ಕೆಪಿಎಸ್ಸಿ ಪರೀಕ್ಷೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ದೋಷಪೂರಿತ ನಿರ್ವಹಣೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮತ್ತೆ ಈ ಪರೀಕ್ಷೆಗೆ ಮಧ್ಯಪ್ರವೇಶಿಸಿ ಮರು ಪರೀಕ್ಷೆ ನಡೆಸಬೇಕು ಅಥವಾ ಈ ಹುದ್ದೆಗಳ ಅಧಿಸೂಚನೆಯನ್ನು ವಾಪಸು ಪಡೆದು, ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆ ಸದಸ್ಯರಾದ ರಮೇಶ್ ಬೆಲಂಕೊಂಡ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹಾಗೆಯೇ ಪರೀಕ್ಷೆಯಲ್ಲಿ ತೀವ್ರ ಗೊಂದಲ ಸೃಷ್ಟಿಸುವ ಕೆಪಿಎಸ್ಸಿಗೆ ತೀವ್ರ ಶಿಕ್ಷೆ ವಿಧಿಸುವಂತಹ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
2024ರಲ್ಲಿ, ಕರ್ನಾಟಕ ಸರ್ಕಾರ 384 ಗಜೆಟೆಡ್ ಪ್ರೊಬೆಷನರಿ ಕೆಎಎಸ್ ಅಧಿಕಾರಿಗಳ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿತು. ಸುಮಾರು 4.6 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರು. ಕೆಪಿಎಸ್ಸಿ ಆಗಸ್ಟ್ 2024ರಲ್ಲಿ ಪೂರ್ವಪರೀಕ್ಷೆ ನಡೆಸಿದಾಗ 2.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಪ್ರಶ್ನೆಗಳನ್ನ ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅಸಡ್ಡೆಯಿಂದ ಅನುವಾದ ಮಾಡಲಾಯಿತು.
ಒಂದು ವಿಶ್ಲೇಷಣೆಯ ಪ್ರಕಾರ, ಕನ್ನಡ ಪ್ರಶ್ನೆಪತ್ರಿಕೆಯಲ್ಲಿ 36 ದೊಡ್ಡ ತಪ್ಪುಗಳು ಮತ್ತು ಒಟ್ಟು 57 ದೋಷಗಳು ಇದ್ದವು. ಆದರೆ, ಇಂಗ್ಲಿಷ್ ಪ್ರಶ್ನೆಪತ್ರಿಕೆ ಸರಿಯಾಗಿತ್ತು. ವಿದ್ಯಾರ್ಥಿಗಳ ಭಾರಿ ಪ್ರತಿಭಟನೆಯ ನಂತರ, ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ಪುನಃ ಪರೀಕ್ಷೆ ನಡೆಸಲು ಆದೇಶಿಸಿತು.
ಕೆಪಿಎಸ್ಸಿ ಡಿಸೆಂಬರ್ 2024ರಲ್ಲಿ ಪುನಃ ಪರೀಕ್ಷೆ ನಡೆಸಿದಾಗ, 1.8 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದರು. ಆದರೆ, ಈ ಬಾರಿ ಕೂಡಾ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ 59 ದೊಡ್ಡ ತಪ್ಪುಗಳು ಮತ್ತು ಒಟ್ಟು 72 ದೋಷಗಳು ಕಂಡುಬಂದವು. ಇಂಗ್ಲಿಷ್ ಪ್ರಶ್ನೆಗಳು ಮತ್ತೆ ಸರಿಯಾಗಿಯೇ ಇತ್ತು. ಮತ್ತೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅಸಡ್ಡೆಯ ಅನುವಾದ ಮಾಡಲಾಗಿತ್ತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮತ್ತೆ ವಂಚನೆ ಮಾಡಲಾಗಿದೆ.
ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಗಳನ್ನ ಒಳಗೊಂಡಿದ್ದು, ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳಿವೆ. 120 ನಿಮಿಷಗಳಲ್ಲಿ 100 ಪ್ರಶ್ನೆಗಳಿಗೆ ಉತ್ತರಿಸಬೇಕು, ಅಂದರೆ ಪ್ರತಿ ಪ್ರಶ್ನೆಗೆ ಕೇವಲ 72 ಸೆಕೆಂಡುಗಳಷ್ಟೇ ಸಮಯ ಲಭ್ಯ.
ಈ ನಿರ್ಲಕ್ಷ್ಯದಿಂದ ಕೆಪಿಎಸ್ಸಿ ವಿರುದ್ಧ ಭಾರೀ ಕೋಪ ಮತ್ತು ಅಸಹನೆ ವ್ಯಕ್ತವಾಗುತ್ತಿದೆ. ಆದರೆ, ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಅಥವಾ ಸಾರ್ವಜನಿಕರಿಗೆ ಯಾವುದೇ ಉತ್ತರ ನೀಡದೆ, ಇಂತಹ ಕಳಪೆ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸಲು ಮುಂದಾಗಿದೆ. ಇದೇ ಕಾರಣಕ್ಕಾಗಿ ನಿರಂತರವಾಗಿ ಕೆಎಎಸ್ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ವಿಫಲವಾಗುವ ಮೂಲಕ, ಕೆಪಿಎಸ್ಸಿಯೇ ಈ ಪರೀಕ್ಷೆಯಲ್ಲಿ ಫೇಲ್ ಆಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೆಪಿಎಸ್ಸಿ ತನ್ನ ನೀತಿಯ ಮೂಲಕ ತನ್ನ ಅಪೇಕ್ಷಿತ ಮಟ್ಟಕ್ಕಿಂತ ಕೆಳಗಿಳಿದಿದೆ. ಕೆಪಿಎಸ್ಸಿ ಕರ್ನಾಟಕಕ್ಕೆ ಕೆಟ್ಟ ಹೆಸರು ತಂದಿದೆ. ಕೆಪಿಎಸ್ಸಿ ಕನ್ನಡವನ್ನು ಕರ್ನಾಟಕದ ಆಡಳಿತ ವ್ಯವಸ್ಥೆಯಿಂದ ಕೈಬಿಡಿಸಲು ಯತ್ನಿಸುತ್ತಿದೆಯೇ?
ಡಿಸೆಂಬರ್ 2024ರ ಪುನರ್ ಪರೀಕ್ಷೆಗೆ ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಈ ಸೂಚನೆಯನ್ನು ನೀಡಿತ್ತು:
“ಕನ್ನಡ ಪ್ರಶ್ನೆ ಅರ್ಥವಾಗದಿದ್ದರೆ, ಅದನ್ನು ಇಂಗ್ಲಿಷ್‌ನಲ್ಲಿ ಓದಿ, ನಂತರ ಉತ್ತರಿಸಿರಿ.” ಈ ಸೂಚನೆಯಿಂದಲೇ, ಕೆಪಿಎಸ್ಸಿ ಕನ್ನಡ ಪ್ರಶ್ನೆಗಳಲ್ಲಿ ದೋಷಗಳಿದ್ದುದನ್ನು ತಿಳಿದೂ ಕೂಡ, ನಿರ್ಲಕ್ಷ್ಯ ಮಾಡಿ ಮುಂದುವರಿದಿರುವುದು ಸ್ಪಷ್ಟವಾಗುತ್ತದೆ. ಇದು ಉದ್ದೇಶಪೂರ್ವಕ ಅನ್ಯಾಯ ಎನಿಸುತ್ತದೆ ಎಂದು ಡಾ.ರಮೇಶ್ ಬೆಲ್ಲಂಕೊಂಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ದಾರಿ:
ಕರ್ನಾಟಕ ಸರ್ಕಾರ ಮತ್ತೆ ಮಧ್ಯಪ್ರವೇಶಿಸಿ ಮರು ಪರೀಕ್ಷೆ ನಡೆಸಬೇಕು ಅಥವಾ ಈ ಹುದ್ದೆಗಳ ಅಧಿಸೂಚನೆಯನ್ನು ವಾಪಸು ಪಡೆದು, ಹೊಸ ಅಧಿಸೂಚನೆ ಹೊರಡಿಸಬೇಕು. ಇದರಲ್ಲಿ ಕೆಪಿಎಸ್ಸಿಗೆ ತೀವ್ರ ಶಿಕ್ಷೆ ವಿಧಿಸುವಂತಹ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.