ದಸರಾ ಉದ್ಘಾಟನೆಗೆ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆ ನಂತರ ಮೊದಲ ಬಾರಿಗೆ ಅವರ ಆಯ್ಕೆ ವಿರೋಧಿಸಿದ್ದು ಮಾಜಿ ಸಂಸದ ಪ್ರತಾಪ್ ಸಿಂಹ. ಇದೀಗ 2017 ರ ನಾಡಹಬ್ಬ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಜೊತೆಗಿನ ಫೋಟೋ ವೈರಲ್ ಆಗಿದೆ.
‘ಬಾನು ಮುಷ್ತಾಕ್ ಅವರು ಮುಸ್ಲಿಂ ಆಗಿದ್ದು, ಅವರ ಆಚರಣೆಗಳು ಹಿಂದೂ ಧರ್ಮದ ಆಚರಣೆಗೆ ಪೂರ್ಣ ವಿರುದ್ಧವಾಗಿದೆ, ಹೀಗಾಗಿ ಅವರ ಆಯ್ಕೆ ಸೂಕ್ತವಲ್ಲ ಎಂದು ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದರು. ಬಾನು ಮುಷ್ತಾಕ್ ಅವರ ಧರ್ಮವೇ ಅವರ ಆಯ್ಕೆ ವಿರೋಧದ ಮಾನದಂಡ ಆಗುವುದಾದರೆ, ಈ ಹಿಂದೆ ಕವಿ ನಿಸಾರ್ ಅಹಮದ್ ಅವರ ಆಯ್ಕೆ ಬಗ್ಗೆ ಯಾಕೆ ಪ್ರತಾಪ್ ಸಿಂಹ ದನಿ ಎತ್ತಿರಲಿಲ್ಲ ಎಂಬ ಪ್ರಶ್ನೆ ಈಗ ಮೂಡಿದೆ.
ಹಿಂದೂ ಧಾರ್ಮಿಕ ಪದ್ಧತಿಗಳಲ್ಲಿ ಯಾವುದೇ ನಂಬಿಕೆ ಇಲ್ಲದ ಬಾನು ಮುಷ್ತಾಕ್ ಅವರು ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವರೇ? ಸಲ್ಲಿಸಿ, ದಸರಾ ಉದ್ಘಾಟನೆ ನಡೆಸುವರೇ ಎಂದು ಪ್ರಶ್ನೆ ಎತ್ತಿದ್ದಾರೆ. ಅಷ್ಟೇ ಅಲ್ಲದೆ 2022 ರಲ್ಲಿ ಬಾನು ಮುಷ್ತಾಕ್ ಅವರು ಭಾಷೆ ಮತ್ತು ಆಚರಣೆ ಬಗ್ಗೆ ದನಿ ಎತ್ತಿ ಮಾಡಿದ ಭಾಷಣದ ತುಣುಕೊಂದನ್ನು ತೆಗೆದುಕೊಂಡು ಬಾನು ಮುಷ್ತಾಕ್ ಹಿಂದೂ ಧಾರ್ಮಿಕ ಆಚರಣೆ ವಿರೋಧಿ ಎಂಬಂತೆ ಮಾತನಾಡಿದ್ದಾರೆ.
ಸಧ್ಯ 2017 ರಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ನೆರವೇರಿಸಿದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ಜೊತೆಗಿನ ಫೋಟೋ ಇಟ್ಟು ಈಗ ಪ್ರತಾಪ್ ಸಿಂಹನಿಗೆ ಪ್ರಶ್ನೆ ಎತ್ತಿದ್ದಾರೆ. ಧಾರ್ಮಿಕ ಕಾರಣವೇ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಕ್ಕೆ ಕಾರಣ ಎನ್ನುವುದಾದರೆ ನಿಸಾರ್ ಅಹಮದ್ ಅವರಿಗೆ ವಿರೋಧ ಯಾಕಿಲ್ಲ ಎಂದು ಪ್ರಶ್ನೆ ಎತ್ತಿದ್ದಾರೆ.