Thursday, June 20, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿನಲ್ಲಿ ಹಸುಗೂಸು ಕಳ್ಳರ ಜಾಲ ಬೇಧಿಸಿದ ಪೊಲೀಸರು ; ನಾಲ್ವರ ಬಂಧನ

ಬರೋಬ್ಬರಿ 900 ಹೆಣ್ಣುಭ್ರೂಣ ಹತ್ಯೆಯ ಜಾಲ ಬೆಳಕಿಗೆ ಬಂದು ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿದ ನಂತರ ಈಗ ರಾಜಧಾನಿ ಬೆಂಗಳೂರಿನಲ್ಲೇ ಮತ್ತೊಂದು ಭಯಾನಕ ಪ್ರಕರಣ ಪತ್ತೆಯಾಗಿದ್ದು ಈ ಸಂಬಂಧ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಅಪಾಯಕಾರಿ ತಂಡವೊಂದರ ಜಾಲವನ್ನು ಬೇಧಿಸಿದ ಕರ್ನಾಟಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ನಾಲ್ವರೂ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ವೇಳೆ ನೇರವಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ತಂಡ ಎಳೆಯ ಮಕ್ಕಳ ಮಾರಾಟ ಮಾಡುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ ಹಾಗೂ ಶರಣ್ಯ ಎನ್ನುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

ರಾಜರಾಜೇಶ್ವರಿ ನಗರದಲ್ಲಿ 20 ದಿನದ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾಗ ನೇರವಾಗಿ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿದ ನಂತರ ಹಸುಗೂಸನ್ನು ಪೊಲೀಸರು ರಕ್ಷಿಸಿದ್ದಾರೆ.

ಆರೋಪಿಗಳು ಲಕ್ಷ ಲಕ್ಷ ಹಣ ಪಡೆದು ಹಸುಗೂಸುಗಳನ್ನು ಮಕ್ಕಳಾಗದ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಜಾಲದ ಹಿಂದೆ ಇನ್ನಷ್ಟು ಜನರು ಇರುವ ಶಂಕೆ ವ್ಯಕ್ತವಾಗಿದೆ. ಇಲ್ಲಿ ಮಗು ಕಳೆದುಕೊಂಡವರ ಜೊತೆಗೆ ಮಕ್ಕಳನ್ನು ಖರೀದಿಸಿದವರಿಗೂ ಆಪತ್ತು ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು