ಆಪ್ತರಿಂದಲೇ ಖೆಡ್ಡಾಕ್ಕೆ ಬಿದ್ದ ಪ್ರಜ್ವಲ್ ರೇವಣ್ಣ – ಎಸ್‌ಐಟಿ ಬಹಿರಂಗ

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಮಹತ್ವದ ತಿರುವು ದೊರೆತಿದ್ದು, ತಮ್ಮದೇ ಮಾಜಿ ಆಪ್ತರಿಂದಲೇ ಅವರು ಖೆಡ್ಡಾಕ್ಕೆ ಬಿದ್ದಿರುವುದು ವಿಶೇಷ ತನಿಖಾ ದಳ (ಎಸ್‌ಐಟಿ) ಪರಿಶೀಲನೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ನವೀನ್ ಗೌಡ, ಕಾರ್ತಿಕ್, ಚೇತನ್ ಹಾಗೂ ಹರೀಶ್ ಹಲವು ವರ್ಷಗಳಿಂದ ಪ್ರಜ್ವಲ್ ರೇವಣ್ಣ ಅವರ ಆಪ್ತ ವಲಯದಲ್ಲೇ ಸಕ್ರಿಯರಾಗಿದ್ದರು. ಇವರಲ್ಲಿ ಕಾರ್ತಿಕ್ ಪ್ರಜ್ವಲ್ ಅವರ ಕಾರು ಚಾಲಕರಾಗಿದ್ದು, ಅವರ ವೈಯಕ್ತಿಕ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದನೆಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ಕಾರಣದಿಂದ ಪ್ರಜ್ವಲ್ ಅವರ ಮೊಬೈಲ್‌ನಲ್ಲಿದ್ದ ವಿಡಿಯೋಗಳನ್ನು ಕಾರ್ತಿಕ್ ಕದ್ದಿರುವುದು ಎಸ್‌ಐಟಿ ತನಿಖೆಯಲ್ಲಿ ಹೊರಬಂದಿದೆ. ಚೇತನ್ ಬಿ.ಸಿ. ಹಾಗೂ ನವೀನ್ ಗೌಡ ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು, ಬಳಿಕ ರಾಜಕೀಯ ಅಸಮಾಧಾನದಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹರೀಶ್ ಪ್ರಜ್ವಲ್ ಕುಟುಂಬದ ವ್ಯವಹಾರಗಳ ಆಡಿಟ್ ಕೆಲಸ ನಿರ್ವಹಿಸುತ್ತಿದ್ದನು ಎಂಬುದೂ ತಿಳಿದುಬಂದಿದೆ. ಇವರು ಎಲ್ಲರೂ ಸೇರಿಕೊಂಡೇ ವಿಡಿಯೋ ಹರಡುವ ಸಂಚು ರೂಪಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಇನ್ನೊಂದೆಡೆ, ಪ್ರಕರಣದ ಎ6 ಆರೋಪಿ ಹಾಗೂ ವಕೀಲ ದೇವರಾಜೇಗೌಡ ಅವರು ಪೆನ್‌ಡ್ರೈವ್‌ಗಳಲ್ಲಿ ಅಶ್ಲೀಲ ವಿಡಿಯೋಗಳಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬಳಿಕ, ಕಾರ್ತಿಕ್‌ನನ್ನು ಇತರ ಆರೋಪಿಗಳು ಸಂಪರ್ಕಿಸಿ ವಿಡಿಯೋ ಹಂಚಿಕೆ ಕಾರ್ಯಕ್ಕೆ ಮುಂದಾದರು ಎನ್ನಲಾಗಿದೆ. ಪೆನ್‌ಡ್ರೈವ್ ಖರೀದಿ ಹಾಗೂ ವಿತರಣೆ ಕುರಿತಂತೆ ಸಹ ವಿವರಗಳು ಬಹಿರಂಗವಾಗಿದ್ದು, ಕಾರ್ತಿಕ್ 20 ಸಾವಿರ ರೂ. ಹಣ ನೀಡಿ ಚಿರಂತ್ ಮೂಲಕ ಪೆನ್‌ಡ್ರೈವ್‌ಗಳನ್ನು ಖರೀದಿಸಿ, ನಂತರ 13,500 ರೂ. ನೀಡಿ ಹಾಸನದಲ್ಲಿ ಸುಮಾರು 70 ಪೆನ್‌ಡ್ರೈವ್‌ಗಳನ್ನು ಖರೀದಿ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಈ ಸಂಪೂರ್ಣ ಪ್ರಕರಣದ ಇಂಚಿಂಚು ಮಾಹಿತಿ ಎಸ್‌ಐಟಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಗೊಂಡಿದ್ದು, ಮಾಜಿ ಆಪ್ತರೇ ಈ ಸಂಚಿನಲ್ಲಿ ಪ್ರಮುಖ ಪಾತ್ರವಹಿಸಿರುವುದು ಸ್ಪಷ್ಟವಾಗಿದೆ.

Related Articles

ಇತ್ತೀಚಿನ ಸುದ್ದಿಗಳು