Sunday, June 16, 2024

ಸತ್ಯ | ನ್ಯಾಯ |ಧರ್ಮ

ಅತ್ಯಾಚಾರಿಗಳ ರಾಜಕೀಯ ಸಾಧನೆ !!

ದೇಶ ಇಂದು ಫ್ಯಾಸಿಸ್ಟ್ ಶಕ್ತಿಗಳ ಪಾಲಾಗುತ್ತಿದೆ. ಈ ವ್ಯವಸ್ಥೆಯ ಚೌಕಟ್ಟು, ರಾಜಕೀಯ ಸನ್ನಿವೇಶ ಬದಲಾಗಬೇಕಾದರೆ ನಮ್ಮ ಯುವಜನರು ಎಚ್ಚೆತ್ತುಕೊಳ್ಳಬೇಕಿದೆ.  ನಮಗೆ ಎಂಥ ಜನಪ್ರತಿನಿಧಿಗಳು ಬೇಕು ಎನ್ನುವುದನ್ನು ಜಾತಿ, ಧರ್ಮವನ್ನು ಮೀರಿ ನಿಂತು ಯೋಚಿಸಬೇಕಾಗಿದೆ. ಯೋಚಿಸಿ ಮತಚಲಾಯಿಸಿ, ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಿ – ರೇಣುಕಾ ನಿಡಗುಂದಿ

ಇಡೀ ದೇಶದ ಜನತೆ ಕರ್ನಾಟಕದ ಚುನಾವಣೆಯ ಫಲಿತಾಂಶದತ್ತ ನಿರೀಕ್ಷೆಯನ್ನಿಟ್ಟು ಕುಳಿತಿರುವ  ಹೊತ್ತಿನಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ ಹಲವು ವಾರಗಳಿಂದ ಮಹಿಳಾ ಕುಸ್ತಿಪಟುಗಳು ಭಾರತ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನೈತಿಕ ಲಜ್ಜೆಯೂ ಇರದ ಆರೋಪಿ ಮಾತ್ರ ಮಾಧ್ಯಮದೊಂದಿಗೆ ಮಾತಾಡುತ್ತಲೆ ಇದ್ದಾನೆ. ಮೊನ್ನೆ ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಆತ “ಕುಸ್ತಿಪಟುವನ್ನು ಆಕೆಯ ತಂದೆಯೊಂದಿಗೆ ಮಾತಾಡಿಸುವುದಕ್ಕಾಗಿ ನಾನು ಆಕೆಯನ್ನು ನನ್ನ ಬಳಿ ಬರುವಂತೆ ಹೇಳಿದೆ. ಮಾತುಕತೆಯಾದ ಬಳಿಕ ನಾನು ಆಕೆಯನ್ನು ತಂದೆಯಂತೆ ತಬ್ಬಿಕೊಂಡೆ. ಆಕೆ ಕಸಿವಿಸಿಗೊಂಡಳು. ಯಾಕೆ ನಾನು ಒಬ್ಬ ತಂದೆಯಂತೆ ತಬ್ಬಿಕೊಳ್ಳಬಾರದೇ?” ಎಂದು ಆಗ ಕೇಳಿದೆ ಅನ್ನುತ್ತಾನೆ. ಇದು ನಾಚಿಕೆಗೇಡಿ ಬಿಜೆಪಿ ಸಂಸದ ಬ್ರಿಜಭೂಷಣ ಶರಣ್ ಸಿಂಗನ ಮಾತುಗಳು. 

ಮಹಿಳೆ ಅಷ್ಟೇ ಅಲ್ಲ ಒಂದು ಪುಟ್ಟ ಮಗುವನ್ನೂ ಅದರ ತಂದೆತಾಯಿಗಳ ಅನುಮತಿ ಇಲ್ಲದೇ ಸ್ಪರ್ಶಿಸಬಾರದು,  ತಬ್ಬಿಕೊಳ್ಳಕೂಡದು ಅನ್ನುವ ಸೂಕ್ಷ್ಮತೆಯೂ ಇರದ ಭಂಡರು ಇವರು.

ಚುನಾವಣೆ ಗೆಲ್ಲುವುದಷ್ಟೇ ಅವರ ಗುರಿ.

ಈ ಅತ್ಯಾಚಾರಿಯನ್ನು ರಕ್ಷಿಸಿಕೊಳ್ಳುವ ಬಿಜೆಪಿ ಈ ಪ್ರತಿಭಟನೆ ಕುರಿತು ಮೌನತಾಳಿದೆ. ಪಂದ್ಯ  ಗೆದ್ದು ಚಿನ್ನದ ಪದಕ ಗಳಿಸಿದ ಕ್ರೀಡಾ- ಕುಸ್ತಿಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಬೆನ್ನುತಟ್ಟಿ ಫೋಟೋ ತೆಗೆಸಿಕೊಳ್ಳುವ ಪ್ರಧಾನಿಗಳು ಕರ್ನಾಟಕದ ಚುನಾವಣೆಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದಾರೆ. ಇನ್ನು ಪ್ರಧಾನ ಮಂತ್ರಿ ಮಂಡಳಿಯ ಪವರ್‍ ಫುಲ್ ಮಹಿಳಾರತ್ನಗಳಾದ ಸ್ಮೃತಿ ಇರಾಣಿ, ನಿರ್ಮಲಕ್ಕ, ನಮ್ಮ ಶೋಭಕ್ಕ, ಸುಮಲತಕ್ಕ ಒಂದೇ ಒಂದು ಶಬ್ದವನ್ನೂ ಆಡುತ್ತಿಲ್ಲ. ಬಿಜೆಪಿಗೆ ಚುನಾವಣೆ ಗೆಲ್ಲಬೇಕು.  ಸಾಮ-ಭೇಧ -ದಂಡ ಹೇಗಾದರೂ ಚುನಾವಣೆ ಗೆಲ್ಲುವುದಷ್ಟೇ ಅವರ ಗುರಿ.

ಮೋದಿ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನದ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಪ್ರಜಾಪ್ರಭುತ್ವ ನಾಶವಾಗುವಂಥ ಕಾರ್ಯಗಳಿಗೆ ಮೌನ ಸಮ್ಮತಿ ನೀಡುತ್ತ ತಾವೆಷ್ಟು ಬಲಶಾಲಿಗಳೆಂದು ಬೀಗತೊಡಗಿದ್ದು ಈ ದೇಶದ ದುರ್ದೈವ.

ಸ್ವಾಯತ್ತ ಸಂಸ್ಥೆಗಳ ದುರುಪಯೋಗ…

ಅವರ ಆಡಳಿತದ ಈ ಒಂಭತ್ತು ವರ್ಷಗಳಲ್ಲಿ ದೇಶ ಐವತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿ ಸ್ವಾತಂತ್ರ್ಯಪೂರ್ವದಲ್ಲಿದ್ದ  ಹಿಂದೂ ರಾಷ್ಟ್ರ , ಹಿಂದೂ ಧರ್ಮದ ವ್ಯಸನ ಮತ್ತೆ ಮುನ್ನೆಲೆಗೆ ಬಂದಿದೆ. ರಿಸರ್ವ್ ಬ್ಯಾಂಕ್, ಸಿಎಐ, ಸಿಬಿಐ, ಇಡಿ, ಎನ್ ಎಸ್‌.ಎಸ್‌ಪಿ ಸಹಿತ ಎಲ್ಲ ಸಂಸ್ಥೆಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ. ಈ.ಡಿ. ಹಾಗೂ ಐಟಿ ಇಲಾಖೆಗಳನ್ನು ವಿಪಕ್ಷದವರ ಮೇಲೆ ಭೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವತ್ತೂ ಸ್ವಾಯತ್ತ ಸಂಸ್ಥೆಗಳನ್ನು ಈ ರೀತಿ ದುರುಪಯೋಗ ಮಾಡಿಕೊಂಡ ಉದಾಹರಣೆಗಳಿಲ್ಲ.

ಜಾತಿ, ಧರ್ಮವನ್ನು ಮೀರಿ ನಿಂತು ಯೋಚಿಸಬೇಕಾಗಿದೆ..

ಇತ್ತ ಉತ್ತರಪ್ರದೇಶವಂತೂ ಗೂಂಡಾರಾಜ್ಯವಾಗಿ ಹೋಗಿದೆ. ಯೋಗಿ ಆದಿತ್ಯನಾಥ್ ಅವರ ಅಧಿಕಾರಾವಧಿಯಲ್ಲಿ ಪೊಲೀಸರು 10,713 ಎನ್‍ಕೌಂಟರುಗಳನ್ನು ನಡೆಸಿದ್ದಾರೆ.  ಹಥರಸ್ ಮತ್ತು ಉನ್ನಾವಿನಂತಹ ಅತ್ಯಾಚಾರದ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದವು. ಕರ್ನಾಟಕವಿರಲಿ ಬಿಹಾರವಿರಲಿ, ದೇಶದ ಇನ್ಯಾವುದೇ ಭಾಗವಿರಲಿ ಚುನಾವಣೆಗೆ ಟಿಕೆಟು ಪಡೆಯುವವರಲ್ಲಿ ಹೆಚ್ಚಿನವರು ಅಪರಾಧದ ಹಿನ್ನೆಲೆಯುಳ್ಳವರೇ ಇದ್ದಾರೆ.  ಇವತ್ತಿನ ರಾಜಕೀಯದ ಸನ್ನಿವೇಶದಲ್ಲಿ ಅನಕ್ಷರಸ್ಥರಿಗೆ, ಸಂವಿಧಾನದ ಒಂದು ಅಕ್ಷರವನ್ನೂ ಓದದವರಿಗೆ,  ಅಪರಾಧಿಗಳಿಗೆ, ಬಲಾತ್ಕಾರಿಗಳಿಗೆ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಮನ್ನಣೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎಂಬುದನ್ನು ನಾವೆಲ್ಲ ಅನುಭವಿಸುತ್ತಲೇ ಇದ್ದೇವೆ. ಈ ವ್ಯವಸ್ಥೆಯ ಚೌಕಟ್ಟು, ರಾಜಕೀಯ ಸನ್ನಿವೇಶ ಬದಲಾಗಬೇಕಾದರೆ ನಮ್ಮ ಯುವಜನರು ಎಚ್ಚೆತ್ತುಕೊಳ್ಳಬೇಕಿದೆ.  ನಮಗೆ ಎಂಥ ಜನಪ್ರತಿನಿಧಿಗಳು ಬೇಕು ಎನ್ನುವುದನ್ನು ಜಾತಿ, ಧರ್ಮವನ್ನು ಮೀರಿ ನಿಂತು ಯೋಚಿಸಬೇಕಾಗಿದೆ.

೩೩% ಮೀಸಲಾತಿ ಸಿಕ್ಕಿಲ್ಲ…

ಸಮಾಜವಾದದ ಬಹುದೊಡ್ದ ಲೇಖಕ, ರಾಜಕೀಯ ಚಿಂತಕ ರಾಮ್ ಮನೋಹರ್ ಲೋಹಿಯಾ ಮತ್ತು ಉತ್ತರಪ್ರದೇಶದ  ರೈತ ನಾಯಕ ಕರ್ಪೂರಿ ಠಾಕೂರ್ ಅವರ ಪ್ರಯತ್ನದಿಂದ ಕಲ್ಲು ಒಡೆಯುವ ಹೆಣ್ಣುಮಗಳೊಬ್ಬಳು ಚುನಾವಣೆ ಗೆದ್ದು ವಿಧಾನಸಭೆಯನ್ನು ಪ್ರವೇಶಿಸಿದ್ದಳು. ಇಂದು ಅಂಥ ಪವಾಡವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹೆಚ್ಚಿನ ಮಹಿಳಾ ಪ್ರಾತಿನಿಧ್ಯವು ರಾಜಕೀಯ ಹಿಂಸಾಚಾರವನ್ನು ಕಡಿಮೆ ಮಾಡುತ್ತದೆ ಎಂದು ಲೋಹಿಯಾ ನಂಬಿದ್ದರು. ಮಹಿಳೆ, ತನ್ನ ಪುರುಷ ಪ್ರತಿರೂಪಕ್ಕಿಂತ ನಾಗರಿಕ ಪ್ರತಿರೋಧದ ಹೆಚ್ಚು ಬದ್ಧತೆಯ ಏಜೆಂಟ್ ಎಂದು ಲೋಹಿಯಾ ಹೇಳಿದ್ದರು. ಲೋಹಿಯಾ ಅವರು ಹಿಂದುಳಿದ ಜಾತಿಗಳ ಮಹಿಳೆಯರಿಗೆ 60% ಮೀಸಲಾತಿ ನೀಡಬೇಕು ಎಂದು ವಾದಿಸಿದ್ದರು. ಆದರೆ ಸ್ವಾತಂತ್ರ್ಯ ಸಿಕ್ಕಿ ಅಮೃತ ಮಹೋತ್ಸವ ಕಾಲ ಬಂದರೂ ಮಹಿಳೆಯರಿಗೆ ಭರವಸೆ ಕೊಟ್ಟಿದ್ದ ೩೩% ಮೀಸಲಾತಿಯೂ ಇದುವರೆಗೂ ಸಿಕ್ಕಿಲ್ಲ.

