Home ರಾಜಕೀಯ ಸಿಎಎ: ಕೇಂದ್ರ ಹೇಳಿದ ಎಂಟು ಅಪ್ಪಟ ಸುಳ್ಳುಗಳು!

ಸಿಎಎ: ಕೇಂದ್ರ ಹೇಳಿದ ಎಂಟು ಅಪ್ಪಟ ಸುಳ್ಳುಗಳು!

0

ನಿನ್ನೆ, ಮಾರ್ಚ್‌ 12, 2024 ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಬಗ್ಗೆ ಎರಡು ಪುಟಗಳ ಒಂದು ಸಕಾರಾತ್ಮಕ ನಿರೂಪಣೆಯೊಂದನ್ನು ಪ್ರಕಟ ಮಾಡಿತ್ತು. ಇದರಲ್ಲಿ ಸಿಎಎ ಬಗ್ಗೆ ಅನೇಕ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಲಾಗಿದ್ದು, ಅತ್ಯಂತ ಕಳಪೆಯಾಗಿ ಇದ್ದನ್ನು ಡ್ರಾಫ್ಟ್‌ ಮಾಡಲಾಗಿದೆ.

ಇದನ್ನು ತನ್ನ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೋ (Press Information Bureau – PIB) ವೆಬ್‌ಸೈಟಿನಲ್ಲಿ ಪ್ರಕಟ ಮಾಡಿತ್ತು, ಅದರ X ನಲ್ಲಿಯೂ ಪ್ರಕಟ ಮಾಡಲಾಗಿತ್ತು. ಆದರೆ ಈಗ ಇದರ ಅಧಿಕೃತ ಪ್ರತಿಗಳನ್ನು ಅಲ್ಲಿಂದ ಡಿಲಿಟ್‌ ಮಾಡಲಾಗಿದ್ದು, ಎಲ್ಲಿಯೂ ಲಭ್ಯವಿಲ್ಲ!

ಇದನ್ನು ಮಂಗಳವಾರ ಸಂಜೆ 6:43 ಕ್ಕೆ ಪಿಐಬಿ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿ, ಆ ನಂತರ ಡಿಲಿಟ್‌ ಮಾಡಲಾಗಿದೆ. ತನ್ನ X ಖಾತೆಯಲ್ಲಿ CAA Myth Busters ಎಂದು ಪೋಸ್ಟ್‌ ಮಾಡಿತ್ತು, ಅಲ್ಲಿಂದಲೂ ಅದು ಕಾಣೆಯಾಗಿದೆ. Positive Narrative on Citizenship Amendment Act-2019 ಎಂಬ ಈ ಪ್ರಕಟಣೆಯನ್ನು ಯಾಕೆ ಎಲ್ಲಾ ಕಡೆಗಳಿಂದಲೂ ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಈ ಎರಡು ಪುಟಗಳ ಪ್ರಕಟಣೆಯಲ್ಲಿ ಒಟ್ಟು ಎಂಟು ಪ್ರಶ್ನೆಗಳನ್ನು ಹಾಕಿ, ಅವುಗಳಿಗೆ ಉತ್ತರವನ್ನು ನೀಡಲಾಗಿದೆ. ಇದರ ತುಂಬಾ ಮೋದಿಯವರು ತಮ್ಮ ʼಮೇರೆ ಪ್ಯಾರೆ ದೇಶವಾಸಿಯೋ ..ʼಗಳ ತಲೆಗೆ ಸುಳ್ಳುಗಳನ್ನು ತುಂಬಲು ಯತ್ನಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಸಿ ಹಸಿ ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಹೇಳಿದೆ. ಒಟ್ಟಾರೆ ಸಿಎಎ ಬಗ್ಗೆ ಪಾಸಿಟಿವ್‌ ಎಂದು ಕಳಪೆ ನಿರೂಪಣೆಗಳನ್ನು ನೀಡಲಾಗಿದೆ.

ಇಲ್ಲಿ, ಗೃಹ ಸಚಿವಾಲಯದ ಈ ಸುಳ್ಳು ಪ್ರಶ್ನೋತ್ತರಗಳನ್ನು ಭಾಷಾಂತರ ಮಾಡಿ, ವಿಶ್ಲೇಷಣೆ ನಡೆಸಲಾಗಿದ್ದು, ಒಂದೊಂದು ಪ್ರಶ್ನೆಗಳನ್ನೂ ʼಪ್ರಶ್ನಿಸಲಾಗಿದೆʼ. ಈ ಪ್ರಕಟಣೆಯ ಪಿಡಿಎಫ್‌ ಸಂಗ್ರಹಿಸಲಾಗಿದ್ದು ಇಲ್ಲಿ ಓದಿ: Positive Narrative on Citizenship Amendment Act-2019

ಸಿಎಎ-2019 ರ ಬಗ್ಗೆ ಧನಾತ್ಮಕ ನಿರೂಪಣೆ

ಪ್ರಕಟಣೆ: 12  ಮಾರ್ಚ್‌ 2024 6:43PM, ಪಿಐಬಿ ದೆಹಲಿ

ಸ್ವತಂತ್ರ ನಂತರ ಇತರ ಧರ್ಮದ ಭಾರತೀಯ ನಾಗರಿಕರಂತೆ ತಮ್ಮ ಆಚರಣೆಗಳನ್ನು ನಡೆಸುತ್ತಾ, ಆನಂದದಿಂದ ಬದುಕುತ್ತಿರುವ ಭಾರತೀಯ ಮುಸ್ಲೀಮರು ತಮ್ಮ ಹಕ್ಕುಗಳನ್ನು ಸಂಭ್ರಮಿಸಲು ಅವರ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಮೊಟಕುಗೊಳಿಸದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿ ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ ಫಲಾನುಭವಿಗಳಿಗಾಗಿ, ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ CAA (ಪೌರತ್ವ ತಿದ್ದುಪಡಿ ಕಾಯ್ದೆ) 2019 ರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತಾ ಅವಧಿಯನ್ನು 11 ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ.

ಸತ್ಯ ಏನು? ಇಲ್ಲಿ ಉಲ್ಲೇಖ ಮಾಡಲಾಗಿರುವ  “compensation for appeasing their persecution – ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ ” ಎಂದರೆ ಎನು ಎಂಬುದು ಸ್ಪಷ್ಟವಾಗಿಲ್ಲ. ಈ ಹೇಳಿಕೆಯೇ ಆಪ್ರಾಮಾಣಿಕತೆಯಿಂದ ಕೂಡಿದೆ. ಈ ಮೂರು ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರಿಗೆ ಪರಿಹಾರ ನೀಡುತ್ತೇವೆ, “generous treatment – ಉದಾರತೆಯಿಂದ ನಡೆಸಿಕೊಳ್ಳುತ್ತೇವೆ” ಎಂದು ಹೇಳುವ ಕೇಂದ್ರದ ಮುಂದೆ ಕೆಲವು ಪ್ರಶ್ನೆಗಳಿವೆ:

  1. ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ- ಈ ಮೂರು ದೇಶಗಳಿಂದ ಬಂದವರಿಗೆ ಮಾತ್ರ ಯಾಕೆ ಈ ಸೌಲಭ್ಯ?
  2. ಧಾರ್ಮಿಕ ಕಿರುಕುಳ ಮಾತ್ರ ಯಾಕೆ? ಲಿಂಗಾಧಾರಿತ ಕಿರುಕುಳ, ಜನಾಂಗೀಯ ಕಿರುಕುಳ ಅಥವಾ ರಾಜಕೀಯ ಕಿರುಕುಳ, ವರ್ಣಬೇಧದ ಕಿರುಕುಳ, ಇತ್ಯಾದಿ ಕಿರುಕುಳದಿಂದ ಆ ದೇಶಗಳನ್ನು ಬಿಟ್ಟು ಬಂದವರನ್ನು ಯಾಕೆ ಪರಿಗಣಿಸಿಲ್ಲ?
  3. ಈ ದೇಶಗಳಲ್ಲಿ ಮುಸ್ಲೀಂ ಸಮುದಾಯಕ್ಕೆ ಸೇರಿದ ಕೆಲ ಪಂಗಡಗಳೂ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿವೆ. ಅವುಗಳನ್ನು ಯಾಕೆ ಇಲ್ಲಿ ಸೇರಿಸಿಲ್ಲ?
  4. ಡಿಸೆಂಬರ್ 31, 2014ರಂದು ಮತ್ತು ಅದಕ್ಕೆ ಮೊದಲು ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಸ್ಲೀಮರು ಬಿಡಿ, ಆಮೇಲೆ ಸಕಾರಣಗಳನ್ನು ಇಟ್ಟುಕೊಂಡು ಭಾರತಕ್ಕೆ ಬಂದಿರುವ ʼಮುಸ್ಲೀಮೇತರರʼ ಕಥೆ ಏನು? ಅವರನ್ನು ಏನು ಮಾಡುತ್ತೀರಿ? ಮತ್ತು ಅದೇ ದಿನಾಂಕವನ್ನು ಯಾಕೆ ಪರಿಗಣಿಸಲಾಗಿದೆ?

ಕೇಂದ್ರದ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ!

***************

ಪ್ರಶ್ನೋತ್ತರಗಳ ವಿಶ್ಲೇಷಣೆ:

1. ಪ್ರಶ್ನೆ: ಭಾರತೀಯ ಮುಸ್ಲಿಮರ ಮೇಲೆ ಕಾಯಿದೆ ಬೀರುವ ಪರಿಣಾಮಗಳೇನು?

ಗೃಹ ಸಚಿವಾಲಯದ ಉತ್ತರ: ಭಾರತೀಯ ಮುಸ್ಲಿಮರು ಈ ಬಗ್ಗೆ ಚಿಂತೆ ಮಾಡಬೇಕಿಲ್ಲ, ಏಕೆಂದರೆ ಸಿಎಎ ಅವರ ಪೌರತ್ವದ ಮೇಲೆ ಪರಿಣಾಮ ಬೀರಬಲ್ಲ ಯಾವುದೇ ನಿಬಂಧನೆಯನ್ನು ಹೊಂದಿಲ್ಲ ಮತ್ತು ಇದು ಪ್ರಸ್ತುತ ದೇಶದಲ್ಲಿರುವ 18 ಕೋಟಿ ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧ ಪಟ್ಟಿಲ್ಲ. ಅವರು ತಮ್ಮ ಹಿಂದೂ ಸಹ-ನಾಗರಿಕರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಈ ಕಾಯಿದೆ ಯಾವುದೇ ಭಾರತೀಯ ನಾಗರಿಕನೂ ತನ್ನ ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಯನ್ನು ನೀಡಬೇಕೆಂದು ಹೇಳುವುದಿಲ್ಲ.

