Thursday, February 5, 2026

ಸತ್ಯ | ನ್ಯಾಯ |ಧರ್ಮ

ಡೊನಾಲ್ಡ್ ಟ್ರಂಪ್ ಷರತ್ತುಗಳಿಗೆ ಮಂಡಿಯೂರುವ ಮೂಲಕ ಪ್ರಧಾನಿ ಮೋದಿ ಐತಿಹಾಸಿಕ ದ್ರೋಹವೆಸಗಿದ್ದಾರೆ: ಕಿಸಾನ್‌ ಮೋರ್ಚಾ

ಭಾರತ-ಅಮೆರಿಕ ವಾಣಿಜ್ಯ ಒಪ್ಪಂದವನ್ನು ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ‘ಸಂಯುಕ್ತ ಕಿಸಾನ್ ಮೋರ್ಚಾ’ (ಎಸ್‌ಕೆಎಂ) ‘ಐತಿಹಾಸಿಕ ದ್ರೋಹ’ ಎಂದು ಬಣ್ಣಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಷರತ್ತುಗಳಿಗೆ ಪ್ರಧಾನಿ ನರೇಂದ್ರ ಮೋದಿ ನಾಚಿಕೆಯಿಲ್ಲದೆ ಮಂಡಿಯೂರಿದ್ದಾರೆ ಎಂದು ಎಸ್‌ಕೆಎಂ ಆರೋಪಿಸಿದೆ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಎಸ್‌ಕೆಎಂ ನೆನಪಿಸಿದೆ. ರೈತರ ಹಿತಾಸಕ್ತಿಗಳನ್ನು ಕಾಪಾಡಲು ಎಷ್ಟೇ ದೊಡ್ಡ ಬೆಲೆ ತೆರಬೇಕಾದರೂ ತಾವು ವೈಯಕ್ತಿಕವಾಗಿ ಸಿದ್ಧ ಎಂದು ಮೋದಿ ಹೇಳಿದ್ದ ಮಾತುಗಳನ್ನು ಎಸ್‌ಕೆಎಂ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಈ ಒಪ್ಪಂದದಿಂದಾಗಿ, ಭಾರಿ ಸಬ್ಸಿಡಿ ಪಡೆದ ಅಮೆರಿಕದ ಕೃಷಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಇವು ಭಾರತೀಯ ಕೃಷಿ ಕ್ಷೇತ್ರವನ್ನು ನಾಶಮಾಡುತ್ತವೆ ಎಂದು ಎಸ್‌ಕೆಎಂ ಆತಂಕ ವ್ಯಕ್ತಪಡಿಸಿದೆ. ಭಾರತದೊಂದಿಗೆ ವಾಣಿಜ್ಯ ಒಪ್ಪಂದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ ಎಂದು ಟ್ರಂಪ್ ಘೋಷಿಸಿದ ಮರುದಿನವೇ ಎಸ್‌ಕೆಎಂನಿಂದ ಈ ಹೇಳಿಕೆ ಹೊರಬಿದ್ದಿದೆ. ಈ ಒಪ್ಪಂದದ ಅನ್ವಯ, ಹಿಂದೆ ಭಾರತೀಯ ಆಮದುಗಳ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಪ್ರತೀಕಾರದ ಸುಂಕವನ್ನು ಅಮೆರಿಕ ಶೇ. 18ಕ್ಕೆ ಇಳಿಸಿದೆ.

ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿರುವ ರೈತ ಸಂಘಗಳ ಒಕ್ಕೂಟ, ಮೋದಿ ಸರ್ಕಾರವು ದೇಶದ ಜನರಿಗೆ, ಪ್ರಮುಖವಾಗಿ ರೈತರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದೆ. ಅಮೆರಿಕದ ಸಾಮ್ರಾಜ್ಯಶಾಹಿಗೆ ಶರಣಾಗಿ, ಅಮೆರಿಕದ ಸರಕುಗಳ ಮೇಲೆ ಶೂನ್ಯ ಶೇಕಡಾ (0%) ಆಮದು ಸುಂಕಕ್ಕೆ ಅನುಮತಿ ನೀಡಿದೆ ಎಂದು ಎಸ್‌ಕೆಎಂ ದೂರಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 48ರಷ್ಟು ಕಾರ್ಮಿಕರು ಮತ್ತು ಶೇ. 65ರಷ್ಟು ಜನರು ಕೃಷಿ ಮತ್ತು ಅದರ ಅನುಬಂಧಿತ ವಲಯಗಳ ಮೇಲೆ ಅವಲಂಬಿತರಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದೆ. ಈ ಐತಿಹಾಸಿಕ ದ್ರೋಹ ಎಸಗಿರುವ ಮೋದಿಯನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಸ್‌ಕೆಎಂ ಸ್ಪಷ್ಟಪಡಿಸಿದೆ. ಫೆಬ್ರವರಿ 4ರಿಂದ 11ರವರೆಗೆ ಮೋದಿ ಸರ್ಕಾರದ ವಿರುದ್ಧ ಪ್ರಚಾರ ನಡೆಸಲು ಕರೆ ನೀಡಿರುವ ಎಸ್‌ಕೆಎಂ, ಫೆಬ್ರವರಿ 12ರಂದು ಸಾರ್ವತ್ರಿಕ ಮುಷ್ಕರವನ್ನು ಘೋಷಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page