ಗೊಬೆಲ್ಸ್ ತಂತ್ರವೇ ಇವರ ಬಂಡವಾಳ.       

ಇಂದು ಮಹಿಳೆಯನ್ನು ಅವಮಾನಿಸುವ, ಅಕೆಯನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿಯೇ ನೋಡುವ ಪುರುಷಪ್ರಧಾನ ವ್ಯವಸ್ಥೆ ಮರುಹುಟ್ಟು ಪಡೆದಿದೆ. ಸಂಸತ್ತಿನ ಅಧಿವೇಶನದಲ್ಲಿ ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ ನಕ್ಕಿದ್ದಕ್ಕೆ ಪ್ರಧಾನಿ ಮೋದಿ ಅವರು “ಶೂರ್ಪನಖಿಯ “ನಗೆಯನ್ನು ನೆನಪಿಸಿತು ಎಂದು ಗೇಲಿಮಾಡಿದ್ದು ಅಪರಾಧವೆನಿಸಲಿಲ್ಲ. ಅದೇ ಮೋದಿ ಅಡ್ಡ ಹೆಸರನ್ನು ಗೇಲಿಮಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡುತ್ತದೆ. ಇದು ಬಿಜೆಪಿಯ ತಂತ್ರಗಾರಿಕೆ. ಸತ್ಯವನ್ನು ಸುಳ್ಳಾಗಿಸುವ ಸುಳ್ಳನ್ನು ಸತ್ಯವಾಗಿಸುವ ಗೊಬೆಲ್ಸ್ ತಂತ್ರವೇ ಇವರ ಬಂಡವಾಳ.       

ದೇಶದಲ್ಲಿ ಪ್ರತಿದಿನ ಪ್ರತಿನಿಮಿಷಕ್ಕೂ ಒಂದರಂತೆ ಅತ್ಯಾಚಾರಗಳು ನಡೆಯುತ್ತಿದ್ದರೂ ಪ್ರಧಾನಿಗಳು  ಬಾಯಿಬಿಡುವುದಿಲ್ಲ. ಯಾವ ಹೇಳಿಕೆಯನ್ನೂ ನೀಡುವುದಿಲ್ಲ. ಯಾವ ತೀವ್ರ ಕಾರ್ಯಾಚರಣೆಗಳೂ ನಡೆಯುವುದಿಲ್ಲ.  ಎನ್‍ಕೌಂಟರನ್ನು ಅತೀ ದಕ್ಷತೆಯಿಂದ ನಡೆಸುವ ಪೋಲೀಸರು, ಬ್ರಿಜ್ ಭೂಷಣನಂತವನ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗದವರು, ಮೇಲ್ವರ್ಗದ ಅಪರಾಧಿಗಳನ್ನು ಅತ್ಯಾಚಾರಿಗಳನ್ನು ಕಾಪಾಡುವ ಇವರು ಬಜರಂಗ ದಳದಂತಹ ಕೋಮುವಾದಿ ಸಂಘಟನೆಗಳನ್ನು ಪೋಷಿಸುತ್ತಿದ್ದಾರೆ.

ಸೌಮ್ಯ ಮುಖದ ಇವರೆಲ್ಲ ಉಗ್ರರೂಪಿಯಾಗಿದ್ದಾರೆ..

ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸುತ್ತೇವೆ ಅಂದಿದ್ದನ್ನೇ ಬಿಜೆಪಿ ತಿರುಗುಮಂತ್ರವಾಗಿ ಬಳಸತೊಡಗಿದೆ. ನಾವೆಲ್ಲ ಬಾಲ್ಯದಿಂದಲೂ ನೋಡಿದ ಸೌಮ್ಯಮುಖದ ಹನುಮಂತ, ರಾಮ ಭಕ್ತ ಆಂಜನೇಯ ಇವತ್ತು ಉಗ್ರರೂಪಿಯಾಗಿ ಚಿತ್ರಿತಗೊಂಡಿರುವನು. “ಜೈ ಹನುಮಾನ ಜ್ಞಾನಗುಣಸಾಗರ” ಎಂದು ಹನುಮಾನ್ ಚಾಲೀಸಾ ಪಠಿಸುವ ಈ ಮೂಢ ಭಕ್ತರಿಗೆ ಹನುಮಾನ ಜ್ಞಾನ ಮತ್ತು ಗುಣದ ಸಾಗರನೆಂದೂ ಅರ್ಥವಾಗುವುದಿಲ್ಲ. ತನ್ನ ಎಡಬಲದಲ್ಲಿ ಲಕ್ಷ್ಮಣ ಮತ್ತು ಸೀತೆ, ಪದತಲದಲ್ಲಿ ಪ್ರಿಯ ಭಕ್ತ  ಹನುಮಂತನೊಂದಿಗಿದ್ದ ಮರ್ಯಾದಾ ಪುರುಷೋತ್ತಮ ರಾಮ ಇವತ್ತು ಏಕಾಂಗಿಯಾಗಿ ಬಿಲ್ಲುಬಾಣಧಾರಿಯಾಗಿ ಹೊಡೆದಾಡಲು ನಿಂತಿದ್ದಾನೆ.  ಗೋಡ್ಸೆಯನ್ನು ಮಹಾತ್ಮನೆಂದು ಪೂಜಿಸುವ ಇವರು  ಯುವಕರ ಕೈಯಲ್ಲಿ ತಲವಾರನ್ನು , ಪಿಸ್ತೋಲನ್ನು ಕೊಡುವ ಬಗ್ಗೆ ಮಾತನಾಡುತ್ತಾರೆ.  ಬಜರಂಗದಳದ ಅನೇಕರು ಬಲಾತ್ಕಾರದ ಆರೋಪಿಗಳು ಎನ್ನುವುದು ಬೆಳಕಿನಷ್ಟೇ ಸತ್ಯ. ( Bajarang dal & rape) ಬಜರಂಗ್ ದಳ ಮತ್ತು ರೇಪ್ ಎಂದು ಗೂಗಲಿಸಿದರೆ  ಬೆಚ್ಚಿಬೀಳುವಂತಹ ಕೇಸುಗಳ ಉದ್ದದ ಪಟ್ಟಿಯೇ ಬರುತ್ತದೆ.

ರಾಜಕಾರಣಿಗಳ ಲೈಂಗಿಕ ನಿಂದನೆಗಳು

 ಭಾರತೀಯ ರಾಜಕಾರಣಿಗಳು ಎಷ್ಟು ಹಾಸ್ಯಾಸ್ಪದರಾಗಿರಬಹುದು, ಎಷ್ಟು ಬೇಜವಾಬ್ದಾರಿಯುಳ್ಳವರಾಗಿರಬಹುದು ಎಂಬುದನ್ನು ಅವರ ಲೈಂಗಿಕ ನಿಂದನೆಗಳನ್ನು ನೆನಪಿಸಿಕೊಂಡರೆ ಗೊತ್ತಾಗುತ್ತದೆ. ಹಿಂದೆ ವಿಧಾನಸಭೆಯ ಕಲಾಪದಲ್ಲಿ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂಬ ಮಾತಿದೆ”ಎಂಬಂಥ ವಿವಾದಾಸ್ಪಕ ಹೇಳಿಕೆ ನೀಡಿ ಟೀಕೆಗೊಳಗಾಗಿದ್ದು ಆಡಳಿತಾಧಿಕಾರದಲ್ಲಿನ ಮನಸ್ಥಿತಿ ಪುರುಷಪ್ರಧಾನ ವ್ಯವಸ್ಥೆಯ ಪ್ರತಿರೂಪವೇ ಆಗಿದೆ. ಮಹಿಳೆಯರ ಕುರಿತಾಗಿ ಇಂಥ ಅಸಂಬದ್ಧ ಹೇಳಿಕೆಗಳನ್ನು ನೀಡುವವರನ್ನು ನಾವಿನ್ನೂ ಸಹಿಸಿಕೊಂಡಿದ್ದೇವೆ.  ಹಿಂದೆ 2012 ರ ನಿರ್ಭಯಾ ಪ್ರಕರಣದ ಸಂದರ್ಭದಲ್ಲಿ ಅನೇಕ ಮಹಾಪುರುಷರು ತಮ್ಮ ಜ್ಞಾನಸಂಪತ್ತಿನಿಂದ ನಾನಾ ವಿಧದ ಲೈಂಗಿಕ ನಿಂದನೀಯ  ಹೇಳಿಕೆಗಳನ್ನು ಕೊಟ್ಟು ನಗೆಪಾಟಲಾಗಿದ್ದನ್ನೂ ಅಧಿಕಾರದ ಅಮಲು ಮರೆಸುತ್ತದೆ.  

ಎಂಥ ಬುದ್ಧಿವಂತರಿವರು!

ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ 2012 ರಲ್ಲಿ ಅತ್ಯಾಚಾರ ಘಟನೆಗಳನ್ನು ತಡೆಯಲು ಮದುವೆಯ ವಯಸ್ಸನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರೆ ಇದೇ ಹರ್ಯಾಣ ಖಾಪ್ ಪಂಚಾಯತ್ ಸದಸ್ಯ ಸುಬೆ ಸಿಂಗ್ ವಿವಾಹಕ್ಕೆ ಕನಿಷ್ಠ ವಯಸ್ಸಿನ ಮಿತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದರು. ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು 16ರೊಳಗೆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಮದುವೆ ಮಾಡಬೇಕು ಎಂದಿದ್ದರು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಅತ್ಯಾಚಾರವನ್ನು ಸಾಮಾಜಿಕ ಅಪರಾಧ ಎಂದು ಬಣ್ಣಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಮಾತ್ರ ಅತ್ಯಾಚಾರದ ಅಪರಾಧ ಎಸಗಲಾಗಿದೆ ಎಂದು ಪರಿಗಣಿಸಬಹುದಂತೆ ಪೋಲೀಸರಿಗೆ ದೂರು ನೀಡಿಲ್ಲವಾದರೆ  ಅಪರಾಧ ಎಸಗಿಲ್ಲ ಎಂದರ್ಥವಂತೆ. ಎಂಥ ಬುದ್ಧಿವಂತರಿವರು !

ಕುಲದೀಪ್ ಸೆಂಗರನ ಅಪರಾಧಗಳು..

ಇನ್ನು ಉತ್ತರಪ್ರದೇಶದ ಉನ್ನಾವಿನ ಬಿಜೆಪಿ ಶಾಸಕ ಕುಲದೀಪ್ ಸೆಂಗರನ ಬಗ್ಗೆ ಯಾರಿಗೆ ಗೊತ್ತಿಲ್ಲ. ಮನೆಯಲ್ಲಿ ಕೆಲಸಕ್ಕಿದ್ದ ಕುಟುಂಬದ ಹೆಣ್ಣುಮಗಳ ಅಪಹರಣ, ಅತ್ಯಾಚಾರ, ಕೊಲೆ ಪ್ರಯತ್ನವಲ್ಲದೇ ಆಕೆಯ ತಂದೆಯನ್ನೂ ಕೊಂದುಹಾಕಿದ್ದಲ್ಲದೇ ಸಂತ್ರಸ್ತೆ ತನ್ನ ವಕೀಲನೊಂದಿಗೆ ಕೋರ್ಟಿಗೆ ಹೊರಟಾಗ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಟ್ರಕ್ಕನ್ನು ಅವರ ವಾಹನದ ಮೇಲೆ ಹಾಯಿಸಿ ಸಾಯಿಸಲು ಪ್ರಯತ್ನಿಸಿದ್ದರು. ಇಡೀ ಘಟನೆ ಒಂದು ಭಯಾನಕ ಸಿನೇಮಾದ ಘಟನೆಗಳಂತೆ ಸ್ಕ್ರಿಪ್ಟ್ ತಯಾರಿಸಿ ಪ್ಲಾನ್ ಮಾಡಿ ಅಪರಾಧಗಳನ್ನು ಕಾರ್ಯರೂಪಕ್ಕಿಳಿಸುವ ಚಾತುರ್ಯವುಳ್ಳವರ ಕೈಯಲ್ಲಿ ರಾಜ್ಯವನ್ನು ಆಳಲು ಕೊಟ್ಟಾಗ ಏನಾಗಬಹುದು ? ಅದು ಊಹೆಗೆ ನಿಲುಕದ್ದು. ಸೆಂಗರನ ಎಲ್ಲ ಅಪರಾಧಗಳನ್ನು ಮುಚ್ಚಿಹಾಕುವ ಪ್ರಯತ್ನಗಳು ವಿಫಲಗೊಂಡಿದ್ದು ಸಾರ್ವಜನಿಕರ ಆಕ್ರೋಶದಿಂದಾಗಿ!

ಕ್ರಿಮಿನಲ್‌ ಆರೋಪಿ ಸಂಸದರು!