ನಿಜ ಏನು? ನಿರಾಶ್ರಿತರು ಮತ್ತು ನುಸುಳುಕೋರರ ಬಗೆಗಿನ ಮೋದಿ ಸರ್ಕಾರದ ನೀತಿಗಳ ವಿಚಾರದಲ್ಲಿ ಒಂದು ‘ಕ್ರೊನೋಲಜಿʼ  ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಅನೇಕ ಬಾರಿ ಹೇಳಿದ್ದರು. 2019ರ ಎಪ್ರಿಲ್‌ನಲ್ಲಿ, “ಮೊದಲು ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ತರುತ್ತೇವೆ, ಪ್ರತಿಯೊಬ್ಬ ನಿರಾಶ್ರಿತರಿಗೂ ಪೌರತ್ವ ಸಿಗುತ್ತದೆ ಮತ್ತು ಅದರ ನಂತರ ನಾವು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ತರುತ್ತೇವೆ. ಆದ್ದರಿಂದ ನಿರಾಶ್ರಿತರು ಚಿಂತಿಸಲು ಯಾವುದೇ ಕಾರಣವಿಲ್ಲ. ಆದರೆ ನುಸುಳುಕೋರರು ಖಂಡಿತವಾಗಿಯೂ ಚಿಂತೆಯಾಬೇಕು, ಅವರಲ್ಲಿ ಒಂದು ಕಾರಣವಿದೆ. ಆದ್ದರಿಂದ ಕ್ರೊನೋಲಜಿಯನ್ನು ಅರ್ಥಮಾಡಿಕೊಳ್ಳಿ,” ಎಂದು ಹೇಳಿದ್ದರು. “ಕ್ರೊನೋಲಜಿ ಸಮಜಿಯೇ” ಎಂಬ ಶಾ ಭಾಷಣದ ಈ ವಿಡಿಯೋ ತುಂಬಾ ವೈರಲ್‌ ಆಗಿತ್ತು. “ಎನ್‌ಆರ್‌ಸಿ ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಇರುತ್ತದೆ, ಏಕೆಂದರೆ “ಎಲ್ಲೆಡೆ ನುಸುಳುಕೋರರು ತುಂಬಿದ್ದಾರೆ,” ಎಂದು ಅವರು ಹೇಳಿದ್ದರು. ಡಿಸೆಂಬರ್ 10, 2019 ರಂದು ಸಂಸತ್ತಿನಲ್ಲಿ NRC ಖಂಡಿತವಾಗಿಯೂ ಬರಲಿದೆ ಮತ್ತು ಅದನ್ನು ಜಾರಿಗೆ ತಂದಾಗ “ಒಬ್ಬ ನುಸುಳುಕೋರನಿಗೂ ಉಳಿಗಾಲವಿಲ್ಲ,” ಎಂದು ಅಮಿತ್‌ ಶಾ ಹೇಳಿದ್ದರು.

ಅಂದರೆ, ಶಾ ಹೇಳಿದ್ದು, ಎನ್‌ಆರ್‌ಸಿ ಒಂದು ಪ್ರಕ್ರಿಯೆ,  ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪೌರತ್ವವನ್ನು ಅವರು ಒದಗಿಸುವ ದಾಖಲೆಗಳ ಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ. ಎನ್‌ಆರ್‌ಸಿಯನ್ನು ಮೊದಲು ಜಾರಿಗೆ ತಂದ ಅಸ್ಸಾಂನಲ್ಲಿ ಅದು ಉಂಟುಮಾಡಿದ ಅಪಾಯಗಳು ನಮ್ಮ ಕಣ್ಣ ಮುಂದೆ ಇವೆ. ಅಸ್ಸಾಮಿನಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಸಾಬೀತು ಮಾಡಲಾಗದ ಸುಮಾರು 19 ಲಕ್ಷ ಜನರನ್ನು ಭಾರತೀಯ ನಾಗರಿಕರೆಂದು ಪರಿಗಣಿಸದೆ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಹಿಂದೂಗಳು.

ಸಿಎಎ ಹಿಂದಿನ ಉದ್ದೇಶವೆಂದರೆ, ಎನ್‌ಆರ್‌ಸಿಯಲ್ಲಿ ದಾಖಲೆ ನೀಡಲಾಗದೆ ಪೌರತ್ವದಿಂದ ಹೊರಗಿಡಲ್ಪಟ್ಟ ಹಿಂದೂಗಳಿಗೆ ಸಿಎಎ ಪೌರತ್ವ ನೀಡುತ್ತದೆ. ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ವಿಫಲರಾದ ಮುಸ್ಲಿಮರಿಗೆ ಯಾವುದೇ ಮಾರ್ಗವಿಲ್ಲ. ಅವರನ್ನು ‘ನುಸುಳುಕೋರರು’ ಎಂದು ಬ್ರಾಂಡ್ ಮಾಡಿ ಹಿಂಸಿಸುವ ಸಾಧ್ಯತೆಗಳಿವೆ.

ಆದ್ದರಿಂದ ಸದ್ಯ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಈ ‌ʼಪಾಸಿಟಿವ್ ನರೇಟಿವ್‌ʼ ಪ್ರಕಟಣೆಯಲ್ಲಿ ಹೇಳಿರುವುದಕ್ಕೆ ಅರ್ಥವಿಲ್ಲ, ಅದೊಂದು ಸುಳ್ಳು. ಸದ್ಯ ಎನ್‌ಆರ್‌ಸಿಯನ್ನು ಜಾರಿಗೆ ತರುವ ತನ್ನ ಯೋಜನೆಗಳನ್ನು ಮೋದಿ ಸರ್ಕಾರ ಕೈಬಿಟ್ಟಿದ್ದರೂ, ಭಾರತೀಯ ಮುಸ್ಲಿಮರು ತಮ್ಮ ಪೌರತ್ವದ ಮೇಲೆ ಸಿಎಎ ಪರಿಣಾಮ ಬೀರುತ್ತದೆ ಎಂದು ಚಿಂತೆ ಮಾಡಬೇಡಿ ಎಂದಿರುವುದರಲ್ಲಿ ಸತ್ಯವೇ ಇಲ್ಲ.

ಈಗ, ಭಾರತದ ಮುಸ್ಲೀಂ ಮತ್ತು ಹಿಂದೂ ಮಹಿಳೆಯರಿಬ್ಬರು ದಾಖಲೆ ಇಲ್ಲದ ಎಂದೋ ಹಿಂದೆ ಬಾಂಗ್ಲಾದಿಂದ ಬಂದಿರುವ ಅವರದೇ ಧರ್ಮದ ಪುರುಷರನ್ನು ಮದುವೆ ಆಗಿತ್ತಾರೆ ಎಂದುಕೊಳ್ಳಿ. ತಿದ್ದುಪಡಿ ಮಾಡದ ಪೌರತ್ವ ಕಾಯ್ದೆಯಡಿಯಲ್ಲಿ ತಾಯಂದಿರು ಭಾರತೀಯರಾದರೂ ಅವರ ಮಕ್ಕಳನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸಲಾಗುತ್ತದೆ ಮತ್ತು ಮಕ್ಕಳನ್ನು ಅವರ ತಂದೆಯೊಂದಿಗೆ ಗಡೀಪಾರು ಮಾಡಬೇಕಾಗುತ್ತದೆ. ಒಂದು ವೇಳೆ CAA ಈ ಹಿಂದೂ ಕುಟುಂಬಕ್ಕೆ ಭಾರತದಲ್ಲಿ ಬದುಕಲು ಅವಕಾಶ ನೀಡಿದರೂ, ಮುಸ್ಲೀಂ ಮಹಿಳೆ ಮಾತ್ರ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಾಕ್ಕೆ ಕಳಿಸಬೇಕಾಗುತ್ತದೆ. ಆಕೆಗೆ ಇರುವ ಎರಡು ಅವಕಾಶಗಳೆಂದರೆ: ಒಂದೋ ತನ್ನ ಕುಟುಂಬದ ಜೊತೆಗೆ ಭಾರತವನ್ನು ಬಿಡಬೇಕು, ಇಲ್ಲವೇ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಕ್ಕೆ ಕಳುಹಿಸಿ ಒಂಟಿಯಾಗಿ ಭಾರತದಲ್ಲೇ ಬದುಕಬೇಕು.

2. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಈ ಅಕ್ರಮ ಮುಸ್ಲಿಂ ವಲಸಿಗರನ್ನು ವಾಪಸು ಕಳುಹಿಸಲು ಯಾವುದೇ ನಿಬಂಧನೆ ಅಥವಾ ಒಪ್ಪಂದವಿದೆಯೇ?

ಗೃಹ ಸಚಿವಾಲಯದ ಉತ್ತರ: ಮುಸ್ಲೀಂ ವಲಸಿಗರನ್ನು ಈ ದೇಶಗಳಿಗೆ ಮರಳಿ ಕಳುಹಿಸಲು ಭಾರತ ಈ ದೇಶಗಳೊಂದಿಗೆ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ. ಈ ಪೌರತ್ವ ಕಾಯ್ದೆಗೂ ಅಕ್ರಮ ವಲಸಿಗರ ಗಡೀಪಾರಿಗೂ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಸಿಎಎ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಹಾಗೂ ಒಂದು ವರ್ಗದ ಜನರ ವಾದಕ್ಕೆ ಅರ್ಥವಿಲ್ಲ.

