ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಇಂಡಿಯಾ ಎಂಬ ಭಾರತದಲ್ಲಿ ನಾಮ ಸಮರ

PPeepal Media

Peepal Media ರಾಜಕೀಯ

• 3 ನಿಮಿಷದ ಓದು

ಇಂಡಿಯಾ ಎಂಬ ಭಾರತದಲ್ಲಿ ನಾಮ ಸಮರ

ಇಂಡಿಯಾ ಮತ್ತು ಭಾರತ‌ ಪದಬಳಕೆಯ ನಡುವೆ ಏರ್ಪಟ್ಟಿರುವ ವಾಗ್ವಾದಗಳ ಹಿಂದೆ ಚುನಾವಣಾ ರಾಜಕಾರಣದ ಛಾಯೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಯ ಗಂಡಾಳ್ವಿಕೆಯ ಲಕ್ಷಣಗಳೇ ಬಹುಸಂಖ್ಯಾತವಾದಿ ಸಂಸದೀಯ ಬಹುಮತದ ಆಳ್ವಿಕೆಯನ್ನೂ ಆವರಿಸುವುದರಿಂದ, ಈ ಹೆಸರು ಬದಲಾವಣೆಯ ರಾಜಕಾರಣ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ- ನಾ.ದಿವಾಕರ, ಚಿಂತಕರು

ವ್ಯಕ್ತಿಗಳ, ಸ್ಥಾವರಗಳ ಅಥವಾ ಸ್ಥಳಗಳ ಹೆಸರು ಬದಲಾಯಿಸುವ ಒಂದು ಪರಂಪರೆಗೆ ಸುದೀರ್ಘ ಇತಿಹಾಸವೇ ಇದೆ. ಹಾಗೆಯೇ ಈ ನಾಮಕರಣ/ಮರುನಾಮಕರಣದ ಪ್ರವೃತ್ತಿಯ ಹಿಂದೆ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳೂ, ಊಳಿಗಮಾನ್ಯ ಪದ್ಧತಿಯ ಶತಮಾನಗಳ ಸಾಂಸ್ಕೃತಿಕ ಅಡಿಪಾಯವೂ ಇದೆ. ಸಾಮಾನ್ಯವಾಗಿ ಪಿತೃಪ್ರಧಾನತೆಯನ್ನು ಪೋಷಿಸಿಕೊಂಡು ಬರುವ ಯಾವುದೇ ಸಮಾಜದಲ್ಲಿ ಊಳಿಗಮಾನ್ಯದ ಯಜಮಾನಿಕೆಯ ಸಂಸ್ಕೃತಿಯೂ ಆಳವಾಗಿರುವುದರಿಂದ, ಸಮಾಜದ ಪ್ರಬಲ ವರ್ಗಗಳು ಅಥವಾ ಗುಂಪುಗಳು ತಮ್ಮ ವರ್ಗ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲೆಂದೇ ಸಾರ್ವಜನಿಕ ವಲಯದಲ್ಲಿ ಸ್ಥಾವರಗಳ/ಸ್ಥಳಗಳ ಅಥವಾ ಕೆಲವೊಮ್ಮೆ ಹೊಸದಾಗಿ ಉಗಮಿಸುವ ದೈವಗಳ ಹೆಸರುಗಳನ್ನೂ ತಮ್ಮ ಯಜಮಾನಿಕೆಯ ಒಂದು ಭಾಗವಾಗಿ ಸೂಚಿಸಲು ಮುಂದಾಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮತದ ಸರ್ಕಾರಗಳು ಇದಕ್ಕೆ ಹೊರತಾದುವಲ್ಲ. ಕಾಂಗ್ರೆಸ್‌ ಆಳ್ವಿಕೆಯಲ್ಲಿದ್ದ ಇದೇ ಪ್ರವೃತ್ತಿಯನ್ನು ಈಗ ಬಿಜೆಪಿ ಆಳ್ವಿಕೆಯಲ್ಲೂ ಕಾಣುತ್ತಿದ್ದೇವೆ.

