Tuesday, August 26, 2025

ಸತ್ಯ | ನ್ಯಾಯ |ಧರ್ಮ

ದಸರಾ ಉತ್ಸವದಲ್ಲಿ ರಾಜಕೀಯ ಹುನ್ನಾರಗಳು..

“ಬಾನು‌ ಮುಷ್ತಾಕ್ ಅವರ ಆಯ್ಕೆ  ಸರಿಯಾದದ್ದು ಕೂಡಾ.. ಇಲ್ಲಿ ಜಾತಿ ಧರ್ಮಗಳ ಪ್ರಶ್ನೆ ಇಲ್ಲ ಇರಬಾರದು. ಚಾಮುಂಡೇಶ್ವರಿಯ ಅಥವಾ ನಾಡದೇವತೆಯ ಪೂಜೆ ನಡೆಯುವಾಗ ಅವರು ಗೌರವದಿಂದ ಅಲ್ಲಿ ಉಪಸ್ಥಿತರಿರುತ್ತಾರೆ..” ಚಿಂತಕರಾದ ಪ್ರಸಾದ್ ರಕ್ಷೀದಿ ಅವರ ಬರಹದಲ್ಲಿ

ದಸರಾ ಉತ್ಸವ ಒಂದು ನಾಡ ಹಬ್ಬ ಅಂದರೆ ಅಧಿಕೃತವಾಗಿ ಈ ನಾಡು ಅಂದರೆ ರಾಜ್ಯ ಆಚರಿಸುತ್ತಿರುವ ಸಾಹಿತ್ಯ ಸಮ್ನೇಳನಗಳು, ಸಾಂಸ್ಕೃತಿಕ ಉತ್ಸವಗಳು ( ಉದಾ: ಹಂಪಿ ಉತ್ಸವ ಹೊಯ್ಸಳ ಉತ್ಸವಗಳ ರೀತಿಯವು) ಅಥವಾ ಪ್ರಭುತ್ವ ಸಂಘಟಿಸುವ ಸಮಾರಂಭಗಳ ರೀತಿಯವು.
ಇವೆಲ್ಲವೂ ಈ ನಾಡಿನ‌ ಎಲ್ಲಾ ಜನರಿಗೂ ಸಂಬಂಧಿಸಿದವು. ಇವುಗಳಲ್ಲಿ ಜಾತಿ ಧರ್ಮದ ಪ್ರಶ್ನೆ ಇಲ್ಲ.

ಆದರೆ ಈ ಕಾರ್ಯಕ್ರಮ ಪ್ರಾರಂಭದಲ್ಲಿ ಕೆಲವರು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಉದಾಹರಣೆಗೆ ನಮ್ಮ ಹೆಚ್ಚಿನ ಸಾಹಿತ್ಯ ಸಮ್ಮೇಳನದ ಮೆರವಣಿಗೆಗಳು ಆಯಾ ಊರಿನ ಊರದೇವ – ದೇವತೆಯ‌ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ಎಷ್ಟೋ ಸಾಹಿತ್ಯ ಸಮ್ಮೇಳನಗಳು ದೇವಸ್ಥಾನಗಳಲ್ಲೇ ನಡೆದಿವೆ ನಡೆಯುತ್ತಿವೆ.

ಅಲ್ಲಿ ಎಲ್ಲಾ ಧರ್ಮೀಯರೂ ಭಾಗವಹಿಸುತ್ತಾರೆ. ಸಾಹಿತ್ಯ  ಮುಸ್ಲಿಂ ಅಥವಾ ಕ್ರೈಸ್ತ ಸಾಹಿತಿಗಳು ಅಧ್ಯಕ್ಷರಾಗಿದ್ದ ಹಲವು ಸಾಹಿತ್ಯ ಸಮ್ಮೇಳನಗಳ ಮೆರವಣಿಗೆಗಳೂ  ಊರ ದೇವತೆಗಳ ಪೂಜೆ ಯಿಂದಲೇ ಪ್ರಾರಂಭವಾಗುತ್ತವೆ.. ಮತ್ತು ‌ಅವರು‌ ಅಲ್ಲಿ  ಗೌರವದಿಂದಲೇ ಉಪಸ್ಥಿತರಾಗಿ ಇರುತ್ತಾರೆ.

ಹಾಗೆಯೇ  ಸಭೆ ಸಮಾರಂಭಗಳಲ್ಲಿ ದೀಪಬೆಳಗುವ ಮೂಲಕ ಶ್ಲೋಕ  ವಚನಗಳನ್ನು ‌ಹೇಳುವ ಮೂಲಕ ಗಿಡಕ್ಕೆ ನೀರೆರೆಯುವ ಮೂಲಕ‌ ಉಧ್ಘಾಟಿಸುವ ಪದ್ದತಿ ಇದೆ. ಇವೆಲ್ಲವನ್ನೂ ಜನರು ಒಂದು ಧರ್ಮದ ಆಚರಣೆ ಎಂದು ಆಕ್ಷೇಪಿಸುವುದಿಲ್ಲ.

ನಾನು ಹಲವು ಕಡೆಗಳಲ್ಲಿ ಮದರಸಾಗಳಲ್ಲಿ ಸ್ವಾತಂತ್ರ್ಯೋತ್ಸವಗಳಲ್ಲಿ ಭಾಗವಹಿಸುತ್ತೇನೆ. ಮದರಸಾದಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ ಕೂಡಾ ಭಾಗವಹಿಸಿದ್ಣೇನೆ ಆಗ ಅವರು ಪ್ರಾರ್ಥನೆ ಯ ನಂತರ  ಭಾರತದ ಧ್ವಜಾರೋಹಣ ಮಾಡುತ್ತಾರೆ. ನಾನೇನು ಅವರೊಂದಿಗೆ ನಮಾಜ್ ಮಾಡುವುದಿಲ್ಲ ಆದರೆ ಗೌರವದಿಂದ ಅಲ್ಲಿ ಅವರೊಂದಿಗೆ ಇರುತ್ತೇನೆ.

ಇದು ಸರಿಯಾದ ಕ್ರಮ ಎಂದು ನನ್ನ ಭಾವನೆ..
ಹಾಗೆಯೇ ಈಗ ದಸರಾ ಉತ್ಸವ ಉಧ್ಘಾಟನೆಗೆ ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದೆ.

ದಸರಾ ನಾಡಹಬ್ಬ ಸರ್ಕಾರವೇ ನಡೆಸುವ ಅಧಿಕೃತ ನಾಡ ಹಬ್ಬ, ಈ ನಾಡಿನ ಎಲ್ಲ‌ಜನರಿಗೆ ಸೇರಿದ್ದು.

ಬಾನು‌ ಮುಷ್ತಾಕ್ ಅವರ ಆಯ್ಕೆ  ಸರಿಯಾದದ್ದು ಕೂಡಾ.. ಇಲ್ಲಿ ಜಾತಿ ಧರ್ಮಗಳ ಪ್ರಶ್ನೆ ಇಲ್ಲ ಇರಬಾರದು..
ಹೌದು ಚಾಮುಂಡೇಶ್ವರಿ ಯ ಅಥವಾ ನಾಡದೇವತೆಯ ಪೂಜೆ ನಡೆಯುವಾಗ ಅವರು ಗೌರವದಿಂದ ಅಲ್ಲಿ ಉಪಸ್ಥಿತರಿರುತ್ತಾರೆ.

ಈಗಾಗಲೇ ಅವರು‌ ಕೊಟ್ಟ ಬಾಗಿನವನ್ನು ಗೌರವದಿಂದ ಸ್ವೀಕರಿದ್ದಾರೆ..
ಅವರು ದೇವರಿಗೆ‌ಕೈ‌ಮುಗಿಯುತ್ತಾರೋ ಪೂಜೆ ಮಾಡುತ್ತಾರೋ‌ ಎನ್ನುವುದು ಅಸಂಬದ್ದ.

ಪೂಜೆ ಮಾಡುವವರೂ, ಮಾಡದವರೂ.. ದೇವರನ್ನು ‌ನಂಬುವವರೂ ನಂಬದವರೂ ಈ ದೇಶದ ಪ್ರಜೆಗಳೇ.

ಇನ್ನು ಬಾನು‌ ಅವರು ಎರಡು ವರ್ಷದ ಹಿಂದೆ‌‌ ಬೇರೆಯೇ‌‌ ಸಂದರ್ಭದಲ್ಲಿ ಆಡಿದ‌ ಮಾತಿನ‌ ವಿಡಿಯೋ್ ತುಣುಕನ್ನು ನೋಡಿ ಕೂಗಾಡುವವರು  ಪೂರ್ಣ ವಿಡಿಯೋ ನೋಡಿ, ಅವರು ಯಾವ ಸಂದರ್ಭದಲ್ಲಿ ಮತ್ತು ಯಾವ context ನಲ್ಲಿ ಅದನ್ನು ಹೇಳಿದ್ದಾರೆ ಎಂದು ತಿಳಿಯುತ್ತದೆ.

ಕನ್ನಡ ಭಾಷೆಗೆ ಭುವನೇಶ್ವರಿ ಯ ರೂಪ ಕೊಟ್ಟಿರುವ ಬಗ್ಗೆ, ಈ ನಾಡಿನ‌ ಅನೇಕರು ಭಿನ್ನಾಭಿಪ್ರಾಯ ‌ವ್ಯಕ್ತಪಡಿಸಿದ್ದಾರೆ. ಅದು ಅವರವರ ಅಭಿಪ್ರಾಯ. ಮೊದಲು ಇದು ಮಹಾರಾಜ ರ ಉತ್ಸವ. ನಂತರದಲ್ಲಿ ನಾಡ ದೇವಿಯ ಮೆರವಣಿಗೆ ಯಾದದ್ದು.

ಇದು ಪ್ರಜಾಪ್ರಭುತ್ವದ ಆಶಯದಂತೆ ಆಗಿದೆ.ಈಗ ಕನ್ನಡ ಭುವನೇಶ್ವರಿ ಕದಂಬರ ಕಾಲದ್ದು ಎನ್ನುತ್ತಾರೆ ಇರಲಿ, ಆದರೆ ಎಲ್ಲವನ್ನೂ ಗತ ಚರಿತ್ರೆಗೆ ತಗಲುಹಾಕುವುದು ಅವರ ಸಮಸ್ಯೆ ಜನರದ್ದಲ್ಲ. ಹಾಗೆ ನೋಡಿದರೆ  ಕನ್ನಡವನ್ನು ಅಧಿಕೃತ ‌ಆಡಳಿತ ಭಾಷೆಯನ್ನಾಗಿಸಿದವರು ಹೊಯ್ಸಳರು. ಹೊಯ್ಸಳ ಕುಲದೇವತೆಯನ್ನು ಮೆರವಣಿಗೆ ಮಾಡಿ ಎನ್ನಬಹುದು ಇದಕ್ಕೆ ಕೊನೆ ಮೊದಲಿಲ್ಲ.

ಇನ್ನು ಬಾನು ಚಾಮುಂಡಿ ಬೆಟ್ಟಕ್ಕೆ ಬರಬಾರದು. ಇತ್ಯಾದಿ ಇತ್ಯಾದಿ ಕಿರುಚಾಡುವವರಿಗೆ ಉತ್ತರಿಸುವ ಅಗತ್ಯ ಇಲ್ಲ. ಇದು ಅವರ ಮಾನಸಿಕ ಖಾಯಿಲೆ ಮತ್ತು ರಾಜಕೀಯ ಹುನ್ನಾರ..
ಅವರಿಗೆ ಅದರಿಂದಲೇ ಅನ್ನ…

ದಸರಾ ಒಂದು ನಾಡ ಹಬ್ಬ … ಅದು ಎಲ್ಲರದು..

ಪ್ರಸಾದ್‌ ರಕ್ಷಿದಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page