ದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಹೆಸರನ್ನು ಬದಲಾಯಿಸಿ ಕೇಂದ್ರ ಸರ್ಕಾರವು ಹೊಸದಾಗಿ ರೂಪಿಸಿರುವ ವಿಬಿ ಗ್ರಾಮ್ ಜಿ (VB GRAMG) ಬಿಲ್ 2025 ಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಮೋದನೆ ನೀಡಿದ್ದಾರೆ.
ಈ ಹೊಸ ಕಾಯ್ದೆಯಡಿ ಹಳೆಯ ಹೆಸರಿನಲ್ಲಿದ್ದ ‘ಮಹಾತ್ಮ ಗಾಂಧಿ’ ಅವರ ಹೆಸರನ್ನು ತೆಗೆದುಹಾಕಲಾಗಿದ್ದು, ಇದನ್ನು ಈಗ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ – ಗ್ರಾಮೀಣ (Viksit Bharat Guarantee for Rozgar and Ajeevika Mission – Rural) ಎಂದು ಮರುನಾಮಕರಣ ಮಾಡಲಾಗಿದೆ. ಭಾನುವಾರ ರಾಷ್ಟ್ರಪತಿಗಳು ಈ ಬಿಲ್ಲಿಗೆ ಸಹಿ ಹಾಕುವುದರೊಂದಿಗೆ, ಕಳೆದ ಎರಡು ದಶಕಗಳಿಂದ ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ ‘ನರೇಗಾ’ ಯೋಜನೆ ಹೊಸ ರೂಪ ಪಡೆದುಕೊಂಡಿದೆ.
ಗ್ರಾಮೀಣ ಭಾಗದ ಜನರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ನೀಡುವ ಉದ್ದೇಶದಿಂದ 2005 ರಲ್ಲಿ ಅಂದಿನ ಯುಪಿಎ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಈಗಿನ ಕೇಂದ್ರ ಸರ್ಕಾರವು ಈ ಯೋಜನೆಯಿಂದ ಗಾಂಧೀಜಿಯವರ ಹೆಸರನ್ನು ತೆಗೆದುಹಾಕಿರುವುದಲ್ಲದೆ, ಗ್ರಾಮೀಣ ಉದ್ಯೋಗ ವಲಯದ ವ್ಯಾಪ್ತಿಯನ್ನು ಕುಗ್ಗಿಸಿ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಹೊರೆ ಹೇರುವಂತೆ ಕಾನೂನನ್ನು ಬದಲಾಯಿಸಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
