Friday, June 14, 2024

ಸತ್ಯ | ನ್ಯಾಯ |ಧರ್ಮ

ಭೂತಾರಾಧನೆಯ ಮೂಲ ಎಲ್ಲಿದೆ?

ಕಟೀಲು ಬಪ್ಪನಾಡು, ಚಿತ್ರಾಪುರ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಬರುವ ಶೇ. 99 ಭಕ್ತರಿಗೆ ಅಲ್ಲಿ ಸಾಂಕೇತಿಕವಾಗಿ ಮಹಿಳೆಯ ಅಂಗ ಪೂಜಿಸುವ ವಿಷಯ ಗೊತ್ತೇ? ಹೆಚ್ಚಿನ ವಿವರಗಳಿಗೆ ಚಿಂತಕ ಪ್ರವೀಣ್‌ ಎಸ್‌ ಶೆಟ್ಟಿಯವರ ಈ ಮಹತ್ವದ ಲೇಖನ ಓದಿ

ನಟ ಚೇತನ್ ತುಳುನಾಡಿನ ಭೂತದ ಕೋಲ ನೇಮ ವೈದಿಕ ಸಂಸ್ಕೃತಿಯಲ್ಲ, ಅದು ಮೂಲನಿವಾಸಿಗಳ ಆದಿಮ ಸಂಸ್ಕೃತಿ ಎಂದು ಹೇಳಿದ್ದು ಬಲಪಂಥೀಯರಿಂದ ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಜೀವಂತ ಕೋಳಿಯ ರಕ್ತವನ್ನು ಆವೇಶದಲ್ಲಿರುವ ಪಾತ್ರಿ ಕುಡಿಯುವುದು ಮೂಲನಿವಾಸಿ ಸಂಸ್ಕೃತಿಯನ್ನು ಸೂಚಿಸುತ್ತದೆ. ತುಳುನಾಡಿನ ಭೂತಾರಾಧನೆಯಲ್ಲಿ ಗಂಡು ಹೆಣ್ಣು ಭೂತಗಳಲ್ಲದೆ ಹಲವು ‘ತೃತೀಯ ಲಿಂಗಿ’ ಭೂತಗಳನ್ನೂ ಪೂಜಿಸುತ್ತಾರೆ. “ಜುಮಾದಿ, ಉಲ್ಲಾಯ” ಇವು ತೃತೀಯ ಲಿಂಗಿ ದೈವಗಳು. ಮೂಲನಿವಾಸಿಗಳು ಯಾವಾಗಲೂ ತೃತೀಯ ಲಿಂಗಿ ಮನುಷ್ಯರನ್ನು ದೈವಾಂಶ ಸಂಭೂತರು ಎಂಬ ಗೌರವ ಕೊಡುತ್ತಿದ್ದರು, ಆದರೆ ವೈದಿಕರು ತೃತೀಯ ಲಿಂಗಿಗಳನ್ನು ಗೌರವಿಸುತ್ತಿರಲಿಲ್ಲ (ಶಿವನ ಅರ್ಧನಾರೀಶ್ವರ ರೂಪ ತೃತೀಯ ಲಿಂಗಿ ಎಂದು ವರ್ಗೀಕರಿಸಲಾಗದು). ಬ್ರಾಹ್ಮಣರು ಯಾವಾಗಲೂ ಭೂತ ಕೋಲಗಳಿಗೆ ಹೋಗುವುದೇ ಇಲ್ಲ. ಭೂತದ ಗಂಧ ಪ್ರಸಾದ ಮುಟ್ಟುವುದೂ ಇಲ್ಲ. ಇದುವೇ ಭೂತಾರಾಧನೆ ವೈದಿಕ ಸಂಸ್ಕೃತಿಯಲ್ಲ ಎಂಬುದಕ್ಕೆ ಸಾಕ್ಷಿ. ದುಖಃದ ವಿಷಯವೆಂದರೆ ಭೂತಾರಾಧನೆಯ ಮೂಲ ಎಲ್ಲಿದೆ ಎಂದು 95% ತುಳುವರಿಗೆ ಸ್ವತಃ ಗೊತ್ತೇ ಇಲ್ಲ! ಭಯದಿಂದ ಎಲ್ಲಾ ತುಳುವರು ಕುರುಡಾಗಿ ನಂಬುತ್ತಾರೆ ಅಷ್ಟೇ!

ಉಲ್ಲಾಳ್ತಿಯೇ ಕಟೀಲಿನ ದುರ್ಗಾಪರಮೇಶ್ವರಿ!

ಜೈನ ಅರಸರು ಪೂಜಿಸುತ್ತಿದ್ದ ಉಲ್ಲಾಳ್ತಿ ಎಂಬ ಜೈನರ ದೈವವನ್ನು(ಯಕ್ಷಿಯನ್ನು) ವೈದಿಕರು-ಬಂಟರು ವಹಿಸಿಕೊಂಡು ತುಳುನಾಡಿನಲ್ಲಿ ದುರ್ಗಾಪರಮೇಶ್ವರಿ ದೇವಿಯಾಗಿ ಪರಿವರ್ತಿಸಿದರು ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಮೂಲತಃ ಕಟೀಲು ದೇವಳದಲ್ಲಿ ಪೂಜೆಗೊಳ್ಳುತ್ತಿರುವ ದುರ್ಗಾದೇವಿಯೂ ಜೈನರ ಒಂದು ದೈವ (ಯಕ್ಷಿ)!  ಅದರ ಮೂಲ ಹೆಸರು ‘ಉಲ್ಲಾಳ್ತಿ’! ಕಟೀಲು ದೇವಳ ಮೂಲತಃ ಮುಲ್ಕಿಯ ಜೈನ ಅರಸರ ಬೇಸಿಗೆ ಅರಮನೆಯಾಗಿತ್ತು. ಆ ಅರಮನೆಯ ಹಿಂಬದಿಗೆ ಇರುವ ‘ಕುದ್ರು’ ಎಂಬ ಸ್ಥಳದಲ್ಲಿ ಆ ಜೈನ ಅರಸು ಮನೆತನ ಪೂಜಿಸುತ್ತಿದ್ದ ಉಲ್ಲಾಳ್ತಿ ದೈವದ ಗುಡಿಯೂ ಇತ್ತು.  ಅರಮನೆಯನ್ನು ಬೇಸಿಗೆಯಲ್ಲಿ ತಂಪಾಗಿಡಲು ಅದನ್ನು ಒಂದು ಹೊಳೆಯ ನಡುವೆ ಕಟ್ಟಿ ಸುತ್ತಲೂ ನೀರು ನಿಲ್ಲಿಸಲಾಗುತ್ತಿತ್ತು. ಹಾಗಾಗಿ ಅದಕ್ಕೆ ತುಳುವಿನಲ್ಲಿ ‘ಕಟ್ಟದ ಇಲ್ಲ್‌ʼ (ಕೆರೆಯ ಮನೆ) ಎಂದು ಕರೆಯುತ್ತಿದ್ದರು. ಅದುವೇ ಮುಂದೆ ಜನರ ಬಾಯಲ್ಲಿ ಕಟ್ಟದಿಲ್ಲು-ಕಟ್ಟಿಲ್ಲು-ಕಟೀಲು ಆಯಿತು. ಅರಮನೆಯನ್ನು ದುರ್ಗಾ ದೇವಸ್ಥಾನವಾಗಿ ಪರಿವರ್ತಿಸಿದ್ದು 1875 ರಲ್ಲಿ. ಈ ಕುರಿತು ಬ್ರಿಟಿಷ್ ಕಾಲದ ದಾಖಲೆಯೂ ಈ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿರುವ ಬಂಟ ಮನೆತನದ ಬಳಿ ಈಗಲೂ ಇದೆ.  ಕಟೀಲಿನಲ್ಲಿ ಈಗಲೂ ಉಲ್ಲಾಳ್ತಿ /ದುರ್ಗಾದೇವಿಯನ್ನು “ಶಕ್ತಿಲಿಂಗ” ರೂಪದಲ್ಲಿ ಪೂಜಿಸುತ್ತಾರೆ. ಈ ಶಕ್ತಿಲಿಂಗವು ಕಲ್ಲಿನ ‘ದೋಣಿ ಆಕಾರದಲ್ಲಿ’ ಇದೆ. ಭಕ್ತರಿಗೆ ಅದನ್ನು ನೋಡಲು ಅರ್ಚಕರು ಬಿಡುವುದಿಲ್ಲ. ಅದನ್ನು ಯಾವಾಗಲೂ ಹೂವಿನಿಂದ ಮುಚ್ಚಿರುತ್ತಾರೆ! ಕೇವಲ ಈ ಲಿಂಗದ ಹಿಂದಿರುವ ಮನುಷ್ಯ ರೂಪದ ಉತ್ಸವ ಮೂರ್ತಿಯ ದರ್ಶನವನ್ನು ಮಾತ್ರ ಭಟ್ಟರು ಭಕ್ತರಿಗೆ ಮಾಡಿಸುತ್ತಾರೆ ಅಷ್ಟೇ. ಈ ದೋಣಿಯಾಕಾರದ ಶಕ್ತಿಲಿಂಗದ ಫೋಟೋ ಸಹಾ ಅಂಗಡಿಯಲ್ಲಿ ಮಾರದಂತೆ ದೇವಾಸ್ಥಾನದ ಆಡಳಿತ ನಿರ್ಬಂಧಿಸಿದೆ!

ಉಲ್ಲಾಳ್ತಿ

ದೋಣಿ ಆಕಾರದ ಲಿಂಗದ ಅರ್ಥ ಏನು?

ಈ ದೋಣಿ ಆಕಾರದ ಲಿಂಗದ ಅರ್ಥ “ಮಹಿಳೆಯ ಜನನಾಂಗ”. ಇದು ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪುನರುತ್ಪತ್ತಿಯ (Re-production) ಸಂಕೇತ! ಬೀಜದಿಂದ ಮರ ಮರದಿಂದ ಬೀಜ, ಹಕ್ಕಿಯಿಂದ ಮೊಟ್ಟೆ ಮೊಟ್ಟೆಯಿಂದ ಹಕ್ಕಿ, ಸಸ್ತನಿ ಪ್ರಾಣಿಯಿಂದ ಮರಿ, ಆ ಮರಿ ಬೆಳೆದು ಮತ್ತೆ ಮರಿ, ಈ ಪುನರ್ ಸೃಷ್ಟಿಯ ಸಂಕೇತವೆ ಹಿಂದೂ ದೇವಸ್ಥಾನಗಳಲ್ಲಿ ಪೂಜೆಗೊಳ್ಳುತ್ತಿರುವ ಸ್ತ್ರೀಲಿಂಗದ ಅರ್ಥ!  ಅಸ್ಸಾಂ ರಾಜ್ಯದ ವಿಶ್ವ ಪ್ರಸಿದ್ಧ ಕಾಮಾಖ್ಯ ದೇವಳದಲ್ಲಿಯೂ ಪ್ರಕೃತಿದೇವಿಯನ್ನು ಇದೇ ದೋಣಿ ಆಕಾರದ ಶಕ್ತಿಲಿಂಗ ಅರ್ಥಾತ್ ಸ್ತ್ರೀಲಿಂಗದ ರೂಪದಲ್ಲಿಯೇ ಪೂಜಿಸುತ್ತಾರೆ. ಕೇರಳದ ಕೆಲವು ಭಗವತಿ ದೇವಸ್ಥಾನಗಳಲ್ಲೂ ಇದೆ ತರದ ದೋಣಿಯಾಕಾರದ ಲಿಂಗವನ್ನೇ ದೇವಿ ಎಂದು ಪೂಜಿಸುತ್ತಾರೆ. (ಶಿವಲಿಂಗಕ್ಕೂ ಇದೇ ಅರ್ಥವಿದೆ, ಅಂದರೆ ಗಂಡು ಹೆಣ್ಣಿನ ಸಂಪರ್ಕದಿಂದ ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪುನರ್ ಸೃಷ್ಟಿಯ ಸಂಕೇತವೆ ಶಿವಲಿಂಗ. ಈ ಶಿವಲಿಂಗದ ಮೇಲಿನ ಪಿಂಡಾಕಾರದ ಭಾಗ ಗಂಡಿನ ಜನನಾಂಗ ಮತ್ತು ಅಭಿಷೇಕ ಹರಿದು ಹೋಗುವ ಕೆಳಗಿನ ಪಾಣಿಪೀಠ ಹೆಣ್ಣಿನ ಅಂಗ). ಇವೆಲ್ಲಾ ಮೂಲನಿವಾಸಿಗಳ/ಆದಿವಾಸಿಗಳ ಪ್ರಕೃತಿ ಪೂಜೆಯ ಆದಿಮ ರೀತಿ. ಕಟೀಲು ಬಪ್ಪನಾಡು, ಚಿತ್ರಾಪುರ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಬರುವ ಶೇ. 99 ಭಕ್ತರಿಗೆ ಅಲ್ಲಿ ಸಾಂಕೇತಿಕವಾಗಿ ಮಹಿಳೆಯ ಅಂಗ ಪೂಜಿಸುವ ವಿಷಯ ಗೊತ್ತೇ ಇಲ್ಲ! ಇದು ನಮ್ಮ ಹಿಂದೂ ಧರ್ಮದ ವಿಪರ್ಯಾಸ!

ಬಣ್ಣದ ಬಂಟಿಂಗ್ಸ್‌ ಗಳ ಜಾಗವನ್ನು ಕೇಸರಿ ಪತಾಕೆಗಳು ಆಕ್ರಮಿಸಿದವು

ಹಿಂದೆಲ್ಲಾ ಕೋಲನೇಮದ ಸಮಾರಂಭ ನಡೆಯುವ ಸ್ಥಳದಲ್ಲಿ ಹಲವಾರು ಬಣ್ಣದ ಬಂಟಿಂಗ್ಸ್ ಮತ್ತು ಪತಾಕೆಗಳನ್ನು ಕಟ್ಟುತ್ತಿದ್ದರು. ಆದರೆ ಇತ್ತೀಚಿನ ಏಳೆಂಟು ವರ್ಷಗಳಿಂದ ನಾನು ಗಮನಿಸಿದ್ದೇನೆಂದರೆ ಭೂತಸಾನದ ಸುತ್ತ ಕೇವಲ ಕೇಸರಿ ಬಂಟಿಂಗ್ಸ್ ಹಾಗೂ ಓಂ ಮತ್ತು ಸ್ವಸ್ತಿಕ್ ಚಿನ್ಹೆ ಬರೆದ ಕೇಸರಿ ಪತಾಕೆಗಳನ್ನು ಮಾತ್ರ ಕಟ್ಟುತ್ತಿದ್ದಾರೆ. ಭೂತದ ಚಾಕರಿ ಮಾಡುವ ಇತರರು ‘ಜೈ ಶ್ರೀ ರಾಮ್’ ಎಂದು ಮೈಯಿಡಿ ಹಿಂದಿಯಲ್ಲಿ ಬರೆದ ಕೇಸರಿ ಶಾಲು,, ಪಂಚೆ ಧರಿಸುತ್ತಾರೆ. ಅಷ್ಟೇ ಅಲ್ಲ ಛತ್ರಪತಿ ಶಿವಾಜಿಯ ಕೋಪಿಷ್ಠ ಅರ್ಧ ಮುಖದ ಧ್ವಜಗಳನ್ನೂ ಹಾರಿಸುತ್ತಾರೆ. ಮರಾಠಿಗರ ಶಿವಾಜಿಗೂ ತುಳುವರ ಭೂತ ದೈವಗಳಿಗೂ ಎಲ್ಲಿಂದ ಎಲ್ಲಿಯ ಸಂಬಂಧ? ಹನುಮಂತನ ಸ್ವರೂಪದ ಯಾವುದೇ ದೈವ ತುಳುನಾಡಲ್ಲಿ ಇಲ್ಲ, ಆದರೂ ಹನುಮಂತನ ಕೋಪಿಷ್ಠ ಅರ್ಧ ಮುಖದ ಬಾವುಟಗಳು ಅಥವಾ ಒಂಟಿ ರಾಮನು ಬಿಲ್ಲುಬಾಣ ಹಿರಿದು ಕೋಪದಿಂದ ಎಲ್ಲಿಗೋ ನುಗ್ಗುತ್ತಿರುವ ಫ್ಲೆಕ್ಸ್ ಗಳು ಕೋಲದಲ್ಲಿ ರಾರಾಜಿಸುತ್ತವೆ! (ದೇವರು ಭಕ್ತವತ್ಸಲನಂತೆ, ಆದರೂ ಶಾಶ್ವತ ಕೋಪಿಷ್ಠ ಮುಖ ಯಾಕೆ?). ಒಂದು ಕೋಲದಲ್ಲಿ ಸಾವರ್ಕರರ ಫೋಟೋ ಕೂಡಾ ಕಂಡಿದ್ದೆ! ಮುಂದಿನ ವರ್ಷ ಗೋಡ್ಸೆಯ ಫೋಟೋ ಕಂಡರೂ ಆಶ್ಚರ್ಯವಿಲ್ಲ!.

