯದ ಪ್ರಯಾಗ್‌ರಾಜ್‌ನಿಂದ ಬಂದವರು ಎಂಬ ಮಾಹಿತಿ ಇದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಉಜ್ಜಯಿನಿ ಪೊಲೀಸ್ ಮುಖ್ಯಸ್ಥ ಸಚಿನ್ ಶರ್ಮಾ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು