Friday, August 22, 2025

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಮೋದಿ ಓಬಿಸಿ ಸಮುದಾಯಕ್ಕೆ ಸೇರಿದವರಲ್ಲ: ರಾಹುಲ್‌ ಗಾಂಧಿ

ಜಾರುಸಗುಡ: ಪ್ರಧಾನಿ ಮೋದಿ ಒಬಿಸಿ ಸಮುದಾಯದಲ್ಲಿ ಹುಟ್ಟಿಲ್ಲ. ಅವರು ಗುಜರಾತ್‌ನ ತೇಲಿ ಎಂಬ ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ. ಇತ್ತೀಚೆಗೆ 2000ನೇ ಇಸವಿಯಲ್ಲಿ ಬಿಜೆಪಿಯಿಂದ ಆ ಸಮುದಾಯಕ್ಕೆ ಒಬಿಸಿ ಎಂಬ ಟ್ಯಾಗ್ ನೀಡಲಾಗಿದೆ. ಅವರು ಸಾಮಾನ್ಯ ವರ್ಗದಲ್ಲಿ ಜನಿಸಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಭಾರತ್‌ ಜೋಡೋ ನ್ಯಾಯ ಯಾತ್ರೆ ಒಡಿಶಾದಲ್ಲಿ ಮುಂದುವರಿದಿದ್ದು, ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜಾತಿಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಸಾಮಾನ್ಯ ವರ್ಗಕ್ಕೆ ಸೇರಿದ್ದು, ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ ಸಮುದಾಯಕ್ಕೆ) ಸೇರಿಲ್ಲ ಎಂದರು.
ಮೋದಿ ಅವರು ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ, ಏಕೆಂದರೆ ಅವರು ಒಬಿಸಿ ಸಮುದಾಯದಲ್ಲಿ ಹುಟ್ಟಿಲ್ಲ. ಅವರು ಯಾವತ್ತು ಹಿಂದುಳಿದ ಜನರೊಂದಿಗೆ ಕೈ ಕುಲುಕುವುದಿಲ್ಲ. ಅವರ ಕೈ ಕುಲುಕುವಿಕೆ ಏನಿದ್ದರೂ ಅಂಬಾನಿ ಅದಾನಿ ಇಂಥವರೊಂದಿಗೆ ಮಾತ್ರ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಬಿಜೆಪಿ ಮತ್ತು ಒಳ ಒಪ್ಪಂದ ಮಾಡಿಕೊಂಡಿವೆ. ರಾಜ್ಯದ ಜನರ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಮತ್ತು ಬಿಜೆಡಿಯನ್ನು ವಿರೋಧಿಸುತ್ತಿದ್ದೇವೆ. ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಮತ್ತು ನರೇಂದ್ರ ಮೋದಿ ಪಾಲುದಾರಿಕೆ ಸರಕಾರವನ್ನು ಹೊಂದಿದ್ದಾರೆ. ಅವರಿಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಬಿಜೆಡಿ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ನಾನು ಸಂಸತ್ತಿನಲ್ಲಿ ಕಂಡುಕೊಂಡಿದ್ದೇನೆ ಎಂದರು.
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾನು ಒಡಿಶಾಗೆ ಬಂದಿದ್ದೇನೆ. ರಾಜ್ಯದಿಂದ 30 ಲಕ್ಷ ಜನರು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ಕಾರ್ಮಿಕರಾಗಿ ವಲಸೆ ಹೋಗಿರುವುದು ನೋವಿನ ಸಂಗತಿ. ಕೈಗಾರಿಕೆಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಒಡಿಶಾದ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ. ಒಡಿಶಾದಲ್ಲಿ ಬುಡಕಟ್ಟು ಜನಾಂಗದ ಹೆಚ್ಚಿನ ಜನಸಂಖ್ಯೆ ಇದೆ. ದಲಿತರ ಜೊತೆಗೆ ಬುಡಕಟ್ಟು ಜನರನ್ನು ಕೂಡ ಸರ್ಕಾರ ರಾಜ್ಯದಲ್ಲಿ ನಿರ್ಲಕ್ಷಿಸಿದೆ. ನಾನು 6-7 ಗಂಟೆಗಳ ಕಾಲ ನಿಮ್ಮ ಮಾತು ಕೇಳಲು ಮತ್ತು 15 ನಿಮಿಷಗಳ ಕಾಲ ಸ್ವಲ್ಪ ಮಾತನಾಡಲು ಇಲ್ಲಿಗೆ ಬಂದಿದ್ದೇನೆ ಎಂದರು.
ಭಾರತ್ ಜೋಡೋ ನ್ಯಾಯ ಯಾತ್ರೆಯು ನೆರೆಯ ಒಡಿಶಾದಿಂದ ಇಂದು ಛತ್ತೀಸ್‌ಗಢವನ್ನು ಪ್ರವೇಶಿಸಲಿದೆ. ಇದು ನವೆಂಬರ್ 2023ರ ವಿಧಾನಸಭೆ ಚುನಾವಣೆಯ ನಂತರ ಛತ್ತೀಸ್‌ಗಢಕ್ಕೆ ರಾಹುಲ್‌ ಗಾಂಧಿಯವರ ಮೊದಲ ಭೇಟಿಯಾಗಿದೆ. ಜನವರಿ 14ರಂದು ಮಣಿಪುರದಿಂದ ಆರಂಭವಾದ ಯಾತ್ರೆ ಎರಡು ದಿನಗಳ ವಿರಾಮದ ಬಳಿಕ ಫೆ.11ರಂದು ರಾಯ್‌ಗಢ, ಶಕ್ತಿ ಮತ್ತು ಕೊರ್ಬಾ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಫೆಬ್ರವರಿ 14ರಂದು ಯಾತ್ರೆಯು ಬಲರಾಂಪುರದಿಂದ ಜಾರ್ಖಂಡ್‌ಗೆ ತೆರಳಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page