Thursday, June 13, 2024

ಸತ್ಯ | ನ್ಯಾಯ |ಧರ್ಮ

“ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು” : ಫ್ರೀಡಂ ಪಾರ್ಕ್ ನಲ್ಲಿ ಎಎಪಿ ಪ್ರತಿಭಟನೆ

ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅಲ್ಲಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೋದಿ ರಾಷ್ಟ್ರದ ಮತ್ತು ಮಣಿಪುರದ ಜನತೆಗೆ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಕಳೆದ ಮೂರು ತಿಂಗಳುಗಳಿಂದ ಮಣಿಪುರ ರಾಜ್ಯದಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆಯುತ್ತಿದೆ. ಎರಡು ಜನಾಂಗಗಳ ನಡುವಿನ ಯುದ್ಧ ತಾರಕಕ್ಕೇರಿದೆ. ಎಲ್ಲೆಂದರಲ್ಲಿ ಸಾವು ನೋವು ಮಿತಿ ಮೀರಿದೆ. ಮಹಿಳೆಯರ ಮೇಲೆ ಮಿತಿ ಮೀರಿದ ದೌರ್ಜನ್ಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗುವಂತ ಕೃತ್ಯಗಳು ನಡೆದಿವೆ. ಹಿಂಸಾಚಾರ ಹತ್ತಿಕ್ಕುವಲ್ಲಿ ಸಂಪೂರ್ಣ ವೈಫಲ್ಯ ಗೊಂಡಿರುವ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಬೆಂಗಳೂರು ನಗರದ ಫ್ರೀಡಂ ಪಾರ್ಕಿ ನಲ್ಲಿ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಅಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಮಣಿಪುರ ರಾಜ್ಯದಲ್ಲಿನ ವರ್ಗ ಸಂಘರ್ಷಗಳನ್ನು ಹತ್ತಿಕ್ಕುವ ಬದಲು ಕೇಂದ್ರ ಸರ್ಕಾರ ತಾನೇ ಖುದ್ದಾಗಿ ನಿಂತು ವೋಟ್ ರಾಜಕಾರಣಕ್ಕಾಗಿ ಹಿಂಸಾಚಾರಗಳಿಗೆ ಆಸ್ಪದ ನೀಡುತ್ತಿದೆ. ಇಂತಹ ದುರುಳ ನೀತಿಯನ್ನು ಖಂಡಿಸಲೇ ಬೇಕಾಗಿದೆ. ಗೃಹ ಸಚಿವರು ಖುದ್ದಾಗಿ ಐದು ದಿವಸಗಳ ಕಾಲ ಮಣಿಪುರ ರಾಜ್ಯದಲ್ಲಿ ಮುಕ್ಕಾಂ ಹೂಡಿ ಬಂದಿದ್ದರೂ ಸಹ ಹಿಂಸಾಚಾರವನ್ನು ತಹ ಬದಿಗೆ ತರಲು ಸಾಧ್ಯವಾಗಲಿಲ್ಲ. ಇದು ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ಹಿಡಿದಿದೆ” ಎಂದು ದೂರಿದ್ದಾರೆ.

ಎರಡು ತಿಂಗಳುಗಳ ಹಿಂದೆ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಬೆತ್ತಲೆ ಪೆರೇಡ್ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರದ ತಂತ್ರಗಾರಿಕೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚಿಸದೆ ನಮ್ಮ ಪಕ್ಷದ ಸಂಸದ ಸಂಜಯ್ ಸಿಂಗ್ ರನ್ನು ಸಂಪೂರ್ಣ ಅವಧಿಗೆ ಅಮಾನತ್ತು ಮಾಡಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡೆ. ಇದು ವಿಶ್ವದಲ್ಲಿ ಭಾರತವು ತಲೆತಗ್ಗಿಸುವಂತಹ ಪರಿಸ್ಥಿತಿಗೆ ತಳ್ಳಿರುವ ಸ್ವಯಂಘೋಷಿತ ವಿಶ್ವಗುರು ನರೇಂದ್ರ ಮೋದಿಯವರು ಈ ಕೂಡಲೇ ರಾಷ್ಟ್ರದ ಜನತೆಯ ಮುಂದೆ ಕ್ಷಮೆ ಯಾಚಿಸಿ ರಾಜೀನಾಮೆ ಕೊಟ್ಟು ತೊಲಗಬೇಕು” ಎಂದು ನಾಗಣ್ಣ ಆಗ್ರಹಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡುತ್ತಾ “ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಾಗಿದೆ. ಅತ್ಯಾಚಾರವನ್ನು ಮಾಡಿ ಬೆತ್ತಲೆ ಮೆರವಣಿಗೆ ಮಾಡುವಂತಹ ಹೀನಾತಿ ಹೀನರಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ನಿಜಕ್ಕೂ ದೇಶದಿಂದ ತೊಲಗಬೇಕಾಗಿದೆ. ಇತ್ತೀಚಿನ ಕುಸ್ತಿ ಪಟು ಅತ್ಯಾಚಾರ ಪ್ರಕರಣದಲ್ಲಿ ಸಂಸದ ಬ್ರಿಜ್ ಭೂಷಣ್ ರಕ್ಷಣೆಗೆ ನಿಂತಿರುವ ಅವರ ಪಕ್ಷ ಪ್ರೀತಿಯನ್ನು ಗಮನಿಸಿದರೆ ಕೇವಲ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿರುವ ಕೇಂದ್ರ ಸರ್ಕಾರ ಈಗ ಅತ್ಯಾಚಾರಿಗಳನ್ನು ಸಹ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿರುವುದು ಈ ದೇಶದ ದುರಂತವೇ ಸರಿ. ಭಾರತ ಮಾತೆಯನ್ನು ಪೂಜಿಸುವಂತಹ ಸಂಸ್ಕೃತಿ ರಕ್ಷಕರು ಎಂದು ಫೋಜು ನೀಡುತ್ತಾ ಬಂದಿರುವ ಬಿಜೆಪಿಯ ನಿಜ ಬಣ್ಣ ದೇಶದ ಮುಂದೆ ಬೆತ್ತಲಾಗಿದೆ. ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ದೇಶ ಜನ ಕಲಿಸಿಕೊಡುತ್ತಾರೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ನಾಯಕ ವಿಜಯ ಶರ್ಮ, ಮಾಧ್ಯಮ ವಕ್ತಾರೆ ಉಷಾ ಮೋಹನ್, ಪ್ರಕಾಶ್ ನಡು oಗಡಿ, ಸುಷ್ಮಾ ವೀರ, ಹರಿಹರನ್, ಗೋಪಾಲ್, ಮಹದೇವಸ್ವಾಮಿ, ಫರೀದ್, ಫಿರೋಜ್ ಖಾನ್, ಜ್ಯೋತಿಶ್ ಕುಮಾರ್, ಮರಿಯ, ಮಹಾಲಕ್ಷ್ಮಿ, ಸುಹಾಸಿನಿ ಪಣಿರಾಜ್, ಪುಷ್ಪ ಕೇಶವ್ ಸೇರಿದಂತೆ ಅನೇಕ ಮಹಿಳಾ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು