Home ದೇಶ ಪ್ರಧಾನಿ ಮೋದಿ ವಯನಾಡು ಭೇಟಿ ಸಾಧ್ಯತೆ, ಇನ್ನೂ ಪತ್ತೆಯಾಗದ 138 ಜನರು

ಪ್ರಧಾನಿ ಮೋದಿ ವಯನಾಡು ಭೇಟಿ ಸಾಧ್ಯತೆ, ಇನ್ನೂ ಪತ್ತೆಯಾಗದ 138 ಜನರು

0

ತಿರುವನಂತಪುರಂ: ಮಾರಣಾಂತಿಕ ವಯನಾಡ್ ಭೂಕುಸಿತದ ನಂತರ ಇನ್ನೂ ನಾಪತ್ತೆಯಾಗಿರುವ 138 ಜನರ ಪಟ್ಟಿಯನ್ನು ಕೇರಳ ಸರ್ಕಾರ ಬಿಡುಗಡೆ ಮಾಡಿದೆ.

ಜುಲೈ 30ರಂದು ಮುಂಡಕ್ಕೈ ಮತ್ತು ಚೂರಲ್ಮಲಾ ಗ್ರಾಮಗಳು ಭೂಕುಸಿತಕ್ಕೆ ಈಡಾಗಿದ್ದವು. ಇದೀಗ ಘಟನೆ ನಡೆದು ಒಂಭತ್ತು ದಿನಗಳು ಕಳೆದಿದ್ದು ಶವಗಳಿಗಾಗಿ ಹುಡುಕಾಟ ಇನ್ನೂ ಮುಂದುವರೆದಿದೆ. ಜೊತೆಗೆ ಕಾಣೆಯಾದವರ ಪಟ್ಟಿಯನ್ನು ಸಹ ಅವರ ಫೋಟೊಗಳೊಂದಿಗೆ ಪ್ರಕಟಿಸಲಾಗಿದೆ.

ಈ ನಡುವೆ ಇನ್ನೂ ಎಷ್ಟು ಸಮಯದವರೆಗೆ ಹುಡುಕಾಟ ಮುಂದುವರೆಸಬೇಕೆನ್ನುವ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ರಕ್ಷಣಾ ಪಡೆಗಳಿಗೆ ತಿಳಿಸಿದೆ. ಭೂಕುಸಿತ ಸಂಭವಿಸಿದ ಸ್ಥಳಗಳು ಮತ್ತು ಚಾಲಿಯಾರ್ ನದಿಯಿಂದ ಇದುವರೆಗೆ 225 ದೇಹಗಳು ಮತ್ತು 193 ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಸಂಬಂಧಿತ ಬೆಳವಣಿಗೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಗಳಿವೆ. ವರದಿಗಳ ಪ್ರಕಾರ ಪ್ರಧಾನಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಯನಾಡ್ ತಲುಪಲಿದ್ದಾರೆ.

ಪರಿಹಾರ ಶಿಬಿರಗಳಲ್ಲಿ ತಂಗಿರುವವರಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲು ಮೆಪ್ಪಾಡಿ ಮತ್ತು ಸಮೀಪದ ಪ್ರದೇಶಗಳಲ್ಲಿ ಖಾಲಿ ಇರುವ ಕಟ್ಟಡಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಈಗಾಗಲೇ ಆರಂಭಿಸಿದೆ. ಸರ್ಕಾರಿ ಕಟ್ಟಡಗಳಲ್ಲದೆ, ಖಾಸಗಿ ಕಟ್ಟಡಗಳಾದ ಹೋಂ ಸ್ಟೇಗಳನ್ನೂ ಈ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತಿದೆ.

You cannot copy content of this page

Exit mobile version