Friday, June 14, 2024

ಸತ್ಯ | ನ್ಯಾಯ |ಧರ್ಮ

ಚುನಾವಣೆ ಬಹಿಷ್ಕಾರ : ಹೋರಾಟ ಹತ್ತಿಕ್ಕಲು ಪೊಲೀಸ್ ಬಲಪ್ರಯೋಗ, ಹೋರಾಟಗಾರರ ಖಂಡನೆ

  ತೀರ್ಥಹಳ್ಳಿ ತಾಲ್ಲೂಕಿನ ಉದ್ದೇಶಿತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯು ಅವೈಜ್ಞಾನಿಕ. ಮತ್ತು ನದಿಗಳೂ ಸೇರಿದಂತೆ ಜಲಮೂಲಗಳ ನೀರಿನ ಮೇಲಿನ ಜನಸಾಮಾನ್ಯರ ಹಕ್ಕನ್ನು ಕಸಿದು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒತ್ತೆ ಇಡುವ ಕೇಂದ್ರೀಕೃತ ಯೋಜನೆಗಳನ್ನು ರೂಪಿಸಬಾರದೆಂದು ರೈತರು ಮತ್ತು ನದಿ ದಡಗಳ ಜನತೆ ಕಳೆದ ಆರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟವನ್ನು ಹತ್ತಿಕ್ಕಲು ಬಲ ಪ್ರಯೋಗ ಬಳಸಿದ ಸರ್ಕಾರ ಮತ್ತು ರಾಜಕಾರಣಿಗಳು ಹಣದ ಮೂಟೆ ಎಣಿಸುವ ಯೋಜನೆಯ ಜಾರಿಗಾಗಿ ಪಕ್ಷಾತೀತವಾಗಿ ಅಸಹ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಭೀಮೇಶಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಸ್ಥಳೀಯ ಆಡಳಿತವನ್ನು ದೂರಿದೆ.

   ತಾಲ್ಲೂಕಿನ ಇಂತಹ ಚಿಕ್ಕ ಹೋರಾಟವನ್ನು ಹತ್ತಿಕ್ಕಲು ಅಪವಿತ್ರ ಮೈತ್ರಿ ಮಾಡಿಕೊಂಡ ರಾಜಕಾರಣಿಗಳು ನಮ್ಮ ಊರುಗಳಿಗೆ ಬರುವುದು ಬೇಡ ಎಂದು ಚಳುವಳಿಗಾರರು ಬೋರ್ಡ್ ಹಾಕಿದ್ದನ್ನು ಪೋಲೀಸ್ ಬಲ ಬಳಸಿಕೊಂಡು ಕಿತ್ತು ಹಾಕುತ್ತಿದ್ದಾರೆ. ಹೀಗಾಗಿ ನಾವು ಇಂತಹವರಿಗೆ ಮತ ನೀಡದಿರಲು ಚುನಾವಣೆಯಿಂದ ದೂರ ಉಳಿಯಲು ಬಯಸುತ್ತೇವೆ ಎಂದು ಹೋರಾಟಗಾರರು ಮತ್ತೊಮ್ಮೆ ಸಾರಿ ಹೇಳಿದ್ದಾರೆ‌.

     ನಾಜುಕಯ್ಯ ರಾಜಕಾರಣಿಗಳಿಗೆ ಜನಸಾಮಾನ್ಯರು ಎಂದರೆ ತಮ್ಮ ಮೋಸದ ಮಾತು ನಂಬಿ ಮತ ನೀಡುವ ಮೂರ್ಖರು ಎಂಬ ನಂಬಿಕೆ ಗಾಢವಾಗಿಬಿಟ್ಟಿದೆ. ಇದೇ ಭಂಡ ಧೈರ್ಯದಿಂದ ಈ ಸಲದ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಮತ ಹಾಕಿಸಲು ಪೋಲೀಸ್ ಅಥವಾ ಮಿಲಿಟರಿ ಬಲದಿಂದ ಮತಗಟ್ಟೆಗಳಿಗೆ ಎಳೆದುಕೊಂಡು ಹೋಗುತ್ತಾರೆಯೇ ಎಂದು ಕಾಯುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

   ಜನತಂತ್ರದಲ್ಲಿ ನಾವು ಸರ್ಕಾರಗಳಿಗಾಗಲಿ, ಸರ್ಕಾರಿ ಯಂತ್ರಗಳಿಗಾಗಲಿ, ಚುನಾವಣಾ ಆಯೋಗಕ್ಕಾಗಲಿ ಕರ್ತವ್ಯದ ಹೊಣೆ ನೀಡಿದ್ದೇವೆಯೇ ಹೊರತು ಅಧಿಕಾರ ನೀಡಿಲ್ಲ. ಅಧಿಕಾರವನ್ನು ಜನರೇ ಉಳಿಸಿಕೊಂಡಿರುತ್ತಾರೆ ಎಂಬ ಎಚ್ಚರವನ್ನು ಸಂಬಂಧಪಟ್ಟವರು ಅರಿತುಕೊಂಡರೆ ಒಳಿತು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಕಳೆದ ಮೂರ್ನಾಲ್ಕು ತಿಂಗಳಿನಿಂದ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತವನ್ನು ಎಚ್ಚರಿಸುತ್ತಿದ್ದರೂ ತಾಲ್ಲೂಕಿನಾದ್ಯಂತ ಇದರ ಕೆಲಸ ಭರದಿಂದ ಸಾಗಿದೆ. ಈ ಹಿಂದೆಯೇ ನಿರ್ಮಿಸಲಾದ ಡ್ಯಾಂ ಮೂಲಕ ನೀರೆತ್ತಲು ಎಲ್ಲಾ ಅವಕಾಶಗಳಿದ್ದರೂ ತುಂಗಾ ಹಾಗೂ ಮಾಲತಿ ನದಿ ಸಂಗಮದಲ್ಲೇ ನೀರು ತಗೆದುಕೊಳ್ಳುವ ಬಗ್ಗೆ ಸ್ಥಳೀಯ ರಾಜಕಾರಣಿಗಳು ಹಾಗೂ ಗುತ್ತಿಗೆದಾರರು ಹಠ ಹಿಡಿದು ಕೂತಿರುವುದು ಇಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

  ಇಲ್ಲಿ ನೀರು ಎತ್ತುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಪೀಪಲ್ ಮೀಡಿಯಾ ಈಗಾಗಲೆ ವರದಿ ಮಾಡಿದೆ‌.

Related Articles

ಇತ್ತೀಚಿನ ಸುದ್ದಿಗಳು