ತುಳುನಾಡಿನ ಭೂತಾರಾಧನೆ ವಿರೂಪಗೊಳ್ಳುತ್ತಿದೆಯೇ?

ಕೇರಳ ಮತ್ತು ತಮಿಳುನಾಡಿನ ಆದಿವಾಸಿಗಳಲ್ಲೂ ತಮ್ಮ ಪೂರ್ವಜರ ಆತ್ಮಗಳನ್ನು ವಿಜೃಂಭಣೆಯಿಂದ ಪೂಜೆ ಮಾಡುವ ಪದ್ಧತಿ ಇದೆ. ಜಾರ್ಖಂಡ್, ಛತ್ತೀಸ್‌ಗಡ, ಒಡಿಶಾದ ಆದಿವಾಸಿಗಳಲ್ಲೂ ತೀರಿಕೊಂಡಿರುವ ಹಿರಿಯರ ಪೂಜೆ ಮಾಡುವ ಪದ್ಧತಿ ಇದೆ. ಇಂಡೋನೇಷಿಯಾ, ಥೈಲ್ಯಾಂಡ್ ಮತ್ತು ಆಫ್ರಿಕಾದ ಆದಿವಾಸಿಗಳಲ್ಲೂ ತಮ್ಮ ಹಿರಿಯರನ್ನು ಭೂತದ ರೂಪದಲ್ಲಿ ಪೂಜಿಸುವ ಪದ್ಧತಿ ಆದಿಕಾಲದಿಂದಲೂ ಇದೆ. ಅದೇ ರೀತಿ ವೀರಗತಿ ಪ್ರಾಪ್ತಿಯಾಗಿರುವ ನಮ್ಮ ಪೂರ್ವಜರನ್ನು ಆರಾಧಿಸುವ ಪದ್ಧತಿಯೇ ತುಳುನಾಡಲ್ಲಿ ಭೂತಾರಾಧನೆಯಲ್ಲಿ ಪರಿವರ್ತಿತವಾಗಿದೆ ಎಂದು ಹೇಳಬಹುದೇನೋ. “ಕನ್ನಡದ ದೆವ್ವ ಎಂಬ ಶಬ್ದವೇ ತುಳುವಿನ ದೈವ” ಎಂದು ಬದಲಾಯಿತು ಎಂದು ಕೆಲವು ಸಂಶೋಧಕರ ಅಭಿಪ್ರಾಯ. ಆದರೆ ಹೆಚ್ಚಿನ ತುಳುವರಿಗೆ ಇದು ನಮ್ಮ ಪೂರ್ವಿಕರ ಆತ್ಮವನ್ನು ಆರಾಧಿಸುವ ಪದ್ಧತಿ ಎಂದು ಗೊತ್ತಿಲ್ಲದಿರುವುದರಿಂದ ಮುಂಬೈ ಉದ್ಯಮಿಗಳ ಶ್ರೀಮಂತಿಕೆಯ ಪ್ರದರ್ಶನದಿಂದ ತುಳುನಾಡಿನ ಭೂತಾರಾಧನೆ ವಿರೂಪಗೊಳ್ಳುತ್ತಿದೆ!

ಪ್ರವೀಣ್ ಎಸ್ ಶೆಟ್ಟಿ

ಸಂಸ್ಕೃತಿ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು