ಚೀನಾ ಸಂಘರ್ಷದ ವೇಳೆ ಪ್ರಧಾನಿ ಮೋದಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ: ರಾಹುಲ್ ಗಾಂಧಿ

2020ರಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಪ್ರಮುಖ ಜವಾಬ್ದಾರಿಯನ್ನು ಅಂದಿನ ಸೇನಾ ಮುಖ್ಯಸ್ಥರ ಮೇಲೆ ಹೊರಿಸಿ, ಮೋದಿ ಅವರು ಕೈತೊಳೆದುಕೊಂಡರು ಎಂದು ಅವರು ಆರೋಪಿಸಿದ್ದಾರೆ. ದೇಶದ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸಂಕಷ್ಟದ ಸಮಯದಲ್ಲಿ ಮೋದಿ ಹೀಗೆ ನುಣಚಿಕೊಂಡಿದ್ದು ಸರಿಯಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು ಬರೆದಿರುವ (ಇನ್ನೂ ಅಧಿಕೃತವಾಗಿ ಬಿಡುಗಡೆಯಾಗದ) ಪುಸ್ತಕವನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಅದರಲ್ಲಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದರು. ಚೀನಾ ಯುದ್ಧ ಟ್ಯಾಂಕ್‌ಗಳು ಕೈಲಾಸ್ ಪರ್ವತದವರೆಗೆ ಬಂದಾಗ ಏನು ಮಾಡಬೇಕೆಂದು ನರವಣೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವರನ್ನು ಕೇಳಿದ್ದರು. ಆಗ ರಾಜನಾಥ್ ಸಿಂಗ್ ಅವರು ಪ್ರಧಾನಿಯನ್ನು ಕೇಳಿ ಹೇಳುವುದಾಗಿ ತಿಳಿಸಿದರು. ಬಳಿಕ, “ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಅದನ್ನೇ ಮಾಡಿ” ಎಂದು ಹೇಳುವ ಮೂಲಕ ಮೋದಿ ತಮ್ಮ ಜವಾಬ್ದಾರಿಯಿಂದ ನುಣಚಿಕೊಂಡರು ಎಂದು ರಾಹುಲ್ ದೂರಿದರು.

ಈ ಘಟನೆಯಿಂದ ತಾನು ಸಂಪೂರ್ಣ ಏಕಾಂಗಿಯಾಗಿದ್ದೇನೆ ಎಂದು ನರವಣೆ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ರಾಹುಲ್ ಹೇಳಿದರು. ಈ ಸತ್ಯ ಸಂಸತ್ತಿನಲ್ಲಿ ಪ್ರಸ್ತಾಪವಾಗುತ್ತದೆ ಎಂಬ ಭಯದಿಂದ ಸರ್ಕಾರವು ತನ್ನನ್ನು ಮಾತನಾಡಲು ಬಿಡುತ್ತಿಲ್ಲ ಮತ್ತು ಅಂತಹ ಪುಸ್ತಕವೇ ಇಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದು ರಾಹುಲ್ ಕಿಡಿಕಾರಿದರು. ಪ್ರಧಾನಿ ಮೋದಿಗೆ ಲೋಕಸಭೆಗೆ ಬಂದು ಸತ್ಯವನ್ನು ಎದುರಿಸುವ ಧೈರ್ಯವಿಲ್ಲ, ಒಂದು ವೇಳೆ ಅವರು ಬಂದರೆ ಈ ಪುಸ್ತಕವನ್ನು ಅವರಿಗೆ ನೀಡುತ್ತೇನೆ ಎಂದು ರಾಹುಲ್ ಸವಾಲು ಹಾಕಿದರು. ಮೋದಿಯವರ ಈ ನಿರ್ಲಕ್ಷ್ಯವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಟೀಕಿಸಿದ್ದು, ಸರ್ಕಾರ ಸತ್ಯಕ್ಕೆ ಭಯಪಡುತ್ತಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು