ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರದಿಂದ ಗುಜರಾತ್‌ಗೆ ಮೂರು ದಿನಗಳ ಭೇಟಿ ನೀಡಲಿದ್ದು, ಅಲ್ಲಿ ₹ 14,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಾಗೆಯೇ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕಟಣೆಯಲ್ಲಿರುವ ಮಾಹಿತಿ ಪ್ರಕಾರ, ಪ್ರಧಾನಿ ಮೋದಿಯವರು ಸಂಜೆ ಗುಜರಾತ್‌ಗೆ ಆಗಮಿಸಲಿದ್ದು, ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮದಲ್ಲಿ ಸುಮಾರು ₹ 3,900 ಕೋಟಿ ಮೊತ್ತದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮವೆಂದು ಘೋಷಿಸಲಿದ್ದಾರೆ.
ಮೊಧೇರಾವನ್ನು ದೇಶದ ಮೊದಲ ಸುತ್ತಿನ ಸೌರಶಕ್ತಿ ಚಾಲಿತ ಗ್ರಾಮವನ್ನಾಗಿ ಮಾಡುವ ಮೂಲಕ ನೆಲದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ಸ್ಥಾವರ ಮತ್ತು ವಸತಿ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ 1,300ಕ್ಕೂ ಹೆಚ್ಚು ಮೇಲ್ಛಾವಣಿಯ ಸೌರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಮೋದಿಯವರು, ಮೋಧೇಶ್ವರಿ ಮಾತಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮೊಧೇರಾದ ಸೂರ್ಯ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಸೋಮವಾರ, ಪ್ರಧಾನಮಂತ್ರಿ ಅವರು ಭರೂಚ್ ಜಿಲ್ಲೆಯ ಅಮೋದ್‌ನಲ್ಲಿದ್ದು, ಅಲ್ಲಿ ಅವರು ₹ 8,000 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಹಾಗೂ ಸೋಮವಾರ ಅಹಮದಾಬಾದ್‌ನಲ್ಲಿ ಮೋದಿ ಶೈಕ್ಷಣಿಕ್ ಸಂಕುಲ್ – ನಿರ್ಗತಿಕ ವಿದ್ಯಾರ್ಥಿಗಳ ಶೈಕ್ಷಣಿಕ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ಸಂಜೆ ಜಾಮನಗರದಲ್ಲಿ ₹ 1,460 ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಂಗಳವಾರ ಪ್ರಧಾನಿ ಮೋದಿ ಅವರು ರಾಜ್‌ಕೋಟ್ ಜಿಲ್ಲೆಯ ಜಮ್ಕಂದೋರ್ನಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ₹ 1,300 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಸಹ ನೆರವೇರಿಸಲಿದ್ದಾರೆ.
ನಂತರ ನೆರೆಯ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.