ಮೈಸೂರು: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
“ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ” ಎಂಬ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, “ಕೂಸು ಹುಟ್ಟುವುದಕ್ಕೆ ಮುಂಚೆಯೇ ಕುಲಾವಿ ಹೊಲಿಸುವುದು ಸರಿಯಲ್ಲ. ಮೊದಲು ನಾವೆಲ್ಲರೂ ಒಟ್ಟಾಗಿ ಚುನಾವಣೆ ಗೆಲ್ಲಬೇಕು. ಆ ನಂತರ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ರಾಜ್ಯದ ಮೈತ್ರಿಗಿಂತ ಎನ್‌ಡಿಎ (NDA) ಒಕ್ಕೂಟದ ನಿರ್ಧಾರವೇ ಇಲ್ಲಿ ಬಹಳ ಮುಖ್ಯ,” ಎಂದು ಮಾರ್ಮಿಕವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, “ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂದು ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳುತ್ತಿದ್ದಾರೆ. ಯುವನಿಧಿ ಈಗಾಗಲೇ ಸ್ಥಗಿತಗೊಂಡಿದೆ, ಶಕ್ತಿ ಯೋಜನೆಯಿಂದಾಗಿ ಸಾರಿಗೆ ನೌಕರರು ಸಂಕಷ್ಟಕ್ಕೆ ಸಿಲುಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರೇ ಮುಂದೆ ತಮ್ಮ ಪಕ್ಷ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ,” ಎಂದು ಟೀಕಿಸಿದರು.
ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರವಾಗಿ ಮಾತನಾಡಿದ ಅಶೋಕ್, “ನಮ್ಮ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ಮಣಿದು ಸರ್ಕಾರ 56,000 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನಾವು 2.84 ಲಕ್ಷ ಹುದ್ದೆಗಳ ಭರ್ತಿಗಾಗಿ ಒತ್ತಾಯಿಸಿದ್ದೆವು. ಉಳಿದ ಹುದ್ದೆಗಳ ನೇಮಕಾತಿ ಬಗ್ಗೆ ಸರ್ಕಾರ ಶೀಘ್ರವೇ ಸ್ಪಷ್ಟನೆ ನೀಡದಿದ್ದರೆ ಬೃಹತ್ ಪಾದಯಾತ್ರೆ ನಡೆಸಲಾಗುವುದು,” ಎಂದು ಎಚ್ಚರಿಸಿದರು.
ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪೊಲೀಸರು ಹೋರಾಟಕ್ಕೆ ಅನುಮತಿ ನೀಡದ ಕಾರಣ ಬಿಜೆಪಿ ಲೆಟರ್ ಹೆಡ್‌ನಲ್ಲೇ ಅನುಮತಿ ಪಡೆದು ವಿದ್ಯಾರ್ಥಿಗಳ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ಅದು ಅಪ್ಪಟ ಬಿಜೆಪಿ ನೇತೃತ್ವದ ಹೋರಾಟವಾಗಿತ್ತು,” ಎಂದು ಸಮರ್ಥಿಸಿಕೊಂಡರು.
