Home ದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ 25 ಪುಸ್ತಕಗಳ ಮೇಲೆ ನಿಷೇಧ: ಅರುಂಧತಿ ರಾಯ್ ಸೇರಿದಂತೆ ಹಲವು ಲೇಖಕರ...

ಜಮ್ಮು ಮತ್ತು ಕಾಶ್ಮೀರದಲ್ಲಿ 25 ಪುಸ್ತಕಗಳ ಮೇಲೆ ನಿಷೇಧ: ಅರುಂಧತಿ ರಾಯ್ ಸೇರಿದಂತೆ ಹಲವು ಲೇಖಕರ ಕೃತಿಗಳು ವಶ

0

ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತವು 25 ಪುಸ್ತಕಗಳ ಮೇಲೆ ನಿಷೇಧ ಹೇರಿದ್ದು, ಇದು ಕೇಂದ್ರದಲ್ಲಿನ ಮೋದಿ ಸರ್ಕಾರದ ಕ್ರಮಗಳು ಮತ್ತು ವಾಸ್ತವಾಂಶಗಳು ಹೊರಬರುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ಗೃಹ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ನಿಷೇಧಕ್ಕೊಳಗಾದ ಪುಸ್ತಕಗಳಲ್ಲಿ ಖ್ಯಾತ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ವಕೀಲ ಹಾಗೂ ಸಂವಿಧಾನ ತಜ್ಞ ಎ.ಜಿ. ನೂರಾನಿ ಬರೆದ ಪುಸ್ತಕಗಳೂ ಸೇರಿವೆ. ಈ ಪುಸ್ತಕಗಳು “ತಪ್ಪು ನಿರೂಪಣೆಗಳನ್ನು ಪ್ರಚೋದಿಸುತ್ತಿವೆ” ಮತ್ತು “ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿವೆ” ಎಂಬ ಆರೋಪದ ಮೇಲೆ ಅವುಗಳನ್ನು “ವಶಪಡಿಸಿಕೊಂಡಿದ್ದೇವೆ” ಮತ್ತು ಅವುಗಳ ಪ್ರಕಟಣೆಯನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ನೇತೃತ್ವದ ಗೃಹ ಇಲಾಖೆ ತಿಳಿಸಿದೆ.

