Wednesday, May 21, 2025

ಸತ್ಯ | ನ್ಯಾಯ |ಧರ್ಮ

ಮಳೆ ಅವಾಂತರ ನೀರು ಕಲುಷಿತಗೊಳ್ಳುವ ಸಾಧ್ಯತೆ ; ಮುಂಜಾಗ್ರತೆ ವಹಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ

ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅದರಲ್ಲಿಯೂ ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆಗಳಿದ್ದು ನೀರನ್ನು ಕಾಯಿಸಿಕೊಂಡು ಸೇವಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರಲ್ಲದೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಸೂಚಿಸಿದ್ದಾರೆ.

ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಕುಡಿಯುವ ನೀರು ಸರಬರಾಜಾಗುವ ಕೊಳವೆಗಳಿಗೆ ಕಲುಷಿತ ನೀರು ಸೇರಿಕೊಳ್ಳುವ ಸಾಧ್ಯತೆಗಳಿವೆ, ಇದರಿಂದ ಮನೆಗಳಿಗೆ ಸರಬರಾಜಾಗುವ ನೀರು ಕಲುಷಿತಗೊಳ್ಳುವ ಸಂಭವವಿರುತ್ತದೆ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮುಂಜಾಗರೂಕತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ, ಆದಾಗ್ಯೂ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರು ನೀರನ್ನು ಕಾದಾರಿಸಿ ಕುಡಿಯುವುದು ಕ್ಷೇಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಡು ಬೇಸಿಗೆಯ ನಂತರ ಒಮ್ಮೆಲೆ ಮಳೆ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬಬಹುದಾಗಿದೆ, ಈ ಬಗ್ಗೆಯೂ ಗ್ರಾಮೀಣವಾಸಿಗಳು ಜಾಗ್ರತೆಯಿಂದ ಇರಬೇಕು, ಶಾಲೆಗಳು ಪುನರಾರಂಭವಾಗುವ ದಿನಗಳು ಸಮೀಪಿಸಿರುವುದರಿಂದ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ನಿಗಾ ಇರಿಸಿಕೊಳ್ಳಬೇಕೆಂದು ಸಚಿವರು ತಿಳಿಸಿದ್ದಾರೆ.

ಈ ಸಂಬಂಧದಲ್ಲಿ ಪಂಚಾಯತ್‌ ರಾಜ್‌ ಆಯುಕ್ತರಿಗೆ ಸಚಿವರು ಸೂಚನೆ ನೀಡಿದ್ದು, ಪ್ರತಿ ಗ್ರಾಮದಲ್ಲಿಯೂ ನಿಯಮಿತವಾಗಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಲು ನಿರ್ದೇಶಿಸಿದ್ದಾರೆ. ನೀರಿನ ಮೂಲಗಳಲ್ಲಿ ಹಾಗೂ ನೀರು ಸರಬರಾಜು ಕೊಳವೆ ಮಾರ್ಗಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಹಾಗೂ ಕಲುಷಿತಗೊಳ್ಳದಂತೆ ತಡೆಯಲು ಅಧಿಕಾರಿಗಳು ಕಾರ್ಯಕ್ರಮ ಹಾಕಿಕೊಳ್ಳಲು ಸೂಚಿಸಿದ್ದಾರೆ.

ನೀರು ಮಾದರಿ ಪರೀಕ್ಷೆ ಮಾಡುವ ಪ್ರಯೋಗಾಲಯಗಳನ್ನು ಸಮರ್ಪಕವಾಗಿ ನಿರ್ವಹಿಸುವತ್ತ ಗಮನ ಹರಿಸಬೇಕೆಂದು ಸಚಿವರು  ನಿರ್ದೇಶನ ನೀಡಿದ್ದಾರೆ. ನೀರು ಮಾದರಿ ಪರೀಕ್ಷೆಯಲ್ಲಿ ಅನುಮಾನ ಬಂದಲ್ಲಿ ತಕ್ಷಣ ಅಂತಹ ಪ್ರದೇಶಗಳಿಗೆ ಕೊಳವೆ ನೀರು ಪೂರೈಕೆ ನಿಲ್ಲಿಸಿ, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕೆಂದು ಸಚಿವರು ಆದೇಶಿಸಿದ್ದಾರೆ.

ನೀರಿನ ಮೂಲಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯವಾಗಿದ್ದು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಸಚಿವರು ಸೂಚಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page