ದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಅಕ್ಟೋಬರ್ 23 ರಂದು ದೇಶಾದ್ಯಂತ ಬೃಹತ್ ‘ಪ್ರಜಾ ಮಾರ್ಚ್’ (ಜನತಾ ಮೆರವಣಿಗೆ) ಹಮ್ಮಿಕೊಳ್ಳುವುದಾಗಿ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ (People Against SIR) ಒಕ್ಕೂಟ ಭಾನುವಾರ ಪ್ರಕಟಿಸಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಈ ಪ್ರಕ್ರಿಯೆಯ ಭಾಗವಾಗಿ ಈವರೆಗೆ ಅಕ್ರಮವಾಗಿ ತೆಗೆದುಹಾಕಲಾಗಿರುವ ಮತದಾರರ ಹೆಸರುಗಳನ್ನು ಮರಳಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.
ದೇಶದ ಪ್ರತಿಯೊಂದು ರಾಜ್ಯದ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ರೈತರು, ಯುವಕರು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಬುದ್ಧಿಜೀವಿಗಳು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕೂಟ ಕರೆ ನೀಡಿದೆ.
“ಹರ್ ಹಾತ್ ಮೇ ತಿರಂಗಾ, ಹರ್ ಗಲೀ ಜಂತರ್ ಮಂತರ್” (ಪ್ರತಿ ಕೈಯಲ್ಲೂ ತ್ರಿವರ್ಣ ಧ್ವಜ, ಪ್ರತಿ ಗಲ್ಲಿಯೂ ಜಂತರ್ ಮಂತರ್) ಎಂಬ ಆಶಯದೊಂದಿಗೆ ಈ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಪ್ರತಿಭಟನಾ ಒಕ್ಕೂಟದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಅಖಿಲ ಭಾರತ ಕಿಸಾನ್ ಸಭಾದ ಹಿರಿಯ ನಾಯಕ ಕೃಷ್ಣ ಪ್ರಸಾದ್ ಹಾಗೂ ಸಿಪಿಐ (ಎಂಎಲ್) ಮುಖಂಡ ಸಾಯಿ ಬಾಲಾಜಿ ಸೇರಿದಂತೆ ಹಲವು ಪ್ರಮುಖ ಸಾರ್ವಜನಿಕ ನಾಯಕರು ಮುಂಚೂಣಿಯಲ್ಲಿದ್ದಾರೆ.
