ಮೈಸೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ನಿರ್ಭಾವುಕ ಮತ್ತು ನಿರ್ಲಜ್ಜ” ಆಡಳಿತವೇ ಕಾರಣ ಎಂದು ಆರೋಪಿಸಿದ್ದಾರೆ.
ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ಸಿದ್ದರಾಮಯ್ಯ ಅವರಿಗೆ ಕಾಮನ್ ಸೆನ್ಸ್ ಇದ್ದಿದ್ದರೆ ಈ ಕಾಲ್ತುಳಿತ ಸಂಭವಿಸುತ್ತಿರಲಿಲ್ಲ. 2.5 ಲಕ್ಷಕ್ಕೂ ಹೆಚ್ಚು ಜನರನ್ನು ಸಂಭ್ರಮಾಚರಣೆಗೆ ಕರೆದು, ಸರಿಯಾದ ಯೋಜನೆ ಇಲ್ಲದೆ ಈ ದುರಂತಕ್ಕೆ ಎಡೆ ಮಾಡಿಕೊಟ್ಟರು. ಇದೊಂದು ನಿರ್ಭಾವುಕ ಮತ್ತು ನಿರ್ಲಜ್ಜ ಆಡಳಿತದ ಪರಿಚಯ” ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನಿರ್ಭಾವುಕ ನಿರ್ಲಜ್ಜ ವ್ಯಕ್ತಿ.ಸಿಎಂ ಮೊಮ್ಮಗ, ಸಚಿವರು ಅಧಿಕಾರಿಗಳ ಮಕ್ಕಳ ಫೋಟೋಗ್ರಾಫ್ ಆಟೋಗ್ರಾಫ್ ಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಯಿತು.ಯುಪಿ ಯ ಸಿಎಂ ಯೋಗಿ ಅದಿತ್ಯನಾಥ್ ಗೆ ಭದ್ರತೆಯ ಪಾಠ ಮಾಡಿದ್ದ ಸಂತೋಷ್ ಲಾಡ್, ಪ್ರಿಯಾಂಕ ಖರ್ಗೆ ಈಗ ಎಲ್ಲಿ ಹೋದ್ರು? ಯುಪಿ ಸಿಎಂ 60 ಕೋಟಿ ಜನರನ್ನು ಸಂಭಾಳಿಸಿದ್ದಾರೆ ನೀವು 60 ಸಾವಿರ ಜನರನ್ನು ಸಂಭಾಳಿಸಲು ಆಗಲಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ದರಿದ್ರ ಬಂದಿದೆ. ಆರ್ ಸಿ ಬಿ ಗೆಲುವಿನಲ್ಲಿ ಪ್ರಚಾರ ಪಡೆಯಲು ಜನರನ್ನು ಬಲಿ ಕೊಟ್ಟಿತು.ಡಿಸಿಎಂ ಶಾಲು, ಗ್ಲಾಸ್ ಹಾಕಿ ಕೊಂಡು ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಅದನ್ನು ಬಿಟ್ಟು ಯಾವ ತಯಾರಿಯೂ ನಡೆದಿರಲಿಲ್ಲ. ವಿರಾಟ್ ಕೊಹ್ಲಿ ಏನಾದರೂ ಫೋನ್ ಮಾಡಿ ಇವತ್ತೆ ಬಂದು ಬಿಡ್ತೀನಿ ಪ್ರೋಗ್ರಾಂ ಮಾಡಿ ಅಂದಿದ್ರಾ? ನಿಮಗೆ ಮರು ದಿನವೆ ಕಾರ್ಯಕ್ರಮ ಮಾಡುವ ಒತ್ತಡ ಏನಿತ್ತು? ಸರಕಾರಕ್ಕೆ ಮಿನಿಮಮ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸರ್ಕಾರ ಮತ್ತು ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದರು.