Monday, June 17, 2024

ಸತ್ಯ | ನ್ಯಾಯ |ಧರ್ಮ

ಮೋದಿಗೆ ತನ್ನ ಎದುರಾಳಿ ಯಾರೆನ್ನುವುದು ಸರಿಯಾಗಿ ಗೊತ್ತು: ಇಡಿ ದಾಳಿ ಕುರಿತು ಸಚಿವೆ ಅತಿಶಿ ಹೇಳಿಕೆ

ಹೊಸದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೆಹಲಿ ಸಚಿವೆ ಅತಿಶಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ತಮಗೆ ಸವಾಲು ಹಾಕಬಲ್ಲರು ಎಂಬ ಸತ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿದೆ ಎಂದು ಬುಧವಾರ ದೃಢವಾಗಿ ಹೇಳಿದ್ದಾರೆ.

ಮಂಗಳವಾರ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಮೇಲೆ ನಡೆದ ದಾಳಿಯ ವೇಳೆ ತನಿಖಾ ಸಂಸ್ಥೆ ಯಾವುದೇ ವಿಚಾರಣೆ ಅಥವಾ ತನಿಖೆ ನಡೆಸಲಿಲ್ಲ ಮತ್ತು ದೆಹಲಿ ಜಲ ಮಂಡಳಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಆಪ್ತ ಸಹಾಯಕನ ನಿವಾಸದಲ್ಲಿ ತನಿಖೆ ನಡೆಯುತ್ತಿದೆ ಎಂಬ ಸಂದೇಶವನ್ನು ನೀಡಲು 16 ಗಂಟೆಗಳ ಕಾಲ ಕುಳಿತುಕೊಂಡಿತ್ತು ಎಂದು ಅವರು ಆರೋಪಿಸಿದರು.


“16 ಗಂಟೆಗಳ ದಾಳಿಯ ನಂತರ, ಇಡಿ ಸಿಎಂ ಅವರ ಖಾಸಗಿ ಕಾರ್ಯದರ್ಶಿಯ ಎರಡು ಜಿಮೇಲ್ ಖಾತೆಗಳನ್ನು ಡೌನ್‌ಲೋಡ್ ಮಾಡಿದೆ. ನಂತರ ಅವರು ಸಿಎಂ ಆಪ್ತ ಕಾರ್ಯದರ್ಶಿ ಮತ್ತು ಅವರ ಕುಟುಂಬದ ಮೂರು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡರು… ತನ್ನನ್ನು ಸೋಲಿಸಬಲ್ಲ ನಾಯಕನಿದ್ದರೆ ಅದು ಕೇಜ್ರಿವಾಲ್‌ ಮಾತ್ರವೆನ್ನುವುದು ಮೋದಿಗೂ ಗೊತ್ತು” ಎಂದು ಅವರು ಗುಡುಗಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಖಾಸಗಿ ಕಾರ್ಯದರ್ಶಿ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಸಂಬಂಧಿಸಿದ ಇತರರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಮಂಗಳವಾರ ದಾಳಿ ನಡೆಸಿದೆ. ದೆಹಲಿ ಜಲ್ ಬೋರ್ಡ್ ಪ್ರಕರಣದಲ್ಲಿ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಖಾಸಗಿ ಕಾರ್ಯದರ್ಶಿಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸಿದೆ.

ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರ ನಿವಾಸದ ಮೇಲೆ ಮಂಗಳವಾರ ದಾಳಿ ನಡೆಸಿದಕ್ಕೆ ಕಾರಣವನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿಲ್ಲ ಎಂದು ಅತಿಶಿ ಆರೋಪಿಸಿದ್ದಾರೆ. “ಇಡಿ ಈಗ ತನಿಖಾ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ. ಅದು ಅರವಿಂದ ಕೇಜ್ರಿವಾಲ್‌ ಸೇರಿದಂತೆ ಪ್ರತಿಪಕ್ಷದ ನಾಯಕರನ್ನು ಗುರಿ ಮಾಡಿಕೊಂಡು ದಾಳಿ ಎಸಗುವುದಷ್ಟೇ ತನ್ನ ಕೆಲಸ ಎಂದುಕೊಂಡಿದೆ” ಎಂದು ಅವರು ಕಿಡಿ ಕಾರಿದರು.

ನಿನ್ನೆ, ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಅತಿಶಿ, ಬಿಜೆಪಿ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ತನ್ನ ನಾಯಕರನ್ನು ಹೆದರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.

ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್, ರಾಜ್ಯಸಭಾ ಸದಸ್ಯ ಎನ್‌ಡಿ ಗುಪ್ತಾ ಮತ್ತು ಇತರರಿಗೆ ಸೇರಿದ ನಿವೇಶನಗಳನ್ನು ಸಂಸ್ಥೆ ಶೋಧಿಸಿದೆ.

“ನಮ್ಮ ನಾಯಕ ಎನ್‌ಡಿ ಗುಪ್ತಾ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪಿಎ ನಿವಾಸಗಳ ಮೇಲೆ ದಾಳಿ ನಡೆಯುತ್ತಿದೆ. ಎಎಪಿ ನಾಯಕರ ವಿರುದ್ಧ ಇಡಿ ದಿನವಿಡೀ ದಾಳಿ ನಡೆಸಲಿದೆ ಎಂಬ ವರದಿಗಳಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಎಎಪಿಯನ್ನು ಹೆದರಿಸಲು ಪ್ರಯತ್ನಿಸುತ್ತಿದೆ.”ಎಂದು ಅವರು ಮಂಗಳವಾರ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು