Saturday, June 15, 2024

ಸತ್ಯ | ನ್ಯಾಯ |ಧರ್ಮ

ಕವಿತೆ |ಮತ್ತೆ ಹುಟ್ಟಿ ಬನ್ನಿ ಗದ್ದರ್

ಮತ್ತೆ ಹುಟ್ಟಿ ಬನ್ನಿ ಗದ್ದರ್

ಚರಿತ್ರೆಯನ್ನು ಮರುಪರಿಶೀಲಿಸಲು

ನಿಮ್ಮೊಂದಿಗೆ ಮಾತನಾಡಲು ತವಕಿಸಿದ್ದೆ

ನಿಮ್ಮನ್ನು ಕಾಣಲು ತವಕಿಸಿದ್ದೆ

ನಿಮ್ಮ ಧ್ವನಿ ಕೇಳಲು ತವಕಿಸಿದ್ದೆ

ಸಾವಿರ ಸಾವಿರ ವರ್ಷಗಳು

ಬೆಳದು ನಿಂತಿರುವ ಪರ್ವತ ಶ್ರೇಣಿಗಳನ್ನು 

ನಿಮ್ಮ ಹಾಡುಗಳು ನಜ್ಜುಗುಜ್ಜು ಮಾಡುವ

ದೃಶ್ಯವನ್ನು ಕಾಣಲು ತವಕಿಸಿದ್ದೆ

ಜನರ ಮೇಲಿನ 

ಆಳುವ ವರ್ಗದ 

ದಮನದ ವಿರುದ್ಧ 

ಹಾಡುಗಳೆಂಬ ಶಸ್ತ್ರ ಹಿಡಿದು 

ಎಡಬಿಡದೆ ಹೋರಾಡಿದ 

ನಿಮ್ಮನ್ನು ನೋಡಲು ತವಕಿಸಿದ್ದೆ. 

ಮತ್ತೊಮ್ಮೆ ಹುಟ್ಟಿ ಬನ್ನಿ ಗದ್ದರ್

ಚರಿತ್ರೆಯನ್ನು ಮರುಪರಿಶೀಲಿಸಲು

ಮೂವತ್ತು ಲಕ್ಷ ಕಣ್ಣುಗಳು

ವರಂಗಲ್‌ನಲ್ಲಿ ನಿಮ್ಮನ್ನು ಕಾಣಲು

ಬಂದು ನಿಂತ ದೃಶ್ಯ ಕಂಡೆ

ವರಂಗಲ್‌ನ ಕೆರೆ ತುಂಬಿತ್ತು

ನೀರಿನಿಂದ ಅಲ್ಲ

ಜನಪ್ರವಾಹದಿಂದ

ಕೆರೆಯ ಒಳಗೆ ಮರಿಮೀನಾಗಿ

ನಿಮ್ಮ ಹೋರಾಟದ ಹಾಡೆಂಬ ಈಜಿನಲ್ಲಿ 

ಉಕ್ಕಿಬರುವ ಹೃದಯವನ್ನು ಕಂಡೆ

ನಿಮ್ಮ ಕೈಗಳಲ್ಲಿ ಆಯುಧಗಳಿಲ್ಲ

ಶಸ್ತ್ರ ಹಿಡಿದಿರುವ ಸೈನ್ಯ – ನಿಮ್ಮನ್ನು 

ನೋಡಿ ಭಯದಿಂದ ನಡುಗುತಿತ್ತು

ಚರಿತ್ರೆಯ ಚಕ್ರದಿಂದ 

ಬದುಕನ್ನು ಕಳೆದುಕೊಂಡ ಜನರಿಗೆ

ವಸಂತವಾಗಿ-ಯದ್ಧ ಭೂಮಿಯ ಸಿಡಿಲಾಗಿ

ಪ್ರದರ್ಶನ ನಡಿಗೆಯ ರಕ್ಷಣೆಯಾಗಿ ಮೊಳಗಿಸಿದ್ದು ನೀವು

ಆದಿವಾಸಿಗಳು, 

ದಮನಿತ ಜಾತಿಗಳು 

ಮಹಿಳೆಯರು, 

ದುಡಿಯುವ ಜನರು 

ರೈತಾಪಿ ಬಯಸುವ 

ವಿಮೋಚನೆಯ ಧ್ವನಿಯಾಗಿ 

ಆಕಾಶವನೆ ಮೊಳಗಿಸಿದ್ದು

ಭೂಮಿಯನೆ ಅದುರಿಸಿದ್ದು

ಅರಳುವ ವಿಮೋಚನೆಯ 

ಮಕರಂದವಾಗಿ ಹಾಡಿದ್ದು

ನೀವು

ಮತ್ತೊಮ್ಮೆ ನೋಡಬಯಸುವೆ

ಮಾತನಾಡ ಬಯಸುವೆ

ನಿಮ್ಮ ಧ್ವನಿ ಕೇಳಬಯಸುವೆ

ಮತ್ತೆಮ್ಮೆ ಹುಟ್ಟಿ ಬನ್ನಿ ಗದ್ದರ್

ಚರಿತ್ರೆಯನ್ನು ಮರುಪರಿಶೀಲಿಸಲು

ಸುರಂಗದ ದೇಹದೊಳಗೆ 

ಆರು ಸಾವಿರ ಪ್ರಾಣಗಳ ಬಿತ್ತಿ

ಚಿನ್ನ ಬೆಳೆಸುವ ಕೆ.ಜಿ.ಎಫ್. 

ಗಣಿ ಪ್ರದೇಶಕ್ಕೆ ಬಂದಿದ್ದ ನೀವು

ನಿಮ್ಮ ವಿಮೋಚನಾ ಗಾನದಲ್ಲಿ 

ಕಾರ್ಮಿಕರ ನೋವುಗಳನ್ನೇ ಪಲ್ಲವಿಯಾಗಿಸಿದ್ದು

ಅಂದು ಕೈ ಕುಲಿಕಿ ತಬ್ಬಿ ನಿಂತ ದೃಶ್ಯ ನೆನಪಿಗೆ ಬಂದು

ದಾಹದ ನೋವಿನಲ್ಲಿ ಮನ

ಮತ್ತೆ ತಬ್ಬಿಕೊಳ್ಳಲು ಬಯಸುತ್ತಿದೆ

ವರ್ಗ ಹೋರಾಟದಲ್ಲಿ 

ದೇಹ ಸೀಳಿದ ಗುಂಡೊಂದು 

ನಿಮ್ಮ ದೇಹದಲ್ಲಿ ಶರಣಗಾತಿ ಹೊಂದಿದ್ದನ್ನು 

ಲೋಕ ಕಂಡಿದೆ- ಇದುವೇ ವರ್ಗ ಹೋರಾಟವೆಂಬ 

ಚರಿತ್ರೆಯನ್ನು ಬರೆದಿದ್ದು

ಮತ್ತೆ ಹುಟ್ಟಿಬನ್ನಿ ಗದ್ದರ್

ಚರಿತ್ರೆಯನ್ನು ಮರುಪರಿಶೀಲಿಸಲು

ಪಂಚಭೂತಗಳಲ್ಲಿ ವಿಲೀನವಾಗಿರುವ – 

ವಿಮೋಚನೆಯ ಶಕ್ತಿ ಒಗ್ಗೂಡಿಸಿ

 ಹೊಸ ಹಾಡು ಹಾಡಲು

ಮತ್ತೊಮ್ಮೆ ಹುಟ್ಟಿಬನ್ನಿ

ಪರಿಶೀಲಿಸಿದ ಹಾದಿಯಲ್ಲಿ ನಿಂತು 

ಚರಿತ್ರೆಯನ್ನು ಹೊಸದಾಗಿ ನಿರ್ಮಿಸಲು 

ಮತ್ತೆ ಹುಟ್ಟಿಬನ್ನಿ ಗದ್ದರ್

ಎಸ್.ಶಿವಲಿಂಗಂ

ಸಾಹಿತಿಗಳು

Related Articles

ಇತ್ತೀಚಿನ ಸುದ್ದಿಗಳು