ನಿಜ ಏನು? ಇದೊಂದು ಭಯಂಕರ ಮೋಸ ಮತ್ತು ಹಸಿಹಸಿ ಸುಳ್ಳು. ಭಾರತದಲ್ಲಿ ವಿದೇಶಿಯರ ಕಾಯಿದೆ (ವಿಭಾಗ 3) – Foreigners Act (Section 3)  ಮತ್ತು ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ (ವಿಭಾಗ 5) – Passport (Entry into India) Act (Section 5) ಎಂಬ ಎರಡು ಕಾಯಿದೆಗಳಿವೆ. ಇವು ಭಾರತದಲ್ಲಿ ಅಕ್ರಮವಾಗಿ ವಾಸಿಸುವವರನ್ನು ಗಡಿಪಾಡು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡಿವೆ. ಈಗಾಗಲೇ ದೇಶದಲ್ಲಿ ಅಕ್ರಮವಾಗಿ ತಂಗಿದ್ದಾರೆ ಎಂದು ಕಂಡುಬಂದಿರುವ ವ್ಯಕ್ತಿಗಳನ್ನು ಗಡೀಪಾರು ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಆ ವ್ಯಕ್ತಿಯನ್ನು ಆತನ ದೇಶಕ್ಕೆ ಗಡಿಪಾರು ಮಾಡಲು ಯಾವುದೇ ಒಪ್ಪಂದಗಳು ಇಲ್ಲದೇ ಇದ್ದಾಗ, ಆತನಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಅಥವಾ ಡಿಟೆನ್ಷನ್‌ ಕ್ಯಾಂಪ್‌ಗೆ ಹಾಕಲಾಗುತ್ತದೆ. ಈ ಎರಡು ಕಾಯಿದೆಗಳನ್ನು ಬಳಸುವುದಿಲ್ಲ ಎಂಬುದು ಯಾವ ಗ್ಯಾರಂಟಿ? ಒಂದು ವೇಳೆ ʼಅಕ್ರಮ ವಲಸಿಗ ಮುಸ್ಲೀಮರನ್ನುʼ ಜೈಲು ಅಥವಾ ಡಿಟೆನ್ಸಷನ್‌ ಕ್ಯಾಂಪಿಗೆ ಹಾಕದೇ ಇದ್ದರೂ, ಅವರ ಮತದಾನದ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ.

3. ಅಕ್ರಮ ವಲಸಿಗ ಎಂದರೆ ಯಾರು?

ಗೃಹ ಸಚಿವಾಲಯದ ಉತ್ತರ: ಪೌರತ್ವ ಕಾಯ್ದೆ, 1955 ರಂತೆ, ಈ ಸಿಎಎ ಕೂಡ ಕಾನೂನುಬಾಹಿರ ವಲಸಿಗರನ್ನು ಮಾನ್ಯತೆ ಇರುವ ಯಾವುದೇ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಎಂದು ಪರಿಗಣಿಸುತ್ತದೆ.

ನಿಜ ಏನು? 2003 ರಲ್ಲಿ ವಾಜಪೇಯಿ ಸರ್ಕಾರವು ‘ಅಕ್ರಮ ವಲಸಿಗರು’ ನ್ಯಾಚುರಲೈಸೇಷನ್ ಅಥವಾ ಮದುವೆಯ ಮೂಲಕ ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸಲು ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು . 2016 ರಲ್ಲಿ ಮೋದಿ ಸರ್ಕಾರವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಮೇತರ ‘ಅಕ್ರಮ ವಲಸಿಗರನ್ನು’ ಈ ಕಾನೂನಿನಿಂದ ಹೊರಗಿಡಲು ಕಾಯಿದೆಯಲ್ಲಿ ತಿದ್ದುಪಡಿಯನ್ನು ಮಾಡಿತು. ಇದು ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರುವ ʼಅಕ್ರಮ ವಲಸಿಗ ಹಿಂದೂಗಳಿಗೆʼ ವಿನಾಯಿತಿಯನ್ನು ನೀಡಿದೆ. CAA-2019 ಈಗ ಇದನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ, ಅವರ ಪೌರತ್ವದ ಟ್ರ್ಯಾಕಿಂಗ್ ಮಾಡುವ ಪ್ರಕ್ರಿಯೆಗೆ ವೇಗವನ್ನು ನೀಡಿದೆ.  

ಸರಳವಾಗಿ ಹೇಳುವುದಾದರೆ, ಡಿಸೆಂಬರ್ 31, 2014 ರವರೆಗೆ ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತಕ್ಕೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದ ಮುಸ್ಲೀಮರನ್ನು ಮಾತ್ರ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ, ಮುಸ್ಲೀಮೇತರರನ್ನು ಅಲ್ಲ! ಧರ್ಮದ ಆಧಾರದ ಮೇಲೆ ಮಾಡುವ ಈ ತಾರತಮ್ಯ ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನದ ಆರ್ಟಿಕಲ್‌ 26ವನ್ನು ಉಲ್ಲಂಘಿಸುತ್ತದೆ.

4. ಇಸ್ಲಾಂ ಮೇಲೆ ಈ ಕಾಯಿದೆ ಬೀರುವ ಪ್ರಭಾವವೇನು?

ಗೃಹ ಸಚಿವಾಲಯದ ಉತ್ತರ: ಆ ಮೂರು ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ (ಮುಸ್ಲೀಮೇತರ) ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದಾಗಿ ಇಸ್ಲಾಂ ಧರ್ಮಕ್ಕೆ ಪ್ರಪಂಚದಾದ್ಯಂತ ಕೆಟ್ಟ ಕಳಂಕ ಬಂದಿದೆ. ಎಷ್ಟೇ ಆದರೂ ಇಸ್ಲಾಂ ಒಂದು ಶಾಂತಿಯುತ ಧರ್ಮ, ಧಾರ್ಮಿಕತೆಯ ಆಧಾರದಲ್ಲಿ ದ್ವೇಷ/ಹಿಂಸೆ/ ಕಿರುಕುಳ ನೀಡುವುದನ್ನು ಅದು ಎಂದಿಗೂ ಬೋಧಿಸುವುದಿಲ್ಲ. ಈ ಶೋಷಣೆಗೆ ಸಹಾನುಭೂತಿ ಮತ್ತು ಪರಿಹಾರವನ್ನು ನೀಡಲು ತಂದಿರುವ ಈ ಕಾಯಿದೆ ಇಸ್ಲಾಂ ಧರ್ಮವನ್ನು ಈ ಕಳಂಕದಿಂದ ರಕ್ಷಿಸುತ್ತದೆ.

ನಿಜ ಏನು? ಧಾರ್ಮಿಕತೆಯ ಕಾರಣಕ್ಕೆ ಕಿರುಕುಳಕ್ಕೆ ಒಳಗಾದವರನ್ನು ಮುಸ್ಲೀಂ ರಾಷ್ಟ್ರಗಳಿಂದ ಮಾತ್ರ ಯಾಕೆ ಎತ್ತಿಕೊಳ್ಳಲಾಗಿದೆ ಎಂಬುದು ಅರ್ಥವಾಗಿಲ್ಲ. ಇಲ್ಲಿ ಮುಸ್ಲಿಮೇತರ ನೆರೆಯ ರಾಷ್ಟ್ರಗಳಾದ ಮ್ಯಾನ್ಮಾರ್, ಚೀನಾ ಮತ್ತು ಶ್ರೀಲಂಕಾದಲ್ಲಿ ದೌರ್ಜನ್ಯಕ್ಕೆ ಒಳಗಾದ ಮುಸ್ಲೀಮೇತರರಿಗೆ ಅವಕಾಶ ಇಲ್ಲವೇ? ಮುಸ್ಲಿಂ ರಾಷ್ಟ್ರಗಳಲ್ಲಿ ನಡೆದ ಶೋಷಣೆಯಲ್ಲಿ ಮಾತ್ರ ಏನು ಸ್ಪೆಷಾಲಿಟಿ ಇದೆ ಎಂಬುದನ್ನು ಕೇಂದ್ರ ವಿವರಿಸಿಲ್ಲ. ಈಗ ಚೀನಾದಲ್ಲಿ ಓರ್ವ ಹಿಂದೂವಿನ ಮೇಲೆ ದೌರ್ಜನ್ಯವಾದರೆ ಆತ ಏನು ಮಾಡಬೇಕು? ಇದಕ್ಕಾಗಿ ಕೇಂದ್ರ ಬೇರೆಯದೇ ಕಾನೂನನ್ನು ತರುತ್ತದೆಯೇ?  ತಾನು ಕಳಂಕದಿಂದ ರಕ್ಷಿಸಲು ಹೊರಟಿರುವ ʼಇಸ್ಲಾಂʼನಿಂದ ಮುಸ್ಲೀಮರನ್ನು ಬೇರೆಯಾಗಿ ಕೇಂದ್ರ ಹೇಗೆ ನೋಡುತ್ತದೆ?

ಸಿಎಎ ಇಸ್ಲಾಂ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಟ್ಟುಕೊಳ್ಳೋಣ, ಆದರೆ ಇದು ನಮ್ಮ ʼಐಡಿಯಾ ಆಫ್‌ ಇಂಡಿಯಾʼ, ಭಾರತದ ಎಲ್ಲರನ್ನೂ ಒಳಗೊಂಡು ಬೆಳೆಯುವ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ದವಾಗಿದೆ. ಭಾರತ ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ಲೆಕ್ಕವಿಲ್ಲದಷ್ಟು ಜನಾಂಗಗಳಿಗೆ ನೆಲೆಯನ್ನು ನೀಡಿದೆ. ಆದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಮನುಷ್ಯನ ಪೌರತ್ವವನ್ನು, ಬದುಕುವ ಹಕ್ಕನ್ನು ಹತ್ತಿಕ್ಕಲು ಧರ್ಮವನ್ನು ಮಾನದಂಡವಾಗಿ ಬಳಸಿದೆ, ಇದು ಭಾರತದ ಸಂಸ್ಕೃತಿ, ಮೌಲ್ಯಗಳಿಗೆ ಬಗೆದ ದ್ರೋಹ.

5. ಭಾರತದ ಪೌರತ್ವ ಪಡೆಯಲು ಮುಸ್ಲಿಮರಿಗೆ ನಿರ್ಬಂಧವಿದೆಯೇ?

ಗೃಹ ಸಚಿವಾಲಯದ ಉತ್ತರ: ಇಲ್ಲ, ಪೌರತ್ವ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಭಾರತದ ಪೌರತ್ವವನ್ನು ಪಡೆಯಲು ಜಗತ್ತಿನ ಯಾವ ಮೂಲೆಯಿಂದಾದ ಮುಸ್ಲೀಮರು ಬಂದರೂ, ಅವರಿಗೆ ಯಾವುದೇ ನಿರ್ಬಂಧವಿಲ್ಲ, ಪೌರತ್ವವನ್ನು ನ್ಯಾಚುರಲೈಸೇಷನ್‌ ಆಧಾರದಲ್ಲಿ ನೀಡಲಾಗುತ್ತದೆ.

ನಿಜ ಏನು? 2003 ರಿಂದ ಪೌರತ್ವ ಕಾಯಿದೆಯು ಅಕ್ರಮ ವಲಸಿಗರಾಗಿರುವ ಯಾರೇ ಆದರೂ ಭಾರತದ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಆದರೆ, ಈ ಸಿಎಎ ಮಾತ್ರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ʼಮುಸ್ಲಿಮೇತರ ಅಕ್ರಮ ವಲಸಿಗರಿಗೆʼ ಮತ್ತು ಅವರಿಗೆ ಭಾರತದಲ್ಲಿ ಹುಟ್ಟಿದ ಅವರ ಮಕ್ಕಳಿಗೆ ಭಾರತದ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತದೆ. ಆದರೆ ಅಕ್ರಮ ವಲಸಿಗರು ಮುಸ್ಲೀಮರಾದರೆ, ಅವರಿಗೆ ಇದು ಸಾಧ್ಯವಿಲ್ಲ.

6. ಈ ತಿದ್ದುಪಡಿಯ ಅಗತ್ಯವೇನು?

ಗೃಹ ಸಚಿವಾಲಯದ ಉತ್ತರ: ಆ ಮೂರು ದೇಶಗಳಲ್ಲಿ ಕಿರುಕುಳಕ್ಕೊಳಗಾಗಿರುವ (ಮುಸ್ಲೀಮೇತರ) ಅಲ್ಪಸಂಖ್ಯಾತರಿಗೆ ಕರುಣೆ ತೋರಿಸಲು, ಈ ಕಾಯಿದೆಯು ಭಾರತದ ಉದಾರ ಸಂಸ್ಕೃತಿಯ ಪ್ರಕಾರ ಅವರ ಸಂತೋಷ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತೀಯ ಪೌರತ್ವವನ್ನು ಪಡೆಯಲು ಅವರಿಗೆ ಅವಕಾಶವನ್ನು ನೀಡುತ್ತದೆ. ಪೌರತ್ವ ವ್ಯವಸ್ಥೆಯನ್ನು ಕಸ್ಟಮೈಸ್ ಮಾಡಲು ಮತ್ತು ಅಕ್ರಮ ವಲಸಿಗರನ್ನು ನಿಯಂತ್ರಿಸಲು ಈ ಕಾಯಿದೆಯ ಅಗತ್ಯವಿದೆ.

ನಿಜ ಏನು? ಕಿರುಕುಳಕ್ಕೊಳಗಾದ ಜನರಿಗೆ ಈ ಮಟ್ಟಿಗೆ ಔದಾರ್ಯ ತೋರಿಸಲು ಧರ್ಮ ಆಧಾರಿತ ವಿನಾಯಿತಿಯನ್ನು ನೀಡುವ ಅಗತ್ಯವಿರಲಿಲ್ಲ. ತಮ್ಮ ಮೂಲದ ದೇಶದಲ್ಲಿ ಶೋಷಣೆಗೆ ಒಳಗಾಗುವ ಭಯವನ್ನು ಹೊಂದಿರುವ ಯಾವುದೇ ಅಕ್ರಮ ವಲಸಿಗರಿಗೆ ಭಾರತದಲ್ಲಿ ಅನಿರ್ದಿಷ್ಟಾವಧಿಯ ವರೆಗೆ ಉಳಿಯಲು ಅನುಮತಿ ನೀಡಲಾಗುವುದು ಮತ್ತು ಸರಿಯಾದ ಸಮಯ ಸಂದರ್ಭದಲ್ಲಿ ಅವರು ಭಾರತೀಯ ಪೌರತ್ವಕ್ಕೆ ಅರ್ಹರಾಗುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಬೇಕಾಗಿತ್ತು. ಈ ರೀತಿಯೇ ಬೇರೆಲ್ಲಾ ದೇಶಗಳು ತಮ್ಮಲ್ಲಿ ಇರುವ ನಿರಾಶ್ರಿತರನ್ನು ʼನ್ಯಾಚುರಲೈಸ್‌ʼ ಮಾಡುವುದು, ಇದಕ್ಕೆ ನಿರಾಶ್ರಿತನ ಧರ್ಮವನ್ನು ನೀಡುವ ಅಗತ್ಯವಿಲ್ಲ.

7. ಸರ್ಕಾರ ತೆಗೆದುಕೊಂಡಿರುವ ಹಿಂದಿನ ಕ್ರಮಗಳೇನು?

ಗೃಹ ಸಚಿವಾಲಯದ ಉತ್ತರ: 2016 ರಲ್ಲಿ ಕೇಂದ್ರ ಸರ್ಕಾರ ಆ ಮೂರು ದೇಶಗಳ ಅಲ್ಪಸಂಖ್ಯಾತರನ್ನು ಭಾರತದಲ್ಲಿ ಉಳಿಯಲು ಬೇಕಾದ ದೀರ್ಘಾವಧಿ ವೀಸಾವನ್ನು ಪಡೆಯಲು ಅರ್ಹರನ್ನಾಗಿ ಮಾಡಿದೆ.

ಸತ್ಯ ಏನು?  ಆದರೆ ಕೇಂದ್ರ ಕೆಲವು ವಿಚಾರಗಳನ್ನು ಮರೆತಂತಿದೆ. ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಆಡಳಿತದಿಂದ ಪಲಾಯನ ಮಾಡಿ ಭಾರತಕ್ಕೆ ಬರಲು ಬಯಸಿದ ಸಿಖ್‌ಗಳಿಗೆ ಭಾರತದ ವೀಸಾ ಸಿಗುವುದು ಸುಲಭವಿರಲಿಲ್ಲ. ಕಾಬೂಲ್‌ನಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಸಿಖ್ ವ್ಯಕ್ತಿಗೆ ಭಾರತ ವೀಸಾವನ್ನೇ ನೀಡಿರಲಿಲ್ಲ. 2021-22ರಲ್ಲಿ ಭಾರತದಲ್ಲಿ ಉಳಿಯಲು ಬಯಸಿದ 1500 ಪಾಕಿಸ್ತಾನಿ ಹಿಂದೂಗಳು ಭಾರತ ಸರ್ಕಾರ ಉಂಟು ಮಾಡಿದ ಒತ್ತಡ ಮತ್ತು ಅನೇಕ ಅಡೆತಡೆಗಳಿಂದಾಗಿ ಮರಳಿ ಪಾಕಿಸ್ತಾನಕ್ಕೆ ಹೋಗಬೇಕಾಯ್ತು. ಮ್ಯಾನ್ಮಾರ್‌ನಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳನ್ನು ಭಾರತ ಸರ್ಕಾರ ಗಡಿಪಾರು ಮಾಡಿದೆ.

8. ಯಾವುದೇ ವಿದೇಶಿ ದೇಶದಿಂದ ಬರುವ ಮುಸ್ಲಿಂ ವಲಸಿಗರಿಗೆ ಯಾವುದಾದರೂ ನಿರ್ಬಂಧವಿದೆಯೇ?

ಗೃಹ ಸಚಿವಾಲಯದ ಉತ್ತರ: ಸಿಎಎ ನ್ಯಾಚುರಲೈಸೇಷನ್‌ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ. ಆದ್ದರಿಂದ, ಯಾವುದೇ ದೇಶದಿಂದ ವಲಸೆ ಬಂದಿರುವ ಮುಸಲ್ಮಾನ ಸೇರಿದಂತೆ ಯಾವುದೇ ವ್ಯಕ್ತಿ ಭಾರತೀಯ ಪ್ರಜೆಯಾಗಲು ಬಯಸಿದರೆ, ಆತ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಕಾಯಿದೆಯು ಆ ಮೂರು ಇಸ್ಲಾಮಿಕ್ ದೇಶಗಳಲ್ಲಿ ತಮ್ಮ ರೀತಿಯ ಇಸ್ಲಾಂ ಪದ್ದತಿಗಳನ್ನು ಅನುಸರಿಸಿದ ಕಾರಣಕ್ಕೆ ಕಿರುಕುಳಕ್ಕೊಳಗಾದ ಯಾವುದೇ ಮುಸಲ್ಮಾನನ್ನು ಸದ್ಯ ಇರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ.

ನಿಜ ಏನು?  ಈ ಉತ್ತರವನ್ನು ನೋಡಿ, ಕೇಂದ್ರಕ್ಕೆ ಒಂದು ವಿಚಾರ ಚೆನ್ನಾಗಿ ತಿಳಿದಂತಿದೆ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮರು ತಮ್ಮದೇ ಆದ ಭಿನ್ನ ಇಸ್ಲಾಂ ಸಂಸ್ಕೃತಿಯನ್ನು (ಡಿಫರೆಂಟ್‌ ವರ್ಷನ್‌ ಆಫ್‌ ಇಸ್ಲಾಂ) ಅನುಸರಿಸಿದ ಕಾರಣಕ್ಕೆ ಅಲ್ಲಿ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು. ಆದರೆ ಅವರು ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದರೆ ಅಥವಾ ವೀಸಾದ ಅವಧಿಯನ್ನು ಮೀರಿದರೆ ಅವರು ಸಹಜವಾಗಿಯೇ  ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಡುತ್ತಾರೆ. ಹೀಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅವರು ಅನರ್ಹರಾಗುತ್ತಾರೆ. ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವರಿಗೆ ಸಾಧ್ಯವಿಲ್ಲ.

ಇವಿಷ್ಟು ಕೇಂದ್ರ ಸರ್ಕಾರದ ಅರೆಬೆಂದ ಸುಳ್ಳುಗಳಿಂದ ತುಂಬಿರುವ, ಜನರ ದಿಕ್ಕು ತಪ್ಪಿಸಲೆಂದೇ ಪ್ರಕಟ ಮಾಡಿರುವ ಸಿಎಎಯ ಬಗ್ಗೆ ಧನಾತ್ಮಕ ನಿರೂಪಣೆ. ಆದರೆ, ಇದನ್ನು ಪ್ರಕಟಿಸಿ ದಿನ ಒಂದು ಕಳೆಯುವ ಮೊದಲೇ ತೆಗೆದು ಹಾಕಿದ್ದಾರೆ. ಇದರಲ್ಲಿ ಇರುವ ಸುಳ್ಳು ಕೇಂದ್ರಕ್ಕೆ ಗೊತ್ತಿದೆ. ಜನ ಬುದ್ದಿವಂತರಾಗಿ, ಈ ಸುಳ್ಳು ಪ್ರಶ್ನೋತ್ತರಾವಳಿಯನ್ನು ವಿಶ್ಲೇಷಣೆ ಮಾಡಿದರೆ ಕೇಂದ್ರದ ಕಪಟ ತಂತ್ರ ಹೊರಗೆ ಬರುತ್ತದೆ ಎಂಬುದು ಅದಕ್ಕೆ ಗೊತ್ತಾಗಿದೆ, ಹಾಗಾಗಿ ಡಿಲಿಟ್‌ ಮಾಡಿದ್ದಾರೆ…ಅಷ್ಟೇ!

You cannot copy content of this page

Exit mobile version