ಇದೇ ಪ್ರವೃತ್ತಿ ಈಗ ದೇಶದ ಹೆಸರು ಬದಲಿಸುವ ಹಂತಕ್ಕೆ ಬಂದು ನಿಂತಿದೆ. ಬಿಜೆಪಿಯ ವಕ್ತಾರರು ಇಂಡಿಯಾ ಹೆಸರನ್ನು ಭಾರತ್‌ ಎಂದು ಬದಲಾಯಿಸುವ ಇರಾದೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಈಗ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ವಿವಿಧ ದೇಶಗಳ ಗಣ್ಯರನ್ನು ಔತಣಕೂಟಕ್ಕೆ ಆಹ್ವಾನಿಸುವ ಪತ್ರಿಕೆಯಲ್ಲಿ “ President of Bharat” ಎಂದು ನಮೂದಿಸಿರುವುದು ಈ ಚರ್ಚೆಗಳನ್ನು ಹುಟ್ಟುಹಾಕಿದೆ. ಇಂಗ್ಲಿಷ್‌ ಹೊರತು ಇತರ ಭಾರತೀಯ ಭಾಷೆಗಳಲ್ಲಿ ಭಾರತದ ರಾಷ್ಟ್ರಪತಿ ಎಂದೇ ಸಂಬೋಧಿಸಲಾಗುವುದಾದರೂ ಆಂಗ್ಲ ಭಾಷೆಯಲ್ಲಿ ಅಂತಾರಾಷ್ಟ್ರೀಯ ಪತ್ರವ್ಯವಹಾರಗಳಲ್ಲಿ ಇಂಡಿಯಾ ಎಂದೇ ಬಳಕೆಯಾಗುವುದು ವಾಡಿಕೆಯಾಗಿದೆ. ಈ ವಿವಾದದ ಕಾವು ಏರುತ್ತಲೇ ಬಿಜೆಪಿಯ ಕೆಲವು ನಾಯಕರ ಅತಿರೇಕದ ಉತ್ಸಾಹ Government of India ಎನ್ನುವುದನ್ನು Government of Bharat ಎಂದು ಬದಲಾಯಿಸುವ ಹಂತಕ್ಕೆ ತಲುಪಿದೆ. ಅತ್ಯುತ್ಸಾಹ ಮತ್ತು ಅತಿರೇಕಗಳ ನಡುವೆಯೇ ರಾಜಕೀಯ ಭಿನ್ನಾಭಿಪ್ರಾಯಗಳೂ ತಲೆದೋರಿದ್ದು, ವಿರೋಧ ಪಕ್ಷಗಳ ಒಕ್ಕೂಟ INDIA ಗೆ ಪ್ರತಿಕ್ರಿಯೆಯಾಗಿ ಭಾರತ್‌ ಪದವನ್ನು ಮುನ್ನೆಲೆಗೆ ತರುತ್ತಿರುವ ಆರೋಪಗಳೂ ಕೇಳಿಬರುತ್ತಿವೆ.

ಅಧಿಕೃತ ಬಳಕೆಗೂ ಸಹ ಭಾರತದ ಸಂವಿಧಾನದಲ್ಲೇ Union of India Or Bharat ಎಂದು ಹೇಳಲಾಗಿದೆ. ಅಂದರೆ ಇಂಡಿಯಾದ ಒಕ್ಕೂಟ ಅಥವಾ ಭಾರತ ಎಂಬ ಪದವನ್ನು ಮುಕ್ತವಾಗಿ ಬಳಸುವ ವಿವೇಚನಾಧಿಕಾರವನ್ನು ಸಂವಿಧಾನವೇ ನಮಗೆ ನೀಡಿದೆ. ಆದರೆ ಅಧಿಕೃತ ದಾಖಲೆಗಳಲ್ಲಿ ಇಂಡಿಯಾ ಬಳಕೆಯಲ್ಲಿರಬೇಕಾಗುತ್ತದೆ. ಬ್ರಿಟೀಷ್‌ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಬ್ರಿಟೀಷ್‌ ಸಂಸತ್ತು ಅನುಮೋದಿಸಿದ್ದ Indian Independence Act 1947 ಅನ್ವಯ ಇಂಡಿಯಾ ಮತ್ತು ಪಾಕಿಸ್ತಾನ ಎಂದು ಎರಡು ಡೊಮಿನಿಯನ್‌ಗಳನ್ನು ಸೃಷ್ಟಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವತಂತ್ರ ಭಾರತವನ್ನು ಇಂಡಿಯಾ ಎಂದು ಕರೆಯುವುದಕ್ಕೆ ಮೊಹಮ್ಮದ್‌ ಅಲಿ ಜಿನ್ನಾ ನೇತೃತ್ವದ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಹಿಂದೂಸ್ತಾನ ಅಥವಾ ಭಾರತ್‌ ಎಂದು ಹೆಸರಿಡುವಂತೆ ಸೂಚಿಸಿತ್ತು. ಆದರೆ ಬ್ರಿಟೀಷ್‌ ಇಂಡಿಯಾಗೆ ಉತ್ತರಾಧಿಕಾರಿಯಾಗಿ ಭಾರತ ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವುದರಿಂದ ಅಂತಾರಾಷ್ಟ್ರೀಯ ಕಾನೂನುಗಳ ಅನ್ವಯ ತನ್ನ ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಇಂಡಿಯಾ ಎಂದು ಗುರುತಿಸಿಕೊಳ್ಳುವುದಾಗಿ ತೀರ್ಮಾನಿಸಿತ್ತು.

