ಕೋವಿಡ್‌ನಂತಹ ಪರಿಸ್ಥಿತಿಗೆ ಸಿದ್ಧರಾಗಿ: ಪಶ್ಚಿಮ ಏಷ್ಯಾ ಯುದ್ಧದ ಕುರಿತು ಮೋದಿ ಮಹತ್ವದ ಘೋಷಣೆ

ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಸೃಷ್ಟಿಯಾಗಿರುವ ಜಾಗತಿಕ ಸಂಕಷ್ಟದ ಪರಿಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೇಶವು ಹೇಗೆ ಒಗ್ಗಟ್ಟಾಗಿ ನಿಂತಿತ್ತೋ, ಅದೇ ರೀತಿ ಈಗಲೂ ಸನ್ನದ್ಧವಾಗಿ ಮತ್ತು ಒಗ್ಗಟ್ಟಿನಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ. ಲೋಕಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ಇಂಧನ, ರಸಗೊಬ್ಬರ, ರಾಷ್ಟ್ರೀಯ ಭದ್ರತೆ ಮತ್ತು ಇತರ ಕ್ಷೇತ್ರಗಳ ಮೇಲೆ ಹಾಗೂ ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಭಾರತೀಯರ ಮೇಲೆ ಯುದ್ಧ ಬೀರಬಹುದಾದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪಶ್ಚಿಮ ಏಷ್ಯಾದ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಯುದ್ಧದಿಂದ ಉಂಟಾಗುವ ಮತ್ತೊಂದು ಸವಾಲು ಎಂದರೆ, ಭಾರತದಲ್ಲಿ ಈಗ ಬೇಸಿಗೆ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ವಿದ್ಯುತ್ ಬೇಡಿಕೆಯೂ ಹೆಚ್ಚಾಗಲಿದೆ. ಪ್ರಸ್ತುತ ದೇಶಾದ್ಯಂತ ಎಲ್ಲಾ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇದೆ,” ಎಂದು ಪ್ರಧಾನಿ ತಿಳಿಸಿದರು.

ಭಾರತದ ಬಳಿ 53 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಆಯಕಟ್ಟಿನ ಪೆಟ್ರೋಲಿಯಂ ಸಂಗ್ರಹವಿದ್ದು, ಇನ್ನೂ 65 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಇವುಗಳಲ್ಲದೆ ದೇಶೀಯ ತೈಲ ಕಂಪನಿಗಳ ಬಳಿಯೂ ಸಾಕಷ್ಟು ದಾಸ್ತಾನು ಇದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ಭಾರತದ ಸಂಸತ್ತಿನಿಂದ ಜಗತ್ತಿಗೆ ಒಂದೇ ಧ್ವನಿ ಕೇಳಿಸಲಿ ಎಂದು ಅವರು ಕರೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು