Saturday, June 15, 2024

ಸತ್ಯ | ನ್ಯಾಯ |ಧರ್ಮ

ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಮೋದಿ ನನಗೆ ಟಿಕೆಟ್‌ ಕೊಟ್ಟಿಲ್ಲ: ಪ್ರಜ್ಞಾ ಸಿಂಗ್‌ ಠಾಕೂರ್

ಭೋಪಾಲ್:‌ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಒಂದಷ್ಟು ಹಾಲಿ ಸಂಸದರು ನಿರಾಶರಾಗಿದ್ದಾರೆ. ಬಹಳಷ್ಟು ಜನಪ್ರಿಯ ಆದರೆ ಕೆಲಸ ಮಾಡದ ಸಂಸದರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನಿರಾಕರಿಸಿದೆ. ಅಧಿಕಾರ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಬಿಜೆಪಿ ಹೊಸ ಜನಪ್ರಿಯ ಮುಖಗಳಿಗೆ ಮಣೆ ಹಾಕಿದೆ. ಈ ಮೂಲಕ ಎರಡು ಬಾರಿ ಸಂಸದರಾಗಿಯೂ ಏನೂ ಕೆಲಸ ಮಾಡದ ಸಂಸದರ ವಿರುದ್ಧದ ಅಸಮಾಧಾನ ಪಕ್ಷದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಈಗ ಟಿಕೆಟ್‌ ತಪ್ಪಿಸಿಕೊಂಡವರಲ್ಲಿ ಒಬ್ಬರಾದ ಪ್ರಜ್ಞಾ ಸಿಂಗ್‌ ಠಾಕೂರ್‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮೋದಿ 2019ರಲ್ಲೇ ನನ್ನನ್ನು ಕ್ಷಮಿಸುವುದಿಲ್ಲ ಎಂದಿದ್ದರು. ಹೀಗಾಗಿಯೇ ಈ ಬಾರಿ ನನಗೆ ಟಿಕೆಟ್‌ ಕೊಟ್ಟಿಲ್ಲ ಎಂದು ಅವರು ದೂರಿದ್ದಾರೆ. ಭೋಪಾಲ್‌ ಕ್ಷೇತ್ರದ ಸಂಸದರಾಗಿರುವ ಪ್ರಗ್ಯಾ (ಪ್ರಜ್ಞಾ) ಸಿಂಗ್‌ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಯೂ ಹೌದು. 2019ರಲ್ಲಿ ಅವರು ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು.

“ನಾನು ಕಾಂಗ್ರೆಸ್‌ ಸೇರಿದಂತೆ ವಿರುದ್ಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಸತ್ಯ ಹೇಳಿದ್ದಕ್ಕಾಗಿ ಬೆಲೆ ತೆತ್ತಿದ್ದೇನೆ. ಆದರೆ ನಾನು ಯಾವುದೇ ಕಾರಣಕ್ಕೂ ಟಿಕೆಟ್‌ ಬೇಕೆಂದು ಅಂಗಲಾಚುವುದಿಲ್ಲ” ಎಂದು ಅವರು ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಏನಿದು ಕ್ಷಮೆಯ ವಿವಾದ?

ವಾಸ್ತವವಾಗಿ, 2019ರಲ್ಲಿ, ಠಾಕೂರ್ ಅವರು ನಾಥುರಾಮ್ ಗೋಡ್ಸೆಯನ್ನು ನಿಜವಾದ ದೇಶಭಕ್ತ ಎಂದು ಕರೆದಿದ್ದರು. ಆಗ ಅವರ ಹೇಳಿಕೆ ನಂತರ ಸಾಕಷ್ಟು ವಿವಾದಗಳು ಎದ್ದಿದ್ದವು. ಆ ಸಮಯದಲ್ಲಿ, ಪ್ರಧಾನಿ ಮೋದಿ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದು ಬೇರೆ ವಿಷಯ, ಆದರೆ ನಾನು (ಠಾಕೂರ್) ಅವರನ್ನು ನನ್ನ ಹೃದಯದಿಂದ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅವರು ನೀಡಿರುವ ಹೇಳಿಕೆಗಳು ಅತ್ಯಂತ ಕೆಟ್ಟದ್ದು ಎಂದು ಬಣ್ಣಿಸಿದ್ದರು.

ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅವರಿಗೆ ಕೋರ್ಟ್‌ ಸಾಕಷ್ಟು ಸಮನ್ಸ್‌ ನೀಡಿದ್ದು ಅವರು ಅನಾರೋಗ್ಯದ ಕಾರಣ ನೀಡಿ ತಪ್ಪಿಸಿಕೊ‍ಳ್ಳುತ್ತಿದ್ದಾರೆ. ಅವರಿಗೆ ಇತ್ತೀಚೆಗೆ ಕೋರ್ಟ್‌ ಛೀಮಾರಿ ಹಾಕಿದೆ.

Related Articles

ಇತ್ತೀಚಿನ ಸುದ್ದಿಗಳು