ಇತ್ತೀಚೆಗೆ ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ ಗ್ರೀಸ್‌ ದೇಶಕ್ಕೆ ಭೇಟಿ ನೀಡಿದ್ದಾಗಲೂ ಉಭಯ ದೇಶಗಳು ಸಹಿ ಮಾಡಿದ ಒಡಂಬಡಿಕೆಯನ್ನು “ India-Greece Joint Statement ”ಎಂದೇ ಗುರುತಿಸಲಾಗಿದೆ.  ಭಾರತದ ಪ್ರಧಾನಿ ಗ್ರೀಸ್‌ ಪ್ರಧಾನಿಯನ್ನು ಆಹ್ವಾನಿಸುವ ಪತ್ರದಲ್ಲೂ ಸಹ ಇಂಡಿಯಾಗೆ ಭೇಟಿ ನೀಡುವಂತೆಯೇ ನಮೂದಿಸಲಾಗಿದೆ. ವಿವಿಧ ದೇಶಗಳ ರಾಯಭಾರಿಗಳಿಗೆ ಭಾರತ ಸರ್ಕಾರದಿಂದ ನೀಡಲಾಗುವ ಸಿಂಹ ಲಾಂಛನದ ಅಡಿಯಲ್ಲಿ ಹಿಂದಿ ಭಾಷೆಯಲ್ಲಿ “ ರಾಷ್ಟ್ರಪತಿ ಭಾರತ್‌ ಗಣತಂತ್ರ” ಎಂದಿದ್ದರೆ, ಆಂಗ್ಲ ಭಾಷೆಯಲ್ಲಿ President- Republic Of India ಎಂದೇ ಹೇಳಲಾಗಿದೆ. ಅಂದರೆ ಭಾರತ ಸರ್ಕಾರದ ಎಲ್ಲ ವ್ಯವಹಾರಗಳಲ್ಲಿ ಆಂಗ್ಲಭಾಷೆಯ India ಗೆ ಸಂವಾದಿಯಾಗಿ ಭಾರತ ಎಂದು ಬಳಸಲಾಗುತ್ತಿದೆಯೇ ಹೊರತು ಅಧಿಕೃತ ದಾಖಲೆಗಳಲ್ಲಿ ಬದಲಾವಣೆಗಳಾಗಿಲ್ಲ.

ಭಾರತದ ಸಂವಿಧಾನದ ಆಂಗ್ಲ ಆವೃತ್ತಿಯ ಅನುಚ್ಛೇದ 1 (1) ರಲ್ಲಿ “ India̧  that is Bharat ̧  shall be a Union of States ” ಎಂದೇ ಹೇಳಲಾಗಿದೆ. ಸಂವಿಧಾನ ರಚನೆ ಮತ್ತು ವಿನ್ಯಾಸದಲ್ಲಿ ಪ್ರಥಮ ಆದ್ಯತೆಯನ್ನು ಇಂಡಿಯಾ ಎಂಬ ಪದಕ್ಕೇ ನೀಡಲಾಗಿದೆ. ಸಂವಿಧಾನದ ಹಿಂದಿ ಆವೃತ್ತಿಯಲ್ಲಿ “ ಭಾರತ್‌ ಅರ್ಥಾತ್‌ ಇಂಡಿಯಾ ರಾಜ್ಯೋಂ ಕಾ ಸಂಘ್‌ ಹೋಗಾ ” ಎಂದು ಉಲ್ಲೇಖವಾಗಿದೆ. ಇಲ್ಲಿ ಅರ್ಥಾತ್‌ ಎಂದರೆ ʼ ಅಂದರೆ ʼ ಎನ್ನುವ ಅರ್ಥ ಬರುತ್ತದೆ. ಹಿಂದಿ ಆವೃತ್ತಿಯಲ್ಲಿ ಭಾರತ್‌ ಎಂಬ ಪದಕ್ಕೆ ಪ್ರಾಶಸ್ತ್ಯ ನೀಡಲಾಗಿರುವುದು ವಾಸ್ತವ. ಈ ತರ್ಕದ ಹಿನ್ನೆಲೆಯಲ್ಲೇ ಭಾರತದಲ್ಲಿ ಆಂತರಿಕವಾಗಿ ಎಲ್ಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವ್ಯವಹಾರಗಳಲ್ಲೂ ಆಂಗ್ಲ ಭಾಷೆಯ India ಹಾಗೂ ಹಿಂದಿ ಅಥವಾ ಪ್ರಾದೇಶಿಕ ಭಾಷೆಯ ಭಾರತ ಪದವನ್ನು ಬಳಸಲಾಗುತ್ತಿದೆ. ಭಾರತದ ಗೆಜೆಟ್‌ ಸಹ “ Gezette of India ”ಎಂದಿದ್ದು ಹಿಂದಿ ಆವೃತ್ತಿಯಲ್ಲಿ “ ಭಾರತ್‌ ಕಾ ರಾಜಪತ್ರ ” ಎಂದಿದೆ.

ಈಗ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರವು ಭಾರತ ಎಂಬ ಹೆಸರನ್ನೇ ಅಧಿಕೃತವಾಗಿ ಬಳಸುವ ಇರಾದೆ ತೋರುತ್ತಿದೆ. ಜಿ-20 ಶಿಖರ ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ President of Bharat ಎಂದು ಬಳಸಿರುವುದು ಇದನ್ನೇ ಸೂಚಿಸುತ್ತದೆ. ಆದರೆ ಅಧಿಕೃತ ಹೆಸರನ್ನು ʼಇಂಡಿಯಾʼ ದಿಂದ ʼಭಾರತʼ ಎಂದು ಬದಲಾಯಿಸಬೇಕಾದರೆ ಸಂವಿಧಾನದ ಅನುಚ್ಛೇದ 1ರ ತಿದ್ದುಪಡಿ ಅವಶ್ಯವಾಗುತ್ತದೆ. ನಂತರ ಇಂಡಿಯಾ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ ಭಾರತ ಎಂದು ನಮೂದಿಸಬೇಕಾಗುತ್ತದೆ. ತತ್ಪರಿಣಾಮವಾಗಿ ಎಲ್ಲ ಅನುಚ್ಛೇದಗಳಲ್ಲೂ ಈ ಬದಲಾವಣೆ ಮಾಡಬೇಕಾಗುತ್ತದೆ. ಇದು ವಿದೇಶಗಳೊಡಗಿನ ವ್ಯವಹಾರಗಳಲ್ಲಿ ಮತ್ತು ದಾಖಲೆಗಳಲ್ಲೂ ಸಹ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ ಎಂದು ಪಿ.ಡಿ.ಟಿ. ಆಚಾರ್ಯ ಹೇಳುತ್ತಾರೆ.

ಈ ವಾಸ್ತವಗಳ ನಡುವೆಯೂ ಇಂಡಿಯಾ ಮತ್ತು ಭಾರತ‌ ಪದಬಳಕೆಯ ನಡುವೆ ಏರ್ಪಟ್ಟಿರುವ ವಾಗ್ವಾದಗಳ ಹಿಂದೆ ಚುನಾವಣಾ ರಾಜಕಾರಣದ ಛಾಯೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಯ ಗಂಡಾಳ್ವಿಕೆಯ ಲಕ್ಷಣಗಳೇ ಬಹುಸಂಖ್ಯಾತವಾದಿ ಸಂಸದೀಯ ಬಹುಮತದ ಆಳ್ವಿಕೆಯನ್ನೂ ಆವರಿಸುವುದರಿಂದ, ಈ ಹೆಸರು ಬದಲಾವಣೆಯ ರಾಜಕಾರಣ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ. ಸದ್ಯಕ್ಕೆ ಸಂವಿಧಾನವೇ ಹೇಳಿರುವಂತೆ “ಇಂಡಿಯಾ-ಅಂದರೆ ಭಾರತ” ಎಂಬ ಅಧಿಕೃತ ಮಾನ್ಯತೆ ಪಡೆದಿರುವ ಸಂಬೋಧನೆ ಮತ್ತು ಬಳಕೆಯೇ ಚಾಲ್ತಿಯಲ್ಲಿರುವಾಗ ಈಗ ಎದ್ದಿರುವ ವಾಗ್ಯುದ್ಧ ಅನಗತ್ಯ ಎಂದೇ ಹೇಳಬಹುದು.

ನಾ ದಿವಾಕರ

ಲೇಖಕರು ಮತ್ತು ಚಿಂತಕರು

ಇದನ್ನೂ ಓದಿ-ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು