ಧರ್ಮಸ್ಥಳ ಹೆಗ್ಗಡೆ ಮತ್ತು ರಾಮಕೃಷ್ಣ ಹೆಗಡೆ ರಾಜಕೀಯ! ಶತಮಾನೋತ್ಸವ ಸಂದರ್ಭದಲ್ಲಿ ಉಳಿದವರು ಹೇಳದೇ ಬಿಟ್ಟಿದ್ದು!

“..ರಾಮಕೃಷ್ಣ ಹೆಗಡೆ ಮತ್ತು ಧರ್ಮಸ್ಥಳ ಹೆಗ್ಗಡೆ ಅಂದು ಜಂಟಿಯಾಗಿ ವಂಚನೆ ಮಾಡದೇ ಇದ್ದರೆ ಇಂದು ಕರ್ನಾಟಕದಲ್ಲಿ ಮುಸ್ಲಿಮರು ಮತ್ತು ದಲಿತರ ಪರಿಸ್ಥಿತಿಯೇ ಬೇರೆ ಇರುತ್ತಿತ್ತು..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಮಾಜಿ ಮುಖ್ಯಮಂತ್ರಿ, ರಾಜಕೀಯ ಧುರೀಣ ರಾಮಕೃಷ್ಣ ಹೆಗಡೆಯವರ ಶತಮಾನೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್–ಬಿಜೆಪಿಯಾದಿಯಾಗಿ ರಾಜಕೀಯ ನಾಯಕರು ಹೊಗಳುತ್ತಿದ್ದಾರೆ. ಪಕ್ಷಭೇದ ಇಲ್ಲದೇ ಹೊಗಳುವುದನ್ನು ಕಂಡರೆ, ‘ರಾಮಕೃಷ್ಣ ಹೆಗಡೆ ಅಜಾತಶತ್ರು’ ಎಂದು ರಾಜಕೀಯ ವಿದ್ಯಾರ್ಥಿಗಳಾದ ನಾವುಗಳು ಅಂದುಕೊಳ್ಳಬೇಕು. ಕಾಂಗ್ರೆಸ್​ ರಾಜಕಾರಣಿಗಳು ಮಾತ್ರವಲ್ಲ, ಕಟ್ಟರ್ ಬಲಪಂಥೀಯರು ಮತ್ತು ಕೆಲ ಪ್ರಗತಿಪರರೂ ರಾಮಕೃಷ್ಣ ಹೆಗಡೆಯವರ ಗುಣಗಾನ ಮಾಡುತ್ತಿದ್ದಾರೆ.

ರಾಮಕೃಷ್ಣ ಹೆಗಡೆ ಮತ್ತು ಧರ್ಮಸ್ಥಳ ಹೆಗ್ಗಡೆ ಅಂದು ಜಂಟಿಯಾಗಿ ವಂಚನೆ ಮಾಡದೇ ಇದ್ದರೆ ಇಂದು ಕರ್ನಾಟಕದಲ್ಲಿ ಮುಸ್ಲಿಮರು ಮತ್ತು ದಲಿತರ ಪರಿಸ್ಥಿತಿಯೇ ಬೇರೆ ಇರುತ್ತಿತ್ತು.
1983ರಲ್ಲಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರುವ ಫಲಿತಾಂಶ ಬಂದಿತ್ತು. ಆ ಸಂದರ್ಭದಲ್ಲಿ ನಜೀರ್ ಸಾಬ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆಗಳು ಮುನ್ನೆಲೆಗೆ ಬಂದವು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಜೀರ್ ಸಾಬ್ ಆಗ ಕರ್ನಾಟಕದ ಪ್ರಗತಿಪರ ನಿಲುವಿನ, ಅಭಿವೃದ್ಧಿಯ ಹರಿಕಾರ, ಬಡವರು, ದಲಿತರ ಕಾಳಜಿಯುಳ್ಳ ರಾಜಕಾರಣಿಯಾಗಿ ಪ್ರಸಿದ್ಧಿಗೆ ಬಂದಿದ್ದರು.

ನಜೀರ್ ಸಾಬ್ ಅಲ್ಲದೇ ಇದ್ದರೆ ದಲಿತ ಸಮುದಾಯದಿಂದ ಬಂದ ರಾಚಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಚರ್ಚೆ ಶುರುವಾಗಿತ್ತು. ಎರಡರಲ್ಲಿ ಒಂದು ಘಟಿಸಿದ್ದರೂ ಕರ್ನಾಟಕದಲ್ಲಿ ದಲಿತ–ಮುಸ್ಲಿಂ ರಾಜಕೀಯದ ಭವಿಷ್ಯವೇ ಬದಲಾಗುತ್ತಿತ್ತು. ಈ ಬಗ್ಗೆ ದೂರದೃಷ್ಟಿ ಇಟ್ಟುಕೊಂಡೇ ಈ ಪ್ರಸ್ತಾಪವನ್ನು ಮುಂದಿಟ್ಟವರು ಪಿ. ಲಂಕೇಶ್!

ವಿಶೇಷ ಎಂದರೆ, ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಶಾಸಕಾಂಗ ಸಭೆಯಲ್ಲಿ ಶಾಸಕರೇ ಅಲ್ಲದಿದ್ದ ಪತ್ರಕರ್ತ ಪಿ. ಲಂಕೇಶ್ ಉಪಸ್ಥಿತರಿದ್ದರು. ಪಿ. ಲಂಕೇಶ್ ಅವರು ನಜೀರ್ ಸಾಬ್ ಮುಖ್ಯಮಂತ್ರಿಯಾಗಬೇಕು ಅಥವಾ ರಾಚಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸುತ್ತಾರೆ. ಶಾಸಕಾಂಗ ಸಭೆಯು ನಜೀರ್ ಸಾಬ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುತ್ತದೆ.

ಆದರೆ, ರಾಮಕೃಷ್ಣ ಹೆಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರ ಸಹಾಯ ಪಡೆದು, ಅಟಲ್ ಬಿಹಾರಿ ವಾಜಪೇಯಿಯವರ ಸಹಾಯ ಪಡೆದು ನಜೀರ್ ಸಾಬ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿ ತಾವು ಮುಖ್ಯಮಂತ್ರಿಯಾದರು. ಇದನ್ನು ಲಂಕೇಶ್​ ಜೊತೆ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿಯವರು ಅಧಿಕೃತವಾಗಿ ವಿವರಿಸುತ್ತಾರೆ.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ನೀಡಿದ ಈ ಅರಿವಿನ ಬಳಿಕ ನಾನು ರಾಮಕೃಷ್ಣ ಹೆಗಡೆಯವರ ಸರ್ಕಾರದ ಅವಧಿಯಲ್ಲಿ ಧರ್ಮಸ್ಥಳ ಪರ ತೆಗೆದುಕೊಂಡ ಆಡಳಿತಾತ್ಮಕ ನಿರ್ಧಾರಗಳ ದಾಖಲೆ ಪರಿಶೀಲನೆ ನಡೆಸಿದೆ. ಆಗ ಹಲವು ವಿಷಯಗಳು ಬೆಳಕಿಗೆ ಬಂದವು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆಂದೇ 31.03.1985ರಲ್ಲಿ ಬೃಹತ್ ನೀರು ಸರಬರಾಜು ಯೋಜನೆಯನ್ನು ರಾಮಕೃಷ್ಣ ಹೆಗಡೆ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿತು. (ಆಧಾರ: ವಿಧಾನಸಭೆ ದಾಖಲೆ) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಯಾತ್ರಿಗಳು ಬರುವಂತೆ ಮಾಡಲು ಉತ್ತರ ಕರ್ನಾಟಕ ಭಾಗದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಇದೇ ಅವಧಿಯಲ್ಲಿ ಹೊರಡಿಸಲಾಯಿತು. ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸುಸ್ಥಿರಗೊಳಿಸಲಾಯಿತು. ಆ ಬಳಿಕ ಯಾತ್ರಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಧರ್ಮಸ್ಥಳದಲ್ಲಿ ಹೊರಠಾಣೆ, ಬಸ್ ನಿಲ್ದಾಣ, ಶೌಚಾಲಯ, ಸಮರ್ಪಕ ಒಳಚರಂಡಿ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಕಲ್ಪಿಸಿತು. (ಆಧಾರ: 1985ರಿಂದ 1988ರವರೆಗಿನ ಗ್ರಾಮೀಣಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ ದಾಖಲೆಗಳು). ಹೀಗೆ ಸರ್ಕಾರದ ಹಣದಲ್ಲಿ ಧರ್ಮಸ್ಥಳವನ್ನೂ ಅದರ ಸುತ್ತಮುತ್ತಲ ಪ್ರದೇಶವನ್ನು ಅಚ್ಚುಕಟ್ಟಾಗಿ ಸುಸಜ್ಜಿತಗೊಳಿಸಿ, ಈ ಒಪ್ಪಓರಣ, ಶುಚಿತ್ವದ ಎಲ್ಲಾ ಕ್ರೆಡಿಟ್ ಅನ್ನು ಜನ ಧರ್ಮಾಧಿಕಾರಿಗಳಿಗೆ ಕೊಡಲಾರಂಭಿಸಿದರು.

“ಹೆಗ್ಗಡೆಯವರು ಇರುವುದರಿಂದಾಗಿ ಧರ್ಮಸ್ಥಳದಲ್ಲಿ ಇಷ್ಟೊಂದು ಶುಚಿತ್ವ, ಅಚ್ಚುಕಟ್ಟುತನ ಇದೆ. ಈ ದೇವಸ್ಥಾನವೇನಾದರೂ ಸರ್ಕಾರದ ವಶಕ್ಕೆ ಹೋದರೆ ಪರಿಸರ ಇಷ್ಟು ಶುಚಿತ್ವ ಇರಲು ಸಾಧ್ಯವಿಲ್ಲ” ಎಂದು ಹಲವು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ, ಧರ್ಮಸ್ಥಳದ ಸುತ್ತಮುತ್ತಲಿನ ಒಳಚರಂಡಿ ವ್ಯವಸ್ಥೆಯಿಂದ ಹಿಡಿದು ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ 1980ರ ದಶಕದಲ್ಲೇ ರಾಜ್ಯ ಸರ್ಕಾರದ ಹಣ ಮತ್ತು ಆಡಳಿತಾತ್ಮಕ ನಿರ್ಧಾರವು ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ದಾಖಲೆಗಳು ತೋರಿಸುತ್ತವೆ.

22.12.1986ರಂದು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ಹೋದ ಕಮ್ಯೂನಿಸ್ಟ್ ಲೀಡರ್ ಎ.ಕೆ. ದೇವಾನಂದರ 19 ವರ್ಷದ ಮಗಳು ಪದ್ಮಲತಾ ಕಾಣೆಯಾಗುತ್ತಾರೆ. ಎ.ಕೆ. ದೇವಾನಂದರು ಧರ್ಮಸ್ಥಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸುತ್ತಾರೆ. ಆಗಲೂ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರವಿತ್ತು. ಆ ಸಂದರ್ಭದಲ್ಲೂ ಎ.ಕೆ. ದೇವಾನಂದರಿಗೆ ವ್ಯಕ್ತಿಯೊಬ್ಬ ಸಂದೇಶ ತಲುಪಿಸುತ್ತಾನೆ. ‘ಧಣಿಗಳು ಹೇಳಿದ್ದಾರೆ. ಕಂಪ್ಲೇಂಟಿನಿಂದ ಏನೂ ಆಗಲ್ಲ. ನಾಳೆಯವರೆಗೆ ಟೈಮಿದೆ. ನಾಮಪತ್ರ ವಾಪಸ್ ಪಡೆಯಲು ನಾಳೆ ಕಡೆಯ ದಿನ. ನಾಮಪತ್ರ ವಾಪಸ್ ಪಡೆದರೆ ಮಗಳು ಸುರಕ್ಷಿತವಾಗಿ ಬರುತ್ತಾಳೆ!’
ಎ.ಕೆ. ದೇವಾನಂದರು ಈ ಮಾಹಿತಿಯನ್ನೂ ಪೊಲೀಸರಿಗೆ ನೀಡಿದರೇ ವಿನಹ, ಯಾವ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲಿಲ್ಲ. ಇದಾಗಿ ಒಂದೆರಡು ದಿನಗಳಲ್ಲಿ ಎ.ಕೆ. ದೇವಾನಂದರ ಮಗಳು ಪದ್ಮಲತಾರ ಶವ ನೇತ್ರಾವತಿ ನದಿಯಲ್ಲಿ ತೇಲುತ್ತಿರುತ್ತದೆ. ವಾಚು ಮತ್ತು ವಸ್ತ್ರದ ಆಧಾರದಲ್ಲಿ ಶವ ಪದ್ಮಲತಾರದ್ದು ಎಂದು ಗುರುತಿಸಲಾಯಿತು. (ಆಧಾರ: ದಿವಂಗತ ಎ.ಕೆ. ದೇವಾನಂದರ ವಿಡಿಯೋ ಹೇಳಿಕೆ)

