Saturday, June 15, 2024

ಸತ್ಯ | ನ್ಯಾಯ |ಧರ್ಮ

ತನ್ನ ಕಚೇರಿಯಿಂದ ಅಂಬೇಡ್ಕರ್‌, ವಾಲ್ಮೀಕಿ ಫೋಟೊ ತೆಗೆಸಿದ ಆರೋಪ: ಪ್ರಲ್ಹಾದ ಜೋಶಿ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್

ಧಾರವಾಡ: ಈ ಬಾರಿ ಚುನಾವಣೆ ಘೋಷಣೆಯಾದ ದಿನದಿಂದಲೂ ಒಂದಲ್ಲ ಒಂದು ಅಡಚಣೆ ಎದುರಿಸುತ್ತಲೇ ಇರುವ ಕೇಂದ್ರ ಸಚಿವ ಹಾಗೂ ಧಾರವಾಡ ಕೇತ್ರದ ಲೋಕಸಭಾ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಈಗಾಗಲೇ ಲಿಂಗಾಯತರ ವಿರೋಧ ಕಟ್ಟಿಕೊಂಡು ಪರದಾಡುತ್ತಿರುವ ಜೋಶಿಯವರು ಈಗ ದಲಿತ ಮತ್ತು ನಾಯಕ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಕಾಣುತ್ತಿದೆ. ಅವರು ತಮ್ಮ ಕಚೇರಿಯಲ್ಲಿದ್ದ ವಾಲ್ಮಿಕಿ ಮಹರ್ಷಿ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಫೋಟೊಗಳನ್ನು ತೆಗೆಸುತ್ತಿರುವ ವಿಡಿಯೋ ಒಂದನ್ನು ಸುದ್ದಿ ಸಂಸ್ಥೆಯೊಂದು ಪ್ರಸಾರ ಮಾಡಿದೆ.

ಆ ಸುದ್ದಿಯ ತುಣುಕನ್ನು ಹಂಚಿಕೊಂಡಿರುವ ಕಾಂಗ್ರೆಸ್‌ ” ಬಿಜೆಪಿ & ಆರೆಸ್ಸೆಸ್‌ಗೆ ಅಂಬೇಡ್ಕರ್ ಕಂಡರೆ ಕೋಪ, ಬಸವಣ್ಣನ ಕಂಡರೆ ದ್ವೇಷ, ವಾಲ್ಮೀಕಿಯನ್ನು ಕಂಡರೆ ಅಸಹನೆ, ಸಂಘಪರಿವಾರದ ಮುದ್ದಿನ ಕೂಸಾದ ಪ್ರಲ್ಹಾದ ಜೋಶಿ ಅವರು ತಮ್ಮೊಳಗಿನ ಲಿಂಗಾಯತ, ದಲಿತ, ಹಿಂದುಳಿದ ವರ್ಗಗಳ ಮೇಲಿನ ದ್ವೇಷವನ್ನು ಮಹನೀಯರ ಫೋಟೋವನ್ನು ಹೊರಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲೇ ಚುನಾವಣೆ ನಿಂತಿದ್ದರೂ ಅಂಬೇಡ್ಕರ್ ರನ್ನು ಆಚೆ ಎಸೆಯುವ ಸಂಘದ ಮನಸ್ಥಿತಿಯನ್ನು ನಾಡಿನ ಜನತೆ ಸಹಿಸುವುದಿಲ್ಲ. ಬಿಜೆಪಿ ಹಾಗೂ ಜೋಷಿಯ ದುರಹಂಕಾರ ಪರಮಾವಧಿಗೆ ತಲುಪಿದೆ, ಜನತೆ ಬಿಜೆಪಿಯನ್ನು ಹೆಸರಿಲ್ಲದಂತೆ ನಿರ್ನಾಮ ಮಾಡಲಿದ್ದಾರೆ” ಟ್ವೀಟ್‌ ಮಾಡಿದೆ.

ಸುದ್ದಿಯ ಕುರಿತು ಸಂಸದ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಈ ಬಾರಿಯ ಲೋಕಸಭಾ ಚುನಾವಣೆ ಎನ್ನುವುದು ಬಹುತೇಕ ಬ್ರಾಹ್ಮಣ ವರ್ಸಸ್‌ ಲಿಂಗಾಯತ ಎನ್ನುವಂತಾಗಿದ್ದು ಈಗಾಗಲೇ ಬಿಎಲ್‌ ಸಂತೋಷ್‌ ಅವರ ಬಣ ಬಹುತೇಕ ಪ್ರಚಾರದಿಂದ ದೂರ ಉಳಿದಿದೆ. ಜೊತೆಗೆ RSS ಕೂಡಾ ಸುಮ್ಮನಿರುವುದು ಪ್ರಲ್ಹಾದ ಜೋಶಿಯವರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಈ ನಡುವೆ ಈ ಘಟನೆ ಅವರಿಗೆ ಮತ್ತಷ್ಟು ತಲೆನೋವು ತಂದಿಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು