ಪರೀಕ್ಷಾ ಸುಧಾರಣೆಗೆ ಉನ್ನತ ಮಟ್ಟದ ಟಾಸ್ಕ್ ಫೋರ್ಸ್: ನಂದನ್ ನಿಲೇಕಣಿ ನೇತೃತ್ವದಲ್ಲಿ ಸಮಿತಿ ರಚಿಸಿದ ಪ್ರಧಾನಿ ಮೋದಿ

ನವದೆಹಲಿ: ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿದಂತೆ ದೇಶದ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದಿತ್ಯವಾರ ಮತ್ತೊಂದು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇನ್ಫೋಸಿಸ್ ಸಹ-ಸಂಸ್ಥಾಪಕ ಹಾಗೂ ಜಾಗತಿಕ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚಿಸಿರುವುದಾಗಿ ತಿಳಿಸಿದ್ದಾರೆ.

ಈ ಟಾಸ್ಕ್ ಫೋರ್ಸ್ ನೀಡುವ ವರದಿಯ ಆಧಾರದ ಮೇಲೆ ಮುಂಬರುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ. ಇದರ ಜೊತೆಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ನಿಯಮಗಳನ್ನು ಒಳಗೊಂಡ ವಿಶೇಷ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿರುವ ಅವರು, ಪೇಪರ್ ಲೀಕ್ ಪ್ರಕರಣದ ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದು, ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.

ಕೇಂದ್ರ ಸರ್ಕಾರ ರಚಿಸಿರುವ ಈ ಉನ್ನತ ಮಟ್ಟದ ಟಾಸ್ಕ್ ಫೋರ್ಸ್‌ನಲ್ಲಿ ನಂದನ್ ನಿಲೇಕಣಿ ಅವರ ಜೊತೆಗೆ ಇಸ್ರೋ (ISRO) ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಇಂಟೆಲಿಜೆನ್ಸ್ ಬ್ಯೂರೋ (IB) ಮಾಜಿ ನಿರ್ದೇಶಕ ತಪಸ್ ದೇಕಾ, ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಸಾರಿಗೆ/ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಸದಸ್ಯರಾಗಿದ್ದಾರೆ.

ಇವೆಲ್ಲವೂ ಪ್ರಧಾನಿಯವರ ಇಮೇಜ್ ಸರಿಪಡಿಸಿಕೊಳ್ಳುವ ತಂತ್ರ: ಕಾಂಗ್ರೆಸ್ ಟೀಕೆ

ಕೇಂದ್ರ ಸರ್ಕಾರದ ಈ ತೀರ್ಮಾನದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಈ ಟಾಸ್ಕ್ ಫೋರ್ಸ್ ರಚನೆಯು ತೀವ್ರವಾಗಿ ಕಲೆಗಟ್ಟಿರುವ ಪ್ರಧಾನಿ ಮೋದಿಯವರ ಇಮೇಜ್ ಅನ್ನು ಸುಧಾರಿಸಿಕೊಳ್ಳಲು ಮಾಡುತ್ತಿರುವ ಮತ್ತೊಂದು ಪ್ರಯತ್ನವಷ್ಟೇ. 2024 ರ ನೀಟ್ ಅಕ್ರಮದ ನಂತರ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನೀಡಿದ್ದ 101 ಶಿಫಾರಸುಗಳನ್ನೇ ಇನ್ನು ಸಂಪೂರ್ಣವಾಗಿ ಜಾರಿಗೊಳಿಸಿಲ್ಲ. ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಪೂರ್ಣಾವಧಿ ಮಹಾನಿರ್ದೇಶಕರನ್ನೇ ನೇಮಕ ಮಾಡಿಲ್ಲ. ಇವೆಲ್ಲವೂ ಕಣ್ಣೊರೆಸುವ ತಂತ್ರಗಳು” ಎಂದು ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು