ಜನ ಸಾಮಾನ್ಯರ ವೇದಿಕೆ ವತಿಯಿಂದ ಅಕ್ಟೋಬರ್ 2 ನೇ ತಾರೀಕು ಬೀದರನಲ್ಲಿ ಪ್ರಾರಂಭಗೊಂಡ ಯುವ ಪರಿವರ್ತನೆ ಯಾತ್ರೆ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೊನೆಗೊಂಡಿತು.
ಯಾತ್ರೆಯ ಪ್ರಧಾನ ಸಂಚಾಲಕರಾದ ಮುಧೋಳ ಯಲ್ಲಪ್ಪ ಹೆಗಡೆ ಅವರು ಮಾತನಾಡಿ ಈ ಯಾತ್ರೆಯಿಂದ ನಮ್ಮಲ್ಲಿ ಮೂಡಿರುವ ಭಾವನೆ ಏನೆಂದರೆ ರಾಜ್ಯದಲ್ಲಿ ಬಿಡಿ ಬಿಡಿಯಾಗಿ ನಡೆಯುತ್ತಿರುವ ರೈತ ಹೋರಾಟಗಳು ಮತ್ತು ಯುವ ಜನರ ಹೋರಾಟಗಳನ್ನು ಬೆಸೆಯುವ ಕೆಲಸ ಮಾಡಬೇಕಿದೆ ಅದರಿಂದ ಇಡೀ ಕನ್ನಡನಾಡಿನ ಅಭಿವೃದ್ಧಿ ಸಾಧ್ಯವಿದೆ ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ದಾವಣಗೆರೆ ವಿನಯ ಕುಮಾರ್ ರವರು ನಿರಂತರತೆ ಮಾತ್ರ ಯಾವುದೇ ಚಳುವಳಿಯನ್ನು ಯಶಸ್ಸಿನ ಕಡೆ ಕೊಂಡೊಯ್ಯುತ್ತವೆ ಎಂದರು.
ಈ ಯಾತ್ರೆಯ ರುವಾರಿಗಳಲ್ಲಿ ಒಬ್ಬರಾದ ದ್ರಾವಿಡ ಕನ್ನಡಿಗರು ಸಂಘಟನೆಯ ಮಂಡ್ಯ ಅಬಿ ಒಕ್ಕಲಿಗ ಮಾತನಾಡುತ್ತಾ ಉತ್ತರ ಕರ್ನಾಟಕ ಜನ ಜೀವನ ದರ್ಶನವಾಗಿ ಈ ಯಾತ್ರೆಯಿಂದ ಮನ ಕಲಕಿದೆ ಸಮಗ್ರ ಕನ್ನಡನಾಡು ನುಡಿ ಅಭಿವೃದ್ಧಿ ಆಗಬೇಕೆಂದರೆ ಹಳೇ ಮೈಸೂರು ಭಾಗದ ಎಲ್ಲಾ ವೈಚಾರಿಕ ಹೋರಾಟಗಾರರು ಉತ್ತರ ಕರ್ನಾಟಕದ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಿವಲಿಂಗ ಬಿದರಿ, ಮನು ವಿಶ್ವಕರ್ಮ, ಶಂಕರ್ ಬಾಗಲಕೋಟೆ, ಲೀಲಾ ಶಿವಮೊಗ್ಗ, ಭೂಮಿಕ ತರಿಕೆರೆ, ಆನಂದ್ ಬೌದ್ಧ ಬೆಂಗಳೂರು ಇತರರು ಉಪಸ್ಥಿತರಿದ್ದರು.