ಕಮ್ಯೂನಿಷ್ಟರು ದೊಡ್ಡ ಮಟ್ಟದಲ್ಲಿ ಇದರ ವಿರುದ್ಧ ಚಳವಳಿ ನಡೆಸುತ್ತಾರೆ. ಪೊಲೀಸರು ಮೊತ್ತಮೊದಲ ಬಾರಿಗೆ ನೇತ್ರಾವತಿ ನದಿಯಲ್ಲಿ ಸಿಕ್ಕ ಶವ ಸಂಬಂಧ ‘ಕೊಲೆ ಪ್ರಕರಣ’ ದಾಖಲಿಸುತ್ತಾರೆ. ಧರ್ಮಸ್ಥಳದ ಇತಿಹಾಸದಲ್ಲೇ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸಿಕ್ಕ ಶವ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವುದು ಪದ್ಮಲತಾ ಪ್ರಕರಣದಲ್ಲೇ ಮೊದಲನೆಯದ್ದು!
ಇಷ್ಟಕ್ಕೆ ಕಮ್ಯೂನಿಷ್ಟರು ಸುಮ್ಮನಾಗದೇ ಚಳವಳಿಯನ್ನು ತೀವ್ರಗೊಳಿಸುತ್ತಾರೆ. ಸಾಮಾಜಿಕ ಜಾಲತಾಣ ಬಿಡಿ, ಕನಿಷ್ಠ ಫೋನ್, ಟಿವಿ, ಸರಿಯಾದ ವಿದ್ಯುತ್ ಇಲ್ಲದ, ಹಳ್ಳಿಗಳಿಗೆ ಪತ್ರಿಕೆಯೂ ಬಾರದ ದಿನಗಳಲ್ಲೂ ಕಮ್ಯೂನಿಷ್ಟರು ರಾಜ್ಯ ಸರ್ಕಾರವನ್ನೂ, ಧಣಿಗಳ ಸಾಮ್ರಾಜ್ಯವನ್ನೂ ನಡುಗಿಸುತ್ತಾರೆ.

ಕಮ್ಯೂನಿಷ್ಟರ ಹೋರಾಟಕ್ಕೆ ಮಣಿದು ಪದ್ಮಲತಾ ಪ್ರಕರಣವನ್ನು ಸರ್ಕಾರ ‘ಸಿಒಡಿ’ಗೆ ವಹಿಸಿತ್ತು. ಸಿಒಡಿಯ ದಕ್ಷ, ಪ್ರಾಮಾಣಿಕ ಇನ್ಸ್‌ಪೆಕ್ಟರ್ ಎಂದು ಖ್ಯಾತರಾಗಿದ್ದ ಜಗನ್ನಾಥ ರೈಯವರು 27.03.1987ರಂದು ತನಿಖೆ ಪ್ರಾರಂಭಿಸಿದರು.
ಪದ್ಮಲತಾ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಒಡಿ ಇನ್ಸ್‌ಪೆಕ್ಟರ್ ಜಗನ್ನಾಥ್ ರೈಗಳು ತನಿಖೆ ಪೂರ್ಣಗೊಳಿಸಿ, ಇನ್ನೇನು ಒಂದೆರಡು ದಿನಗಳಲ್ಲಿ ಪ್ರಭಾವಿ ಕೊಲೆ ಆರೋಪಿಗಳನ್ನು ಸಾಕ್ಷ್ಯ ಸಮೇತ ಬಂಧಿಸಲು ಸಿದ್ಧತೆ ನಡೆಸುತ್ತಿದ್ದರು. ಅದಕ್ಕಾಗಿ ಹೆಚ್ಚಿನ ಪೊಲೀಸ್ ಭದ್ರತೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು.
ಅಷ್ಟರಲ್ಲಿ ಜಗನ್ನಾಥ್ ರೈಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು. ಇದೆಲ್ಲಾ ಘಟನೆಗಳು 21.01.1988ರ ವಿಧಾನಸಭೆ ಅಧಿವೇಶನದ ದಾಖಲೆಗಳಲ್ಲಿ ದಾಖಲಾಗಿದೆ. ಅದರ ಯಥಾವತ್ತು ಇಲ್ಲಿದೆ:

ದಿನಾಂಕ 21.01.1988ರ ವಿಧಾನಸಭೆ ಅಧಿವೇಶನ ಕಲಾಪ
ವಿಷಯ: ಉಜಿರೆ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾಳ ಸಾವಿನ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು.

ಕೆ. ವಸಂತ ಬಂಗೇರ (ಬೆಳ್ತಂಗಡಿ ಶಾಸಕರು):
ಮಾನ್ಯ ಅಧ್ಯಕ್ಷರೇ, ಕೆಲವು ಸಮಯದ ಹಿಂದೆ ನನ್ನ ಕ್ಷೇತ್ರವಾದ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ಇಲ್ಲಿಯ ವಿದ್ಯಾರ್ಥಿನಿಯಾದ ಕುಮಾರಿ ಪದ್ಮಲತಾ ಇವಳ ಸಾವಿನ ಬಗ್ಗೆ ಸಿಓಡಿ ತನಿಖೆ ನಡೆಸಬೇಕೆಂದು ವಿಧಾನಸಭೆಯಲ್ಲಿ ಒತ್ತಾಯಪಡಿಸಿದಂತೆ, ಸರ್ಕಾರ ಸಿಓಡಿ ತನಿಖೆಗೆ ಆಜ್ಞಾಪಿಸಿತ್ತು.

ಸಿಒಡಿ ಸರ್ಕಲ್ ಇನ್ಸ್‌ಪೆಕ್ಟರ್ ಜಗನ್ನಾಥ ರೈ ಇವರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಯಿತು. ಅವರು ತನಿಖೆ ನಡೆಸಿ ಒಂದು ಹಂತದಲ್ಲಿ ತಪ್ಪಿತಸ್ಥರನ್ನು ಗೊತ್ತು ಮಾಡಿ ಬಂಧಿಸುವ ಹಂತದಲ್ಲಿರುವಾಗ, ಸಿಓಡಿ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಜಗನ್ನಾಥ ರೈಗಳು ತನಿಖೆಯನ್ನು ತಕ್ಷಣ ನಿಲ್ಲಿಸಿ ಫೈಲು ಸಮೇತ ಬೆಂಗಳೂರಿಗೆ ವಾಪಸು ಬರಬೇಕೆಂದು ಆಜ್ಞಾಪಿಸಲಾಯಿತು.

ಹಿರಿಯ ಅಧಿಕಾರಿಗಳ ಆದೇಶದಂತೆ ಇನ್ಸ್‌ಪೆಕ್ಟರ್ ಜಗನ್ನಾಥ ರೈಗಳು ತನಿಖೆಯನ್ನು ತಕ್ಷಣ ನಿಲ್ಲಿಸಿ ತನಿಖೆಯ ಫೈಲು ಸಮೇತ ವಾಪಸು ಬೆಂಗಳೂರಿಗೆ ಬಂದು ಫೈಲನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದರು. ಆ ಬಳಿಕ ಇನ್ಸ್‌ಪೆಕ್ಟರ್ ಜಗನ್ನಾಥ ರೈಗಳನ್ನು ರಜೆಯ ಮೇಲೆ ಮನೆಗೆ ಹೋಗುವಂತೆ ಆಜ್ಞೆಯಾಯಿತು. ಜಗನ್ನಾಥ ರೈಗಳು ರಜೆ ಹಾಕಿ ಮನೆಗೆ ಹೋದರು.
ಅದರ ನಂತರ ಸದರಿ ಕೇಸಿನ ತನಿಖೆಗಾಗಿ ಡಿವೈಎಸ್‌ಪಿ ಅವರನ್ನು ಕಳುಹಿಸಲಾಯಿತು. ಡಿವೈಎಸ್‌ಪಿಯವರು ಸಿಓಡಿ ಹಿರಿಯ ಅಧಿಕಾರಿಗಳ ಆದೇಶದಂತೆ ಬೆಳ್ತಂಗಡಿ ತಾಲೂಕಿಗೆ ಬಂದು ಒಂದು ತಿಂಗಳು ಕಾಲಹರಣ ಮಾಡಿ, ಯಾವುದೇ ರೀತಿಯ ತನಿಖೆ ನಡೆಸದೆ ‘ತಪ್ಪಿತಸ್ಥರ ಪತ್ತೆಯಾಗುವುದಿಲ್ಲ’ ಎಂದು ಕೇಸ್ ಫೈಲನ್ನು ಪೂರ್ಣಗೊಳಿಸಿ, ತನಿಖೆಗೆ ಇತಿಶ್ರೀ ಹಾಡಿ ಫೈಲನ್ನು ಕ್ಲೋಸ್ ಮಾಡಿದ್ದಾರೆ.

ಪದ್ಮಲತಾ ಮರ್ಡರ್ ಕೇಸ್‌ನಲ್ಲಿ ಶಾಮೀಲಾಗಿರುವ ಕೊಲೆಗಡುಕರನ್ನು ಸಿಓಡಿ ಅಧಿಕಾರಿಗಳು ಬಂಧಿಸಿ, ಕೇಸು ದಾಖಲಿಸುವ ಬದಲು ಅವರಿಗೆ ರಕ್ಷಣೆ ಕೊಟ್ಟು ಇನ್ನೂ ಹೆಚ್ಚು ಕೊಲೆ ಮಾಡುವಂತೆ ಪ್ರೋತ್ಸಾಹವನ್ನು ಕೊಟ್ಟರು.

ಅಲ್ಲದೇ, ಕಳೆದ ವಿಧಾನಸಭೆಯಲ್ಲಿ ಈ ವಿಚಾರದಲ್ಲಿ ಗೃಹ ಸಚಿವರಿಗೆ ಪ್ರಶ್ನೆ ಹಾಕಿದಾಗ ಅಧಿಕಾರಿಗಳಿಂದ ಬಂದ ಸತ್ಯಕ್ಕೆ ದೂರವಾದ ಉತ್ತರವನ್ನು ಗೃಹ ಸಚಿವರು ಸದನದಲ್ಲಿ ಓದಿದರು. ಪದ್ಮಲತಾ ಮರ್ಡರ್ ಕೇಸಿನಲ್ಲಿ ಶಾಮೀಲಾದ ಕೊಲೆಗಡುಕರನ್ನು ಪತ್ತೆಹಚ್ಚಲು ಜಗನ್ನಾಥ ರೈ, ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ (ಸಿಓಡಿ) ಇವರನ್ನೇ ತನಿಖೆ ಮಾಡಲು ಕಳುಹಿಸಿಕೊಡಬೇಕೆಂದು ಈ ಮೂಲಕ ವಿನಂತಿಸುತ್ತೇನೆ.
ಅಲ್ಲದೇ, ಕೊಲೆಗಡುಕರಿಗೆ ರಕ್ಷಣೆ ಒದಗಿಸಿ ಕೊಲೆಯನ್ನು ಮರೆ ಮಾಡಲು ಪ್ರಯತ್ನಿಸಿದ ಸಿಓಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ಇದು ವಸಂತ ಬಂಗೇರರು 1988ರಲ್ಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣ. ಇದೆಲ್ಲವೂ ನಡೆದಿದ್ದು ರಾಮಕೃಷ್ಣ ಹೆಗಡೆಯವರ ಆಡಳಿತಾವಧಿಯಲ್ಲಿ!

ಸೌಜನ್ಯ ಪ್ರಕರಣಕ್ಕೂ ಪದ್ಮಲತಾ ಪ್ರಕರಣಕ್ಕೂ ಒಂದು ಸಾಮ್ಯತೆ ಇದೆ. ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣದಲ್ಲಿ ಪ್ರಭಾವಿ ಧಣಿಗಳ ಕುಟುಂಬದ ವಿರುದ್ಧ ಆರೋಪ ಕೇಳಿ ಬಂತು. ಆಗ ಮೊದಲಾಗಿ ಸೌಜನ್ಯ ಪ್ರಕರಣದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು! ಹೆಗ್ಗಡೆಯವರು ಆಗಿನ ಗೃಹ ಸಚಿವರಾಗಿದ್ದ ಆರ್. ಅಶೋಕ್ ಅವರಿಗೇ ಖುದ್ದಾಗಿ ದೂರವಾಣಿ ಕರೆ ಮಾಡಿ ಮಾತನಾಡಿದ್ದರು!

ಪದ್ಮಲತಾ ಕೊಲೆ ಪ್ರಕರಣ ನಡೆದಾಗ ಧರ್ಮಸ್ಥಳದ ಪ್ರಭಾವಿ ಧಣಿಗಳ ವಿರುದ್ಧ ಆರೋಪ ಕೇಳಿ ಬಂದು ಭಾರೀ ಪ್ರತಿಭಟನೆಗಳು ನಡೆದವು. ಪದ್ಮಲತಾ ಡೆಡ್‌ಬಾಡಿ ಪತ್ತೆಯಾದಾಗಲೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತನಿಖೆ ನಡೆಸುವಂತೆ ಆಗಿನ ರಾಮಕೃಷ್ಣ ಹೆಗಡೆ ಸರ್ಕಾರವನ್ನು ಒತ್ತಾಯಿಸಿದ್ದರು. (ಆಧಾರ: 14 ಮೇ 1988ರ ವಿಧಾನಸಭೆ ದಾಖಲೆ).
ವಿಚಿತ್ರ ಎಂದರೆ, ಸೌಜನ್ಯ ಮತ್ತು ಪದ್ಮಲತಾ ಪ್ರಕರಣಗಳೆರಡರಲ್ಲೂ ಆರೋಪಿಗಳು ಪತ್ತೆಯಾಗಲಿಲ್ಲ.

ಮುಖ್ಯಮಂತ್ರಿಯಾಗಿ ಹೆಗಡೆಯವರ ಆಯ್ಕೆಯಲ್ಲಿ ಹೆಗ್ಗಡೆಯವರ ಪ್ರಭಾವ, ಹೆಗಡೆ ಸರ್ಕಾರದ ಅವಧಿಯಲ್ಲಿ ಧರ್ಮಸ್ಥಳಕ್ಕೆ ದೊರೆತ ಆಡಳಿತಾತ್ಮಕ ಆದ್ಯತೆಗಳು ಹಾಗೂ ಪದ್ಮಲತಾ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಕೇಳಿಬಂದ ಆರೋಪಗಳು, ಇವೆಲ್ಲವನ್ನು ಪ್ರತ್ಯೇಕ ಘಟನೆಗಳಾಗಿ ನೋಡುವ ಬದಲು, ರಾಮಕೃಷ್ಣ ಹೆಗಡೆ ಕಾಲದ ಕರ್ನಾಟಕದ ಅಧಿಕಾರ ಸಂಬಂಧಗಳ ಹಿನ್ನೆಲೆಯಲ್ಲಿ ಪರಿಶೀಲಿಸುವ ಅಗತ್ಯವಿದೆ. ದಲಿತ ಅಥವಾ ಮುಸ್ಲಿಂ ಮುಖ್ಯಮಂತ್ರಿಯ ಸಾಧ್ಯತೆಯನ್ನು ತಡೆದ ರಾಜಕೀಯದ ಆರೋಪದಿಂದ ಹಿಡಿದು, ಧರ್ಮಸ್ಥಳಕ್ಕೆ ಸರ್ಕಾರದ ಆಡಳಿತಾತ್ಮಕ ಬೆಂಬಲ, ಪದ್ಮಲತಾ ಪ್ರಕರಣದ ತನಿಖೆಯಲ್ಲಿನ ತಿರುವುಗಳು ಹಾಗೂ ನಂತರವೂ ಮುಂದುವರಿದ ಧರ್ಮಸ್ಥಳದ ರಾಜಕೀಯ ಪ್ರಭಾವದವರೆಗಿನ ಎಲ್ಲಾ ಪ್ರಶ್ನೆಗಳನ್ನೂ ‘ಇತಿಹಾಸದ ನ್ಯಾಯಾಲಯ’ದಲ್ಲಿ ಪಾಟಿ ಸವಾಲಿಗೆ ಗುರಿಪಡಿಸಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು