Sunday, June 23, 2024

ಸತ್ಯ | ನ್ಯಾಯ |ಧರ್ಮ

ಗರ್ಭಿಣಿಯರು – ಮೊದಲ ಹಂತದ ಚಿಕಿತ್ಸಾ ಪದ್ಧತಿ

ಸಮಸ್ಯೆಯಿಲ್ಲದ ಹೆರಿಗೆ ಮತ್ತು ಆರೋಗ್ಯವಂತ ಮಗುವಿನ ಜನನಕ್ಕಾಗಿ ಕಾಲ ಕಾಲಕ್ಕೆ ಸರಿಯಾಗಿ ತಪಾಸಣೆ, ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಬಹಳ ಮುಖ್ಯ- ಶೋಭಲತಾ ಸಿ, ಆರೋಗ್ಯ ಕಾರ್ಯಕರ್ತೆ

ಹಿಂದೆ ಸ್ತ್ರೀ ತಾನು ಗರ್ಭವತಿ ಎಂದು ತಿಳಿದಾಗ ನಾಚಿಕೊಳ್ಳುವ ಕಾಲವೊಂದಿತ್ತು. ಆದರೆ ಇಂದು ಕಾಲ ಬದಲಾಗಿದೆ. ಗರ್ಭದ ಪ್ರತಿ ಹಂತದಲ್ಲೂ ವೈದ್ಯರ ಸಂಪರ್ಕದಲ್ಲಿರಬೇಕಾದುದು ತಾಯಿ – ಮಗುವಿನ ಆರೋಗ್ಯದ ದೃಷ್ಟಿಯಿಂದ ಹಿತಕರ. ಇಂದು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು  ಮನೆ – ಮನೆಗೆ ಬಂದು ಆರೋಗ್ಯ ವಿಚಾರಿಸಿ, ಚಿಕಿತ್ಸಾ ಮಾಹಿತಿ ನೀಡುತ್ತಿದ್ದರೂ, ಕೆಲವರು ಅದನ್ನು ಲೆಕ್ಕಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಅನುಭವದಿಂದ ತಿಳಿದು ಬರುತ್ತದೆ.

ಗರ್ಭದ ಮೊದಲ ಹಂತದಲ್ಲಿ ಮುಟ್ಟಿನ ದಿನ ತಪ್ಪಿದಾಗ ಆಸ್ಪತ್ರೆ ಅಥವಾ ಲ್ಯಾಬ್ ನ್ನು ಸಂಪರ್ಕಿಸಿ, ಅಥವಾ ಸ್ವತಃ ಕಾರ್ಡ್ ಪರೀಕ್ಷೆಯ ಮೂಲಕ ಗರ್ಭಿಣಿ ಹೌದಾ ಅಲ್ಲವಾ ಎಂದು ಖಚಿತಪಡಿಸಿಕೊಳ್ಳಬೇಕು. ಗರ್ಭಿಣಿ ಎಂದು ತಿಳಿದರೂ ಕೆಲವರು ವೈದ್ಯರ ಬಳಿ ಹೋಗದೆ ಸುಮ್ಮನಿರುವುದೂ ಇದೆ. ಆದರೆ, ಆರೋಗ್ಯಪೂರ್ಣ ಮಗುವನ್ನು ಪಡೆಯಲು ವೈದ್ಯರ ಸೂಕ್ತ ಸಲಹೆ ಅನಿವಾರ್ಯ. ಮೊದಲಾಗಿ ಗರ್ಭವು ಗರ್ಭಾಶಯದಲ್ಲಿಯೇ ಬೆಳೆಯುತ್ತಿದೆ ಎಂಬುದನ್ನು ಸ್ಕ್ಯಾನಿಂಗ್ ಮೂಲಕ ಖಚಿತ ಪಡಿಸಿಕೊಳ್ಳುವುದು, ಮಗುವಿನ ಹೃದಯ ಬಡಿತ ಚೆನ್ನಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವೊಮ್ಮೆ ಗರ್ಭವು ಗರ್ಭನಾಳದಲ್ಲಿ ಬೆಳೆದು ಗರ್ಭನಾಳ ಒಡೆದು, ರಕ್ತಸ್ರಾವದಿಂದ ಗರ್ಭಿಣಿಯ ಜೀವಕ್ಕೆ ಅಪಾಯ ಉಂಟಾಗುವ ಸನ್ನಿವೇಶಗಳೂ ಸಂಭವಿಸುವುದಿದೆ. ಗರ್ಭನಾಳದಲ್ಲಿ  ಗರ್ಭವು ಬೆಳೆಯುತ್ತಿದ್ದರೆ, ವೈದ್ಯರು ಸೂಕ್ತ ಚಿಕಿತ್ಸೆಯ ಮೂಲಕ ಪರಿಹಾರ ಸೂಚಿಸುತ್ತಾರೆ. ಅಂತಹ ಸಂದರ್ಭದಲ್ಲಿ ವೈದ್ಯರ ಸಲಹೆಯನ್ನು ನಿರ್ಲಕ್ಷಿಸುವವರೂ ಇದ್ದಾರೆ. ಆದರೆ, ಅದು ಜೀವದೊಂದಿಗಿನ ಆಟವಾಗಿ ಪರಿಣಮಿಸುವುದು. 

ಗರ್ಭವು ಅಡೆತಡೆಯಿಲ್ಲದೆ ಬೆಳೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡ ವೈದ್ಯರು ಗರ್ಭಿಣಿಯ ಆರೋಗ್ಯಕ್ಕೆ ಬೇಕಾದ ವಿಟಮಿನ್ ಔಷಧಿಗಳನ್ನು ನೀಡುತ್ತಾರೆ. ಗರ್ಭದ ಮೊದಲ ಹಂತದಲ್ಲಿ ವಾಕರಿಕೆ, ತಲೆ ಸುತ್ತುವಿಕೆ ಹೆಚ್ಚಿನ ಸ್ತ್ರೀಯರಿಗೆ ಸಾಮಾನ್ಯ. ಮೂರರಿಂದ ನಾಲ್ಕು ತಿಂಗಳ ಕಾಲಾವಧಿಯಲ್ಲಿ ವೈದ್ಯರ ಸಲಹೆಯಂತೆ ನಡೆದುಕೊಂಡು ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಡ್ರಿಪ್ಸ್ ಕೂಡಾ ಹಾಕಿಕೊಳ್ಳಬೇಕಾಗಿ ಬರಬಹುದು. ವಾಂತಿಗೆ ಹೆದರಿ ಆಹಾರ – ನೀರಿನ ಸೇವನೆಯನ್ನು ಕಡಿಮೆ ಮಾಡಿದರೆ ಇತರ ಕೆಲವು ಕಾಯಿಲೆಗಳಿಗೆ ತುತ್ತಾಗ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಗಾಳಿಮಾತುಗಳನ್ನು ಕೇಳದೆ ವೈದ್ಯರ ಸಂಪರ್ಕದಲ್ಲಿರಬೇಕಾದುದು ಅತ್ಯಾವಶ್ಯಕ. ಸಾಮಾನ್ಯವಾಗಿ ನಾಲ್ಕು ತಿಂಗಳ ಬಳಿಕ ವಾಕರಿಕೆ ಕಡಿಮೆಯಾಗುವುದು.

ಗರ್ಭದ ಎರಡರಿಂದ ಮೂರನೆಯ ತಿಂಗಳ ಕಾಲಾವಧಿಯಲ್ಲಿ ಮಗುವಿನ ಬೆಳವಣಿಗೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಎರಡನೇ ಹಂತದ ಸ್ಕ್ಯಾನ್ ಮಾಡುತ್ತಾರೆ. ಆರೋಗ್ಯಪೂರ್ಣ (ಅಶಕ್ತವಲ್ಲದ) ಮಗುವಿಗೆ ಜನ್ಮ ನೀಡುವಂತೆ ಮಾಡುವುದೇ ಇದರ ಉದ್ದೇಶವಾಗಿರುತ್ತದೆ. ಪದೇ ಪದೇ ಸ್ಕ್ಯಾನ್ ಮಾಡುವುದರಿಂದ ತಾಯಿ – ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಎಂಬ ತಪ್ಪು ಅಭಿಪ್ರಾಯ ಕೆಲವರಲ್ಲಿದೆ.  ದುಷ್ಪರಿಣಾಮ ಉಂಟಾಗುವ ಯಾವುದೇ ಸಲಹೆ ಸೂಚನೆಗಳನ್ನು ವೈದ್ಯರು ನೀಡುವುದಿಲ್ಲ ಎಂಬುದನ್ನು ಇಂತಹವರು ಮನದಟ್ಟು  ಮಾಡಿಕೊಳ್ಳಬೇಕಾಗಿದೆ.

ಗರ್ಭಾವಧಿಯ ಮೊದಲ ಹಂತದಲ್ಲಿ ರಕ್ತಸ್ರಾವ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ನೀಡುವ ಚಿಕಿತ್ಸೆಗೆ ಒಳಗಾಗಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ  ತಾಯಿ – ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಮಸ್ಯೆಯಿಲ್ಲದ ಹೆರಿಗೆ ಮತ್ತು ಆರೋಗ್ಯವಂತ ಮಗುವಿನ ಜನನಕ್ಕಾಗಿ ಕಾಲ ಕಾಲಕ್ಕೆ ಸರಿಯಾಗಿ ತಪಾಸಣೆ, ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಬಹಳ ಮುಖ್ಯ.

ಶೋಭಲತಾ ಸಿ

ಆರೋಗ್ಯ ಕಾರ್ಯಕರ್ತೆ, ಕಾಸರಗೋಡು

ಇದನ್ನೂ ಓದಿ-ದೈಹಿಕ ಶುಚಿತ್ವ | ಬೆವರಿನ ವಾಸನೆ ಬಗ್ಗೆ ಅಸಡ್ಡೆ ಬೇಡ

Related Articles

ಇತ್ತೀಚಿನ ಸುದ್ದಿಗಳು