ಮೇ 2019 ರಲ್ಲಿ ಬಿಡುಗಡೆಯಾದ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ((ADR)  ವರದಿಯ ಪ್ರಕಾರ, ಹೊಸದಾಗಿ ಚುನಾಯಿತರಾದ ಸುಮಾರು ಅರ್ಧದಷ್ಟು ಲೋಕಸಭಾ ಸದಸ್ಯರ ವಿರುದ್ಧ ಕ್ರಿಮಿನಲ್ ಆರೋಪಗಳಿವೆ, 2014 ಕ್ಕೆ ಹೋಲಿಸಿದರೆ 26% ಹೆಚ್ಚಳ ಮತ್ತು 2009 ಕ್ಕೆ ಹೋಲಿಸಿದರೆ 44% ಹೆಚ್ಚಾಗಿದೆ. ಲೋಕಸಭೆ 2019 ರಲ್ಲಿ ವಿಶ್ಲೇಷಿಸಲಾದ 539 ವಿಜೇತರಲ್ಲಿ 233 ಸಂಸದರು ಅಥವಾ 43% ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

ರಾಜ್ಯ ಅಸೆಂಬ್ಲಿಗಳು ಮತ್ತು ಲೋಕಸಭೆಯ ಡೇಟಾವನ್ನು ವಿಶ್ಲೇಷಿಸಿದ ನಂತರ, ಆಡಳಿತಾರೂಢ ಬಿಜೆಪಿ ಪಕ್ಷವು ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳೊಂದಿಗೆ ಹೆಚ್ಚಿನ ಸಂಖ್ಯೆಯ ಸಂಸದರು/ಶಾಸಕರನ್ನು ಹೊಂದಿದೆ ಎಂದು ಎಡಿಆರ್ ಕಂಡುಹಿಡಿದಿದೆ. ಅವರಲ್ಲಿ ಸುಮಾರು 30% ರಷ್ಟು ಜನರು ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧದ ಇತರ ಅಪರಾಧಗಳು, ಕೊಲೆ, ಅಪಹರಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.

2014 ರಲ್ಲಿ, 185 ಲೋಕಸಭಾ ಸದಸ್ಯರು (34%) ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದರು ಮತ್ತು 112 ಸಂಸದರು ಅವರ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿದ್ದರು. 2009 ರಲ್ಲಿ, 543 ಲೋಕಸಭಾ ಸಂಸದರಲ್ಲಿ 162 (ಸುಮಾರು 30%) ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದರು ಮತ್ತು 14% ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದರು ಎಂದು ಎಡಿಆರ್ ವರದಿ ಹೇಳಿದೆ.

ಮುಂದುವರಿದು ” ಅಪರಾಧಿಗಳು ಸಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಿದಾಗ ಅದರ ಸಂಸ್ಥೆಗಳು ನಿಷ್ಪರಿಣಮಕಾರಿಯಾಗುತ್ತವೆ ಈ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತದೆ.  ನ್ಯಾಯಾಲಯಗಳಿಂದ ಶಿಕ್ಷೆಗೆ ಗುರಿಯಾಗದ ಹೊರತು ಅವರನ್ನು ಅಪರಾಧಿಗಳೆಂದು ಪರಿಗಣಿಸಲಾಗುವುದಿಲ್ಲ ಎಂಬ ರಾಜಕಾರಣಿಗಳ ಸಿದ್ಧಾಂತ ತಾಂತ್ರಿಕ ಅರ್ಥದಲ್ಲಿ ಮಾತ್ರ ಸ್ವೀಕಾರಾರ್ಹವಾಗಿದೆ. ಪ್ರಕರಣಗಳು ವರ್ಷಗಳು ಮತ್ತು ದಶಕಗಳವರೆಗೆ ನಡೆಯುತ್ತವೆ ಮತ್ತು ಹೆಚ್ಚಾಗಿ ರಾಜಕಾರಣಿಗಳು ವಿವಿಧ ರೀತಿಯಲ್ಲಿ ಮತ್ತು ವಿಧಾನಗಳಲ್ಲಿ ತಮ್ಮನ್ನು ತಾವು ಶುದ್ಧಾಂಗರೆಂದು ಸಾರಿ ಹೊರಬರಲು ಸಮರ್ಥರಾಗಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ” ಎಂದೂ ಎಡಿಆರ್ ವರದಿ ಮಾಡಿದೆ.

ಇದು ವಾಸ್ತವ…

ಕಳೆದ ಮೂರು ವರ್ಷಗಳಿಂದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಪೊಲೀಸ್ ಕ್ರಮ ವಿಳಂಬದ ಬಗ್ಗೆ ಯಾವುದೇ ವಿರೋಧ ಪಕ್ಷದ ನಾಯಕ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಲಿಲ್ಲ. “ಸತ್ಯವನ್ನು ಬಹಿರಂಗಪಡಿಸಲು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು” ಎಂದು ಬೊಮ್ಮಾಯಿ ಹೇಳಿದರೆ, ಬಿಜೆಪಿಯ ಉನ್ನತ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರು ಶಿವಮೂರ್ತಿ ಅವರ ವಿರುದ್ಧದ ಆರೋಪಗಳನ್ನು “ಸುಳ್ಳು” ಎಂದು ಸಮರ್ಥಿಸಿದರು. ಉದ್ಯೋಗದ ಭರವಸೆ ನೀಡಿ ನಂತರ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ  ದುಷ್ಟರಿಗೆ ಯಾವ ಪಕ್ಷಗಳೂ ಟಿಕೆಟ್ ಕೊಡಬಾರದು ಎಂಬ ನಡಾವಳಿಯನ್ನು ಅನುಸರಿಸಿದರೆ ಸಮಾಜಕ್ಕೆ ಎಷ್ಟೋ ಉಪಕಾರವಾಗುತ್ತದೆ.

ದೇಶ ಇಂದು ಫ್ಯಾಸಿಸ್ಟ್ ಶಕ್ತಿಗಳ ಪಾಲಾಗುತ್ತಿದೆ..

ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳುವಂತೆ ದೇಶಕ್ಕೆ ಒಬ್ಬ ಅಕ್ಷರಸ್ಥ ಪ್ರಧಾನಿಯ ಅಗತ್ಯವಿದೆ. ಶಿಕ್ಷಣ ಮನುಷ್ಯನನ್ನು ಮಾನವೀಯವಾಗಿಸುತ್ತದೆ.  ಜಗತ್ತಿನ ದೊಡ್ದ ದೊಡ್ದ ವಿಶ್ವವಿದ್ಯಾಲಯದಲ್ಲಿ ಓದಿ ಬೇರೆ ಬೇರೆ ದೇಶದ ಕಾನೂನು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅರಿತುಕೊಂಡು ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಆಫ್ರಿಕಾವಾಸದಿಂದ ಭಾರತದವರೆಗಿನ ಬದುಕಿನಲ್ಲಿ ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡುಗಡೆಗೊಳಿಸಲು ಕೊನೆವರೆಗೂ ದುಡಿದಿದ್ದ ಮಹಾತ್ಮಾ ಗಾಂಧಿ, ದೀರ್ಘಕಾಲದ ಜೈಲುವಾಸದಲ್ಲಿ “ಡಿಸ್ಕವರಿ ಆಫ್ ಇಂಡಿಯಾ” ಬರೆದ ಪಂ.ಜವಾಹರ್ ಲಾಲ್ ನೆಹರೂ ಮತ್ತು ಲೋಹಿಯಾ ರಂಥ ಮಹಾನ್ ಜನನಾಯಕರನ್ನು ಕಂಡ ನಮ್ಮ ದೇಶ ಇಂದು ಫ್ಯಾಸಿಸ್ಟ್ ಶಕ್ತಿಗಳ ಪಾಲಾಗುತ್ತಿದೆ. ಅದು ಹಾಗಾಗಬಾರದು ಎನ್ನುವುದೇ ನಮ್ಮ ಮುಂದಿರುವ ಸವಾಲು.

ಈ ಎಲ್ಲ ಕಾರಣಕ್ಕಾಗಿ ಕರ್ನಾಟಕದ ಚುನಾವಣೆ ಜನರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕರ್ನಾಟಕದ ಫಲಿತಾಂಶ  ಮುಖ್ಯವಾದ ಬದಲಾವಣೆಯನ್ನು ತರಬಹುದು ಎಂದು ಕಾಯೋಣವೇ ?

ರೇಣುಕಾ ನಿಡಗುಂದಿ

ಧಾರವಾಡದವರಾದ ಇವರ ವಾಸ  ಈಗ ದೆಹಲಿಯಲ್ಲಿ. ಲೇಖಕರು, ಕವಿ, ಮಹಿಳಾಪರ ಚಿಂತಕರು.

ಇದನ್ನೂ ಓದಿ-https://peepalmedia.com/woman-need-to-vote-no-need-for-power/ http://ಮಹಿಳೆ | ಮತದಾನಕ್ಕೆ ಬೇಕೇಬೇಕು; ಅಧಿಕಾರಕ್ಕೆ ಬೇಕೆಂದಿಲ್ಲ!

Related Articles

ಇತ್ತೀಚಿನ ಸುದ್ದಿಗಳು