ಅರುಂಧತಿ ರಾಯ್ ಅವರ ‘ಆಜಾದಿ’ ಮತ್ತು ನೂರಾನಿ ಅವರ ‘ದಿ ಕಾಶ್ಮೀರ್ ಡಿಸ್ಪ್ಯೂಟ್ 1947 – 2012’ ಪುಸ್ತಕಗಳು ನಿಷೇಧಕ್ಕೊಳಗಾಗಿವೆ. ರಾಜಕೀಯ ವಿಜ್ಞಾನಿ ಮತ್ತು ಶಿಕ್ಷಣತಜ್ಞ ಸುಮಂತ್ರ ಬೋಸ್ ಬರೆದ ‘ಕಾಶ್ಮೀರ್ ಅಟ್ ದಿ ಕ್ರಾಸ್‌ರೋಡ್ಸ್’ ಮತ್ತು ಪತ್ರಕರ್ತೆ ಅನುರಾಧಾ ಭಾಸಿನ್ ಅವರ ‘ಎ ಡಿಸ್‌ಮ್ಯಾಂಟಲ್ ಸ್ಟೇಟ್’ ಕೂಡ ನಿಷಿದ್ಧ ಪುಸ್ತಕಗಳ ಪಟ್ಟಿಯಲ್ಲಿವೆ. ಕಾಶ್ಮೀರಿ-ಅಮೆರಿಕನ್ ಲೇಖಕಿ ಹಫ್ಸಾ ಕಂಜ್ವಾಲ್ ಅವರ ‘ಕೊಲೋನೈಸಿಂಗ್ ಕಾಶ್ಮೀರ್: ಸ್ಟೇಟ್-ಬಿಲ್ಡಿಂಗ್ ಅಂಡರ್ ಇಂಡಿಯನ್ ಆಕ್ಯುಪೇಷನ್’, ಹೇಲೀ ಡಶ್ಚಿನ್‌ಸ್ಕೀ ಮತ್ತು ಇತರರು ಬರೆದ ‘ರೆಸಿಸ್ಟಿಂಗ್ ಆಕ್ಯುಪೇಷನ್ ಇನ್ ಕಾಶ್ಮೀರ್’, ವಿಕ್ಟೋರಿಯಾ ಸ್ಕೋಫೀಲ್ಡ್ ಅವರ ‘ಕಾಶ್ಮೀರ್ ಇನ್ ಕಾನ್‌ಫ್ಲಿಕ್ಟ್’, ಕ್ರಿಸ್ಟೋಫರ್ ಸ್ನೆಡ್ಡನ್ ಅವರ ‘ಇಂಡಿಪೆಂಡೆಂಟ್ ಕಾಶ್ಮೀರ್’, ಆಯೆಷಾ ಜಲಾಲ್ ಮತ್ತು ಸುಗತಾ ಬೋಸ್ ಅವರ ‘ಕಾಶ್ಮೀರ್ ಅಂಡ್ ದಿ ಫ್ಯೂಚರ್ ಆಫ್ ಸೌತ್ ಏಷ್ಯಾ’, ಸ್ಟೀಫನ್ ಪಿ. ಕೋಹೆನ್ ಅವರ ‘ಕನ್‌ಫ್ರಂಟಿಂಗ್ ಟೆರರಿಸಂ’, ಇಮಾಮ್ ಹಸನ್ ಅವರ ‘ಅಲ್ ಬನಾ’ ಮತ್ತು ಮೌಲಾನಾ ಮೌದೂದಿಯವರ ಪುಸ್ತಕಗಳೂ ನಿಷೇಧಕ್ಕೊಳಗಾಗಿವೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯ ಸೆಕ್ಷನ್ 152, 196, ಮತ್ತು 197ರ ಅಡಿಯಲ್ಲಿ ಈ ಪುಸ್ತಕಗಳ ಮೇಲೆ ನಿಷೇಧ ವಿಧಿಸಲಾಗಿದೆ. ಇದು ಪುಸ್ತಕಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಶ್ರೀನಗರದಲ್ಲಿ ಪೊಲೀಸರು ನಿಷಿದ್ಧ ಪಟ್ಟಿಯಲ್ಲಿರುವ ಪುಸ್ತಕಗಳ 668 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಸ್ತವಾಂಶಗಳಿಗೆ ಭಯಪಡುತ್ತಿದ್ದಾರೆ: ಲೇಖಕಿ ಅನುರಾಧಾ ಭಾಸಿನ್
ಜಮ್ಮು ಮತ್ತು ಕಾಶ್ಮೀರ ಆಡಳಿತದ ಈ ನಿರ್ಧಾರಕ್ಕೆ ಅನುರಾಧಾ ಭಾಸಿನ್ ಪ್ರತಿಕ್ರಿಯಿಸಿದ್ದಾರೆ. ನಿಷೇಧಕ್ಕೊಳಗಾದ ಪುಸ್ತಕಗಳು ಸಂಪೂರ್ಣ ಸಂಶೋಧನೆ ಆಧಾರಿತವಾಗಿವೆ ಮತ್ತು ಸರ್ಕಾರವು ಕೊನೆಗೊಳಿಸಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ಭಯೋತ್ಪಾದನೆಯನ್ನು ಅವು ವೈಭವೀಕರಿಸಿಲ್ಲ ಎಂದು ಅವರು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ತಿಳಿಸಿದ್ದಾರೆ. ಸುಳ್ಳುಗಳನ್ನು ಪ್ರಶ್ನಿಸುವ ವಾಸ್ತವಾಂಶಗಳಿಗೆ ಆಡಳಿತವು ಭಯಪಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಾಸ್ತವಾಂಶಗಳು ಮತ್ತು ಕೇಂದ್ರದ ಮೋದಿ ಸರ್ಕಾರದ ಕ್ರಮಗಳು ಹೊರಬರುವುದನ್ನು ತಡೆಯಲು ಈ ರೀತಿ ಪುಸ್ತಕಗಳನ್ನು ನಿಷೇಧಿಸಲಾಗುತ್ತಿದೆ ಎಂದು ಬುದ್ಧಿಜೀವಿಗಳು ಟೀಕಿಸುತ್ತಿದ್ದಾರೆ. ಈ ವಾಸ್ತವಾಂಶಗಳು ಸಾರ್ವಜನಿಕರಿಗೆ ಮತ್ತು ಮುಂದಿನ ಪೀಳಿಗೆಗೆ ತಿಳಿಯದಂತೆ ಮಾಡುವುದು ಸರಿಯಲ್ಲ ಎಂದು ಅವರು ಹೇಳುತ್ತಿದ್ದಾರೆ. ಇದು ಒಪ್ಪಲಾಗದ ಉಲ್ಲಂಘನೆ ಎಂದು ಜಮ್ಮು ಮತ್ತು ಕಾಶ್ಮೀರದ ಪಕ್ಷಗಳು ಟೀಕಿಸಿವೆ.

You cannot copy content of this page

Exit mobile version