ಬಿಹಾರ ಚುನಾವಣಾ ಸಮೀಕ್ಷೆ; ತೇಜಸ್ವಿ ಯಾದವ್ ಗೆ ಹೆಚ್ಚಿದ ಒಲವು, ಕುಸಿದ ನಿತೀಶ್ ಕುಮಾರ್ ಜನಪ್ರಿಯತೆ
ಸಾಕಷ್ಟು ಕುತೂಹಲ ಹೆಚ್ಚಿಸುತ್ತಿರುವ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದ್ದು ಈ ಸಂದರ್ಭಕ್ಕೆ RJD ಮುಖ್ಯಸ್ಥ ತೇಜಸ್ವಿ ಯಾದವ್ ವರ ಪರ ಒಲವು ಹೆಚ್ಚಿದೆ. ಬಹುತೇಕ ಯುವ ಸಮೂಹಕ್ಕೆ ನಡೆಸಿದ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗಬೇಕು ಎಂದು ಬಿಹಾರದ ಜನತೆ ಅವರ ಪರವಾಗಿ ಮತ ಚಲಾಯಿಸಿದ್ದಾರೆ.
ಸಿವೋಟರ್ ಸಂಸ್ಥೆ ಏಪ್ರಿಲ್ ತಿಂಗಳಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನಪ್ರಿಯತೆಯ ಗ್ರಾಫ್ ಕುಗ್ಗುತ್ತಿದ್ದು, ತೇಜಸ್ವಿ ಯಾದವ್ ಜನಪ್ರಿಯತೆ ಹೆಚ್ಚಾಗಿದೆ ಎಂದು ತಿಳಿಸಿದೆ. ವಿಶೇಷ ಎಂದರೆ ಚುನಾವಣಾ ತಂತ್ರಜ್ಞ ಎಂದೇ ಕರೆಯಲ್ಪಡುವ ಪ್ರಶಾಂತ್ ಕಿಶೋರ್ ಕೂಡ ಈ ಬಾರಿ ಚುನಾವಣಾ ಕಣದಲ್ಲಿದ್ದಾರೆ.
ಪೋಲ್ ಟ್ರ್ಯಾಕ್ಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುವ ಸಾಧ್ಯತೆಯಿದೆ. ಆ ಮೂಲಕ, ಬಿಜೆಪಿ – ಜೆಡಿಯು ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆಯ ಎಫೆಕ್ಟ್ ಕಾಡುವ ಸಾಧ್ಯತೆ ದಟ್ಟವಾಗಿದೆ. ನಿತೀಶ್ ಕುಮಾರ್ ಅವರಿಗೆ ಆರೋಗ್ಯದ ಸಮಸ್ಯೆಯಿದೆ, ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲಿ ಎಂದು ತೇಜಸ್ವಿ ಯಾದವ್, ಕೆಲವು ದಿನಗಳ ಹಿಂದೆ ಹೇಳಿದ್ದರು.
ಸಮೀಕ್ಷೆ ಪ್ರಕಾರ ಕಾಂಗ್ರೆಸ್ – ಆರ್ಜೆಡಿ ಮೈತ್ರಿಯ ಇಂಡಿಯಾ ಮೈತ್ರಿಕೂಟಕ್ಕೆ ಶೇ. 44.2ರಷ್ಟು ಮತಗಳು ಲಭಿಸಿದರೆ, ಬಿಜೆಪಿ – ಜೆಡಿಯು ಮೈತ್ರಿಯ ಎನ್ಡಿಎ ಮೈತ್ರಿಕೂಟಕ್ಕೆ 42.8ರಷ್ಟು ಮತಗಳು ಬೀಳಬಹುದು ಎಂದು ಅಂದಾಜಿಸಲಾಗಿದೆ. 243 ಸ್ಥಾನವನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಸರಳ ಬಹುಮತಕ್ಕೆ 122 ಸ್ಥಾನಗಳು ಬೇಕಿವೆ. ಸಮೀಕ್ಷೆಯ ಪ್ರಕಾರ, ಇಂಡಿಯಾ ಒಕ್ಕೂಟಕ್ಕೆ ಸರಳ ಬಹುಮತದ ಸಂಖ್ಯೆ 126 ಸ್ಥಾನ ಸಿಗುವ ಸಾಧ್ಯತೆಯಿದೆ. ಎನ್ಡಿಎ 112 ಕ್ಕೆ ತೃಪ್ತಿ ಪಡಬೇಕಿದೆ.
ಇಂಡಿಯಾ ಮೈತ್ರಿಕೂಟಕ್ಕೆ 121 – 131, ಬಿಜೆಪಿ ಮೈತ್ರಿಕೂಟಕ್ಕೆ 108 -115, ಇತರರಿಗೆ 4 -12 ಮತ್ತು ಜನ್ ಸುರಾಜ್ ಪಾರ್ಟಿಗೆ 0 -3 ಸ್ಥಾನ ಎಂದು ಉಲ್ಲೇಖವಾಗಿತ್ತು.